
ಮುಂಬೈ: ನಕಲಿ ದಾಖಲೆ ನೀಡಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದು ಪದವಿ ಪೂರೈಸಿದ್ದ ವಿದ್ಯಾರ್ಥಿನಿಯೊಬ್ಬಳ ವೈದ್ಯಕೀಯ ಪದವಿಯನ್ನು ಅಮಾನ್ಯ ಮಾಡದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ ಪದವಿ ಅಮಾನ್ಯ ಮಾಡಿದರೆ ಸಮಾಜಕ್ಕೆ ಒಬ್ಬ ವೈದ್ಯನ ನಷ್ಟ ಆಗಲಿದೆ ಎಂಬ ಕಾರಣವನ್ನು ನ್ಯಾಯಾಲಯ ನೀಡಿದೆ.
ಲಬ್ನಾ ಮುಜಾವರ್ ಒಬಿಸಿಯಲ್ಲಿ ತಮ್ಮ ಕೌಟುಂಬಿಕ ಆದಾಯ ಕೆನೆಪದರ ಪ್ರಮಾಣಕ್ಕಿಂತ (ವಾರ್ಷಿಕ 4.5 ಲಕ್ಷ ರು. ) ಮೇಲ್ಪಟ್ಟಿದ್ದರೂ ತನ್ನ ತಾಯಿ ಸರ್ಕಾರಿ ಕೆಲಸದಲ್ಲಿರುವುದನ್ನು ಮುಚ್ಚಿಟ್ಟು ಒಬಿಸಿ ಮೀಸಲಿನಲ್ಲಿ ವೈದ್ಯಕೀಯ ಸೀಟು ಪಡೆದಿರುವುದು ಅಪರಾಧವಾಗಿದ್ದರೂ ಸಮಾಜಕ್ಕೆ ಒಬ್ಬ ವೈದ್ಯನ ನಷ್ಟವಾಗುವ ಹಿನ್ನೆಲೆಯಲ್ಲಿ ಅವರ ವೈದ್ಯಕೀಯ ಪದವಿಯನ್ನು ಅಮಾನ್ಯ ಮಾಡದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಕುರಿತು ತಮ್ಮ ಆದೇಶ ಪ್ರಕಟಿಸಿದ ನ್ಯಾ ಚಂದೂರ್ಕರ್ ನೇತೃತ್ವದ ದ್ವಿಸದಸ್ಯ ಪೀಠ, ಭಾರತದ ಜನಸಂಖ್ಯೆ ಮತ್ತು ವೈದ್ಯರ ಅನುಪಾತ ಬಹಳ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಕೇವಲ ಸುಳ್ಳು ದಾಖಲೆ ನೀಡಿದ ಕಾರಣಕ್ಕೆ ಅರ್ಹ ವ್ಯಕ್ತಿಯ ವೈದ್ಯಕೀಯ ಪದವಿಯ ಪ್ರಮಾಣಪತ್ರವನ್ನು ಅಮಾನ್ಯಗೊಳಿಸಿದರೆ ಅದು ಸಮಾಜಕ್ಕೆ ಹಾನಿಕಾರಕ. ಈ ಹಿನ್ನೆಲೆಯಲ್ಲಿ ಅವರ ವೈದ್ಯಕೀಯ ಪದವಿಯನ್ನು ಅಮಾನ್ಯಗೊಳಿಸಬಾರದು. ಆದರೆ ತಾನು ವ್ಯಾಸಂಗ ಮಾಡಿದ ಕಾಲೇಜಿಗೆ ಮೂರು ವಾರದೊಳಗೆ ಸಾಮಾನ್ಯ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿ ಕಟ್ಟಬೇಕಾದ ಶುಲ್ಕ ಮತ್ತು 50 ಸಾವಿರ ರು. ದಂಡ ಕಟ್ಟಬೇಕು ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿತು.
ಏನಿದು ಪ್ರಕರಣ?
2012ರಲ್ಲಿ ಲಬ್ನಾ ಮುಜಾವರ್ ಎಂಬ ಮಹಿಳೆ ಮುಂಬೈನ ಪ್ರತಿಷ್ಠಿತ ಲೋಕಮಾನ್ಯ ತಿಲಕ್ ವೈದ್ಯಕೀಯ ಕಾಲೇಜಿಗೆ ತಾನು ಒಬಿಸಿ ಸಮುದಾಯಕ್ಕೆ ಸೇರಿದವಳು ಎಂದು ಸುಳ್ಳು ದಾಖಲೆ ನೀಡಿ ಪ್ರವೇಶ ಪಡೆದಿದ್ದಳು. ಬಳಿಕ ಇದು ನ್ಯಾಯಾಲಯದ ಮೆಟ್ಟಿಲೇರಿದ್ದರೂ, ಮಧ್ಯಂತರ ಆದೇಶದಂತೆ ತಮ್ಮ ವ್ಯಾಸಂಗ ಮುಂದುವರೆಸಿ 2017ರಲ್ಲಿ ತಮ್ಮ ಪದವಿ ಪೂರ್ಣಗೊಳಿಸಿದ್ದರು.
ವೈದ್ಯ ಸೀಟಿಗೆ ತ್ರಿವಳಿ ತಲಾಖ್ ಕಥೆ
ಲಬ್ನಾ ಅವರ ತಾಯಿ ಮಹಾನಗರ ಪಾಲಿಕೆಯಲ್ಲಿ ಸರ್ಕಾರಿ ಸೇವೆಯಲ್ಲಿದ್ದರೂ ಕಾಲೇಜಿಗೆ ಪ್ರವೇಶ ಪಡೆಯುವ ಉದ್ದೇಶದಿಂದ ಅದನ್ನು ಮುಚ್ಚಿಟ್ಟು ತಂದೆಯಿಂದ ತ್ರಿವಳಿ ತಲಾಖ್ ಪಡೆದಿದ್ದಾರೆ ಎಂಬುದಾಗಿ ಲಬ್ನಾ ನ್ಯಾಯಾಲಯದಲ್ಲಿ ವಾದಿಸಿದ್ದರು.
ಸುಳ್ಳು ಜಾತಿ, ಶೈಕ್ಷಣಿಕ ಪ್ರಮಾಣಪತ್ರ ಆರೋಪ; ಪ್ರಿಯಾಂಕ್ ಖರ್ಗೆ ಆಯ್ಕೆ ರದ್ದತಿ ಕೋರಿ ಹೈಕೋರ್ಟ್‌ಗೆ ಅರ್ಜಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ