Subhas Chandra Bose: 76 ವರ್ಷಗಳ ಬಳಿಕವೂ ನಿಗೂಢ: ಇನ್ನೂ ಬಗೆಹರಿದಿಲ್ಲ ನೇತಾಜಿ ಸಾವಿನ ರಹಸ್ಯ?

By Kannadaprabha News  |  First Published Jan 23, 2022, 11:50 AM IST

*   1945 ಆ.18 ರ ತೈವಾನ್ ವಿಮಾನ ದುರಂತದಲ್ಲಿ ಬೋಸ್ ನಿಜಕ್ಕೂ ನಿಧನರಾಗಿದ್ದರೇ?
*   ಅನಾಮಧೇಯ ನಾಮಿ ಬಾಬಾ
*   ನೇತಾಜಿ ನಿಧನಕ್ಕೆ ಯಾವ ಪುರಾವೆಗಳೂ ಇಲ್ಲ


ವಿಂಗ್ ಕಮಾಂಡರ್ ಬಿ.ಎಸ್.ಸುದರ್ಶನ 

15 ಆಗಸ್ಟ್ 1945ರಂದು ಜಪಾನಿನ(Japan) ಚಕ್ರವರ್ತಿ ಹಿರೋಹಿಟೊ ರಾಷ್ಟ್ರೀಯ ರೇಡಿಯೋ ಸಂದೇಶದ ಮುಖಾಂತರ ಜಪಾನ್ ದೇಶವು ಹಿಟ್ಲರ್ ವಿರೋಧಿ ಅಮೆರಿಕ(America) ಹಾಗೂ ಬ್ರಿಟನ್(Britain) ಸೇರಿದಂತೆ ಒಕ್ಕೂಟ
ರಾಷ್ಟ್ರಸಮೂಹಕ್ಕೆ ಶರಣಾಗತವಾಗಿದೆ ಎನ್ನುವ ಘೋಷಣೆಯೊಂದಿಗೆ 2ನೇ ವಿಶ್ವಯುದ್ಧಕ್ಕೆ(Second World War) ತೆರೆ ಬಿದ್ದಿತು. ಮರುದಿನವೇ ಸಿಂಗಾಪುರದ(Singapur) ಐಎನ್‌ಎ ಕಾರ್ಯಾಲಯದಿಂದ ಸುಭಾಷ್‌ ಚಂದ್ರ ಬೋಸರು(Subhas Chandra Bose) ತಮ್ಮ ಕೆಲವು ಸಹಚರರೊಂದಿಗೆ ವಿಮಾನದಲ್ಲಿ ಹೊರಟು ವಿಯಟ್ನಾಂನ ಸೈಗೋನ್ (ಈಗಿನ ಹೋಚಿಮಿನ್ ಸಿಟಿ) ವಿಮಾನ ನಿಲ್ದಾಣಕ್ಕೆ ಬಂದು ತಲುಪುತ್ತಾರೆ. ನೇತಾಜಿಯವರೊಂದಿಗೆ ಜಪಾನಿನ ಸೈನ್ಯಾಧಿಕಾರಿ

Latest Videos

undefined

"

ಲೆಫ್ಟಿನೆಂಟ್ ಜನರಲ್ ಸುನಮಾಸ ಶೆಡೈ ಸಹ ಇರುತ್ತಾರೆ. ಜಪಾನ್ ದೇಶದ ಶರಣಾಗತಿಯಿಂದ ಕುಗ್ಗಿಹೋದ ಜಪಾನಿನ ಸೈನ್ಯಾಧಿಕಾರಿ ಮತ್ತು ತಮ್ಮ ಆಜಾದ್ ಹಿಂದ್ ಫೌಜಿನ ಭವಿಷ್ಯದ ಬಗ್ಗೆ ಚಿಂತಿತರಾದ
ಸುಭಾಷ್‌ ಚಂದ್ರ ಬೋಸರು ಅಂದು ಹೋಚಿಮಿನ್ ಸಿಟಿಯಲ್ಲೇ ತಂಗಿರುತ್ತಾರೆ. 18 ಆಗಸ್ಟ್ 1945  ಹೋಚಿಮಿನ್ ಸಿಟಿಯಲ್ಲಿದ್ದ ಐಎನ್‌ಎ ಕಾರ್ಯಕರ್ತ ಮತ್ತು ನೇತಾಜಿಯವರ ಆಪ್ತಮಿತ್ರ ತಮಿಳು ಮೂಲದ ಲಿಯೋನ್ ಪೋಚಂಡಿಯವರು ನೇತಾಜಿ ಮತ್ತು ಜಪಾನಿನ ಸೈನ್ಯಾಧಿಕಾರಿಯನ್ನು ಕೊನೆಯದಾಗಿ ವಿಮಾನ ನಿಲ್ದಾಣದಿಂದ ಬೀಳ್ಕೊಡುತ್ತಾರೆ. ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎನ್ನುವುದರ ಬಗ್ಗೆ ಕಿಂಚಿತ್ತೂ ಮಾಹಿತಿ ಇರಲಿಲ್ಲ. ಇದಾದ ಐದು ದಿನಗಳ ನಂತರ ಜಪಾನಿನ ಮೂಲಕ ಜಗತ್ತಿನಾದ್ಯಂತ ಹಬ್ಬಿದ ಸಮಾಚಾರವೇನೆಂದರೆ 18 ಆಗಸ್ಟ್ 1945 ರಂದು ತೈವಾನಿನ ತೈಹೊಕು ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Subhash Chandra Bose Jayanti 2022: ಅಪ್ಪಟ ಸ್ವಾಭಿಮಾನಿ, ದೇಶಪ್ರೇಮಿ ಸಮರವೀರ ನೇತಾಜಿ!

ದೇಶ-ವಿದೇಶಗಳಿಂದ ತನಿಖೆ 

ದುರದೃಷ್ಟವೇನೆಂದರೆ ಈ ‘ದುರ್ಘಟನೆ’ ನಡೆದು ಈಗಾಗಲೇ 76 ವರ್ಷಗಳು ಕಳೆದಿದ್ದರೂ ನೇತಾಜಿಯವರು ‘ಕಣ್ಮರೆ’ಯಾದದ್ದು ಈಗಲೂ ನಿಗೂಢ ರಹಸ್ಯವಾಗೇ ಉಳಿದಿದೆ. ಈ ವಿಷಯದ ಬಗ್ಗೆ ಹಲವಾರು ದೇಶ-ವಿದೇಶಗಳ ಮಟ್ಟದ ತನಿಖೆಗಳು ನಡೆದವು, ಇನ್ನೂ ನಡೆಯುತ್ತಲೇ ಇವೆ. ಎಲ್ಲವನ್ನೂ ಶಿಸ್ತಿನಿಂದ ನಿಭಾಯಿಸುವ ಜಪಾನ್ ದೇಶವೂ ಈ ಘಟನೆಯ ತನಿಖೆಯನ್ನು ಅನುಮಾನಾಸ್ಪದವಾಗೇ ನಡೆಸಿತು. ಶರಣಾಗತಿಯ ಒಪ್ಪಂದದಂತೆ ಮುಂದೆ ಕೆಲವೇ ದಿನಗಳಲ್ಲಿ ತೈವಾನನ್ನು ತೆರವು ಮಾಡಿ ರಿಪಬ್ಲಿಕ್ ಆಫ್ ಚೈನಾಕ್ಕೆ(Republic of China) ಹಸ್ತಾಂತರಿಸಿ ಹೊರಟು ಹೋಯಿತು. ಹೋಗುವ ಮುನ್ನ ನೇತಾಜಿಯವರ ‘ಚಿತಾಭಸ್ಮ’ವಿರುವ ಬೂದಿಗುಡಿಕೆಯನ್ನು ತೆಗೆದುಕೊಂಡು ಹೋಗಿ ಅದನ್ನು ಟೋಕಿಯೋದ ರೆನ್ಮೋಜಿ ಮಂದಿರದಲ್ಲಿ ಇಡಲಾಗುತ್ತದೆ ಮತ್ತು ಇವತ್ತಿನವರೆಗೂ ಅವರ ಚಿತಾಭಸ್ಮ ಅಲ್ಲೇ ಸ್ಥಾಪಿಸಲಾಗಿದೆ.

ಈ ಘಟನೆಯ ಬಗ್ಗೆ ಮೊಟ್ಟ ಮೊದಲು ತನಿಖೆಯನ್ನು ಪ್ರಾರಂಭಿಸಿದ್ದು ಅಮೆರಿಕದ ಒಂದು ಖಾಸಗಿ ಸಂಘಟನೆ. ಅವರ ಪ್ರಕಾರ ತೈವಾನಿನಲ್ಲಿ ಆ ದಿನ ಅಂದರೆ 18 ಆಗಸ್ಟ್ 1945 ರಂದು ಯಾವ ವಿಮಾನದ ದುರ್ಘಟನೆಯೂ ನಡೆದಿರಲಿಲ್ಲವಂತೆ!

ನೇತಾಜಿಯವರ ವಿರುದ್ಧ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಬ್ರಿಟಿಷರೂ ಈ ನಿಗೂಢ ರಹಸ್ಯದ ಜಾಡು ಹಿಡಿದು ಹೊರಟರು; ಅವರಿಗೂ ಇದರ ಬಗ್ಗೆ ಯಾವ ಸುಳಿವೂ ಸಿಗಲಿಲ್ಲ. ಮುಂದೆ ಭಾರತ ಸರ್ಕಾರ ಕೂಡ ಈ ದುರ್ಘಟನೆ ನಡೆದ ಬರೋಬ್ಬರಿ ಹನ್ನೊಂದು ವರ್ಷಗಳ ನಂತರ ಅಂದರೆ 1956 ರಲ್ಲಿ ಶಾಹ್ ನವಾಜ್ ಕಮಿಟಿಯನ್ನು ರಚಿಸಿತು. ಈ ತನಿಖಾದಳ ಕುಳಿತಲ್ಲೇ ಒಂದು ವರದಿಯನ್ನು ಸೃಷ್ಟಿಸಿ ‘ಹ್ಞಾ..ಹೌದು ನೇತಾಜಿಯವರು ವಿಮಾನಾಪಘಾತದಲ್ಲಿ ನಿಧನರಾದರು’ ಎಂದು ಷರಾ ಬರೆದು ಸುಮ್ಮನಾಯಿತು. ನೆಹರು ಸರ್ಕಾರದ ಇಂತಹದ್ದೊಂದು ಬಾಲಿಶ ವರದಿಯನ್ನು ಭಾರತೀಯರು ಒಪ್ಪಲು ಸಿದ್ಧವಾಗಿರಲಿಲ್ಲ.

ವಿಮಾನ ದುರ್ಘಟನೆಯಲ್ಲಿ ಸತ್ತಿಲ್ಲ?

ಮತ್ತೊಮ್ಮೆ 1974 ರಲ್ಲಿ ಖೋಸ್ಲಾ ಕಮಿಷನ್ ಎನ್ನುವ ಮತ್ತೊಂದು ವಿಚಾರಣಾ ಸಮಿತಿಯನ್ನು ರಚಿಸಲಾಯಿತು. ಅಷ್ಟೊತ್ತಿಗಾಗಲೇ ಸರಿಸುಮಾರು ಮೂವತ್ತು ವರ್ಷಗಳೇ ಸಂದಿದ್ದು ಕಾಟಾಚಾರದ ಮತ್ತೊಂದು ವರದಿಯನ್ನು ಸೃಷ್ಟಿಸಿ, ಅವರೂ ಶಾಹ್ ನವಾಜ್ ವರದಿಯನ್ನೇ ಪ್ರತಿಧ್ವನಿಸಿ ‘ವಿಮಾನ ದುರ್ಘಟನೆಯಲ್ಲಿ ನೇತಾಜಿ ಸತ್ತಿರುವುದು ನಿಜ’ ಎಂದು ವಿಚಾರಣೆಗೆ ನಾಂದಿ ಹಾಡಿ, ಇಷ್ಟೇ ನಮಗೆ ತಿಳಿದಿರುವ ಮಾಹಿತಿ ಎಂದು ಕೈಚೆಲ್ಲಿ ಕುಳಿತಿತು ಅಂದಿನ ಸರ್ಕಾರ. ನೇತಾಜಿಯವರು ವಿಮಾನಾಪಘಾತದಲ್ಲಿ ಸತ್ತಿಲ್ಲ, ಟೋಕಿಯೊದಲ್ಲಿರುವುದು ಅವರ ಅಸ್ಥಿ ಅಲ್ಲ.. ಅದು ಬೇರೆ ಯಾರದೋ ಇದೆ, ಇದರ ಡಿಎನ್‌ಎ ಪರೀಕ್ಷೆಯಾಗಬೇಕು(DNA Test) ಎಂದು

ಅವರ ಕುಟುಂಬದವರ ಮತ್ತು ಕೆಲವು ಪ್ರಭಾವಿ ಭಾರತೀಯರ ಧ್ವನಿ ಏರುತ್ತಿದ್ದಂತೆ ಮುಂದೆ ಮತ್ತೊಂದು ಕಮಿಟಿಯನ್ನು ಜಸ್ಟಿಸ್ ಮುಖರ್ಜಿಯವರ ನೇತೃತ್ವದಲ್ಲಿ ನೇಮಿಸಲಾಯಿತು. ಸತತವಾಗಿ ೫ ವರ್ಷಗಳ ವಿಚಾರಣೆಯ ನಂತರ ಈ ಸಮಿತಿ 8 ನವೆಂಬರ್ 2005ರಂದು ತನ್ನ ವಿಚಾರಣೆ ಮುಕ್ತಾಯಗೊಳಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು. ಆ ವರದಿಯ ಪ್ರಕಾರ ‘18 ಆಗಸ್ಟ್ 1945 ರಂದು ತೈಹೊಕುನಲ್ಲಿ ಯಾವ ವಿಮಾನ ದುರ್ಘಟನೆಯೂ ನಡೆದಿರಲಿಲ್ಲ. ಹಾಗಾಗಿ ನೇತಾಜಿ ಈ ದುರ್ಘಟನೆಯಲ್ಲಿ ಸಾಯಲಿಲ್ಲ ಮತ್ತು ಟೋಕಿಯೋದಲ್ಲಿರುವ ಚಿತಾಭಸ್ಮ ನೇತಾಜಿಯವರದ್ದಲ್ಲ’ ಎನ್ನುವ ವರದಿಯನ್ನು ಕೊಟ್ಟಿತು. ಅಂದಿನ ಭಾರತ ಸರ್ಕಾರ ಈ ವರದಿಯನ್ನು ಕೂಡಲೇ ತಿರಸ್ಕರಿಸಿತು.

ನೇತಾಜಿಯವರು ಈ ಅಪಘಾತದಲ್ಲಿ ಸತ್ತಿಲ್ಲವೆಂದರೆ ಮತ್ತೆ ಎಲ್ಲಿಗೆ ಹೋದರು, ಎಲ್ಲಿಯವರೆಗೆ ಜೀವಂತವಾಗಿದ್ದರು? ಈ ವಿಷಯಗಳ ಬಗ್ಗೆ ನಿಖರವಾದ ಮಾಹಿತಿ ದೊರೆಯದೇ ಹೋಯಿತು. ತೆರೆಮರೆಯಲ್ಲಿ ಕೆಲವು ನಿಗೂಢ ಶಕ್ತಿಗಳ ಕೈವಾಡವಿರುವುದರ ಬಗ್ಗೆಯೂ ಈ ತನಿಖೆಗಳಲ್ಲಿ ಭಾಗವಹಿಸಿದವರಿಗೆ ಅರಿವಾಗುತ್ತದೆ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳು ಸರ್ಕಾರಿ ಕಾರ್ಯಾಲಯಗಳಿಂದ ಇದ್ದಕ್ಕಿದ್ದಂತೆ ಮಾಯವಾಗುತ್ತಿರುವುದು ಸಹ ಕಂಡುಬರುತ್ತದೆ. ಈ ನಡುವೆ ವಿಮಾನ ದುರ್ಘಟನೆಯನ್ನು ಹೊಗೆಯ ತೆರೆಯಂತೆ ಬಳಸಿಕೊಂಡು ಹಿಂದಿನಿಂದ ನೇತಾಜಿಯವರನ್ನು ಸೋವಿಯತ್ ರಷ್ಯಾಗೆ ರವಾನಿಸಲಾಗಿದೆ

ಎನ್ನುವ ದಟ್ಟ ಮಾಹಿತಿ ಇನ್ನೊಂದೆಡೆ ಹಬ್ಬಿತ್ತು. ಆದರೆ ಅದಕ್ಕೆ ಯಾವ ಪುರಾವೆಗಳೂ ದೊರಕಲಿಲ್ಲ. ನೇತಾಜಿಯವರು ಜೀವಂತವಾಗಿದ್ದರೆ ಸ್ವಾತಂತ್ರ್ಯ ದೊರಕಿದ ನಂತರವಾದರೂ ಭಾರತಕ್ಕೆ ಮರಳಿ ಬರಬಹುದಿತ್ತಲ್ಲವೇ? ಯಾಕೆ ಬರಲಿಲ್ಲ? ಎನ್ನುವ ಹಲವರ ಪ್ರಶ್ನೆ ಈಗಲೂ ಯಕ್ಷಪ್ರಶ್ನೆಯಾಗೇ ಉಳಿದಿದೆ ಅಥವಾ ಅವರು ಭಾರತಕ್ಕೆ ಅನಾಮಧೇಯರಾಗಿ ಬಂದಿದ್ದರೇ?

ಅನಾಮಧೇಯ ನಾಮಿ ಬಾಬಾ

ಫೈಜಾಬಾದ್ ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯ ಬಳಿ ಇರುವ ಒಂದು ಪಟ್ಟಣ. 1955 ರಿಂದ 1985ರವರೆಗೆ ಉತ್ತರ ಪ್ರದೇಶದ ಕೆಲವಾರು ಸ್ಥಳಗಳಲ್ಲಿ ತಿರುಗಾಟ ನಡೆಸುತ್ತಿದ್ದ ಒಬ್ಬ ಸನ್ಯಾಸಿಯನ್ನು ಜನರು ಬಾಬಾಜಿ, ಸ್ವಾಮೀಜಿ, ಭಗವಾನ್‌ಜಿ ಅಥವಾ ಗುಮ್ ನಾಮಿ ಬಾಬಾ ಎಂದು ಕರೆಯುತ್ತಿದ್ದರು. ಫೈಜಾಬಾದಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇವರು ಭೇಟಿಮಾಡಲು ಬರುತ್ತಿದ್ದ ಜನಗಳನ್ನು ಮಾತನಾಡಿಸುತ್ತಿದ್ದದ್ದೇ ಪರದೆಯ ಆಚೆಕಡೆಯಿಂದ. ಯಾರಿಗೂ ಮುಖವನ್ನೇ ತೋರಿಸುತ್ತಿರಲಿಲ್ಲವಂತೆ. ಹಾಗಾಗಿ ಇವರ ಹೆಸರು ಗುಮ್ ನಾಮಿ ಬಾಬಾ ಎಂದು. ಪೋಸ್ಟಿನ ಮುಖಾಂತರ ಪ್ರತಿದಿನ ಇವರಿಗೆ ಇಂಗ್ಲಿಷ್, ಬೆಂಗಾಲಿ ಹಾಗೂ ಹಿಂದಿಯ ನಾನಾ ರೀತಿಯ ದಿನಪತ್ರಿಕೆಗಳು, ವಾರಪತ್ರಿಕೆಗಳು ಮತ್ತು ಪುಸ್ತಕಗಳು ಬಂದು ತಲುಪುತ್ತಿದ್ದವು. ಪ್ರತಿ ಸಂಜೆ ಜೋರಾಗಿ ಶಂಖದ ಧ್ವನಿ ಕೇಳಿತೆಂದರೆ ಬಾಬಾರವರ ಪೂಜೆ ನಡೆಯುತ್ತಿದೆ ಎಂದು ಮತ್ತು ಶಂಖದ ಧ್ವನಿ ಕೇಳದಿದ್ದರೆ ಬಾಬಾಜಿ ಪರ್ಯಟನೆಗೆ ಹೊರಟಿರಬಹುದೆಂದು ನೆರೆಹೊರೆಯವರು ಅರ್ಥೈಸಿಕೊಳ್ಳುತ್ತಿದ್ದರು.

ನೇತಾಜಿ ಸ್ತಬ್ಧಚಿತ್ರ, ಕೇರಳ ಬಳಿಕ ಈಗ ಬಂಗಾಳ ಟ್ಯಾಬ್ಲೋ ತಿರಸ್ಕಾರ: ವಿವಾದ!

ಆದರೆ ಅವರು ಹೋಗುವುದನ್ನು ಬರುವುದನ್ನು ಯಾರೂ ನೋಡಲು ಸಾಧ್ಯವಾಗುತ್ತಿರಲಿಲ್ಲ ಅಷ್ಟು ರಹಸ್ಯಮಯವಾಗಿರುತ್ತಿತ್ತು ಅವರ ಚಲನವಲನ. 19 ಸೆಪ್ಟೆಂಬರ್ 1985 ನಡುರಾತ್ರಿ ರಾಷ್ಟ್ರಧ್ವಜದಲ್ಲಿ ಸುತ್ತಿದ್ದ ಈ ಬಾಬಾರ ಮೃತ ಶರೀರವನ್ನು ಮನೆಯಿಂದ ಹೊರತಂದು ಸರಯೂ ನದಿಯ ದಂಡೆಯ ಗುಪ್ತರ್ ಘಾಟಿನಲ್ಲಿ ಅಂತಿಮ ಸಂಸ್ಕಾರ ನಡೆದಾಗಲೂ ಕೇವಲ ಹದಿಮೂರು ಜನ ಆಪ್ತರು ಮಾತ್ರ ಉಪಸ್ಥಿತರಿದ್ದರು. ಅಲ್ಲಿದ್ದ ರಾಮ್ ಕಿಶೋರ್ ಪಾಂಡಾರವರು ಭಾವುಕರಾಗಿ, ‘ಇವರ ಅಂತಿಮ ಯಾತ್ರೆಗೆ ಹದಿಮೂರು ಲಕ್ಷ ಜನ ಸೇರಬೇಕಿತ್ತು. ನಾವು ಕೇವಲ ಹದಿಮೂರು ಜನ ಮಾತ್ರ ಇದ್ದೇವಲ್ಲಾ’ ಎಂದು ಬಿಕ್ಕಿ ಬಿಕ್ಕಿ ಅತ್ತರು. ಹಾಗಾದರೆ ಈ ಗುಮ್ ನಾಮಿ ಬಾಬಾಯಾರು?

24 ದೊಡ್ಡ ಪೆಟ್ಟಿಗೆಗಳಲ್ಲಿ ದೊರೆತ ಬಾಬಾರ ಪುಸ್ತಕಗಳು, ಪತ್ರಗಳು, ಜರ್ಮನ್ ಟೈಪ್ ರೈಟರ್ ಮತ್ತು ಬೈನಾಕ್ಯುಲರ್, ರೌಂಡ್ ಫ್ರೇಮಿನ ಕನ್ನಡಕ ಹೀಗೆ ಸುಮಾರು ಎರಡೂವರೆ ಸಾವಿರ ವಿವಿಧ ಬಗೆಯ ವಸ್ತುಗಳು ಅವುಗಳ ಮಾಲಿಕ ಯಾರಾಗಿದ್ದರು ಎಂದು ಚೀರಿ ಚೀರಿ ಹೇಳುವಂತಿದೆ. ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಇವುಗಳನ್ನು ನೀಟಾಗಿ ವಸ್ತು ಸಂಗ್ರಹಾಲಯದಲ್ಲಿ ಇರಿಸಿ ಸಾರ್ವಜನಿಕ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕು ಎನ್ನುವ ಆದೇಶವೂ ಹೊರಟಿದೆ. ಜನವರಿ 23 ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಈ ಕಾರ್ಯ ನೆರವೇರಬಹುದೇ?

ಸೆ.19, 1985 ರ ನಡುರಾತ್ರಿ ರಾಷ್ಟ್ರಧ್ವಜದಲ್ಲಿ ಸುತ್ತಿದ್ದ ಬಾಬಾರ ಮೃತದೇಹವನ್ನು ಸರಯೂ ನದಿಯ ದಂಡೆಯ ಗುಪ್ತರ್ ಘಾಟಿನಲ್ಲಿ ಕೇವಲ 13 ಜನ ಅಂತಿಮ ಸಂಸ್ಕಾರ ನಡೆಸಿದರು.
ಅಲ್ಲಿದ್ದ ರಾಮ್ ಕಿಶೋರ್ ಪಾಂಡಾ ಭಾವುಕರಾಗಿ, ‘ಇವರ ಅಂತಿಮ ಯಾತ್ರೆಗೆ 13 ಲಕ್ಷ ಜನ ಸೇರಬೇಕಿತ್ತು. ನಾವು ಕೇವಲ 13 ಜನ ಇದ್ದೇವಲ್ಲಾ’ ಎಂದು ಬಿಕ್ಕಿಬಿಕ್ಕಿ ಅತ್ತರು. ಹಾಗಾದರೆ ಈ ಗುಮ್‌ನಾಮಿ ಬಾಬಾ ಯಾರು?
 

click me!