15940 ಕೋವಿಡ್‌ ಕೇಸು, 20 ಸಾವು: ಪಾಸಿಟಿವಿಟಿ ಶೇ.4.39ಕ್ಕೆ ಏರಿಕೆ

By Govindaraj SFirst Published Jun 26, 2022, 5:25 AM IST
Highlights

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಶುಕ್ರವಾರಕ್ಕೆ ಹೋಲಿಸಿದರೆ ಕೊಂಚ ಇಳಿಕೆ ಕಂಡುಬಂದಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 15,940 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 17,336 ಹೊಸ ಕೇಸುಗಳು ದಾಖಲಾಗಿದ್ದವು.

ನವದೆಹಲಿ (ಜೂ.26): ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಶುಕ್ರವಾರಕ್ಕೆ ಹೋಲಿಸಿದರೆ ಕೊಂಚ ಇಳಿಕೆ ಕಂಡುಬಂದಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 15,940 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 17,336 ಹೊಸ ಕೇಸುಗಳು ದಾಖಲಾಗಿದ್ದವು. ಇದೇ ವೇಳೆಯಲ್ಲಿ 20 ಸೋಂಕಿತರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ 11, ಮಹಾರಾಷ್ಟ್ರದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 2, ಬಿಹಾರ್‌, ದೆಹಲಿ, ಪಂಜಾಬ್‌, ರಾಜಸ್ಥಾನದಲ್ಲಿ ತಲಾ ಒಬ್ಬ ಸೋಂಕಿತ ಸಾವಿಗೀಡಾಗಿದ್ದಾನೆ.

ಗುಣಮುಖರಾದವರ ಸಂಖ್ಯೆಯು ಕಡಿಮೆಯಿದ್ದ ಕಾರಣ, ಸಕ್ರಿಯ ಕೇಸು ಸಂಖ್ಯೆ 3,495ರಷ್ಟು ಏರಿಕೆಯಾಗಿದ್ದು, ಇದರೊಂದಿಗೆ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 91,779ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶುಕ್ರವಾರದ ಶೇ.4.32ರಿಂದ ಶೇ. 4.39ಕ್ಕೆ ಏರಿದೆ. ವಾರದ ಪಾಸಿಟಿವಿಟಿ ದರವು ಶೇ. 3.30ರಷ್ಟಿದೆ. ಕೋವಿಡ್‌ ಚೇತರಿಕೆ ದರವು ಶೇ. 98.58ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಈವರೆಗೆ 196.94 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

ಕೋವಿಡ್‌ ಭಾರೀ ಏರಿಕೆ: 17336 ಕೇಸು, 4 ತಿಂಗಳ ಗರಿಷ್ಠ

ಲಸಿಕೆಯಿಂದಾಗಿ ಭಾರತದಲ್ಲಿ 42 ಲಕ್ಷ ಜನರ ಜೀವರಕ್ಷಣೆ: ಭಾರತದಲ್ಲಿ ನಡೆದ ಬೃಹತ್‌ ಕೋವಿಡ್‌ ಲಸಿಕಾ ನೀಡಿಕೆ ಅಭಿಯಾನದಿಂದಾಗಿ 2021ರಲ್ಲೇ ಸುಮಾರು 42 ಲಕ್ಷ ಜನರ ಜೀವ ಉಳಿದಿದೆ. ಅದೇ ರೀತಿಯಲ್ಲಿ ಜಾಗತಿಕ ಮಟ್ಟದಲ್ಲಿ 1.98 ಕೋಟಿ ಜನರ ಜೀವವನ್ನು ರಕ್ಷಿಸಲಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಜೊತೆಗೆ 2021ರ ಅಂತ್ಯದೊಳಗೆ ವಿಶ್ವದ ಶೇ.40ರಷ್ಟು ಜನರಿಗೆ ಕನಿಷ್ಠ 2 ಅಥವಾ 3 ಡೋಸ್‌ ಲಸಿಕೆ ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ಗುರಿ ಈಡೇರಿದ್ದರೆ ಇನ್ನೂ 5.99 ಲಕ್ಷ ಜನರ ಜೀವ ಉಳಿಸಬಹುದಿತ್ತು ಎಂದು ಹೇಳಿದೆ. 

ಈ ಮೂಲಕ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಲಸಿಕೆ ವಹಿಸಿದ ಮಹತ್ವದ ಪಾತ್ರವನ್ನು ಎತ್ತಿಹಿಡಿದಿದೆ. ಇಂಪೀರಿಯರ್‌ ಕಾಲೇಜ್‌ ಆಫ್‌ ಲಂಡನ್‌ನ ತಜ್ಞರ ತಂಡ, 185 ದೇಶಗಳಲ್ಲಿ ದಾಖಲಾದ ಹೆಚ್ಚುವರಿ ಸಾವನ್ನು ಅಂದಾಜಿಸಿ ಈ ಲೆಕ್ಕಾಚಾರ ಮಾಡಿದೆ. ಈ ಕುರಿತ ವರದಿ ‘ದ ಲ್ಯಾನ್ಸೆಟ್‌ ಇನ್ಫೆಕ್ಟೀಷಿಯಸ್‌ ಡಿಸೀಸ್‌’ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿದೆ.

42 ಲಕ್ಷ ಜನರ ರಕ್ಷಣೆ: 2020ರ ಡಿ.8ರಿಂದ 2021ರ ಡಿ.8ರ ಅವಧಿಯಲ್ಲಿ ವಿಶ್ವದಾದ್ಯಂತ ಲಸಿಕೆ ಅಭಿಯಾನ ನಡೆದ ಮೊದಲ ವರ್ಷ ಎಂದು ಪರಿಗಣಿಸಿ ನಡೆಸಿದ ಅಧ್ಯಯನ ಅನ್ವಯ, ‘ಭಾರತದಲ್ಲಿ ನಡೆದ ಬೃಹತ್‌ ಲಸಿಕಾ ಅಭಿಯಾನವು ಲಕ್ಷಾಂತರ ಜನರ ಜೀವ ಕಾಪಾಡಿದೆ. ಇದು ಲಸಿಕೆ, ಕೋವಿಡ್‌ ಸಾಂಕ್ರಾಮಿಕದ ಮೇಲೆ ಬೀರಿದ ಪರಿಣಾಮವನ್ನು ತೋರಿಸುತ್ತದೆ, ಅದರಲ್ಲೂ ವಿಶೇಷವಾಗಿ ಡೆಲ್ಟಾತಳಿಯ ಮೊದಲ ಪರಿಣಾಮಗಳನ್ನು ಎದುರಿಸಿದ ಭಾರತದಲ್ಲಿ ಲಸಿಕೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. 

Covid Crisis: ಟೆಸ್ಟಿಂಗ್‌, ಜಿನೋಮ್‌ ಸೀಕ್ವೆನ್ಸಿಂಗ್‌ ಹೆಚ್ಚಿಸಿ: ಕೇಂದ್ರ

ಭಾರತದಲ್ಲಿ ಈ ಅವಧಿಯಲ್ಲಿ ಕನಿಷ್ಠ 42.10 ಲಕ್ಷ ಜನರ ಜೀವವನ್ನು ಉಳಿಸಲಾಗಿದೆ ಎಂದು ಅಧ್ಯಯನ ವರದಿಯ ಮುಖ್ಯಸ್ಥ ಓಲಿವರ್‌ ವಾಟ್ಸನ್‌ ಹೇಳಿದ್ದಾರೆ. ಭಾರತ ಸರ್ಕಾರ ಇದುವರೆಗೂ ಕೋವಿಡ್‌ನಿಂದ 5.24 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಆದರೆ ವಿಶ್ವ ಆರೋಗ್ಯಸಂಸ್ಥೆ ಹಾಗೂ ಇನ್ನಿತರೆ ಕೆಲ ಸಂಸ್ಥೆಗಳು ನಡೆಸಿದ ಮಾದರಿ ಅಧ್ಯಯನ ವರದಿಯು 48-56 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿವೆ. ಈ ಲೆಕ್ಕಾಚಾರದ ಅನ್ವಯ ಇನ್ನೂ 42 ಲಕ್ಷ ಜನರ ಜೀವವನ್ನು ಭಾರತದಲ್ಲಿ ಉಳಿಸಲಾಗಿದೆ ಎಂದು ವರದಿ ಹೇಳಿದೆ.

click me!