ಒಂದೇ ಮನೆಯಲ್ಲಿ ಇಲ್ಲದ ವ್ಯಕ್ತಿಗಳ ಮೇಲೆ ‘ನೊಂದ ಮಹಿಳೆ’ ಕೇಸು ಹಾಕುವಂತಿಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು!

By Suvarna NewsFirst Published Jan 16, 2022, 8:44 AM IST
Highlights

*ಒಂದೇ ಮನೆಯಲ್ಲಿ ಇಲ್ಲದ ವ್ಯಕ್ತಿಗಳ ಮೇಲೆ ‘ನೊಂದ ಮಹಿಳೆ’ ಕೇಸು ಹಾಕುವಂತಿಲ್ಲ
*ಇಂತಹ ಕೇಸಲ್ಲಿ ರಕ್ಷಣೆ, ಹಣಕಾಸು ಪರಿಹಾರ ಕೇಳುವಂತಿಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು

ಬೆಂಗಳೂರು(ಜ. 16): ಅವಿಭಕ್ತ ಕುಟುಂಬವಾಗಿದ್ದರೂ (Joint Family), ಜತೆಗೆ ವಾಸ ಮಾಡದ ಸಂಬಂಧಿಕರ ವಿರುದ್ಧ ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ-2005’ (ಡಿವಿ ಆಕ್ಟ್) ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ರಕ್ಷಣೆ (Protection) ಕಲ್ಪಿಸುವಂತೆ ಮತ್ತು ಹಣಕಾಸು  ಪರಿಹಾರ (Financial Relief  ನೀಡುವಂತೆ ಕೋರಲು ಅವಕಾಶವಿಲ್ಲ ಎಂದು ಹೈಕೋರ್ಟ್‌ ಮಹತ್ವದ (High Court) ತೀರ್ಪು ನೀಡಿದೆ. ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿ ಮಾರೆಪ್ಪ ಮತ್ತವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಡಿವಿ ಕಾಯ್ದೆ ಸೆಕ್ಷನ್‌ 2(ಕ್ಯೂ) ಪ್ರಕಾರ ಕೌಟುಂಬಿಕ ದೌರ್ಜನ್ಯಕ್ಕೆ (Domestic Violence) ಒಳಗಾದ ಮಹಿಳೆ, ತನ್ನ ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ದೂರು ದಾಖಲಿಸಬಹುದು. ಅದೇ ರೀತಿ ಡಿವಿ ಕಾಯ್ದೆಯ ಸೆಕ್ಷನ್‌ 2(ಎಫ್‌) ದಂಪತಿಯು ಅವಿಭಕ್ತ ಕುಟುಂಬ ಮಾದರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಒಂದೇ ಸೂರಿನಡಿ ಒಟ್ಟಿಗೆ ವಾಸ ಮಾಡುತ್ತಿದ್ದರೆ, ಅದು ‘ಕೌಟುಂಬಿಕ ಸಂಬಂಧ’ ಎಂದು ಪರಿಗಣಿಸಲಾಗುತ್ತದೆ. ಆದರೆ, ಅವಿಭಕ್ತ ಕುಟುಂಬವಾಗಿ ಒಂದೇ ಸೂರಿನಡಿ ವಾಸ ಮಾಡದ, ಅವಿಭಕ್ತ ಕುಟುಂಬದ ಆಸ್ತಿ ಅನುಭವಿಸದ ಸಂಬಂಧಿಕರ ವಿರುದ್ಧ ಡಿವಿ ಕಾಯ್ದೆಯಡಿ ವಿಚಾರಣಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ರಕ್ಷಣೆ ಕಲ್ಪಿಸಲು ಮತ್ತು ಹಣಕಾಸು ಪರಿಹಾರ ಕೇಳಲಾಗದು ಎಂದು ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದೆ.

ಇದನ್ನೂ ಓದಿKerala Nun Rape case: ಮಾಜಿ ಬಿಷಪ್ ಫ್ರಾಂಕೋ ಮುಳಕ್ಕಲ್ 'ನಿರ್ದೋಷಿ' ಎಂದ ಕೋರ್ಟ್‌!

ಪ್ರಕರಣದ ವಿವರ: ಕಲಬುರಗಿಯ ಬಸವನಗರ ನಿವಾಸಿ ಪುಷ್ಪಾಂಜಲಿ ತಮ್ಮ ಪತಿ ವಿವೇಕ್‌, ಆತನ ಸಂಬಂಧಿಕರಾದ ಮಾರೆಪ್ಪ, ಅವರ ಪುತ್ರ ಜೆ.ಎನ್‌.ವೆಂಕಟೇಶ್‌, ಸೊಸೆ ಸುಲೋಚನಾ ಹಾಗೂ ಸೋದರ ಸೊಸೆ ಜಯಶ್ರೀ ವಿರುದ್ಧ ಕಲಬುರಗಿಯ 2ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಡಿವಿ ಕಾಯ್ದೆಯಡಿ ದೂರು ಸಲ್ಲಿಸಿದ್ದರು.

ಹೆಚ್ಚುವರಿ ವರದಕ್ಷಿಣೆಗೆ ಒತ್ತಾಯಿಸುವಂತೆ ಪತಿಗೆ ಮಾರೆಪ್ಪ, ಅವರು ಕುಟುಂಬ ಸದಸ್ಯರು ಪ್ರಚೋದಿಸಿದ್ದಾರೆ. ಜೊತೆಗೆ, ತಮ್ಮ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಇದರಿಂದ ತಮ್ಮ ಮೇಲಿನ ದೌರ್ಜನ್ಯ ನಿಲ್ಲಿಸಲು, ತನ್ನಿಂದ ದೂರವಿರಲು, ತನಗೆ ಪ್ರತ್ಯೇಕ ವಾಸದ ವ್ಯವಸ್ಥೆ ಕಲ್ಪಿಸಲು ಮತ್ತು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವುದಕ್ಕೆ ನಷ್ಟಪರಿಹಾರವಾಗಿ ಮಾಸಿಕ 10 ಸಾವಿರ ರು. ಪಾವತಿಸಲು ಆರೋಪಿಗಳಿಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಪುಷ್ಪಾಂಜಲಿ ಕೋರಿದ್ದರು.

ಇದನ್ನೂ ಓದಿ: Hero Electric Vs Hero Moto ಬ್ರ್ಯಾಂಡ್‌ಗಾಗಿ ಕುಟುಂಬದ ನಡುವೆ ಜಿದ್ದಾಜಿದ್ದಿ, ಕೋರ್ಟ್ ಮೊರೆ ಹೋದ ದೇಶದ ಪ್ರತಿಷ್ಠಿತ ಕಂಪನಿ!

ಅರ್ಜಿಯ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯವು 2021ರ ನ.21ರಂದು ಮಾರಪ್ಪ, ಅವರ ಸೊಸೆ, ಪುತ್ರ ಮತ್ತು ಸಂಬಂಧಿ ಜಯಶ್ರಿಗೆ ನೋಟಿಸ್‌ ಜಾರಿ ಮಾಡಿತ್ತು. ಈ ನೋಟಿಸ್‌ ರದ್ದುಪಡಿಸುವಂತೆ ಕೋರಿ ಈ ನಾಲ್ವರು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ಹೇಳಿದ್ದೇನು? : ದೂರುದಾರೆ ಪುಷ್ಪಾಂಜಲಿಯ ಪತಿ ವಿವೇಕ್‌ ಅವರಿಗೆ ಅರ್ಜಿದಾರರಾದ ಮಾರೆಪ್ಪ ಸಂಬಂಧಿಕರಾಗಿದ್ದರೂ ಅವಿಭಕ್ತ ಕುಟುಂಬವಾಗಿ ಒಂದೇ ಸೂರಿನಡಿ ವಾಸ ಮಾಡುತ್ತಿಲ್ಲ. ಆಹಾರ ಹಂಚಿಕೊಳ್ಳುತ್ತಿಲ್ಲ. ಅವಿಭಕ್ತ ಕುಟುಂಬದ ಆಸ್ತಿ ಅನುಭವಿಸುತ್ತಿಲ್ಲ. ಹೀಗಾಗಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ರಕ್ಷಣೆ ಕಲ್ಪಿಸಲು ಮತ್ತು ಹಣಕಾಸು ಪರಿಹಾರ ಕೇಳುವ ಸನ್ನಿವೇಶ ಉದ್ಭವಿಸುವುದಿಲ್ಲ.

-ಕನ್ನಡಪ್ರಭ ವಾರ್ತೆ, ವೆಂಕಟೇಶ್‌ ಕಲಿಪಿ

click me!