ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಾ ನೀಟ್ ಪರೀಕ್ಷೆ ಪಾಸ್ ಮಾಡಿದ ಒಡಿಶಾದ ಶುಭಂ

Published : Aug 28, 2025, 02:39 PM IST
Migrant Laborer Turned Medical Student

ಸಾರಾಂಶ

ಬೆಂಗಳೂರಿನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಯುವಕ ಶುಭಂ ಶಬರ್ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಹಗಲು ದುಡಿಮೆ, ರಾತ್ರಿ ಅಧ್ಯಯನ ಮಾಡುವ ಮೂಲಕ ಶುಭಂ ಈ ಸಾಧನೆ ಮಾಡಿದ್ದಾರೆ.

ಒಡಿಶಾ: ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕು ಎಂದರೆ ದೇಶದಲ್ಲಿ ಅತ್ಯಂತ ಕಷ್ಟಕರವಾಗಿರುವ ನೀಟ್ ಪರೀಕ್ಷೆಯನ್ನು ಪಾಸು ಮಾಡ್ಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಪಾಸು ಮಾಡುವುದಕ್ಕೆ ಹಗಲಿರುಳೆನ್ನದೇ ಓದುತ್ತಾರೆ. ಅಧ್ಯಯನದಲ್ಲಿ ತೊಡಗುತ್ತಾರೆ. ಲಕ್ಷಾಂತರ ರೂ ವೆಚ್ಚ ಮಾಡಿ ಹಲವು ತಿಂಗಳುಗಳ ಕಾಲ ಕೋಚಿಂಗ್ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ತರುಣ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಲೇ ನೀಟ್ ಪರೀಕ್ಷೆ ಪಾಸು ಮಾಡಿ ಅಚ್ಚರಿ ಮೂಡಿಸಿದ್ದಾನೆ.

ಬೆಂಗಳೂರಿನಲ್ಲಿ ದುಡಿಮೆ ಮಾಡುತ್ತಾ ನೀಟ್ ಪರೀಕ್ಷೆ ಪಾಸಾದ ಶುಭಂ:

ಬೆಂಗಳೂರಿನಲ್ಲಿ ಲಕ್ಷಾಂತರ ಜನ ಹೊರರಾಜ್ಯಗಳಿಂದ ಹೊರ ಊರುಗಳಿಂದ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಉತ್ತರ ಭಾರತವೂ ಸೇರಿದಂತೆ ಈಶಾನ್ಯ ಭಾರತದ ಹಲವು ಯುವ ತರುಣರು ಬೆಂಗಳೂರಿನ ಹಲವು ಕಂಪನಿಗಳು ಹೊಟೇಲ್‌ಗಳಲ್ಲಿ ಕೂಲಿ ಅಥವಾ ಹೌಸ್‌ ಕೀಪಿಂಗ್‌ನಂತಹ ಕೆಲಸಗಳನ್ನು ಮಾಡುವುದನ್ನು ನೋಡಬಹುದು. ಕೆಲವರು ಸಣ್ಣ ಸಣ್ಣ ಹುಡುಗರು ಕೆಲಸ ಮಾಡುತ್ತಲೇ ಇಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಪಾರ್ಟ್‌ಟೈಮ್ ಕೆಲಸ ಮಾಡುತ್ತಾ ತಮ್ಮ ಕನಸನ್ನು ಬೆನ್ನಟ್ಟುತ್ತಾರೆ. ಅಂತಹ ಹುಡುಗರಲ್ಲಿ ಒಬ್ಬ ಈ ನೀಟ್ ಪರೀಕ್ಷೆ ಪಾಸ್ ಮಾಡಿದ 19 ವರ್ಷದ ಶುಭಂ ಶಬರ್ ಕೂಡ ಒಬ್ಬ. ಮೂಲತಃ ಒಡಿಶಾದವನಾದ ಈ ಶುಭಂ ಬೆಂಗಳೂರಿನ ರಸ್ತೆಗಳಲ್ಲಿ ಕಸ ಗುಡಿಸುತ್ತಾ ತನ್ನ ಬದುಕನ್ನು ಹಸನಾಗಿಸಿಕೊಳ್ಳುವ ಕನಸು ಕಂಡವ.

ಹಗಲು ದುಡಿಮೆ ರಾತ್ರಿ ಅಧ್ಯಯನ:

ಈತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಕೇವಲ ತನ್ನ ಕನಸುಗಳನ್ನು ಮಾತ್ರ ಈಡೇರಿಸಿಕೊಂಡಿದ್ದಲ್ಲ, ಇಡೀ ಕುಟುಂಬವನ್ನು ಸಾಕುವ ಹೊಣೆಯೂ ಈತನ ಮೇಲಿತ್ತು. ಬೆಂಗಳೂರಿನಲ್ಲಿ ತಿಂಗಳಿಗೆ 15 ಸಾವಿರ ರೂಪಾಯಿಯನ್ನು ದುಡಿಯುತ್ತಿದ್ದ ಶುಭಂಗೆ ಒಡಿಶಾದ ಮುದುಲಿದಯ್ಯ ಪ್ರದೇಶದಲ್ಲಿದ್ದ ಪೋಷಕರ ಜೀವನವನ್ನು ನೋಡಿಕೊಳ್ಳುವ ಜವಾಬ್ದಾರಿ ಇತ್ತು. ಹೀಗಾಗಿ ಈ ಸಣ್ಣ ದುಡಿಮೆಯಲ್ಲೂ ಕೂಡಿಟ್ಟು ಆತ ಪ್ರತಿ ರೂಪಾಯಿಯನ್ನು ಮನೆಗೆ ಕಳುಹಿಸುತ್ತಿದ್ದ. ಹಗಲು ಕೆಲಸ ಮಾಡುತ್ತಿದ್ದ ಶುಭಂ ರಾತ್ರಿಯೆಲ್ಲಾ ಅಧ್ಯಯನದಲ್ಲಿ ತೊಡಗುತ್ತಿದ್ದ.

ಈ ಹಣದಲ್ಲಿ ನಾನು ಮುಂದಿನ ಶಿಕ್ಷಣದ ವೆಚ್ಚವನ್ನು ನಾನು ಭರಿಸಬಹುದೋ ಇಲ್ಲವೋ ನನಗೆ ತಿಳಿದಿಲ್ಲ, ಆದರೆ ರಿಸಲ್ಟ್ ಬರುವವರೆಗೆ ನಾನು ಇಲ್ಲಿ ದುಡಿಯುವ ಹಣದಲ್ಲಿ ನನ್ನ ಕುಟುಂಬಕ್ಕೆ ನೆರವಾಗಬಹುದು ಎಂದು ನಾನು ಭಾವಿಸಿದ್ದೆ. ಒಬ್ಬರು ಶಿಕ್ಷಕರು ಹೇಳುವವರೆಗೆ ನನಗೆ ವೈದ್ಯರಾಗುವ ಕನಸೇ ಇರಲಿಲ್ಲ. ಇಲ್ಲಿಯವರೆಗೆ ನಾನು ಪೊಲೀಸ್ ಇಲಾಖೆಗೆ ಸೇರಬೇಕು ಎಂದು ಬಯಸಿದೆ. ಆದರೆ ನನ್ನ ಶಿಕ್ಷಕರು ನನಗೆ ನನ್ನ ಭವಿಷ್ಯದ ಬಗ್ಗೆ ಸಲಹೆ ನೀಡಿದರು. ಅವರ ಸಲಹೆಯ ನಂತರ ನಾನು ವೈದ್ಯಕೀಯ ವಿಜ್ಞಾನ ಓದುವುದಕ್ಕೆ ನಿರ್ಧರಿಸಿದೆ ಎಂದು ಶುಭಂ ಹೇಳಿದ್ದಾನೆ.

ಬೆಹ್ರಾಂಪುರದ ಎಂಕೆಸಿಜಿಯಲ್ಲಿ ವೈದ್ಯಕೀಯ ಕೋರ್ಸ್‌ಗೆ ಸೇರ್ಪಡೆ:

ಅದರಂತೆ ಶುಭಂ ಅವರ ಕಠಿಣ ಪರಿಶ್ರಮ ಅವರ ಕೈ ಹಿಡಿದಿದೆ. ನೀಟ್ ಪರೀಕ್ಷೆಯಲ್ಲಿ ಅವರು 4000ನೇ ಶ್ರೇಯಾಂಕದೊಂದಿಗೆ ಪಾಸಾಗಿದ್ದು, ಒಡಿಶಾದ ಬೆಹ್ರಾಂಪುರದಲ್ಲಿರುವ ಎಂಕೆಸಿಜಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಮಗನ ಈ ಸಾಧನೆ ನೋಡಿ ಅವರ ಪೋಷಕರು ಬಹಳ ಹೆಮ್ಮೆ ಹಾಗೂ ಭಾವುಕರಾಗಿದ್ದರು. ತಮ್ಮ ಸಣ್ಣ ಜಮೀನಿನಲ್ಲಿ ದುಡಿಯುತ್ತಲೇ ತಮ್ಮ ಇಡೀ ಜೀವಮಾನವನ್ನು ಕಳೆದ ಪೋಷಕರಿಗೆ ಇದೊಂದು ಬಹಳ ಹೆಮ್ಮೆಯ ಕ್ಷಣವಾಗಿತ್ತು. ಶಿಕ್ಷಣ ನಮ್ಮ ಜೀವನವನ್ನು ಬದಲಾಯಿಸಬಹುದು ಎಂದು ನಮಗೆ ತಿಳಿದಿತ್ತು ಅದನ್ನೇ ನಾವು ನಂಬಿದೆವು ಎಂದು ಅವರ ತಾಯಿ ರಂಗಿ ಶಬರ್ ಹೇಳಿದ್ದಾರೆ.

ಹೀಗೆ ಕಠಿಣ ಪರಿಶ್ರಮದೊಂದಿಗೆ ತನ್ನ ಕನಸನ್ನು ನನಸು ಮಾಡುವತ್ತ ಹೆಜ್ಜೆ ಇಟ್ಟಿರುವ ಶುಭಂಗೆ ಈಗ ದೊಡ್ಡ ಜವಾಬ್ದಾರಿ ಇದೆ. ನನ್ನ ಕೋರ್ಸ್ ಮುಗಿದ ನಂತರ, ನಾನು ಜನರಿಗೆ ಮತ್ತು ನನ್ನ ಹೆತ್ತವರಿಗೆ ಸೇವೆ ಸಲ್ಲಿಸುತ್ತೇನೆ. ಮಾರ್ಗ ಸ್ಪಷ್ಟವಾಗಿದೆ ಆದರೆ ಕಠಿಣವಾಗಿದೆ. ನಾನು ಜಯಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಶುಭಂ ಅವರ ಈ ಯಶೋಗಾಥೆ ಅನೇಕರಿಗೆ ಸ್ಪೂರ್ತಿಯಾಗಿದೆ.

ಇದನ್ನೂ ಓದಿ: ಹೈಕ್ಲಾಸ್‌ ಜನರ ಮುಖವಾಡ ತೆರೆದಿಟ್ಟ ಹೌಸ್ ಕೀಪರ್: ಐಐಟಿ ಬಾಂಬೆ ಪ್ರೊಫೆಸರ್ ಪೋಸ್ಟ್ ಭಾರಿ ವೈರಲ್

ಇದನ್ನೂ ಓದಿ: ಗಣೇಶ ಹಬ್ಬದಂದೇ ಮಗು ಫತೇಸಿನ್ಹ್ ಫೋಟೋ ರಿವೀಲ್ ಮಾಡಿದ ಸಾಗರಿಕಾ ಜಹೀರ್‌ ಖಾನ್ ದಂಪತಿ

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ