
ಬಿಕಾನೇರ್ (ರಾಜಸ್ಥಾನ) (ಮೇ.23): ಪಾಕಿಸ್ತಾನದ ವಿರುದ್ಧ ಗುಡುಗು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಸಿಂದೂರವು ಗನ್‌ಪೌಡರ್ ಆದಾಗ ಏನಾಗುತ್ತದೆ ಎಂಬುದನ್ನು ದೇಶದ ಶತ್ರುಗಳು ಕಲಿತಿದ್ದಾರೆ. ಪಾಕಿಸ್ತಾನವು ಮಂಡಿಯೂರುವಂತೆ ಮಾಡಿದ ನಮ್ಮ ಪಡೆಗಳ ಕಾರ್ಯ ಶ್ಲಾಘನೀಯ’ ಎಂದು ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪ್ರಾರಂಭಿಸಲಾದ ಆಪರೇಷನ್ ಸಿಂದೂರದ ನಂತರ ತಮ್ಮ ಮೊದಲ ಸಾರ್ವಜನಿಕ ಭಾಷಣವನ್ನು ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಬಿಕಾನೇರ್‌ನ ಪಲಾನಾದಲ್ಲಿ ನಡೆದ ಸಮಾವೇಶದಲ್ಲಿ ಮಾಡಿದ ಪ್ರಧಾನಿ, ‘ಏಪ್ರಿಲ್ 22 ರಂದು ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ, ನಾವು 22 ನಿಮಿಷಗಳಲ್ಲಿ 9 ದೊಡ್ಡ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ್ದೇವೆ’ ಎಂದರು.
’ಸಿಂದೂರವು‘ಬಾರೂದ್’ (ಗನ್ ಪೌಡರ್) ಆಗಿ ಬದಲಾದಾಗ ಏನಾಗುತ್ತದೆ ಎಂಬುದನ್ನು ಜಗತ್ತು ಮತ್ತು ದೇಶದ ಶತ್ರುಗಳು ನೋಡಿದ್ದಾರೆ. ಈಗ ಮೋದಿಯ ರಕ್ತನಾಳಗಳಲ್ಲಿ ರಕ್ತವಲ್ಲ, ಸಿಂದೂರ ಹರಿಯುತ್ತದೆ. ಪ್ರತಿಯೊಂದು ಭಯೋತ್ಪಾದಕ ದಾಳಿಗೂ ಪಾಕಿಸ್ತಾನ ಭಾರೀ ಬೆಲೆ ತೆರಬೇಕಾಗುತ್ತದೆ’ ಎಂದು ಗುಡುಗಿದರು. ‘ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆಯು ಬರೀ ಪ್ರತೀಕಾರವಲ್ಲ. ಬದಲಾಗಿ ‘ನ್ಯಾಯದ ಹೊಸ ರೂಪ’. ಆಪರೇಷನ್ ಸಿಂಧೂರ ಕೇವಲ ಕೋಪವಲ್ಲ, ಇದು ಸಮರ್ಥ ಭಾರತದ ಉಗ್ರ ರೂಪ. ಇದು ಭಾರತದ ಹೊಸ ರೂಪ’ ಎಂದ ಅವರು, ‘ಇನ್ನು ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ ಅಥವಾ ಮಾತುಕತೆ ಇರುವುದಿಲ್ಲ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಚರ್ಚೆ ಇರುತ್ತದೆ’ ಎಂದು ಪುನರುಚ್ಚರಿಸಿದರು.
ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ ದಿವ್ಯಾಂಗರಿಗೆ ಭರ್ಜರಿ ಗಿಫ್ಟ್ ಘೋಷಿಸಿದ ಮೋದಿ ಸರ್ಕಾರ!
ಆಪರೇಶನ್ ಸಿಂದೂರದ 3 ಸೂತ್ರಗಳು: ‘ಭಾರತವು ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ. ಇದು ಮೊದಲನೆಯ ಸೂತ್ರ. ದೇಶದ ಮೇಲೆ ಭಯೋತ್ಪಾದಕ ದಾಳಿ ನಡೆದರೆ ಅದಕ್ಕೆ ಸೇನೆ ಸೂಕ್ತ ಪ್ರತ್ಯುತ್ತರ ನೀಡುತ್ತದೆ. ಉತ್ತರ ನೀಡಬೇಕಾದ ಸಮಯ ಮತ್ತು ವಿಧಾನಗಳನ್ನು ನಮ್ಮ ಸೇನೆಯೇ ನಿರ್ಧರಿಸುತ್ತದೆ. ಇದು 2ನೇ ಸೂತ್ರ. ಭಯೋತ್ಪಾದಕರು, ಅವರ ಪೋಷಕರು ಮತ್ತು ಭಯೋತ್ಪಾದನೆ ಪ್ರಚೋದಿಸುವ ಸರ್ಕಾರಗಳನ್ನು ನಾವು ಪ್ರತ್ಯೇಕವಾಗಿ ಕಾಣದೇ ಅವರನ್ನು ಒಂದೇ ಎಂದು ಪರಿಗಣಿಸುತ್ತೇವೆ. ಇದು 3ನೇ ಸೂತ್ರ. ಇವು ಆಪರೇಷನ್ ಸಿಂದೂರದ 3 ಸೂತ್ರಗಳು’ ಎಂದು ಮೋದಿ ನುಡಿದರು.
ಇನ್ನು ಪಾಕ್ ಆಟ ನಡೆಯಲ್ಲ: ಪಾಕಿಸ್ತಾನದ ಆಟ ಇನ್ನು ಮುಂದೆ ನಡೆಯುವುದಿಲ್ಲ. ನಮ್ಮ ಸರ್ಕಾರ 3 ಸಶಸ್ತ್ರ ಪಡೆಗಳಿಗೂ ಮುಕ್ತ ಸ್ವಾತಂತ್ರ್ಯ ನೀಡಿತು. ಅವರು ಒಟ್ಟಾಗಿ ಅಂತಹ ಬಲೆಯನ್ನು ಸೃಷ್ಟಿಸಿದರು, ಅದು ಪಾಕಿಸ್ತಾನವನ್ನು ಮಂಡಿ ಊರುವಂತೆ ಮಾಡಿತು.
ಪಾಕ್ ವಾಯುನೆಲೆ ಐಸಿಯುನಲ್ಲಿ: ಪಾಕಿಸ್ತಾನ ಬಿಕಾನೇರ್‌ನ ನಾಲ್ ವಾಯುನೆಲೆಯನ್ನು ಗುರಿಯಾಗಿಸಲು ಪಾಕ್ ಪ್ರಯತ್ನಿಸಿತ್ತು ಆದರೆ ಅದಕ್ಕೆ ಯಾವುದೇ ಹಾನಿ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಪಾಕಿಸ್ತಾನದ ರಹೀಂ ಯಾರ್ ಖಾನ್ ಮೇಲೆ ಭಾರತ ನಡೆಸಿದ ದಾಳಿಯು ಯಾವ ಮಟ್ಟಿಗೆ ಇತ್ತೆಂದರೆ ಅದು ಐಸಿಯುಗೆ ಹೋಗಿದೆ. ವಾಯುನೆಲೆ ಮತ್ತೆ ಯಾವಾಗ ತೆರೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ’ ಎಂದು ವ್ಯಂಗ್ಯವಾಡಿದರು. ‘ಭಾರತದ ವಿರುದ್ಧ ನೇರ ಹೋರಾಟದಲ್ಲಿ ಪಾಕಿಸ್ತಾನ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ನೇರ ಹೋರಾಟ ನಡೆದಾಗಲೆಲ್ಲಾ ಪಾಕಿಸ್ತಾನ ಮತ್ತೆ ಮತ್ತೆ ಸೋಲನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ಪಾಕಿಸ್ತಾನ ಭಯೋತ್ಪಾದನೆಯನ್ನು ಭಾರತದ ವಿರುದ್ಧ ಹೋರಾಡಲು ಅಸ್ತ್ರವನ್ನಾಗಿ ಮಾಡಿಕೊಂಡಿದೆ’ ಎಂದು ಅವರು ಹೇಳಿದರು.
‘2019ರ ಬಾಲಾಕೋಟ್ ವೈಮಾನಿಕ ದಾಳಿಯ ನಂತರ ರಾಜಸ್ಥಾನದ ಚುರುನಲ್ಲಿ ನಾನು ಮಾತನಾಡಿ, ನಾನು ಈ ದೇಶವನ್ನು ತಲೆತಗ್ಗಿಸುವಂತೆ ಮಾಡಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ. ಇಂದು, ಅದೇ ರಾಜಸ್ಥಾನದ ನೆಲದಿಂದ, ನಾನು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ, ಸಿಂಧೂರವನ್ನು ಅಳಿಸಲು ಹೊರಟವರನ್ನು ನಿರ್ನಾಮ ಮಾಡಲಾಗಿದೆ. ಹಿಂದೂಸ್ತಾನದ ರಕ್ತವನ್ನು ಚೆಲ್ಲುವವರು ಅದರ ಪ್ರತಿ ಹನಿಗೂ ಬೆಲೆ ತೆರಬೇಕಾಗಿದೆ. ತಮ್ಮ (ಪಾಕಿಗಳ) ಶಸ್ತ್ರಾಸ್ತ್ರಗಳ ಬಗ್ಗೆ ಹೆಮ್ಮೆಪಡುತ್ತಿದ್ದವರು ಈಗ ಅವಶೇಷಗಳ ರಾಶಿಯಡಿಯಲ್ಲಿ ಹೂತುಹೋಗಿದ್ದಾರೆ’ ಎಂದರು.
2016ರ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಕೋಟ್ ವಾಯುದಾಳಿಯನ್ನು ಉಲ್ಲೇಖಿಸಿದ ಮೋದಿ, ಮೊದಲು ಭಾರತವು ಅವರ ಮನೆಗಳಿಗೆ ನುಗ್ಗಿ ದಾಳಿ ನಡೆಸುತ್ತಿತ್ತು ಆದರೆ ಈಗ ನೇರವಾಗಿ ಅವರ ಎದೆಯ ಮೇಲೇ ದಾಳಿ ಮಾಡಿದೆ. ಈಗ, ಭಾರತಮಾತೆಯ ಸೇವಕ ಮೋದಿ ಇಲ್ಲಿ ತಲೆ ಎತ್ತಿ ನಿಂತಿದ್ದಾನೆ. ಮೋದಿ ಮನಸ್ಸು ತಂಪಾಗಿದೆ. ಆದರೆ ಆತನ ರಕ್ತ ಬಿಸಿಯಾಗಿದೆ’ ಎಂದು ಅವರು ಹೇಳಿದರು. ‘ಪಾಕಿಸ್ತಾನ ಭಯೋತ್ಪಾದಕರನ್ನು ರಫ್ತು ಮಾಡುವುದನ್ನು ಮುಂದುವರಿಸಿದರೆ, ಅದು ಪ್ರತಿ ಪೈಸೆಗೂ ಬೇಡಿಕೊಳ್ಳಬೇಕಾಗುತ್ತದೆ.
'ಕ್ಯಾಮೆರಾ ಮುಂದೆ ಮಾತ್ರವೇ ಯಾಕೆ ನಿಮ್ಮ ರಕ್ತ ಕುದಿಯುತ್ತದೆ..' ಮೋದಿಗೆ ಪ್ರಶ್ನೆ ಮಾಡಿದ ರಾಹುಲ್ ಗಾಂಧಿ!
ನಮ್ಮ ರಕ್ತದ ಜತೆ ಆಟವಾಡಿದ ಪಾಕ್‌ಗೆ ಭಾರತದ ಹನಿ ನೀರೂ ಸಿಗುವುದಿಲ್ಲ. ಇದು ಭಾರತದ ದೃಢಸಂಕಲ್ಪ ಮತ್ತು ಜಗತ್ತಿನ ಯಾವುದೇ ಶಕ್ತಿಗೆ ಈ ದೃಢಸಂಕಲ್ಪದಿಂದ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂದರು. ಇನ್ನು ಪಾಕ್ ಕುರಿತು ವಿದೇಶಕ್ಕೆ ನಿಯೋಗ ಕಳಿಸಿದ್ದನ್ನು ಪ್ರಸ್ತಾಪಿಸಿದ ಅವರು, ‘ಪಾಕ್ ನಮ್ಮ ಮುಗ್ಧರನ್ನು ಕೊಲ್ಲುತ್ತಿತ್ತು. ಅದರ ಸತ್ಯವನ್ನು ಬಯಲು ಮಾಡಲು, ನಮ್ಮ ಸರ್ವಪಕ್ಷ ನಿಯೋಗಗಳು ಪ್ರಪಂಚದಾದ್ಯಂತ ತಲುಪುತ್ತಿವೆ. ಪಾಕಿಸ್ತಾನದ ನಿಜವಾದ ಮುಖವನ್ನು ಇಡೀ ಜಗತ್ತಿಗೆ ತೋರಿಸಲಾಗುವುದು’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ