ಶೈಲಜಾ ಟೀಚರ್‌ಗೆ ಮಂತ್ರಿಗಿರಿ ತಪ್ಪಲು ಇದೇ ದೊಡ್ಡ ಕಾರಣ!

By Suvarna NewsFirst Published May 20, 2021, 10:32 PM IST
Highlights

* ದೇಶವನ್ನು ಕಾಡುತ್ತಿರುವ ಕೊರೋನಾ ಎಡರಂಗದ ಉಸಿರು ಉಳಿಸಿತು
* ಶೈಲಜಾ ಟೀಚರ್ ಗೆ ಮಂತ್ರಿಗಿರಿ ಇಲ್ಲ ಎನ್ನುವುದೇ ದೊಡ್ಡ ಚರ್ಚೆಯ ವಿಚಾರ
* ಪಿಣರಾಯಿ ಅವರ ಅಳಿಯ45 ವರ್ಷದ ಪಿಎ ಮಹಮದ್ ರಿಯಾಜ್ ಸಂಪುಟದಲ್ಲಿ ಸ್ಥಾನ

ಡೆಲ್ಲಿ ಮಂಜು

ನವದೆಹಲಿ, (ಮೇ. 20) ಕೊರೋನಾ ಸೋಂಕು ದೇಶದಲ್ಲಿ ಲಕ್ಷಾಂತರ ಮಂದಿಯ ಉಸಿರು ನಿಲ್ಲಿಸಿದೆ ಆದರೂ ರಾಜಕೀಯವಾಗಿ ಎಡರಂಗದ ಪಕ್ಷಗಳಿಗೆ ಇದೆ ಕೊರೋನಾ ಉಸಿರು ಹೊಯ್ದಿದೆ. ಆ ಮೂಲಕ ಕೇರಳದಲ್ಲಿ ಸತತವಾಗಿ ಎರಡನೇ ಬಾರಿ ಅಧಿಕಾರಕ್ಕೇರಲು ಇದೇ ಕೊರೋನಾ ಕೈ ಹಿಡಿದಿದೆ ಅನ್ನೋದು ಕೇರಳದ ರಾಜಕೀಯ ಕಟ್ಟೆಯ ಅಭಿಪ್ರಾಯ.

ಕೊರೋನಾ ಮೊದಲ ಅಲೆಯಲ್ಲಿ ವೇಳೆ ಅದರ ನಿಯಂತ್ರಣ, ಉತ್ತಮ ನಿರ್ವಹಣೆಗೆ ಕೇರಳದ ಮತದಾರರು ಫುಲ್ ಮಾರ್ಕ್ಸ್ ಹಾಕುವ ಜೊತೆಗೆ ಚುನಾವಣೆ ದಾಖಲೆಗಳು ಪುಡಿ ಪುಡಿಯಾಗುವಂತೆ ಗೆಲುವಿನ ಸಂಖ್ಯೆಗಳನ್ನು ಎಡರಂಗಕ್ಕೆ ತಂದು ಕೊಟ್ಟಿದ್ದಾರೆ. ಆದರೆ ಇಂಡಿಯಾ ಪ್ರಧಾನಿ ಮೋದಿ ಅವರಿಂದ ಹಿಡಿದು WHO ತನಕ ಪ್ರಶಂಸೆ ಪಡೆದು, ಕೋವಿಡ್ ಕಾಲದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದ ಶೈಲಜಾ ಟೀಚರ್‌ಗೆ ಮಾತ್ರ ಈ ಬಾರೀಯ ಸಂಪುಟದಲ್ಲಿ ಜಾಗ ನೀಡಿಲ್ಲ..!

ಎಡರಂಗದ ವಿಜಯ, ಈ ವಿಜಯದ ರೂವಾರಿ ಪಿಣರಾಯಿ ವಿಜಯನ್ ಎರಡನೇ ಭಾರಿ ಕೇರಳದ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು. ಇವರ ಜೊತೆ 20 ಮಂದಿ ಶಾಸಕರು ಸಚಿವ ಸಂಪುಟ ಸೇರಿದರು. ಪಿಣರಾಯಿ ಅವರ ಅಳಿಯ45 ವರ್ಷದ ಪಿಎ ಮಹಮದ್ ರಿಯಾಜ್ ಸಂಪುಟದಲ್ಲಿ ಸ್ಥಾನ ಪಡೆಯುವ ಜೊತೆಗೆ ಲೋಕೋಪಯೋಗಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಅಂಥ ಮಹತ್ವದ ಖಾತೆಗಳನ್ನು ದಕ್ಕಿಸಿಕೊಂಡಿದ್ದಾರೆ. 

ಟೀಚರ್ ಕರೆತನ್ನಿ ಎಂದ ಸೆಲೆಬ್ರಿಟಿಗಳು

ಮಾಜಿ ಮಂತ್ರಿ ವಿಷಯವೇ ಹೈಲೇಟ್ : ಹೊಸ ಸಂಪುಟ, ಎರಡನೇ ಬಾರಿ ಪಿಣರಾಯಿ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆದರೂ ಇಡೀ ಕೇರಳದಲ್ಲಿ ಇವತ್ತು ಬಹುಚರ್ಚಿತ ವಿಷಯ ಅಂದರೆ ಮಾಜಿ ಆರೋಗ್ಯ ಮಂತ್ರಿ ಕೆ.ಕೆ. ಶೈಲಜಾ ಟೀಚರ್ ಅವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಕೊಟ್ಟಿಲ್ಲ ಅನ್ನೋದು. ಕೇರಳದಲ್ಲಿ ಬಹು ಸಂಖ್ಯೆಯಲ್ಲಿರುವ ಮತ್ತು ಅನಾದಿ ಕಾಲದಿಂದಲೂ ಎಡರಂಗದ ಪಕ್ಷಗಳನ್ನು ಬೆಂಬಲಿಸುತ್ತಾ ಬಂದಿರುವ ಈಳವ ಸಮುದಾಯವನ್ನು ಈ ಟೀಚರಮ್ಮ ಪ್ರತಿನಿಧಿಸುತ್ತಾರೆ. ಸಾಲದಕ್ಕೆ ಈ ಬಾರಿಯೂ ಕೂಡ ಮಲಬಾರ್ ಪ್ರಾಂತ್ಯದ ಮತ್ತನೂರು ಕ್ಷೇತ್ರದಿಂದ 60 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದರು.

ಕಳೆದ ಐದು ವರ್ಷಗಳೂ ಕೂಡ ಕೇರಳ ಪ್ರಭುತ್ವಕ್ಕೆ ಒಂದಲ್ಲೊಂದು ಟಾಸ್ಕ್ ಕೊಟ್ತಾನೆ ಬಂದವು. ಅದರಲ್ಲೂ ಆರೋಗ್ಯ ಇಲಾಖೆಗೆ ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡಿದ್ದು ಸುಳ್ಳಲ್ಲ. ನಿಫಾ ಸೋಂಕು ಬಂದು ಕೇರಳದ ಕದತಟ್ಟಿದಾಗ ಶೈಲಜಾ ಟೀಚರ್ ನಿದ್ರೆ, ನೀರಡಿಕೆ ಬಿಟ್ಟು ಸೋಂಕನ್ನು ಕೇರಳದಿಂದ ಓಡಿಸಿದರು. ಅದಾದ ಕೂಡಲೇ ಪ್ರವಾಹದ ಜೊತೆ ಕೇರಳಕ್ಕೆ ನುಗ್ಗಿದ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಯಶಸ್ವಿಯಾದರು.

ಅದರಲ್ಲೂ ಚುನಾವಣೆ ವರ್ಷದಲ್ಲಿ ಕಾಡಿದ ಕೋವಿಡ್ ಸೋಂಕನ್ನು ಇದೇ ಶೈಲಜಾ ಟೀಚರ್ ಆರೋಗ್ಯ ಮಂತ್ರಿಯಾಗಿ ಉತ್ತಮವಾಗಿ ನಿಭಾಯಿಸಿದರು. ಅವರ ಕೆಲಸ ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಯ್ತು ಅಂದರೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೊಗಳಿತು. ಸಾಲದಕ್ಕೆ ಒಳ್ಳೆಯ ಕೆಲಸಕ್ಕೆ ಮತ್ಸರ ಯಾಕೆ   ಅಂತಲೇ ಏನು ಪ್ರಧಾನಿ ಮೋದಿ ಅವರು ಕೂಡ ಟೀಚರ್ ಅವರ ಕೆಲಸ, ನಿರ್ವಹಣೆಗೆ ಫುಲ್ ಮಾರ್ಕ್ ಹಾಕಿದರು.
 
ಬಹುಶಃ ಅವರ ಅಂದಿನ ಉತ್ತಮ ಮ್ಯಾನೇಜ್‌ಮೆಂಟ್ ಕೌಶಲ್ಯವೇ ಇಂದು ಮಂತ್ರಿ ಪದವಿ ತಪ್ಪಿಸಿತು ಅನ್ನೋದು ಕೇರಳ ರಾಜಕೀಯ ಪಂಡಿತರ ಲೆಕ್ಕಾಚಾರ. ಆಕೆ ಕೆಲಸಕ್ಕೆ ಎಡರಂಗದ ಹೈಕಮಾಂಡ್ ಕೂಡ ಅಸೂಯೆಪಟ್ಟಿತ್ತಂತೆ. ಟೀಚರ್ ಅವರ ಕೆಲಸಕ್ಕೆ ಹೊಗಳಿಕೆ ಶುರುವಾದ ಕೂಡಲೇ ಎಡರಂಗದ ಹೈಕಮಾಂಡ್ ಕೊರೋನಾ ಕುರಿತು ಮಾಧ್ಯಮಗಳ ಹೇಳಿಕೆ ಕೊಡುವ ಜವಾಬ್ದಾರಿಯನ್ನು ಸಿಎಂ ಪಿಣರಾಯಿ ವಿಜಯನ್ ಅವರೇ ವಹಿಸಿಕೊಳ್ಳಬೇಕು ಅಂಥ ಸೂಚಿಸಿತು. ಅಂದಿನಿಂದ ಸಿಎಂ ಅವರಿಂದಲೇ ನಿತ್ಯ ಮೀಡಿಯಾಕ್ಕೆ ಬ್ರಿಫೀಂಗ್ ಶುರುವಾಯ್ತು.

ಹೊಸಬರಿಗೆ ಅವಕಾಶ : ಯಂಗ್ ಬ್ಲೆಡ್‌ಗೆ ಪಕ್ಷ ಮತ್ತು ನಾಡು ಕಟ್ಟುವ ಕೆಲಸ ಕೊಡಬೇಕು. ಮುಂದಿನ ನಾಯಕತ್ವವನ್ನು ಗುರುತಿಸಬೇಕು ಅನ್ನೋ ಹೊಸ ತಂತ್ರಕ್ಕೆ ಎಡರಂಗ ಈ ಬಾರಿ ಮೊರೆಹೋಗಿದೆ. ಪಶ್ಚಿಮ ಬಂಗಾಳ, ತ್ರಿಪುರಗಳಲ್ಲಿ ನೆಲೆಕಳೆದುಕೊಂಡ ಬಳಿಕ ಹೊಸ ಲೆಕ್ಕಾಚಾರಕ್ಕೆ ಚಾಲನೆ ನೀಡಿದೆ. ಅದರಂತೆ ಈ ಬಾರಿಯ ಸಂಪುಟದಲ್ಲಿ ಸಿಎಂ ಹೊರತುಪಡಿಸಿ ಹಳಬರಿಗೆ ಒಬ್ಬರಿಗೂ ಅವಕಾಶ ಕೊಟ್ಟಿಲ್ಲ. ಇದೇ ಸೂತ್ರ ಶೈಲಜಾ ಟೀಚರ್ ಅವರಿಗೂ ಅನ್ವಯಿಸುತ್ತೆ ಅಂತಾರೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ. ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಇದು ಪಕ್ಷದ ಭವಿಷ್ಯದ ಸೂತ್ರ ಕೂಡ ಅಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!