ಯಾರಿಗೂ ಖಾಸಗಿತನ ಉಳಿದಿಲ್ಲ: ಸುಪ್ರೀಂ ಗರಂ

By Kannadaprabha News  |  First Published Nov 5, 2019, 8:41 AM IST

ದೇಶದಲ್ಲಿ ಯಾರ ಖಾಸಗಿತನವೂ ಇನ್ನು ಉಳಿದಿಲ್ಲ, ಸುಪ್ರೀಂ ಅಸಮಾಧಾನ | ಫೋನ್ ಕದ್ದಾಲಿಕೆ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಅಸಮಾಧಾನ | ಛತ್ತೀಸ್‌ಗಢ ಸರ್ಕಾರ ಐಪಿಎಸ್‌ ಅಧಿಕಾರಿಯೊಬ್ಬರ ಫೋನ್ ಕದ್ದಾಲಿಕೆ ವಿಚಾರಣೆ ವೇಳೆ ಅಸಮಾಧಾನ 


ನವದೆಹಲಿ (ನ. 05): ‘ದೇಶದಲ್ಲಿ ಫೋನ್‌ ಕದ್ದಾಲಿಕೆ ಪ್ರಕರಣಗಳು ಅಧಿಕಗೊಂಡಿದ್ದು, ಯಾರಿಗೂ ಖಾಸಗಿತನ ಉಳಿದಿಲ್ಲ’ ಎಂದು ಸುಪ್ರೀಂಕೋರ್ಟ್‌ ಸೋಮವಾರ ಕಿಡಿಕಾರಿದೆ.

ಛತ್ತೀಸ್‌ಗಢ ಸರ್ಕಾರ ಐಪಿಎಸ್‌ ಅಧಿಕಾರಿಯೊಬ್ಬರ ಮತ್ತು ಅವರ ಕುಟುಂಬ ಸದಸ್ಯರ ಫೋನ್‌ ಕದ್ದಾಲಿಸಿದ ಪ್ರಕರಣಕ್ಕೆ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್‌, ‘ದೇಶದಲ್ಲಿ ಯಾರ ಖಾಸಗಿತನವೂ ಇನ್ನು ಉಳಿದಿಲ್ಲ. ದೇಶದಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯದಾಗಿದೆ. ಈ ರೀತಿ ಫೋನ್‌ ಕದ್ದಾಲಿಸುವ ಅಗತ್ಯವಾದರೂ ಏನಿದೆ? ಒಬ್ಬ ಮಾನವನ ಗೌಪ್ಯತೆಯನ್ನು ಈ ರೀತಿ ಉಲ್ಲಂಘಿಸಬಹುದೇ? ಇದಕ್ಕೆ ಅನುಮತಿ ನೀಡಿದವರಾರು? ಈ ಸಂಬಂಧ ಸವಿಸ್ತಾರ ಪ್ರಮಾಣಪತ್ರ ಸಲ್ಲಿಸಿ’ ಎಂದು ಛತ್ತೀಸ್‌ಗಢ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿತು.

Tap to resize

Latest Videos

ರಾಮ ಜನ್ಮಭೂಮಿಯಲ್ಲಿ ಭಾರಿ ಕಟ್ಟೆಚ್ಚರ; ಸಂಭ್ರಮಾಚರಣೆ ನಿಷೇಧ

‘ಅಲ್ಲದೇ ಕದ್ದಾಲಿಕೆಗೆ ನಡೆಸಲು ಏನು ಕಾರಣ, ಈ ರೀತಿ ಕದ್ದಾಲಿಕೆ ನಡೆಸುವುದು ಉಚಿತವೇ?’ ಎಂದು ರಾಜ್ಯ ಸರ್ಕಾರಕ್ಕೆ ನ್ಯಾ.ಅರುಣ್‌ ಮಿಶ್ರಾ ಹಾಗೂ ನ್ಯಾ.ಇಂದಿರಾ ಬ್ಯಾನರ್ಜಿ ಅವರಿದ್ದ ದ್ವಿಸದಸ್ಯ ಪೀಠ ಪ್ರಶ್ನಿಸಿತು.

ಇದೇ ವೇಳೆ, ಐಪಿಎಸ್‌ ಅಧಿಕಾರಿ ಪರ ವಾದಿಸುತ್ತಿದ್ದ ವಕೀಲರ ಮೇಲೂ ಸರ್ಕಾರವು ಪ್ರಕರಣ ದಾಖಲಿಸಿದ್ದೇಕೆ ಎಂದು ಕೋರ್ಟು ಕೇಳಿತು ಹಾಗೂ ಅವರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿತು. ರಾಜ್ಯದಲ್ಲಿ ಬೆಳಕಿಗೆ ಬಂದಿದ್ದ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ನಡೆದ ಕದ್ದಾಲಿಕೆ ಇದಾಗಿದೆ.

click me!