ಅಗ್ನಿಪಥ ವಿರುದ್ಧ ಯುವ ದಂಗೆ: ಭಾರೀ ಪ್ರತಿಭಟನೆ, ಹಿಂಸಾಚಾರ: ಯೋಜನೆಗೆ ವಿರೋಧ ಏಕೆ?

Published : Jun 17, 2022, 08:38 AM IST
ಅಗ್ನಿಪಥ ವಿರುದ್ಧ ಯುವ ದಂಗೆ: ಭಾರೀ ಪ್ರತಿಭಟನೆ, ಹಿಂಸಾಚಾರ: ಯೋಜನೆಗೆ ವಿರೋಧ ಏಕೆ?

ಸಾರಾಂಶ

* ಅಗ್ನಿಪಥ ಯೋಜನೆ ವಿರೋಧಿಸಿ 6ಕ್ಕೂ ಹೆಚ್ಚು ರಾಜ್ಯಗಳಲ್ಲಿ ಯುವಕರ ಹೋರಾಟ * ರೈಲುಗಳಿಗೆ ಬೆಂಕಿ, ರೈಲು ನಿಲ್ದಾಣಗಳು ಧ್ವಂಸ, ವಾಹನಗಳ ಮೇಲೆ ದಾಳಿ * ಬಿಹಾರ ಬಿಜೆಪಿ ಕಚೇರಿ ಧ್ವಂಸ, ಶಾಸಕಿಗೆ ಕಲ್ಲು, 42 ರೈಲು ಸಂಚಾರ ರದ್ದು

ನವದೆಹಲಿ(ಜೂ.17): ಭಾರತೀಯ ಸೇನೆಗೆ ಯುವಕರನ್ನು 4 ವರ್ಷಗಳ ಅಲ್ಪಾವಧಿಗೆ ನೇಮಕ ಮಾಡುವ ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಬಿಹಾರ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹೋರಾಟದ ವೇಳೆ ಬಿಹಾರ, ಮಧ್ಯಪ್ರದೇಶ, ದೆಹಲಿಯಲ್ಲಿ ರೈಲ್ವೆ ನಿಲ್ದಾಣ ಮತ್ತು ರೈಲುಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ, ರಸ್ತೆಗಳಲ್ಲಿ ವಾಹನಗಳ ಮೇಲೆ ದಾಳಿ ನಡೆಸಿ ದುಷ್ಕೃತ್ಯ ಎಸಗಿರುವ ಘಟನೆಗಳೂ ಸಂಭವಿಸಿವೆ. ಬಿಹಾರದಲ್ಲಿ ಬಿಜೆಪಿ ಕಚೇರಿ ಧ್ವಂಸಗೊಳಿಸಿ, ಶಾಸಕಿಯೊಬ್ಬರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪ್ರತಿಭಟನೆ, ಹಿಂಸಾಚಾರದ ಹಿನ್ನೆಲೆಯಲ್ಲಿ ಗುರುವಾರ ಒಟ್ಟಾರೆ 34 ರೈಲುಗಳ ಸಂಚಾರವನ್ನು ಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಇತರೆ 8 ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಯ್ತು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಮತ್ತೊಂದೆಡೆ ಈ ಯೋಜನೆಯನ್ನು ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ, ಜೆಡಿಯು, ಆಪ್‌, ಎಡಪಕ್ಷಗಳು, ಟಿಎಂಸಿ ಸೇರಿದಂತೆ ಹಲವು ವಿಪಕ್ಷಗಳು ವಿರೋಧಿಸಿದ್ದು, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟುತೀವ್ರಗೊಳ್ಳುವ ಆತಂಕ ಎದುರಾಗಿದೆ.

ಭಾರೀ ಹಿಂಸೆ:

ಅಗ್ನಿಪಥ ಯೋಜನೆ ವಿರೋಧಿಸಿ ಬಿಹಾರದಲ್ಲಿ ಬುಧವಾರ ಆರಂಭವಾಗಿದ್ದ ಪ್ರತಿಭಟನೆ ಗುರುವಾರ ಹಿಂಸಾರೂಪ ಪಡೆದಿದೆ. ಜೆಹಾನಾಬಾದ್‌, ಬಕ್ಸರ್‌, ನವಾಡಾ ಜಿಲ್ಲೆಗಳಲ್ಲಿ ಭಾರೀ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಾಕಾರರು ಭಭುವಾ ಮತ್ತು ಛಪ್ರಾ ರೈಲು ನಿಲ್ದಾಣಗಳ ಮೇಲೆ ದಾಳಿ ನಡೆಸಿ, ಕಟ್ಟಡ ಮತ್ತು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಜೆಹನಾಬಾದ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಡ್ಡಗಟ್ಟಿದ ಪ್ರತಿಭಟನಾಕಾರರು ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಜೊತೆಗೆ ಇತರೆ ಹಲವು ನಗರಗಳಲ್ಲಿ ವಾಹನಗಳ ಮೇಲೆ ದಾಳಿ ನಡೆಸಲಾಗಿದೆ. ಮತ್ತೊಂದೆಡೆ ನವಾಡದಲ್ಲಿ ಬಿಜೆಪಿ ಶಾಸಕಿ ಅರುಣಾ ದೇವಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಘಟನೆಯಲ್ಲಿ ಶಾಸಕಿ ಸೇರಿ 5 ಜನರು ಗಾಯಗೊಂಡಿದ್ದಾರೆ.

ಮತ್ತೊಂದೆಡೆ ಉತ್ತರಪ್ರದೇಶದ ಬುಲಂದ್‌ಶಹರ್‌, ಬಲಿಯಾ, ಹರ್ಯಾಣದ ಗುರುಗ್ರಾಮ, ರೆವಾರಿ, ರಾಜಸ್ಥಾನದ ಜೋಧ್‌ಪುರ, ಸಿಕಾರ್‌, ಜೈಪುರ, ನಾಗೌರ್‌, ಅಜ್ಮೇರ್‌, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲೂ ಪ್ರತಿಭಟನೆ ನಡೆಸಲಾಗಿದೆ. ಮಧ್ಯಪ್ರದೇಶ ಬಿರ್ಲಾನಗರ್‌ ರೈಲ್ವೆ ನಿಲ್ದಾಣದ ಮೇಲೆ ದಾಳಿ ನಡೆಸಿರುವ ಪ್ರತಿಭಟನಾಕಾರರು, ಕಟ್ಟಡ ಮತ್ತು ರೈಲಿಗೆ ಬೆಂಕಿ ಹಚ್ಚಿದ್ದಾರೆ. ಸ್ಟೇಷನ್‌ ಮಾಸ್ಟರ್‌ ಕೊಠಡಿ ಧ್ವಂಸಗೊಳಿಸಿ ಕಂಟ್ರೋಲ್‌ ಸಿಸ್ಟಂಗೂ ಹಾನಿ ಮಾಡಿದ್ದಾರೆ. ಇದಲ್ಲದೆ ದೆಹಲಿಯ ನನ್‌ಗ್ಲೋಯ್‌ ರೈಲ್ವೆ ನಿಲ್ದಾಣ ಮತ್ತು ಹಿಮಾಚಲ ಪ್ರದೇಶದ ಗಗ್ಗಾಲ್‌ನಲ್ಲೂ ಪ್ರತಿಭಟನೆ ನಡೆಸಲಾಗಿದೆ.

ವಿರೋಧ ಏಕೆ?

ಕೋವಿಡ್‌ ಹಿನ್ನೆಲೆಯಲ್ಲಿ 2 ವರ್ಷದಿಂದ ದೇಶಾದ್ಯಂತ ಸೇನಾ ನೇಮಕಾತಿ ನಡೆದಿಲ್ಲ

ಈಗ ಅಗ್ನಿಪಥ ಯೋಜನೆಯಡಿ ನೇಮಕವಾದರೆ ಸುದೀರ್ಘ ಉದ್ಯೋಗ ಅವಕಾಶವಿಲ್ಲ

ಹಿಂದಿನ ನೇಮಕಾತಿ ವೇಳೆ ಕನಿಷ್ಠ 14 ವರ್ಷ ಸೇವೆ, ಬಳಿಕ ಪಿಂಚಣಿ ಅವಕಾಶ ಇತ್ತು

ಹೊಸ ಯೋಜನೆಯಲ್ಲಿ ಸೇವಾ ಭದ್ರತೆ ಇಲ್ಲ, 4 ವರ್ಷ ಬಳಿಕ ಪಿಂಚಣಿಯೂ ಸಿಗದು

ರೆಜಿಮೆಂಟ್‌ ನೀತಿ ಬದಲಾದರೆ, ನೇಮಕದಲ್ಲಿ ಸ್ಥಳೀಯ ಪ್ರಾತಿನಿಧ್ಯ ರದ್ದಾಗುವ ಭೀತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!