
ಹೆಲ್ಮೆಟ್ ಇಲ್ಲದೇ ಬಂದಿದ್ದಕ್ಕೆ ಪೆಟ್ರೋಲ್ ನಿರಾಕರಣೆ
ಮಧ್ಯಪ್ರದೇಶವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರವಾಹನ ಸವಾರರಿಗೆ ಪೆಟ್ರೋಲ್ ನೀಡದಿರುವಂತೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಕಠಿಣ ಆದೇಶವಿದೆ. ಆದರೆ ಸರ್ಕಾರದ ಈ ನಿಯಮ ಪಾಲಿಸುವುದಕ್ಕೆ ಹೋಗಿ ಪೆಟ್ರೋಲ್ ಪಂಪ್ ಸಿಬ್ಬಂದಿ ಜೀವಕ್ಕೆ ಸಂಚಕಾರ ಬಂದಂತಹ ಘಟನೆ ಮಧ್ಯಪ್ರದೇಶದ ಭಿಂಡ್‌ನಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದೆಯೇ ಪೆಟ್ರೋಲ್ ಬಂಕ್‌ಗೆ ಬಂದ ಬೈಕ್ ಸವಾರರಿಬ್ಬರು ಇಂದನ ಪೂರೈಸುವಂತೆ ಅಲ್ಲಿನ ಸಿಬ್ಬಂದಿಗೆ ಹೇಳಿದ್ದಾರೆ. ಆದರೆ ಈ ಯುವಕರು ಹೆಲ್ಮೆಟ್ ಧರಿಸದ ಕಾರಣ ಪೆಟ್ರೋಲ್ ಬಂಕ್ ಸಿಬ್ಬಂದಿ ಅವರ ವಾಹನಗಳಿಗೆ ಇಂಧನ ತುಂಬಿಸುವುದಕ್ಕೆ ನಿರಾಕರಿಸಿದ್ದಾರೆ. ಇದರಿಂದ ಕುಪಿತರಾದ ಬೈಕ್ ಸವಾರರು ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಗುಂಡಿಕ್ಕಿದಂತಹ ಘಟನೆ ನಡೆದಿದೆ.
ಪೆಟ್ರೋಲ್ ನಿರಾಕರಿಸಿದ್ದಕ್ಕೆ ಬಂಕ್ ಸಿಬ್ಬಂದಿಗೆ ಗುಂಡಿಕ್ಕಿದ ದುರುಳರು
ಶನಿವಾರ ಮುಂಜಾನೆ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಂಕ್‌ನ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆ ಆಗಿದೆ. ಘಟನೆಯಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿಯ ಕೈಗೆ ಬುಲೆಟ್ ತಗುಲಿದ್ದು ಗಾಯಗಳಾಗಿವೆ. ಭಿಂಡ್-ಗ್ವಾಲಿಯರ್ ರಾಷ್ಟ್ರೀಯ ಹೆದ್ದಾರಿ (NH-719) ನಲ್ಲಿರುವ ಸಾವಿತ್ರಿ ಲೋಧಿ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿದೆ. ಈ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ 55 ವರ್ಷದ ತೇಜ್ ನಾರಾಯಣ್ ನರ್ವಾರಿಯಾ ಎಂಬುವವರು ಹೆಲ್ಮೆಟ್ ಧರಿಸದ ಇಬ್ಬರು ಯುವಕರ ಬೈಕ್‌ಗೆ ಇಂಧನ ತುಂಬಲು ನಿರಾಕರಿಸಿದ್ದಾರೆ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರಿಂದ ತಮ್ಮ ಬೈಕ್‌ಗೆ ಇಂಧನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ತೇಜ್ ನಾರಾಯಣ್ ಅವರ ಜೊತೆ ವಾಗ್ವಾದ ನಡೆಸಿದ ಆ ಯುವಕರು ಕೋಪದಿಂದ ಅವರ ಮೇಲೆ ಗುಂಡಿಕ್ಕಿದ್ದಾರೆ.
ಪೆಟ್ರೋಲ್ ಬಂಕ್ ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಸಿಬ್ಬಂದಿಗೆ ಗಾಯ
ಒಂದು ಬುಲೆಟ್ ತೇಜ್ ನಾರಾಯಣ ಅವರ ಕೈಗೆ ತಾಗಿದೆ. ಸಿಸಿಟಿವಿಯಲ್ಲಿ ಕೃತ್ಯ ಸೆರೆ ಆಗಿದ್ದು, ಒಬ್ಬ ಪಿಸ್ತೂಲ್ ಬಳಸಿ ಶೂಟ್ ಮಾಡಿದ್ದಾರೆ ಮತ್ತೊಬ್ಬ ರೈಫಲ್‌ನಿಂದ ಗುಂಡು ಹಾರಿಸುವುದನ್ನು ಕಾಣಬಹುದು. ಈ ಕಿಡಿಗೇಡಿಗಳು ಅಲ್ಲಿ ಹಲವು ಸುತ್ತುಗಳ ಗುಂಡು ಹಾರಿಸಿದ್ದು, ಇದರಿಂದ ಪೆಟ್ರೋಲ್ ಬಂಕ್ ಸಿಬ್ಬಂದಿ ಅಲ್ಲೇ ಭಯದಿಂದ ಅಡಗುವಂತೆ ಮಾಡಿದ್ದಾರೆ.
ಆರೋಪಿಗಳಿಗಾಗಿ ಪೊಲೀಸರ ಶೋಧ
ನಂತರ ಯುವಕರು ಆ ಸ್ಥಳದಿಂದ ತೆರಳಿದ್ದು, ಗಾಯಾಳು ತೇಜ್ ನಾರಾಯಣ್ ಅವರನ್ನು ಭಿಂಡ್‌ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು,ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಈ ಗುಂಡಿನ ದಾಳಿ ನಡೆಸಿ ಅಪರಾಧಿಗಳು ಭಿಂದ್‌ನ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಿಜ್‌ಪುರಿ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬಿಜ್‌ಪುರಿಯಲ್ಲಿ ಕುಸ್ತಿ ಕಾರ್ಯಕ್ರಮ ನಡೆಯುತ್ತಿತ್ತು, ಇಲ್ಲಿಗೆ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳು ತಮ್ಮ ಬೈಕ್‌ಗೆ ಇಂಧನ ತುಂಬಿಸಲು ಪೆಟ್ರೋಲ್ ಪಂಪ್‌ಗೆ ಬಂದಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ನಾವು ಆರೋಪಿಗಳನ್ನು ಗುರುತಿಸಿದ್ದೇವೆ ಮತ್ತು ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಬರೋಹಿ ಪೊಲೀಸ್ ಠಾಣೆಯ ಉಸ್ತುವಾರಿ ಅತುಲ್ ಭಡೋರಿಯಾ ಹೇಳಿದ್ದಾರೆ.
ಇದನ್ನೂ ಓದಿ: ಹೇಮಾವತಿ ನದಿಯ ನೀರಿನ ಮಟ್ಟ ಹಠಾತ್ ಏರಿಕೆ: ಮೇಯಲು ಬಿಟ್ಟ ಹಸುಗಳ ಸೊಂಟಕ್ಕೆ ಬೆಲ್ಟ್ ಕಟ್ಟಿ ಏರ್‌ಲಿಫ್ಟ್
ಇದನ್ನೂ ಓದಿ: ಮಹದೇವನ ಕೊರಳಿಗೆ ಸುತ್ತಿ ಹೆಡೆಎತ್ತಿ ನಿಂತ ನಾಗರ ಹಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ