Rahul Gandhi on Gautam Adani investment in Rajasthan: ಗೌತಮ್ ಅದಾನಿ ಸಂಸ್ಥೆ ರಾಜಸ್ಥಾನದಲ್ಲಿ ರೂ 65,000 ಕೋಟಿ ಹೂಡಿಕೆ ಮಾಡುವ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಮುಖ್ಯಮಂತ್ರಿ ಇಷ್ಟು ದೊಡ್ಡ ಮೊತ್ತದ ಹೂಡಿಕೆಯನ್ನು ಬೇಡ ಎನ್ನಲಾರ ಎಂದಿದ್ದಾರೆ. ಜತೆಗೆ ಬೇಡ ಎನ್ನುವುದೂ ತಪ್ಪು, ಉದ್ಯಮದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದಿದ್ದಾರೆ.
ಬೆಂಗಳೂರು: ರಾಹುಲ್ ಗಾಂಧಿ ಕಳೆದ ಕೆಲ ವರ್ಷಗಳಿಂದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ವಿರುದ್ಧ ವಾಗ್ದಾಳಿ ಮಾಡುತ್ತಲೇ ಬಂದಿದ್ದಾರೆ. ಪ್ರಧಾನಿ ನರೇಂದ್ ಮೋದಿ ಸರ್ಕಾರ ಬಂದ ನಂತರ ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿಗೆ ಎಲ್ಲಾ ಸವಲತ್ತುಗಳನ್ನೂ ಮೋದಿ ಸರ್ಕಾರ ಧಾರೆ ಎರೆದು ಕೊಡುತ್ತಿದೆ ಎಂದು ರಾಹುಲ್ ಆಗಾಗ ಆರೋಪಿಸುತ್ತಲೇ ಇರುತ್ತಾರೆ. "ಹಮ್ ದೋ, ಹಮಾರಾ ದೋ" ಎಂಬ ಮಾತನ್ನು ಪದೇ ಪದೇ ಹೇಳುವ ಕಾಂಗ್ರೆಸ್ ಅಧಿಕಾರಿದಲ್ಲಿರುವ ರಾಜಸ್ಥಾನದಲ್ಲಿ ಗೌತಮ್ ಅದಾನಿ 65,000 ಕೋಟಿ ರೂ ಹೂಡಿಕೆ ಮಾಡುತ್ತಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರ ಗೌತಮ್ ಬಾಯ್ ಎಂದು ವೇದಿಕೆಯ ಮೇಲೆ ಕರೆದಿದ್ದರು. ಜತೆಗೆ ವಿಶ್ವದಲ್ಲಿ ಎರಡನೇ ಶ್ರೀಮಂತರಾಗಿರುವುದಕ್ಕೂ ಅಭಿನಂದನೆ ಸಲ್ಲಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿತ್ತು. ಅದಾನಿ ಅವರ ಒಡೆತನ ಸಂಸ್ಥೆಯಿಂದ ಹೂಡಿಕೆ ಬೇಡ ಎನ್ನುತ್ತೀರಾ ಎಂದು ಪ್ರಶ್ನಿಸಿದ್ದರು.
ಇಂದು ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಪತ್ರಕರ್ತರೊಬ್ಬರು ಈ ಬಗ್ಗೆ ಪ್ರಶ್ನಿಸಿದರು. ಜೈರಾಮ್ ರಮೇಶ್ ಕೇವಲ ಭಾರತ ಐಕ್ಯತಾ ಯಾತ್ರೆ ಕುರಿತಂತೆ ಪ್ರಶ್ನಿಸಿ ಎಂದಾಗ, ರಾಹುಲ್ ಪ್ರತಿಕ್ರಿಯಿಸಿ, ಇಲ್ಲ ಇದು ಮುಖ್ಯವಾದ ಪ್ರಶ್ನೆ ಇದಕ್ಕೆ ಉತ್ತರಿಸುತ್ತೇನೆ ಎಂದರು. "ಯಾವುದೇ ಮುಖ್ಯಮಂತ್ರಿ ಇಷ್ಟು ದೊಡ್ಡ ಮಟ್ಟದ ಹೂಡಿಕೆಯನ್ನು ಸ್ವಾಗತಿಸದೇ ಇರಲು ಸಾಧ್ಯವಿಲ್ಲ. ಮತ್ತು ಉದ್ಯಮ ಹೂಡಿಕೆಯನ್ನು ಬೇಡ ಎನ್ನುವುದು ತಪ್ಪು," ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಅಶೋಕ್ ಗೆಹ್ಲೋಟ್‌ರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪಿಎಫ್‌ಐ ಬ್ಯಾನ್, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಕೈ ಅಧ್ಯಕ್ಷ ಚುನಾವಣೆ ಬಗ್ಗೆ ರಾಹುಲ್ ಗಾಂಧಿ ಮಾತು
ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಅದಾನಿ ಅವರಿಗೆ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಮೇಲಾಗಿ ಅದಾನಿ ಅವರ ಉದ್ಯಮಕ್ಕೆ ಮಾತ್ರ ಪ್ರಾಶಸ್ತ್ಯ ಎಂದಿಗೂ ನೀಡಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಮುಂದುವರೆದ ಅವರು ಕೇಂದ್ರ ಸರ್ಕಾರದ ಬಗ್ಗೆ ಟೀಕಿಸಿದರು. ಯಾವುದೋ ಇಬ್ಬರು ಉದ್ಯಮಿಗಳಿಗೆ ಮಾತ್ರ ಸಹಾಯ ಮಾಡುವ ಮೂಲಕ ಏಕಸ್ವಾಮ್ಯತ್ವವನ್ನು ಸೃಷ್ಟಿಸಲು ಬಿಜೆಪಿ ಸಹಕರಿಸಿದೆ, ಈ ವಿಚಾರಕ್ಕೆ ನನ್ನ ಧಿಕ್ಕಾರವೇ ಹೊರತು ಯಾವುದೇ ಉದ್ಯಮದ ಮೇಲಲ್ಲ ಎಂದಿದ್ದಾರೆ. ಉದ್ಯಮದಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೆ ಕೇವಲ ಬೆರಳೆಣಿಕೆಯ ಉದ್ಯಮಿಗಳಿಗೆ ಮಣೆ ಹಾಕಿದರೆ ದೇಶದ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ ಎಂಬ ಕಾರಣಕ್ಕೆ ನಾನು ಏಕಸ್ವಾಮ್ಯತ್ವವನ್ನು ವಿರೋಧಿಸುತ್ತೇನೆ ಎಂದರು.
ಅದಾನಿ ಸಂಸ್ಥೆಗೆ ರಾಜಸ್ಥಾನ ಸರ್ಕಾರ ರಾಜಕೀಯವಾಗಿ ಯಾವುದೇ ಸಹಾಯ ಮಾಡಿಲ್ಲ. ಹಾಗೊಂದು ವೇಳೆ ಮಾಡಿದರೆ ನಾನು ಅದನ್ನು ವಿರೋಧಿಸುತ್ತೇನೆ. ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಮಾತನಾಡಿ, ಅಶೋಕ್ ಗೆಹ್ಲೋಟ್ ಕೂಡ ಮೋದಿಯವರ ಬಂಡವಾಳಶಾಹಿ ಪರ ಮನಸ್ಥಿತಿಯನ್ನು ವಿರೋಧಿಸುತ್ತಾರೆ. ಆದರೆ 60,000 ಕೋಟಿ ಹೂಡಿಕೆಯನ್ನು ಬೇಡ ಎಂದು ಯಾವ ಮುಖ್ಯಮಂತ್ರಿ ಕೂಡ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹಿಂದಿ ರಾಷ್ಟ್ರಭಾಷೆ ಮಾಡುವ ಕುರಿತು Rahul Gnadhiಗೆ ಪ್ರಶ್ನೆ: ರಾಹುಲ್ ಹೇಳಿದ್ದೇನು
ರಾಜಸ್ಥಾನದಲ್ಲಿ ಅದಾನಿ ಗ್ರೂಪ್ ಮುಂದಿನ ಐದು ವರ್ಷಗಳಲ್ಲಿ 65,000 ಕೋಟಿ ಹೂಡಿಕೆ ಮಾಡಲಿದೆ. 10,000 ಮೆಗಾ ವ್ಯಾಟ್ ಉತ್ಪಾದನೆಗೆ ಸೋಲಾರ್ ಪವರ್ ಪ್ಲಾಂಟ್ ನಿರ್ಮಿಸಲಿದೆ. ಮತ್ತು ಸಿಮೆಂಟ್ ಉತ್ಪಾದನಾ ಘಟಕ ನಿರ್ಮಾಣ ಮತ್ತು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಹೂಡಿಕೆ ಮಾಡಲಿದೆ. ಇನ್ವೆಸ್ಟ್ ರಾಜಸ್ಥಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಮ್ಮುಖದಲ್ಲೇ ಗೌತಮ್ ಅದಾನಿ ಹೂಡಿಕೆಯನ್ನು ಘೋಷಿಸಿದ್ದಾರೆ.