ಜಡ್ಜ್‌ಗಳಿಗೆ ಮಾತ್ರ ಈ ನೆಲದ ಕಾನೂನು ಅನ್ವಯಿಸಲ್ಲ, ಸುಪ್ರೀಂಕೋರ್ಟ್ ಬಗ್ಗೆ ಧನಕರ್‌ ಹೇಳಿಕೆಗೆ ಆಕ್ಷೇಪ

Published : Apr 19, 2025, 08:44 AM ISTUpdated : Apr 19, 2025, 08:53 AM IST
ಜಡ್ಜ್‌ಗಳಿಗೆ ಮಾತ್ರ ಈ ನೆಲದ ಕಾನೂನು ಅನ್ವಯಿಸಲ್ಲ, ಸುಪ್ರೀಂಕೋರ್ಟ್ ಬಗ್ಗೆ ಧನಕರ್‌ ಹೇಳಿಕೆಗೆ ಆಕ್ಷೇಪ

ಸಾರಾಂಶ

ಪ್ರಜಾಸತ್ತಾತ್ಮಕ ಶಕ್ತಿಗಳ ಮೇಲೆ ಅವರು ಕ್ಷಿಪಣಿ ಪ್ರಯೋಗ ಸರಿಯಲ್ಲ. ಜಡ್ಜ್‌ಗಳು ಸೂಪರ್‌ ಪಾರ್ಲಿಮೆಂಟ್‌ನಂತೆ ಕೆಲಸ ಮಾಡ್ತಿದ್ದಾರೆ. ದಿಲ್ಲಿ ಜಡ್ಜ್‌ ಕೇಸಲ್ಲಿ ಈವರೆಗೆ ಎಫ್ಐಆರ್ ಏಕಿಲ್ಲ? ಎಂದು ಉಪರಾಷ್ಟ್ರಪತಿ ಧನ್ಕರ್ ಎತ್ತಿದ ಪ್ರಶ್ನೆಗೆ ಭಾರಿ ಆಕ್ಷೇಪ ವ್ಯಕ್ತವಾಗಿದೆ.

ನವದೆಹಲಿ(ಏ.19) : ರಾಷ್ಟ್ರಪತಿಗಳಿಗೆ ವಿಧೇಯಕಗಳ ಕುರಿತು ನಿರ್ಧರಿಸಲು ಕಾಲಮಿತಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನ್ಯಾಯಾಧೀಶರು ಸೂಪರ್‌ ಪಾರ್ಲಿಮೆಂಟ್‌ನಂತೆ ಕೆಲಸ ಮಾಡುವುದು ಸರಿಯಲ್ಲ. ರಾಷ್ಟ್ರಪತಿಗಳದ್ದು ಉನ್ನತ ಹುದ್ದೆ, ಕಾಲಮಿತಿ ನಿಗದಿ ಸರಿಯಲ್ಲ. ಪ್ರಜಾಸತ್ತಾತ್ಮಕ ಶಕ್ತಿಗಳ ಮೇಲೆ ಅವರು ಕ್ಷಿಪಣಿ ಪ್ರಯೋಗಿಸುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ರಾಜ್ಯಪಾಲ ಮತ್ತು ತಮಿಳುನಾಡು ಸರ್ಕಾರ ನಡುವಿನ ಸಂಘರ್ಷದ ಪ್ರಕರಣದಲ್ಲಿ ಯಾವುದೇ ವಿಧೇಯಕಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ 3 ತಿಂಗಳ ಕಾಲಮಿತಿಯನ್ನು ಸುಪ್ರೀಂ ಕೋರ್ಟ್‌ ನಿಗದಿಪಡಿಸಿತ್ತು.

ಗುರುವಾರ ರಾಜ್ಯಸಭಾ ಇಂಟರ್ನಿಗಳ 6ನೇ ಬ್ಯಾಚ್‌ ಅನ್ನು ಉದ್ದೇಶಿಸಿ ಗುರುವಾರ ಮಾತನಾಡಿ ಈ ವಿಚಾರ ಪ್ರಸ್ತಾಪಿಸಿದ ಧನಕರ್‌, ‘ಹಾಗಿದ್ದರೆ ನಮ್ಮಲ್ಲಿ ಕಾನೂನು ರಚಿಸುವ, ಕಾರ್ಯಾಂಗದ ಜವಾಬ್ದಾರಿ ನಿರ್ವಹಿಸುವ ಮತ್ತು ಸೂಪರ್‌ ಪಾರ್ಲಿಮೆಂಟ್‌ ಆಗಿ ಕೆಲಸ ಮಾಡುವ ನ್ಯಾಯಾಧೀಶರಿದ್ದಾರೆ ಎಂದಾಯ್ತು. ಆದರೆ ಇವರಿಗೆ (ಜಡ್ಜ್‌ಗಳಿಗೆ) ಮಾತ್ರ ಈ ನೆಲದ ಕಾನೂನು ಅನ್ವಯಿಸುವುದಿಲ್ಲ ಎಂದು ಕಿಡಿಕಾರಿದರು.

ರಾಷ್ಟ್ರಪತಿಗೆ ಆದೇಶಿಸುವುದು ಸರಿಯೆ? ಸುಪ್ರೀಂ ವಿರುದ್ಧ ಉಪರಾಷ್ಟ್ರಪತಿ ಕಟುಟೀಕೆ

‘ರಾಷ್ಟ್ರಪತಿಗಳದ್ದು ಉನ್ನತ ಹುದ್ದೆ. ಅವರು ಸಂವಿಧಾನವನ್ನು ಉಳಿಸುವ, ರಕ್ಷಿಸುವ ಮತ್ತು ಸಮರ್ಥಿಸಿಕೊಳ್ಳುವುದಾಗಿ ಪ್ರಮಾಣವಚನ ಸ್ವೀಕರಿಸಿದರೆ ಸಚಿವರು, ಉಪರಾಷ್ಟ್ರಪತಿಗಳು, ಸಂಸದರು ಮತ್ತು ನ್ಯಾಯಾಧೀಶರು ಸಂವಿಧಾನಬದ್ಧವಾಗಿ ಕೆಲಸ ಮಾಡುವ ಪ್ರಮಾಣ ಸ್ವೀಕರಿಸುತ್ತಾರೆ. ರಾಷ್ಟ್ರಪತಿಗಳಿಗೆ ಈ ರೀತಿ ನಿರ್ದೇಶನ ನೀಡುವುದು ಸರಿಯಲ್ಲ’ ಎಂದು ತಿಳಿಸಿದರು.

ಎಫ್‌ಐಆರ್‌ ಆಗಿಲ್ಲ:
ಇದೇ ವೇಳೆ, ‘ದೆಹಲಿಯ ಜಡ್ಜ್‌ ಮನೆಯಲ್ಲಿ ನೋಟ್‌ ಪತ್ತೆಯಾದ ಪ್ರಕರಣ ಕುರಿತು 7 ದಿನಗಳ ವರೆಗೆ ಯಾರಿಗೂ ಮಾಹಿತಿ ಇರಲಿಲ್ಲ. ಮಾ.21ರಂದು ಪತ್ರಿಕೆಯೊಂದರ ವರದಿಯಿಂದಾಗಿ ಎಲ್ಲಾ ವಿಚಾರ ಬಹಿರಂಗವಾಗಿತು. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ. ದೇಶದಲ್ಲಿ ಯಾರ ವಿರುದ್ಧ ಬೇಕಿದ್ದರೂ ಎಫ್‌ಐಆರ್‌ ದಾಖಲಿಸಬಹುದು. ಆದರೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ ಜಡ್ಜ್‌ಗಳಾದರೆ ನೇರವಾಗಿ ಎಫ್‌ಐಆರ್‌ ದಾಖಲಿಸುವಂತಿಲ್ಲ, ಅದಕ್ಕೆ ನ್ಯಾಯಾಂಗದ ಅನುಮತಿ ಬೇಕು’ ಎಂದು ಬೇಸರಿಸಿದರು.

ಡಿಎಂಕೆ ಭಾರಿ ವಿರೋಧ
ರಾಜ್ಯದ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಟೀಕಿಸಿದೆ. ತೀರ್ಪಿನ ಬಗ್ಗೆ ಅವರ ಹೇಳಿಕೆ ‘ಅನೈತಿಕ’ ಎಂದಿದೆ. ಈ ಬಗ್ಗೆ ಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ತಿರುಚಿ ಶಿವ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಸುಪ್ರೀಂ ತೀರ್ಪಿನ ವಿರುದ್ಧ ಧನಕರ್ ಅವರ ಅಭಿಪ್ರಾಯಗಳು ಅನೈತಿಕವಾಗಿವೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನಿನ ನಿಯಮವೇ ಮೇಲು. ಸಂವಿಧಾನದ ಅಧಿಕಾರ ಹಂಚಿಕೆಯಡಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ವಿಭಿನ್ನ ಅಧಿಕಾರಗಳನ್ನು ಹೊಂದಿವೆ. ಆದರೆ ಈ ಮೂವರಿಗಿಂತ ಸಂವಿಧಾನವು ಸರ್ವೋಚ್ಚ ಎಂಬುದನ್ನು ಮರೆಯಬಾರದು’ ಎಂದು ಹೇಳಿದ್ದಾರೆ. ‘ಪ್ರಜಾತಾಂತ್ರಿಕ ಶಕ್ತಿಗಳನ್ನು ಗುರಿಯಾಗಿಸಿಕೊಂಡು ಸುಪ್ರೀಂ ಕೋರ್ಟ್ ಅಣ್ವಸ್ತ್ರ ಕ್ಷಿಪಣಿ ಪ್ರಯೋಗಿಸುವಂತಿಲ್ಲ’ ಎಂದು ಧನಕರ್ ಸುಪ್ರೀಂ ಕೋರ್ಟನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್‌ ಭಾರತಕ್ಕೆ ಬಂದ ಹೊತ್ತಲ್ಲಿಯೇ ಭಾರತಕ್ಕೆ ಮತ್ತೆ ವಿಲನ್‌ ಆದ ಡೊನಾಲ್ಡ್‌ ಟ್ರಂಪ್‌!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್