ನವದೆಹಲಿ/ಪಟನಾ (ಮೇ.21): ದೇಶದ ಹಲವು ರಾಜ್ಯಗಳಲ್ಲಿ ಕೊರೋನಾದಿಂದ ಚೇತರಿಸಿಕೊಂಡವರ ಮೇಲೆ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಸೋಂಕು ದಾಳಿ ಮಾಡುತ್ತಿರುವಾಗಲೇ, ಅದಕ್ಕಿಂತಲೂ ಮಾರಕವಾದ ವೈಟ್ ಫಂಗಸ್ (ಬಿಳಿ ಶಿಲೀಂಧ್ರ) ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಬಿಹಾರ ರಾಜಧಾನಿ ಪಟನಾದಲ್ಲಿ ಪ್ರಸಿದ್ಧ ವೈದ್ಯ ಸೇರಿ ನಾಲ್ವರು ಈ ಸೋಂಕಿಗೆ ತುತ್ತಾಗಿದ್ದಾರೆ. ಬ್ಲ್ಯಾಕ್ ಫಂಗಸ್ ಸೋಂಕಿಗಿಂತ ಇದು ಅಪಾಯಕಾರಿಯಾಗಿದೆ. ಶ್ವಾಸಕೋಶ, ಉಗುರು, ಚರ್ಮ, ಹೊಟ್ಟೆ, ಮೂತ್ರಪಿಂಡ, ಗುಪ್ತಾಂಗ ಹಾಗೂ ಬಾಯಿ ಮೇಲೆ ಇದು ತೀವ್ರ ಪರಿಣಾಮ ಬೀರುತ್ತದೆ. ಪ್ರಾಥಮಿಕ ಹಂತದಲ್ಲೇ ನಿರ್ಲಕ್ಷಿಸಿದರೆ ಜೀವಕ್ಕೂ ಅಪಾಯಕಾರಿಯಾಗಬಲ್ಲದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಕೊರೋನಾ ನಡುವೆ ಬ್ಲಾಕ್ ಫಂಗಸ್ ಕಾಟ; ರಾಜ್ಯಗಳಿಗೆ ಮಹತ್ವದ ಸೂಚನೆ ನೀಡಿದ ಕೇಂದ್ರ! ..
‘ವೈಟ್ ಫಂಗಸ್ ಸೋಂಕಿಗೆ ತುತ್ತಾಗಿರುವ ನಾಲ್ವರಲ್ಲೂ ಕೊರೋನಾ ರೀತಿಯ ಲಕ್ಷಣಗಳು ಕಂಡುಬಂದಿದ್ದವು. ಆದರೆ ಅವರಿಗೆ ಕೊರೋನಾ ಸೋಂಕು ತಗುಲಿರಲಿಲ್ಲ. ಪರೀಕ್ಷೆಯಲ್ಲೂ ಇದು ಸಾಬೀತಾಗಿತ್ತು. ವಿವರವಾದ ತಪಾಸಣೆ ನಡೆಸಿದಾಗ ಆ ಎಲ್ಲರೂ ವೈಟ್ ಫಂಗಸ್ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂತು. ಶಿಲೀಂಧ್ರ ನಿಗ್ರಹ ಔಷಧ ಬಳಸಿ ಎಲ್ಲ ನಾಲ್ವರನ್ನೂ ಗುಣಮುಖಗೊಳಿಸಲಾಗಿದೆ. ಶ್ವಾಸಕೋಶಕ್ಕೆ ಹರಡುವ ಈ ಸೋಂಕನ್ನು ಎಚ್‌ಆರ್‌ಸಿಟಿ ಸ್ಕ್ಯಾನ್ ಮೂಲಕ ಪತ್ತೆ ಹಚ್ಚಬಹುದಾಗಿದೆ’ ಎಂದು ಪಟನಾ ವೈದ್ಯ ಕಾಲೇಜು ಮತ್ತು ಆಸ್ಪತ್ರೆಯ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಎನ್. ಸಿಂಗ್ ಅವರು ತಿಳಿಸಿದ್ದಾರೆ.
‘ಎಚ್‌ಆರ್‌ಸಿಟಿ ಪರೀಕ್ಷೆ ವೇಳೆ ಕೊರೋನಾ ರೀತಿಯ ಲಕ್ಷಣಗಳು ಕಂಡುಬಂದರೆ ‘ಮ್ಯೂಕಸ್ ಕಲ್ಚರ್’ ತಪಾಸಣೆ ನಡೆಸಬೇಕು. ಆಗ ವೈಟ್ ಫಂಗಸ್ ತಿಳಿಯುತ್ತದೆ. ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿದವರಲ್ಲಿ ಹೇಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತದೋ ಅಂಥವರಲ್ಲೇ ವೈಟ್ ಫಂಗಸ್ ಕೂಡ ಕಂಡುಬರುತ್ತದೆ. ಮಧುಮೇಹಿಗಳು ಅಥವಾ ದೀರ್ಘಕಾಲದಿಂದ ಸ್ಟೆರಾಯ್ಡ್ ಪಡೆಯುತ್ತಿರುವವರು ಈ ಸೋಂಕಿಗೆ ತುತ್ತಾಗುವ ಅಪಾಯ ಅಧಿಕವಾಗಿದೆ’ ಎಂದು ಅವರು ವಿವರಿಸಿದ್ದಾರೆ.
ಏನಿದು ವೈಟ್ ಫಂಗಸ್?
ಕೊರೋನಾ ಇಲ್ಲದವರಲ್ಲೂ ಕಾಣಿಸಿಕೊಳ್ಳುವ ಶಿಲೀಂಧ್ರ ಸೋಂಕು ಇದು. ರೋಗಲಕ್ಷಣ ಕೊರೋನಾದ್ದೇ ಇರುತ್ತದೆ. ಎಚ್‌ಆರ್‌ಸಿಟಿ ಸ್ಕ್ಯಾನಲ್ಲಿ ಮಾತ್ರ ಪತ್ತೆಯಾಗುತ್ತದೆ. ಮಧುಮೇಹಿಗಳು, ಸ್ಟಿರಾಯ್ಡ್ ಸೇವಿಸುವವರಿಗೆ ಅಪಾಯಕಾರಿ. ಶ್ವಾಸಕೋಶ, ಉಗುರು, ಚರ್ಮ, ಹೊಟ್ಟೆ, ಮೂತ್ರಪಿಂಡ, ಗುಪ್ತಾಂಗ, ಬಾಯಿ ಮೇಲೆ ಪರಿಣಾಮ ಬೀರುತ್ತದೆ. ಆರಂಭದಲ್ಲಿ ನಿರ್ಲಕ್ಷಿಸಿದರೆ ಪ್ರಾಣಕ್ಕೇ ಅಪಾಯವಾಗಬಹುದು ಎಂದು ತಜ್ಞರು ಹೇಳಿದ್ದಾರೆ.