ಚೀನಾದಲ್ಲಿ ಕೋವಿಡ್ ರೀತಿಯಲ್ಲೇ HMPV ವೈರಸ್ ಸ್ಫೋಟಗೊಂಡಿದೆ.ಇದರ ಬೆನ್ನಲ್ಲೇ ಎಲ್ಲೆಡೆ ಆತಂಕ ಶುರುವಾಗಿದೆ. ವೈರಸ್ ಹರಡುವಿಕೆ, ಆಸ್ಪತ್ರೆ ದಾಖಲು ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಭಾರತೀಯರಿಗೆ ಮಹತ್ವದ ಸೂಚನೆ ನೀಡಿದೆ.
ನವದೆಹಲಿ(ಜ.03) ಕೋವಿಡ್ ಮಹಾಮಾರಿ ಆತಂಕದಿಂದ ಹೊರಬಂದ ಜಗತ್ತು ಚೇತರಿಕೆ ಹಾದಿಯಲ್ಲಿ ಸಾಗುತ್ತಿರುವಾಗಲೇ ಇದೀಗ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಸ್ಫೋಟ ಜನರ ಆತಂಕ ಹೆಚ್ಚಿಸಿದೆ. ಕೊರೋನಾ ವಕ್ಕರಿಸಿದ 5 ವರ್ಷಗಳ ಬಳಿಕ ಚೀನಾದಲ್ಲಿ ಇದೀಗ HMPV ವೈರಸ್ ಸ್ಫೋಟಗೊಂಡಿದೆ. ಆಸ್ಪತ್ರೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವೇಗವಾಗಿ ವೈರಸ್ ಹರಡುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಭಾರತೀಯರಿಗೆ ಮಹತ್ವದ ಸೂಚನೆ ನೀಡಿದೆ. ಪ್ರಮುಖವಾಗಿ ಚೀನಾದ HMPV ವೈರಸ್‌ಗೆ ಯಾರೂ ಆತಂಕ ಪಡಬೇಕಿಲ್ಲ ಎಂದಿದೆ. ಇಷ್ಟೇ ಅಲ್ಲ ಭಾರತದಲ್ಲಿ ಇದುವರೆಗೂ ಈ ವೈರಸ್ ಪತ್ತೆಯಾಗಿಲ್ಲ. ಇಷ್ಟೇ ಅಲ್ಲ ಸದ್ಯ ಪರಿಸ್ಥಿತಿ ಭಾರತದಲ್ಲಿ ಯಾವುದೇ ಆತಂಕ ಪರಿಸ್ಥತಿ ಸೃಷ್ಟಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಆರೋಗ್ಯ ಇಲಾಖೆ ಡೈರೆಕ್ಟರ್ ಜನರಲ್ ಅತುಲ್ ಗೋಯಲ್ ಹಲವರ ಆತಂಕ್ಕೆ ಉತ್ತರಿಸಿದ್ದಾರೆ. ಚೀನಾದಲ್ಲಿ ಕಾಣಿಸಿಕೊಂಡಿರುವ HMPV ವೈರಸ್ ಅಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಸಾಮಾನ್ಯವಾಗಿ ಉಸಿರಾಟ ಸಂಬಂಧಿತಿ ಸಾಂಕ್ರಾಮಿಕ ರೋಗಗಳು ಮಕ್ಕಳು ಹಾಗೂ ಹಿರಿಯರಲ್ಲಿ ಅತೀ ಬೇಗನೆ ಕಾಣಿಸಿಕೊಳ್ಳುತ್ತದೆ. ಚೀನಾದಲ್ಲಿ ಚಳಿಗಾಲದಲ್ಲಿ ಈ ರೀತಿಯ ಕೆಲ ವೈರಸ್‌ಗಳು ಆತಂಕ ಸೃಷ್ಟಿಸುವುದು ಸಾಮಾನ್ಯವಾಗಿದೆ. ಕೆಲ ವೈರಸ್ ಹೆಚ್ಚು ತಲ್ಲಣ ಸೃಷ್ಟಿಸಲಿದೆ. ಕಳೆದ 5 ವರ್ಷದಲ್ಲಿ ಪ್ರತಿ ಚಳಿಗಾಲದಲ್ಲಿ ಚೀನಾದಲ್ಲಿ ಕೆಲ ವೈರಸ್ ಆತಂಕ ಸೃಷ್ಟಿಸಿದೆ. ಆದರೆ ಇದರಿಂದ ಭಾರತಕ್ಕೆ ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚೀನಾದ ಹೊಸ ವೈರಸ್ ಆತಂಕದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಅಲರ್ಟ್!
ಭಾರತದಲ್ಲಿ HMPV ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಚಳಿಗಾಲದಲ್ಲಿ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಭಾರತದ ಆರೋಗ್ಯ ವಿಭಾಗ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ಹೀಗಾಗಿ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅತುಲ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.ಚೀನಾದಲ್ಲಿ ಕಾಣಿಸಿಕೊಂಡಿರುವ ವೈರಸ್ ಮೇಲೆ ಭಾರತ ತೀವ್ರ ನಿಗಾವಹಿಸಲಿದೆ. ಈ ಕುರಿತು ಅಂತಾರಾಷ್ಟ್ರೀಯ ಆರೋಗ್ಯ ಎಜೆನ್ಸಿಗಳ ಜೊತೆ ಸಂಪರ್ಕದಲ್ಲಿದೆ. ವೈರಸ್ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅತುಲ್ ಗೋಯಲ್ ಹೇಳಿದ್ದಾರೆ.
ಚೀನಾ ಈ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. 5 ವರ್ಷಗಳ ಹಿಂದೆ ಕೋವಿಡ್ ಸಂದರ್ಭದಲ್ಲೂ ಚೀನಾ ಎಲ್ಲವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿತ್ತು. ಆದರೆ ಕೋವಿಡ್ ವೈರಸ್ ಜಗತ್ತಿಗೆ ಆವರಿಸಿ ವಿಶ್ವವೇ ಸ್ತಬ್ಧವಾಗಿತ್ತು. ಆಸ್ಪತ್ರೆಗಳು ಭರ್ತಿಯಾಗಿತ್ತು, ಎಲ್ಲಾ ದೇಶಗಳು ಕೋವಿಡ್ ಪರಿಸ್ಥಿತಿ ಎದುರಿಸಲು ಹೆಣಗಾಡಿತ್ತು. ಕೊರೋನಾ ಮೊದಲ ಅಲೆ, ಎರಡನೇ ಅಲೆ, ಮೂರನೇ ಅಲೆ ಹೀಗೆ ಒಂದರ ಹಿಂದೆ ಮತ್ತೊಂದರಂತೆ ವಿಶ್ವವನ್ನೇ ತತ್ತರಿಸುವಂತೆ ಮಾಡಿತ್ತು. ಇದೀಗ ಚೀನಾದಲ್ಲಿ ಕಾಣಿಸಿಕೊಂಡ HMPV ವೈರಸ್ ಕೋವಿಡ್ ರೀತಿ ಆತಂಕ ಸೃಷ್ಟಿಸುವ ಸಾಧ್ಯತೆಯನ್ನು ಹಲವು ತಜ್ಞ ವೈದ್ಯರು ತಳ್ಳಿ ಹಾಕಿದ್ದಾರೆ. ಆದರೆ ಮಕ್ಕಳು ಹಾಗೂ ಹಿರಿಯರು ಪ್ರಮುಖವಾಗಿ ರೋಗ ನಿರೋಧಕ ಶಕ್ತಿ ಕಳೆಗುಂದಿದವರಲ್ಲಿ ಸಮಸ್ಯೆಯನ್ನುಂಟು ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
ಚೀನಾದಲ್ಲಿ ಪತ್ತೆಯಾದ ಹೊಸ ಕಾಯಿಲೆಯ ಲಕ್ಷಣಗಳೇನು ತಡೆಗಟ್ಟೋದು ಹೇಗೆ?