ಖೊಟ್ಟಿ ನಕ್ಷೆ ತೋರಿಸಿದ ಪಾಕ್‌ಗೆ ಧೋವಲ್‌ ಬಿಸಿ!

By Kannadaprabha NewsFirst Published Sep 16, 2020, 8:10 AM IST
Highlights

ಖೊಟ್ಟಿ ನಕ್ಷೆ ತೋರಿಸಿದ ಪಾಕ್‌ಗೆ ಧೋವಲ್‌ ಬಿಸಿ| ಸಭೆ ಬಹಿಷ್ಕರಿಸಿದ ಭದ್ರತಾ ಸಲಹೆಗಾರ| ಪಾಕ್‌ ವರ್ತನೆಗೆ ರಷ್ಯಾ ಕೂಡ ಖಂಡನೆ

ನವದೆಹಲಿ(ಸೆ.16): ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸದಸ್ಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಭಾರತದ ಭೂಭಾಗಗಳು ತನ್ನವೆಂದು ಸಾರುವ ಖೊಟ್ಟಿನಕ್ಷೆ ಪ್ರದರ್ಶಿಸಿ ಪಾಕಿಸ್ತಾನ ಕಿತಾಪತಿ ತೆಗೆದ ಘಟನೆ ನಡೆದಿದೆ. ತಕ್ಷಣವೇ ಈ ಸಭೆಯಿಂದ ಹೊರನಡೆಯುವ ಮೂಲಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ನೆರೆ ದೇಶಕ್ಕೆ ಭರ್ಜರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

ಲಡಾಖ್‌ ಬಿಕ್ಕಟ್ಟಿಗೆ ನಾಡಿದ್ದು ಪರಿಹಾರ? ಚೀನಾದೊಂದಿಗೆ ಮಾತುಕತೆ

ರಷ್ಯಾ ನೇತೃತ್ವದಲ್ಲಿ ಆಯೋಜಿಸಿದ್ದ ವರ್ಚುವಲ್‌ ಸಭೆಯಲ್ಲಿ ಭಾರತ ಪರವಾಗಿ ದೋವಲ್‌ ಪಾಲ್ಗೊಂಡಿದ್ದರು. ಆದರೆ, ಪಾಕಿಸ್ತಾನ ಉದ್ದೇಶಪೂರ್ವಕವಾಗಿ ತಾನು ಇತ್ತೀಚೆಗೆ ಬಿಡುಗಡೆ ಮಾಡಿದ ಖೊಟ್ಟಿನಕಾಶೆಯನ್ನು ಸಭೆಯಲ್ಲಿ ಪ್ರದರ್ಶಿಸಿತ್ತು. ಪಾಕಿಸ್ತಾನದ ಉದ್ಧಟತನವನ್ನು ಪ್ರತಿಭಟಿಸಿ ಅಜಿತ್‌ ದೋವಲ್‌ ಅವರು ಸಭೆಯಿಂದ ಹೊರಬಂದಿದ್ದಾರೆ. ಪಾಕಿಸ್ತಾನದ ಕ್ರಮ ಸಭೆಯ ನಿಯಮಾವಳಿಯ ಉಲ್ಲಂಘನೆ ಆಗಿದೆ.

ಚೀನಾ ಗಡಿಯಲ್ಲಿ ಮತ್ತೆ ಯುದ್ಧ ಸ್ಥಿತಿ: ‘ಫೈರಿಂಗ್‌ ರೇಂಜ್‌’ನಲ್ಲಿ ಯೋಧರ ಜಮಾವಣೆ!

ಶೃಂಗಸಭೆಗೆ ಪಾಕಿಸ್ತಾನ ಅಗೌರವ ತೋರಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾತ್ಸವ ಅವರು ತಿಳಿದ್ದಾರೆ. ಇದೇ ವೇಳೆ ಸಭೆಯನ್ನು ಆಯೋಜಿಸಿದ್ದ ರಷ್ಯಾ ಕೂಡ ಪಾಕಿಸ್ತಾನದ ನಡೆಯನ್ನು ಖಂಡಿಸಿದೆ. ಅಕ್ರಮ ನಕಾಶೆಯನ್ನು ಬದಿಗಿಟ್ಟು ಸಭೆಯಲ್ಲಿ ಪಾಲ್ಗೊಳ್ಳುವಂತೆ ರಷ್ಯಾ ಪಾಕಿಸ್ತಾನಕ್ಕೆ ಸೂಚಿಸಿತ್ತು. ಆದರೂ ಪಾಕ್‌ ತನ್ನ ದುರ್ಬುದ್ಧಿ ತೋರಿದೆ. ಜಮ್ಮು- ಕಾಶ್ಮೀರ, ಲಡಾಖ್‌ ಹಾಗೂ ಗುಜರಾತ್‌ನ ಕೆಲವು ಭಾಗಗಳನ್ನು ಒಳಗೊಂಡ ಹೊಸ ನಕಾಶೆಯೊಂದನ್ನು ಆ.4ರಂದು ಪಾಕಿಸ್ತಾನ ಬಿಡುಗಡೆ ಮಾಡಿತ್ತು.

ಅಲ್ಲದೇ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿಕೊಲಾಯ್‌ ಅವರು ಭಾರತಕ್ಕೆ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!