ಅಗ್ನಿಪಥ್ ಕುರಿತಾಗಿ ಅಜಿತ್ ದೋವಲ್ ಹೇಳಿದ ಬೆಂಕಿಯಂಥ ಮಾತುಗಳು!

By Santosh Naik  |  First Published Jun 21, 2022, 9:03 PM IST

ದೇಶದಲ್ಲಿ ಅಗ್ನಿಪಥ್ ಯೋಜನೆಯ ಕುರಿತಾಗಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಬಗ್ಗೆ ಮಾತನಾಡಿದ್ದಾರೆ. ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಇತ್ತೀಚಿನ ಹಲವು ಬೆಳವಣಿಗೆಗಳು, ಭದ್ರತಾ ವಿಚಾರಗಳ, ಅಗ್ನಿಪಥ್ ಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
 



ನವದೆಹಲಿ (ಜೂನ್ 21): ದೇಶದ ಎಲ್ಲರೂ ಒಂದು ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಹಣ ಮಾಡಬೇಕು ಎನ್ನುವ ಉದ್ದೇಶದಲ್ಲಿ ಯಾರೂ ಸೇನೆ ಸೇರುವುದಿಲ್ಲ. ಹಣಕ್ಕಾಗಿ ಸೇನೆಯ ಭಾಗವಾಗುವುದಿಲ್ಲ. ದೇಶವನ್ನು ರಕ್ಷಣೆ ಮಾಡಬೇಕು, ದೇಶಕ್ಕೆ ಸೇವೆ ಸಲ್ಲಿಸಬೇಕು ಎನ್ನುವ ಏಕಮೇವ ಉದ್ದೇಶದಲ್ಲಿ ಯುವ ಜನತೆ ಸೇನೆಗೆ ಸೇರುತ್ತಾರೆ... ಹೀಗೆಂದು ಹೇಳಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ (National Security Advisor ) 77 ವರ್ಷದ ಅಜಿತ್ ದೋವಲ್ (Ajit Doval).

ನಾನು ಕಳೆದ 55 ವರ್ಷಗಳಿಂದ ದೇಶದ ಭದ್ರತೆಯ ಕಾರ್ಯದಲ್ಲಿದ್ದೇನೆ. ಕೆಲಸ ಆರಂಭಿಸಿದ ಮೊದಲ ದಿನದಿಂದ ಈ ದಿನದವರೆಗೂ ದೇಶಕ್ಕೆ ಸೇವೆ ಮಾಡಬೇಕು ಎನ್ನುವುದಷ್ಟೇ ನನ್ನ ಗುರಿ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಸಂದರ್ಶನ, ಟಿವಿ ಚರ್ಚೆ, ಪತ್ರಿಕಾ ಹೇಳಿಕೆಗಳ ಗೋಜಿಗೆ ಹೋಗದ ಅಜಿತ್ ದೋವಲ್ ತೀರಾ ಅಪರೂಪ ಎನ್ನುವಂತೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಇಡೀ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಅವರು ಮಾತನಾಡಿದರು.

ರೋಲ್ ಬ್ಯಾಕ್ ಮಾಡೋದಿಲ್ಲ: ಅಗ್ನಿಪಥ್ ಮಹತ್ವಾಕಾಂಕ್ಷೆಯ (Agnipath scheme) ಯೋಜನೆ. ಇದನ್ನು ರೋಲ್ ಬ್ಯಾಕ್ ಮಾಡುವ ಗುರಿಯಲ್ಲಿ ಸರ್ಕಾರವಿಲ್ಲ. ವಿಶ್ವದಲ್ಲಿಯೇ ಅತ್ಯಂತ ಯುವಶಕ್ತಿಯನ್ನು ಹೊಂದಿರುವ ದೇಶ ಭಾರತ. ಆದರೆ, ದೇಶದ ಸೇನೆಯಲ್ಲಿ ಮಾತ್ರ ವಯಸ್ಸು ಹೆಚ್ಚಾದ ಸೈನಿಕರು ಇರಬೇಕು ಎನ್ನುವುದು ನ್ಯಾಯಸಮ್ಮತವಲ್ಲ.

ನಿಜವಾದ ಅಗ್ನಿವೀರರು ಅಭ್ಯಾಸ ಮಾಡ್ತಿದ್ದಾರೆ: ಇಂದು ದೇಶದ ಗಲ್ಲಿಗಲ್ಲಿಗಳಲ್ಲಿ ನಿಂತು ಪ್ರತಿಭಟನೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುತ್ತಿರುವವರು ಅಗ್ನಿವೀರರಲ್ಲ. ನಿಜವಾದ ಅಗ್ನಿವೀರರು ಮನೆಯಲ್ಲಿದ್ದು, ಮುಂದಿನ ಹಂತಕ್ಕಾಗಿ ಸಿದ್ಧತೆ ಮಾಡುತ್ತಿದ್ದಾರೆ.

ಅಗ್ನಿವೀರ್ ಅನ್ನೋದೇ ಒಂದು ಸೇನೆಯಲ್ಲ!: ಅಗ್ನೀವೀರ್ ಅನ್ನೋದು ಒಂದು ಸೇನೆಯಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮೊದಲ ನಾಲ್ಕು ವರ್ಷಕ್ಕೆ ಆಯ್ಕೆಯಾಗುವ ಸೈನಿಕರು ಮಾತ್ರ ಇವರಾಗುತ್ತಾರೆ.  ಆಯ್ಕೆಯಾಗುವ ಅಗ್ನಿವೀರರಿಗೆ ಅನುಭವಿಗಳ ಪಡೆಯಿಂದ ಇನ್ನಷ್ಟು ತೀವ್ರತರವಾದ ತರಬೇತಿ ನೀಡಲಾಗುತ್ತದೆ. ಅಂತಿಮವಾಗಿ ಇವರು ಪೂರ್ಣ ಪ್ರಮಾಣದ ಸೈನಿಕರಾದ ಬಳಿಕ ಇನ್ನಷ್ಟು ತರಬೇತಿಗೆ ಇಳಿಯುತ್ತಾರೆ. 

ಸೇನೆ ಹಣ ಮಾಡುವ ಸ್ಥಳವಲ್ಲ: ನಾನು ದೇಶದ ಯುವಜನತೆಗೆ ಹೇಳುವ ಸಂದೇಶವೇನೆಂದರೆ, ಇದು ಬಹಳ ಕ್ಲಿಯರ್ ಆಗಿರಬೇಕು. ಸೇನೆಗೆ ಹೋಗುವ ಯಾವುದೇ ಯುವಕರು ಹಣದ ಗುರಿಯಲ್ಲಿ ಹೋಗುವುದಿಲ್ಲ. ಅದು ಹಣ ಮಾಡುವ ಸ್ಥಳವಲ್ಲ. ದೇಶವನ್ನು ರಕ್ಷಣೆ ಮಾಡುವ ದೇಶಕ್ಕೆ ಸೇವೆ ಸಲ್ಲಿಸುವ ಏಕಮೇವ ಉದ್ದೇಶದಲ್ಲಿ ಬರುವ ಸ್ಥಳ.

ಯುದ್ಧದ ಮಾದರಿ ಬದಲಾಗುತ್ತಿದೆ: ವಿಶ್ವದಲ್ಲಿಯೇ ಯುದ್ಧದ ಮಾದರಿಯಲ್ಲಿ ದೊಡ್ಡ ಬದಲಾವಣೆ ಆಗುತ್ತಿದೆ. ನಾವು ಯಾವುದೇ ಸಂಪರ್ಕವಿಲ್ಲದ ಯುದ್ಧಗಳ ಕಡೆಗೆ ಹೋಗುತ್ತಿದ್ದೇವೆ ಮತ್ತು ಅದೃಶ್ಯ ಶತ್ರುಗಳ ವಿರುದ್ಧ ಯುದ್ಧದ ಕಡೆಗೆ ಹೋಗುತ್ತಿದ್ದೇವೆ. ತಂತ್ರಜ್ಞಾನವು ಕ್ಷಿಪ್ರ ಗತಿಯಲ್ಲಿ ಸಾಗುತ್ತಿದೆ. ನಾಳೆಗಾಗಿ ನಾವು ತಯಾರಿ ಮಾಡಬೇಕಾದಲ್ಲಿ ಇಂದು ಬದಲಾಗಬೇಕು.

ಭವಿಷ್ಯದ ಕುರಿತಾಗಿ ಸಿದ್ಧವಾದ ಯೋಜನೆ ಅಗ್ನಿಪಥ್: ಅಗ್ನಿಪಥ್ ಎನ್ನುವುದು ಇಂದು ಅಥವಾ ನಾಳೆಯ ಬಗ್ಗೆ ಹೊರತಂದ ಯೋಜನೆಯಲ್ಲ. ಭವಿಷ್ಯವನ್ನು ಗುರಿಯಾಗಿಸಿಕೊಂಡು ತಂದಂಥ ಯೋಜನೆ. ನಮ್ಮ ನೆರೆಹೊರೆಯಲ್ಲಿ ಸಾಕಷ್ಟು ಬದಲಾವಣೆಗಾಗುತ್ತಿವೆ. ನಮ್ಮ ಸೇನೆಯನ್ನು ಇನ್ನಷ್ಟು ಯುವ ಹಾಗೂ ಬಲಶಾಲಿ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಹೊರತರಲಾಗಿದೆ.

ಕಾಶ್ಮೀರದಲ್ಲಿ ಹೆಚ್ಚಿದ ಉಗ್ರರ ಅಟ್ಟಹಾಸ: ಅಜಿತ್ ದೋವಲ್ ಭೇಟಿ ಮಾಡಿದ ಅಮಿತ್ ಷಾ

ಪ್ರಧಾನಿಯವರ ಆದ್ಯತೆ ದೇಶದ ಭದ್ರತೆ: ಭಾರತೀಯ ಸೇನೆಯ ಸರಾಸರಿ ವಯಸ್ಸು ಪ್ರಸ್ತುತ ಹೆಚ್ಚಿದೆ. ಪ್ರಧಾನಿಯವರ ಆದ್ಯತೆ ದೇಶದ ಭದ್ರತೆ. ಸೈನ್ಯಕ್ಕೆ ಸೇರುವವನ ವಯಸ್ಸು ಕಡಿಮೆ ಇರಬೇಕು. ನಮ್ಮ ನೆರೆಹೊರೆಯವರ ಸ್ಥಿತಿ ಹದಗೆಟ್ಟಿದೆ. ನಾವು ನಿನ್ನೆ ಏನು ಮಾಡುತ್ತಿದ್ದೆವೋ, ಮುಂದೆಯೂ ಅದನ್ನೇ ಮುಂದುವರಿಸಿದರೆ ನಾವು ಸುರಕ್ಷಿತವಾಗಿರಲು ಸಾಧ್ಯವಿಲ್ಲ.

ಮಹಾರಾಷ್ಟ್ರ ಸರ್ಕಾರವನ್ನು ಅಲುಗಾಡಿಸಿದ ಆಟೋರಾಜ!

ಪ್ರವಾದಿಯ ಕುರಿತಾದ ಹೇಳಿಕೆಯಿಂದ ಭಾರತದ ಗೌರವಕ್ಕೆ ಧಕ್ಕೆ: ನೂಪುರ್ ಶರ್ಮ ಅವರು ಪ್ರವಾದಿಯ ಕುರಿತಾಗಿ ನೀಡಿದ ಹೇಳಿಕೆಯಿಂದ ವಿಶ್ವ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಬಂದಿರುವುದು ಹೌದು. ಭಾರತದ ಕುರಿತಾಗಿ ಸಾಕಷ್ಟು ಸುಳ್ಳು ಮಾಹಿತಿಗಳು ಈ ವೇಳೆ ಹರಿದಾಡಿದವು.

Tap to resize

Latest Videos

click me!