ಲೋಕಸಭಾ ಚುನಾವಣೆಯ ನಡುವೆ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ನಿವೃತ್ತ ನ್ಯಾಯಾಧೀಶರು ನೀಡಿದ್ದ ಕರೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇನ್ನೂ ಧೈರ್ಯ ಮಾಡಿಲ್ಲ ಎಂಬುದಾಗಿ ಕಾಂಗ್ರೆಸ್ ವ್ಯಂಗ್ಯವಾಡಿದೆ.
ನವದೆಹಲಿ (ಮೇ.13): ಲೋಕಸಭಾ ಚುನಾವಣೆಯ ನಡುವೆ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ನಿವೃತ್ತ ನ್ಯಾಯಾಧೀಶರು ನೀಡಿದ್ದ ಕರೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇನ್ನೂ ಧೈರ್ಯ ಮಾಡಿಲ್ಲ ಎಂಬುದಾಗಿ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ರಾಹುಲ್ ಗಾಂಧಿ ಬಹಿರಂಗ ಚರ್ಚೆಗೆ ಮೊದಲ ದಿನವೇ ಒಪ್ಪಿಗೆ ನೀಡಿದ್ದಾರೆ. ಆದರೆ 56 ಇಂಚು ಎದೆಯುಬ್ಬಿಸಿಕೊಂಡು ಪ್ರಚಾರಗಳಲ್ಲಿ ಭಾಗಿಯಾಗುವ ಪ್ರಧಾನಿ ಮೋದಿ ಮಾತ್ರ ಇನ್ನೂ ಧೈರ್ಯ ತೋರುತ್ತಿಲ್ಲ.
ಇದು ಅವರ ಅಧೈರ್ಯವನ್ನು ತೋರಿಸುತ್ತಿದೆ’ ಎಂಬುದಾಗಿ ಟೀಕಿಸಿದ್ದಾರೆ. ಹೊರಹೋಗುವ ಪ್ರಧಾನಿ: ಇದೇ ವೇಳೆ ಪ್ರಧಾನಿ ಮೋದಿ ನೀಡುವ ಸಂದರ್ಶನಗಳನ್ನು ಟೀಕಿಸುತ್ತಾ, ‘ನರೇಂದ್ರ ಮೋದಿ ತಾವು ಅಧಿಕಾರದಿಂದ ಕೆಳಗಿಳಿಯುವ ಭಯದಿಂದ ಎಲ್ಲ ವಾಹಿನಿಗಳಿಗೆ ಸಂದರ್ಶನ ನೀಡಿ ಸಣ್ಣ ಸಣ್ಣ ವಿಷಯಗಳಿಗೂ ಮಹತ್ವ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಅವೆಲ್ಲವೂ ಸುಳ್ಳು ಭರವಸೆಗಳಿಂದ ಕೂಡಿವೆ ಎಂಬುದು ಜನರಿಗೆ ತಿಳಿದಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದಿರಾ ನೋಡಿ ಮೋದಿ ಧೈರ್ಯ ಕಲಿಯಲಿ: ’ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಭಾಷಣಗಳು ಬರೀ ಪೊಳ್ಳು’ ಎಂದು ಶನಿವಾರ ಕಿಡಿಕಾರಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ‘ಮೋದಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಲ್ಲಿದ್ದ ಧೈರ್ಯ ಮತ್ತು ದೃಢ ನಿಶ್ಚಯದ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ. ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಮಾಡಿದ ಮಾರನೇ ದಿನವೇ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಿಯಾಂಕಾ,
ಪಾಕಿಸ್ತಾನದ ವಿರುದ್ಧ ಪಿಒಕೆ ದಂಗೆ: ಹಿಂಸಾಚಾರದಲ್ಲಿ ಪೊಲೀಸ್ ಸಾವು, 100 ಮಂದಿಗೆ ಗಾಯ
‘ಏನಾದರೂ ಹೇಳಿದರೆ ಮೋದಿ ಗೊಳೋ ಎಂದು ಕಣ್ಣೀರಿಡುತ್ತಾರೆ. ಆದರೆ ಇದು ಸಾರ್ವಜನಿಕ ಜೀವನ. ಇಲ್ಲಿ ನೀವು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಕಲಿಯಬೇಕಿದೆ. ಅವರು ದುರ್ಗೆಯ ರೀತಿಯಲ್ಲಿದ್ದರು. ಅವರು ಪಾಕಿಸ್ತಾನವನ್ನೇ ಎರಡು ತುಂಡು ಮಾಡಿದರು. ಅವರಿಂದ ಧೈರ್ಯ ಮತ್ತು ದೃಢ ನಿಶ್ಚಯದ ಗುಣಗಳನ್ನು ನೀವೂ ಅಳವಡಿಸಿಕೊಳ್ಳಬೇಕು. ಆದರೆ ಅವರನ್ನೇ ನೀವು ದೇಶದ್ರೋಹಿ ಎಂದು ಟೀಕಿಸುತ್ತಿರುವಾಗ ಅವರಿಂದ ನೀವು ಏನು ಕಲಿಯಲು ಸಾಧ್ಯ?’ ಎಂದು ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.