9 ಚೀತಾ ಸಾವನ್ನಪ್ಪಿದ್ದರೂ ಕುನೋದಿಂದ ಅವುಗಳನ್ನು ವರ್ಗಾಯಿಸುವುದಿಲ್ಲ: ಕೇಂದ್ರ ಸಚಿವ

By Kannadaprabha NewsFirst Published Aug 7, 2023, 4:37 PM IST
Highlights

ಮಧ್ಯಪ್ರದೇಶದ ಕುನೋದಲ್ಲಿ 9 ಚೀತಾ ಸಾವನ್ನಪ್ಪಿದರೂ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಉದ್ದೇಶ ಇಲ್ಲ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಹೇಳಿದ್ದಾರೆ.

ಗ್ವಾಲಿಯರ್‌ (ಆ.7): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 9 ಚೀತಾಗಳು ಸಾವನ್ನಪ್ಪಿದ ಹೊರತಾಗಿಯೂ ಉಳಿದ 15 ಚೀತಾಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ತಿಳಿಸಿದ್ದಾರೆ. ಚೀತಾಗಳ ಸತತ ಸಾವಿನ ಕುರಿತು ಪ್ರತಿಕ್ರಿಯಿಸಿದ ಯಾದವ್‌, ‘ಚೀತಾಗಳು ಬಹಳ ಸೂಕ್ಷ್ಮ. ಅದನ್ನು ನಾವು ಎಲ್ಲ ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಈಗ ಮುಂಗಾರು ಸಮಯವಾಗಿರುವುದರಿಂದ ಸೋಂಕಿನಿಂದ ಚೀತಾಗಳು ಸಾವನ್ನಪ್ಪುತ್ತಿದೆ. ಇದನ್ನು ನಾವು ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದ ತಜ್ಞರೊಂದಿಗೂ ಹಂಚಿಕೊಂಡಿದ್ದೇವೆ. ನಾವು ಚೀತಾ ಯೋಜನೆಯನ್ನು ಯಶಸ್ವಿಗೊಳಿಸಲು ಸರ್ವಸನ್ನದ್ದರಾಗಿದ್ದೇವೆ’ ಎಂದರು.

ಸರಣಿ ಸಾವು ಹಿನ್ನೆಲೆ: ಚೀತಾಗಳ ರೇಡಿಯೋ ಕಾಲರ್‌ ತೆಗೆದು ಆರೋಗ್ಯ ತಪಾಸಣೆ

ಕುನೋ ಪಶುವೈದ್ಯರು ಅನುಭವಿಗಳು ಅಲ್ಲ: ಆಫ್ರಿಕಾ ತಜ್ಞರ ಕಿಡಿ
ಮಧ್ಯಪ್ರದೇಶದ ಕುನೋ ಅರಣ್ಯದಲ್ಲಿ 9ನೇ ಚೀತಾ ಸಾವನ್ನಪ್ಪಿದ ಬೆನ್ನಲ್ಲೇ, ಚೀತಾಗಳ ನಿರ್ವಹಣೆ ಮಾಡುತ್ತಿರುವ ಭಾರತೀಯ ವನ್ಯಜೀವಿ ತಜ್ಞರ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಚೀತಾ ಯೋಜನೆಯಲ್ಲಿ ಭಾಗಿಯಾಗಿರುವ ಪಶುವೈದ್ಯರಿಗೆ ಈ ಕುರಿತು ಯಾವುದೇ ವೈಜ್ಞಾನಿಕ ಅನುಭವ ಇಲ್ಲ ಎಂದು ಆಫ್ರಿಕಾ ಮೂಲದ ವನ್ಯಜೀವಿ ತಜ್ಞರು ಸುಪ್ರೀಂಕೋರ್ಚ್‌ಗೆ ಪತ್ರ ಬರೆದಿದ್ದಾರೆ.

ಪ್ರಿಟೋರಿಯಾ ವಿವಿಯ ವನ್ಯಜೀವಿ ತಜ್ಞರ ಪ್ರೊ. ಆಡ್ರಿಯನ್‌ ಟೋರ್‌ಡಿಫ್‌ ಮತ್ತು ನಮೀಬಿಯಾದ ಚೀತಾ ಸಂರಕ್ಷಣಾ ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಲಾರಿ ಮಾರ್ಕ್ ಸುಪ್ರೀಂಕೋರ್ಚ್‌ಗೆ ರವಾನಿಸಿದ್ದಾರೆ. ಈ ಪತ್ರಕ್ಕೆ ಆಫ್ರಿಕಾ ಮೂಲದ ವನ್ಯಜೀವಿ ತಜ್ಞರಾದ ಪ್ರೊ. ಆಡ್ರಿಯನ್‌ ಟೋರ್‌ಡಿಫ್‌, ವಿನ್ಸೆಂಟ್‌ ವ್ಯಾನ್‌ ಡೆರ್‌ ಮೆರ್ವೆ, ಡಾ. ಮೈಕ್‌ ಟೋಫ್‌್ಟ, ಡಾ. ಆ್ಯಂಡಿ ಫ್ರೇಸರ್‌ ಸಹಿ ಹಾಕಿದ್ದಾರೆ. ಆದರೆ ಈ ಪತ್ರ ಬಹಿರಂಗವಾದ ಬೆನ್ನಲ್ಲೇ, ಪತ್ರವನ್ನು ಸುಪ್ರೀಂಕೋರ್ಚ್‌ಗೆ ಕಳುಹಿಸಲು ನಮ್ಮ ಅನುಮತಿ ಪಡೆದಿರಲಿಲ್ಲ ಎಂದು ವಿನ್ಸೆಂಟ್‌ ಮತ್ತು ಫ್ರೇಸರ್‌ ಹೇಳಿದ್ದಾರೆ.

ಕುನೋ ಪಶುವೈದ್ಯರಿಗೆ ಚೀತಾಗಳ ಆರೈಕೆ ಗೊತ್ತಿಲ್ಲ ಎಂದ ಅಫ್ರಿಕಾದ ಪಶುವೈದ್ಯರು

ಪತ್ರದಲ್ಲೇನಿದೆ?:
ಪತ್ರದಲ್ಲಿ, ‘ಇಡೀ ಯೋಜನೆಯಲ್ಲಿ ನಮ್ಮ ಪಾತ್ರವನ್ನು ಭಾರತದ ಚೀತಾ ನಿರ್ವಹಣೆ ಕುರಿತಾದ ಸಂಚಲನಾ ಸಮಿತಿ ಪೂರ್ಣವಾಗಿ ನಿರ್ಲಕ್ಷಿಸಿದೆ. ಪ್ರಸಕ್ತ ಯೋಜನೆಯಲ್ಲಿ ಭಾಗಿಯಾಗಿರುವ ಪಶುವೈದ್ಯರಿಗೆ ವೈಜ್ಞಾನಿಕ ತರಬೇತಿ ಕೊರತೆ ಇದೆ ಮತ್ತು ಬಹುತೇಕ ತಜ್ಞರು ಇಂಥ ಯೋಜನೆ ನಿರ್ವಹಿಸಲು ಅನನುಭವಿಗಳಾಗಿದ್ದಾರೆ. ಇಂಥ ಯೋಜನೆಯಲ್ಲಿ ಪ್ರಾಣಿಗಳ ಸಾವು ಸಹಜವಾದರೂ, ಕಾಲಕಾಲಕ್ಕೆ ಮತ್ತು ಸೂಕ್ತ ರೀತಿಯಲ್ಲಿ ಪರಿಶೀಲಿಸಿದ್ದರೆ ಕೆಲ ಚೀತಾಗಳ ಜೀವ ಉಳಿಸಬಹುದಿತ್ತು. ಕುನೋದಲ್ಲಿ ನಡೆಯುತ್ತಿರುವ ಯಾವುದೇ ಬೆಳವಣಿಗೆ ಬಗ್ಗೆಯೂ ನಮಗೆ ಮಾಹಿತಿ ನೀಡಲಾಗುತ್ತಿಲ್ಲ, ಇಂಥ ವಿಷಯಗಳನ್ನು ನಾವು ಕೇವಲ ಮಾಧ್ಯಮದ ಮೂಲಕ ಪಡೆಯುತ್ತಿದ್ದೇವೆ. ಈ ಯೋಜನೆ ಕೇವಲ ಭಾರತಕ್ಕೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀತಾ ಸಂರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಪ್ರಸ್ತಾಪಿಸಲಾಗಿದೆ.

ಜೊತೆಗೆ, ಕುನೋದಲ್ಲಿ ಬದುಕುಳಿದಿರುವ ಎಲ್ಲಾ ಚೀತಾಗಳನ್ನು ತಜ್ಞ ಪಶುವೈದ್ಯರ ತಂಡದಿಂದ ಪರಿಶೀಲನೆಗೆ ಒಳಪಡಿಸಬೇಕು. ಚೀತಾಗಳ ಆರೋಗ್ಯದ ಕುರಿತಾದ ತತ್‌ಕ್ಷಣದ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕು, ಸಂಚಾಲನಾ ಸಮಿತಿಯ ಕಾರ್ಯಚಟುವಟಿಕೆಯಲ್ಲಿ ನಮ್ಮನ್ನೂ ಸಕ್ರಿಯವಾಗಿ ಪಾಲ್ಗೊಳ್ಳಲು ಬಿಡಬೇಕು. ಬಲವಂತವಾಗಿ ಹುದ್ದೆಯಿಂದ ತೆಗೆದುಹಾಕಲಾದ ಪ್ರೊ. ವೈ.ವಿ.ಜಲ ಅವರನ್ನು ಮರಳಿ ಯೋಜನೆಗೆ ಉಸ್ತುವಾರಿಗೆ ನಿಯೋಜಿಸಬೇಕು ಎಂದು ತಜ್ಞರ ತಂಡ ತನ್ನ 2 ಪತ್ರದಲ್ಲಿ ಪ್ರಸ್ತಾಪಿಸಿದೆ.

 

click me!