ನೋಯ್ಡಾದ ಅವಳಿ ಅಕ್ರಮ ಗೋಪುರ ನಾಳೆ ಧ್ವಂಸ

By Kannadaprabha NewsFirst Published Aug 27, 2022, 9:51 AM IST
Highlights

ನೋಯ್ಡಾದ ಅವಳಿ ಅಕ್ರಮ ಗೋಪುರ ನಾಳೆ ಧ್ವಂಸವಾಗುತ್ತಿದ್ದು, ಇಷ್ಟು ಎತ್ತರದ ಕಟ್ಟಡ ಧ್ವಂಸವಾಗುತ್ತಿರುವುದು ದೇಶದಲ್ಲೇ ಇದೇ ಮೊದಲ ಘಟನೆಯಾಗಿದೆ. ಈ ಧ್ವಂಸಕ್ಕೆ 20 ಕೋಟಿ ವೆಚ್ಚವಾಗುತ್ತಿದೆ. 

ನೋಯ್ಡಾ: ನೋಯ್ಡಾದ ಸೂಪರ್‌ ಟೆಕ್‌ ಕಂಪನಿ ನಿರ್ಮಿಸಿದ್ದ ಅಕ್ರಮ ಅವಳಿ ಕಟ್ಟಡಗಳನ್ನು ಭಾನುವಾರ ಮಧ್ಯಾಹ್ನ ಸ್ಫೋಟಕಗಳನ್ನು ಬಳಸಿ ಧ್ವಂಸಗೊಳಿಸಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಕಟ್ಟಡಗಳಿಂದ 5000 ನಾಗರಿಕರು, 2700 ವಾಹನ, 200 ಸಾಕು ಪ್ರಾಣಿ ತೆರವುಗೊಳಿಸಲಾಗುತ್ತಿದೆ. ಅವಳಿ ಗೋಪುರಗಳ ಸಮೀಪದಲ್ಲಿರುವ 2 ವಸತಿ ಸಂಕೀರ್ಣಗಳಾದ ಎಮೆರಾಲ್ಡ್‌ ಕೋರ್ಚ್‌ ಹಾಗೂ ಎಟಿಎಸ್‌ ವಿಲೇಜ್‌ನಿಂದ 5000 ನಿವಾಸಿಗಳಿಗೆ ಮುಂಜಾನೆ 7ರ ಒಳಗೆ ಕಟ್ಟಡವನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಅವರೊಂದಿಗೆ ಸುಮಾರು 2700 ವಾಹನ ಹಾಗೂ 150-200 ಸಾಕು ಪ್ರಾಣಿಗಳನ್ನು ಸ್ಥಳಾಂತರಗೊಳಿಸಲು ಸೂಚಿಸಲಾಗಿದೆ. ಅವಳಿ ಕಟ್ಟಡಗಳ ಸುತ್ತ 500 ಮೀಟರ್‌ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಘೋಷಿಸಲಾಗಿದ್ದು, ಅಲ್ಲಿ ಸ್ಫೋಟ ಕಾರ್ಯಾಚರಣೆ ಸಿಬ್ಬಂದಿ ಹೊರತು ಪಡಿಸಿ ಯಾವುದೇ ಇತರೆ ವ್ಯಕ್ತಿಗಳು ಅಥವಾ ಪ್ರಾಣಿಗಳಿಗೆ ಪ್ರವೇಶದ ಅನುಮತಿ ಇಲ್ಲ.

ಇದರೊಂದಿಗೆ ನೋಯ್ಡಾ ಆರೋಗ್ಯ ಇಲಾಖೆಯು ಕೂಡಾ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ಸನ್ನದ್ಧ ಸ್ಥಿತಿಯಲ್ಲಿದ್ದು, ಘಟನೆಯಿಂದಾಗಿ ತೊಂದರೆಗೀಡಾಗಬಹುದಾದ ಜನರ ಚಿಕಿತ್ಸೆಗಾಗಿ ಸರ್ಕಾರಿ ಹಾಗೂ 3 ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 6 ಆ್ಯಂಬುಲೆನ್ಸ್‌ ಕೂಡಾ ಸ್ಥಳಕ್ಕೆ ರವಾನಿಸಲಾಗಿದೆ.
Noida Twin Towers: ನೊಯ್ಡಾದ ಅವಳಿ ಕಟ್ಟಡ ನೆಲಸಮಕ್ಕೆ ಕೌಂಟ್‌ಡೌನ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ನೋಯ್ಡಾದಲ್ಲಿ ನಾಳೆ, ಆಗಸ್ಟ್‌ 28 ರಂದು ನಡೆಯಲಿರುವ ಸೂಪರ್‌ಟೆಕ್ ಅವಳಿ ಗೋಪುರಗಳ ಧ್ವಂಸಕ್ಕೆ ಸಿದ್ಧತೆಗಳನ್ನು ಪರಿಶೀಲಿಸಿದರು, ನೋಯ್ಡಾದಲ್ಲಿ ಸರ್ಕಾರ ಹೊರಡಿಸಿದ ಹೇಳಿಕೆಯ ಪ್ರಕಾರ, ಆದಿತ್ಯನಾಥ್ ಅವರು ಜನರ ಸುರಕ್ಷತೆಯನ್ನು ಎಲ್ಲಾ ವೆಚ್ಚದಲ್ಲಿಯೂ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು. ನೆಲಸಮವನ್ನು ಗಮನದಲ್ಲಿಟ್ಟುಕೊಂಡು ಪರಿಸರ ಸವಾಲುಗಳ ಬಗ್ಗೆ ಕಾಳಜಿ ವಹಿಸುವಂತೆ ಅವರು ನಿರ್ದೇಶನ ನೀಡಿದರು.

ಬಿಜೆಪಿ ಶಾಸಕ ರಾಜೇಶ್ವರ್ ಸಿಂಗ್ ಶುಕ್ರವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ನೋಯ್ಡಾದಲ್ಲಿ ಆಗಸ್ಟ್ 28 ರಂದು ನಡೆಯಲಿರುವ ಅವಳಿ ಗೋಪುರಗಳ ಧ್ವಂಸದಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 
ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ-ರಾಜಕಾರಣಿಯು  ಸುಮಾರು 100 ಮೀಟರ್ ಎತ್ತರದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿದ ನಂತರ ಧೂಳು ಮತ್ತು ಅವಶೇಷಗಳ ಪರಿಣಾಮವನ್ನು ತಗ್ಗಿಸಲು ಕ್ರಮಗಳನ್ನು ಸೂಚಿಸಿದ್ದಾರೆ.

20 ಕೋಟಿ ವೆಚ್ಚ:
ನೋಯ್ಡಾದ ಅವಳಿ ಕಟ್ಟಡಗಳ ಧ್ವಂಸಕ್ಕೆ ಒಟ್ಟು 20 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಅಕ್ರಮವಾಗಿ ಕಟ್ಟಡವನ್ನು ಕಟ್ಟಿದ ಸೂಪರ್‌ಟೆಕ್‌ ಕಂಪನಿ 5 ಕೋಟಿ ರೂ. ವೆಚ್ಚವನ್ನು ಪಾವತಿಸಲಿದೆ. ಉಳಿದ 15 ಕೋಟಿ ರೂ. ಗಳನ್ನು ಧ್ವಂಸದ ಬಳಿಕ ಲಭ್ಯವಾಗುವ 4000 ಟನ್‌ ಸ್ಟೀಲ್‌ ಸೇರಿದಂತೆ 55,000 ಟನ್‌ ಅವಶೇಷಗಳನ್ನು ಮಾರಿ ಸರಿದೂಗಿಸಲಾಗುವುದು. ಇದರೊಂದಿಗೆ ಕಟ್ಟಡ ಧ್ವಂಸದ ಹೊಣೆ ಹೊತ್ತುಕೊಂಡ ಎಡಿಫೈಸ್‌ ಎಂಜಿನಿಯರಿಂಗ್‌ ಸುತ್ತಲಿನ ಪ್ರದೇಶಕ್ಕೆ ಯಾವುದೇ ಹಾನಿಯಾದಲ್ಲಿ 100 ಕೋಟಿ ರೂ. ವಿಮೆ ಕೂಡಾ ಮಾಡಿಸಿದೆ.
ಕಟ್ಟಡಗಳ ನಿರ್ಮಾಣ ವೆಚ್ಚ ಸುಮಾರು 70 ಕೋಟಿ ರೂ. ಗಳಾಗಿದೆ. ಈ ಕಟ್ಟಡಗಳಿದ್ದ 3ಬಿಎಚ್‌ಕೆ ಫ್ಲಾಟ್‌ ಬೆಲೆ 1.13 ಕೋಟಿ ರೂ. ಆಗಿದ್ದು, ಇಂತಹ 915 ಫ್ಲಾಟ್‌ಗಳು ಅವಳಿ ಕಟ್ಟಡಗಳಲ್ಲಿದೆ. ಈ ಮೂಲಕ ಕಂಪನಿ 1200 ಕೋಟಿ ರೂ. ಆದಾಯ ಗಳಿಸುವ ಉದ್ದೇಶ ಹೊಂದಿತ್ತು.

ನೆಲಸಮಕ್ಕೆ 4 ಸಾವಿರ ಕೆಜಿ ಸ್ಫೋಟಕ, 9 ಸೆಕೆಂಡ್ ನಲ್ಲೇ ಧ್ವಂಸವಾಗಲಿದೆ ನೋಯ್ಡಾದ 40 ಮಹಡಿ ಬಿಲ್ಡಿಂಗ್!

ಕಟ್ಟಡಗಳ ನಿರ್ಮಾಣವು ಕನಿಷ್ಟ ಅಂತರದ ಅಗತ್ಯವನ್ನು ಉಲ್ಲಂಘಿಸಿರುವುದರಿಂದ ಕಟ್ಟಡಗಳನ್ನು ಕೆಡವಲು ಆಗಸ್ಟ್ 2021 ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಪ್ರಕಾರ, ಯುಪಿ ಅಪಾರ್ಟ್‌ಮೆಂಟ್ ಕಾಯ್ದೆಯಡಿ ಅಗತ್ಯವಿರುವಂತೆ ವೈಯಕ್ತಿಕ ಫ್ಲಾಟ್ ಮಾಲೀಕರ ಒಪ್ಪಿಗೆಯನ್ನು ತೆಗೆದುಕೊಳ್ಳದೆ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ.

click me!