ಅಗ್ನಿಪಥ: ಪ್ರತಿಭಟನೆ, ಟೀಕೆಗೆ ಕೇಂದ್ರದ ಮೂಲಗಳ ಸ್ಪಷ್ಟನೆ: ಸೇನೆಯ ರೆಜಿಮೆಂಟ್‌ ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ!

By Suvarna NewsFirst Published Jun 17, 2022, 9:34 AM IST
Highlights

* ಮೊದಲ ವರ್ಷ ಕೇವಲ 3% ಅಗ್ನಿವೀರರ ನೇಮಕ

* ಪ್ರತಿಭಟನೆ, ಟೀಕೆಗೆ ಕೇಂದ್ರದ ಮೂಲಗಳ ಸ್ಪಷ್ಟನೆ

* ಸೇನೆಯ ರೆಜಿಮೆಂಟ್‌ ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ

ನವದೆಹಲಿ(ಜೂ.17): ‘ಅಗ್ನಿಪಥ್‌’ ಯೋಜನೆಯಡಿ ನಾಲ್ಕು ವರ್ಷಗಳ ಗುತ್ತಿಗೆ ಆಧರಿತ ಯೋಧರನ್ನು ಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವುದರಿಂದ ಹಾಲಿ ಇರುವ ರೆಜಿಮೆಂಟ್‌ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಮೊದಲ ವರ್ಷ ನೇಮಕ ಮಾಡಿಕೊಳ್ಳುವ ಅಗ್ನಿವೀರರ ಸಂಖ್ಯೆಯು ಸಶಸ್ತ್ರ ಪಡೆಗಳ ಒಟ್ಟು ಬಲದ ಶೇ.3ರಷ್ಟುಮಾತ್ರ ಇರುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟನೆ ನೀಡಿವೆ.

ಅಲ್ಪಾವಧಿ ಸೈನಿಕರ ನೇಮಕಾತಿಯ ವಿರುದ್ಧ ಕೆಲ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವುದು ಹಾಗೂ ಕಾಂಗ್ರೆಸ್‌ ಸೇರಿದಂತೆ ಕೆಲ ಪ್ರತಿಪಕ್ಷಗಳು ಈ ಯೋಜನೆಯನ್ನು ತೀವ್ರವಾಗಿ ಟೀಕಿಸಿರುವುದಕ್ಕೆ ಸರ್ಕಾರದ ಮೂಲಗಳಿಂದ ಈ ಸ್ಪಷ್ಟನೆ ಬಂದಿದೆ.

ಸೇನಾಪಡೆಗಳಲ್ಲಿ ಸದ್ಯ ಕೆಲ ಪ್ರದೇಶಗಳಿಗೆ ಹಾಗೂ ಜಾತಿಗಳಿಗೆ ಸೀಮಿತವಾದ ನಿರ್ದಿಷ್ಟಯೋಧರಿಂದ ಕೂಡಿದ ರೆಜಿಮೆಂಟ್‌ಗಳಿವೆ. ಉದಾಹರಣೆಗೆ, ರಾಜಪೂತ್‌, ಜಾಟ್‌, ಸಿಖ್‌ ಹೀಗೆ ಬೇರೆ ಬೇರೆ ರೆಜಿಮೆಂಟ್‌ಗಳಿವೆ. ಅಗ್ನಿವೀರರ ನೇಮಕದಿಂದ ಇಂತಹ ರೆಜಿಮೆಂಟ್‌ಗಳ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ವಾಸ್ತವವಾಗಿ, ಅತ್ಯುತ್ತಮ ಅಗ್ನಿವೀರರನ್ನು ಇಂತಹ ರೆಜಿಮೆಂಟ್‌ಗಳಿಗೆ ಆಯ್ಕೆ ಮಾಡಿಕೊಳ್ಳುವುದರಿಂದ ರೆಜಿಮೆಂಟ್‌ಗಳ ಸಾಮರ್ಥ್ಯ ಇನ್ನಷ್ಟುಹೆಚ್ಚಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

3 ಪಟ್ಟು ಹೆಚ್ಚು ನೇಮಕಾತಿ:

ಮೊದಲ ವರ್ಷ ಅಗ್ನಿವೀರರ ನೇಮಕವು ಸೇನಾಪಡೆಗಳ ಒಟ್ಟು ಸಾಮರ್ಥ್ಯದ ಶೇ.3ರಷ್ಟುಮಾತ್ರ ಇರುತ್ತದೆ. ಆದರೆ ಅವರ ಸಂಖ್ಯೆಯು ಪ್ರತಿ ವರ್ಷ ನೇಮಕ ಮಾಡಿಕೊಳ್ಳುವ ಯೋಧರ ಸಂಖ್ಯೆಯ 3 ಪಟ್ಟು ಹೆಚ್ಚಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಬೇರೆ ದೇಶಗಳಲ್ಲಿ ಈಗಾಗಲೇ ಇದೆ:

ಅಲ್ಪಾವಧಿಗೆ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವುದರಿಂದ ಸೇನಾಪಡೆಗಳ ಸಾಮರ್ಥ್ಯ ಕ್ಷೀಣಿಸುತ್ತದೆ ಎಂಬ ಆಕ್ಷೇಪಕ್ಕೆ ಉತ್ತರಿಸಿರುವ ಮೂಲಗಳು, ಇದು ಈಗಾಗಲೇ ಹಲವು ದೇಶಗಳಲ್ಲಿ ಸಾಬೀತಾದ ದಕ್ಷ ವ್ಯವಸ್ಥೆಯಾಗಿದೆ. ಸೇನಾಪಡೆಗಳನ್ನು ಬಲಯುತಗೊಳಿಸಲು ಇದೇ ವ್ಯವಸ್ಥೆಯನ್ನು ಅನೇಕ ದೇಶಗಳು ಅನುಸರಿಸುತ್ತಿವೆ. ನಾಲ್ಕು ವರ್ಷಗಳ ಕಾಲ ಪರಿಶೀಲಿಸಿ, ನಂತರ ಶೇ.25ರಷ್ಟುಅಗ್ನಿವೀರರನ್ನು ಕಾಯಂ ಮಾಡಿಕೊಳ್ಳುವುದರಿಂದ ಸೇನಾಪಡೆಗಳಿಗೆ ದಕ್ಷ ಹಾಗೂ ಅನುಭವಿ ಯೋಧರು ಲಭಿಸುತ್ತಾರೆ. ಕಳೆದ ಎರಡು ವರ್ಷಗಳ ಕಾಲ ಸಾಕಷ್ಟುವಿಚಾರ ವಿನಿಮಯ ನಡೆಸಿಯೇ ಈ ಯೋಜನೆ ಜಾರಿಗೊಳಿಸಲಾಗಿದೆ. ಮಿಲಿಟರಿ ಅಧಿಕಾರಿಗಳಿಂದ ಕೂಡಿರುವ ಸೇನಾಧಿಕಾರಿಗಳ ಇಲಾಖೆಯೇ ಈ ಪ್ರಸ್ತಾವನೆ ಸಲ್ಲಿಸಿತ್ತು ಎಂದೂ ಹೇಳಿವೆ.

ಸಮಾಜಕ್ಕೆ ಅಪಾಯಕಾರಿಯಲ್ಲ:

ಅಲ್ಪಾವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ಹೊರಬರುವವರು ಸಮಾಜಕ್ಕೆ ಅಪಾಯಕಾರಿಯಾಗಬಹುದು ಎಂಬ ಟೀಕೆಗೆ ಉತ್ತರಿಸಿರುವ ಮೂಲಗಳು, ಹೀಗೆ ಹೇಳುವುದು ಭಾರತೀಯ ಸಶಸ್ತ್ರ ಪಡೆಗಳ ಮೌಲ್ಯ ಹಾಗೂ ನಂಬಿಕೆಗಳಿಗೆ ಅವಮಾನ ಮಾಡಿದಂತಾಗುತ್ತದೆ. ನಾಲ್ಕು ವರ್ಷ ಸಮವಸ್ತ್ರ ಧರಿಸಿದ ಯುವಕರು ತಮ್ಮ ಜೀವನಪೂರ್ತಿ ದೇಶಕ್ಕೆ ನಿಷ್ಠರಾಗಿರುತ್ತಾರೆ. ಈಗಲೂ ಪ್ರತಿ ವರ್ಷ ಸಾವಿರಾರು ನುರಿತ ಯೋಧರು ನಿವೃತ್ತರಾಗುತ್ತಿದ್ದಾರೆ, ಆದರೆ ಅವರಾರ‍ಯರೂ ದೇಶದ್ರೋಹಿಗಳ ಜೊತೆ ಕೈಜೋಡಿಸಿದ ಉದಾಹರಣೆಗಳಿಲ್ಲ ಎಂದು ಅಭಿಪ್ರಾಯಪಟ್ಟಿವೆ.

click me!