Farmers Suicide: ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ನಂ.1: ಕರ್ನಾಟಕಕ್ಕೆ ಎರಡನೇ ಸ್ಥಾನ!

By Kannadaprabha NewsFirst Published Dec 1, 2021, 11:13 AM IST
Highlights

*2020ರಲ್ಲಿ ಕರ್ನಾಟಕದಲ್ಲಿ 1072 ರೈತರ ಆತ್ಮಹತ್ಯೆ
*ದೇಶಾದ್ಯಂತ 5579 ರೈತರು ಸಾವಿಗೆ ಶರಣು: ಕೇಂದ್ರ
*ರೈತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ!

ನವದೆಹಲಿ(ಡಿ. 01): ದೇಶದಲ್ಲಿ ರೈತರ ಆತ್ಮಹತ್ಯೆ (Farmers Suicide) ಪ್ರಕರಣದಲ್ಲಿ ಕರ್ನಾಟಕ (Karnataka) ನಂ.2 ಸ್ಥಾನದಲ್ಲಿದೆ. 2020ರಲ್ಲಿ ಕರ್ನಾಟಕದಲ್ಲಿ 1072 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಕುರಿತು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿರುವ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, 2019ರಲ್ಲಿ ದೇಶದಲ್ಲಿ 5957 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2020ರಲ್ಲಿ ಈ ಪ್ರಮಾಣ 5579ಕ್ಕೆ ಇಳಿದಿದೆ. ಮಹಾರಾಷ್ಟ್ರದಲ್ಲಿ (Maharashtra) ಅತಿ ಹೆಚ್ಚು 2567 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಕರ್ನಾಟಕ (1072), ಆಂಧ್ರಪ್ರದೇಶ (564), ತೆಲಂಗಾಣ (466), ಮಧ್ಯಪ್ರದೇಶ (235), ಛತ್ತೀಸ್‌ಗಢ (227) ಎಂದು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ರೈತರ ಆತ್ಮಹತ್ಯೆಗಳ ಸಂಖ್ಯೆ 87, ತಮಿಳುನಾಡು (79), ಕೇರಳ (57), ಅಸ್ಸಾಂ (12), ಹಿಮಾಚಲ ಪ್ರದೇಶ (6), ಮೇಘಾಲಯ ಮತ್ತು ಮಿಜೋರಾಮಾದಲ್ಲಿ ತಲಾ ನಾಲ್ಕು ಪ್ರಕರಣಗಳು ದಾಖಲಾಗಿವೆ

ರೈತರ ಆತ್ಮಹತ್ಯೆಗೆ ಪ್ರತ್ಯೇಕ ಕಾರಣಗಳನ್ನು ನೀಡಿಲ್ಲ!

ಜೊತೆಗೆ ರಸಗೊಬ್ಬರ ಸಮಸ್ಯೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ವರದಿ ಸ್ವೀಕರಿಸಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) 2020 ರ ವರದಿಯಲ್ಲಿ ರೈತರ ಆತ್ಮಹತ್ಯೆಗೆ ಪ್ರತ್ಯೇಕ ಕಾರಣಗಳನ್ನು ನೀಡಿಲ್ಲ ಎಂದು ಸಚಿವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ರೈತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ!

"ಆದಾಗ್ಯೂ,  ಕೌಟುಂಬಿಕ ಸಮಸ್ಯೆಗಳು, ಅನಾರೋಗ್ಯ, ಮಾದಕ ವ್ಯಸನ/ಸೇರ್ಪಡೆ, ಮದುವೆ ಸಂಬಂಧಿತ ಸಮಸ್ಯೆಗಳು, ಪ್ರೇಮ ವ್ಯವಹಾರಗಳು, ದಿವಾಳಿತನ ಅಥವಾ ಋಣಭಾರ, ಪರೀಕ್ಷೆಯಲ್ಲಿ ವಿಫಲತೆ, ನಿರುದ್ಯೋಗ, ವೃತ್ತಿಪರ/ವೃತ್ತಿ ಸಮಸ್ಯೆ ಮತ್ತು ಆಸ್ತಿ ವಿವಾದ ವ್ಯಕ್ತಿಗಳ (ರೈತರನ್ನು ಒಳಗೊಂಡು) ಆತ್ಮಹತ್ಯೆಗೆ ಕಾರಣಗಳು,"  ಎಂದು ಸಚಿವರು ತಿಳಿಸಿದ್ದಾರೆ.

Karnataka Politics: ಬಿಜೆಪಿ ಆಡಳಿತದಿಂದ ಅಭಿವೃದ್ಧಿ ಶೂನ್ಯ: ಸಲೀಂ ಅಹ್ಮದ್‌

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಕೃಷಿಯು ರಾಜ್ಯದ ವಿಷಯವಾಗಿರುವುದರಿಂದ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸೂಕ್ತ ನೀತಿ ಕ್ರಮಗಳ ಮೂಲಕ ರಾಜ್ಯಗಳ ಪ್ರಯತ್ನಗಳಿಗೆ ಕೇಂದ್ರವು ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಮಳೆಯಿಂದ ಕರ್ನಾಟಕದಲ್ಲೇ ಅತಿ ಹೆಚ್ಚು ಬೆಳೆ ಹಾನಿ: ಕೇಂದ್ರ!

ಪ್ರಸಕ್ತ ವರ್ಷ ಸಂಭವಿಸಿದ ಭಾರೀ ಮಳೆ (Rain), ಪ್ರವಾಹ ಮತ್ತು ಭೂಕುಸಿತದ ಪರಿಣಾಮ ದೇಶದಲ್ಲಿ 50.40 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬೆಳೆದ ಬೆಳೆಗಳು ಹಾನಿಗೀಡಾಗಿವೆ. ಈ ಪೈಕಿ ಕರ್ನಾಟಕದಲ್ಲಿ (Karnataka) ಅತಿ ಹೆಚ್ಚು ಹಾನಿ ಸಂಭವಿಸಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಈ ಕುರಿತು ಮಂಗಳವಾರ ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ (Narendra Singh Tomar), ‘ಪ್ರಸಕ್ತ ವರ್ಷ ಭಾರೀ ಮಳೆ, ಪ್ರವಾಹ, ಭೂಕುಸಿತದಿಂದ ದೇಶಾದ್ಯಂತ 50.40 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬೆಳೆದ ಬೆಳೆಗಳು ಹಾನಿಯಾಗಿವೆ. 

Farm Laws Repeal Bill 2021: ಕೃಷಿ ಕಾನೂನು ಹಿಂಪಡೆದರೂ ಪ್ರತಿಭಟನೆ ಮುಂದುವರೆಯುತ್ತೆ ಎಂದ ಟಿಕಾಯತ್!

ಈ ಪೈಕಿ ಕರ್ನಾಟಕದಲ್ಲಿ 13.98 ಲಕ್ಷ ಹೆಕ್ಟೇರ್‌, ಪಶ್ಚಿಮ ಬಂಗಾಳದಲ್ಲಿ 6.90 ಲಕ್ಷ ಹೆಕ್ಟೇರ್‌, ರಾಜಸ್ಥಾನದಲ್ಲಿ 6.79 ಲಕ್ಷ ಹೆಕ್ಟೇರ್‌, ಬಿಹಾರದಲ್ಲಿ 5.80 ಲಕ್ಷ ಹೆಕ್ಟೇರ್‌, ಮಹಾರಾಷ್ಟ್ರದಲ್ಲಿ 4.55 ಲಕ್ಷ ಹೆಕ್ಟೇರ್‌ ಮತ್ತು ಉತ್ತರ ಪ್ರದೇಶದಲ್ಲಿ 3.61 ಲಕ್ಷ ಹೆಕ್ಟೇರ್‌ ಬೆಳೆಗಳಿಗೆ ಹಾನಿಯಾಗಿದೆ’ ಎಂದು ತಿಳಿಸಿದ್ದಾರೆ.

click me!