* ವಿಶ್ವ ಪರಂಪರೆ ತಾಣದಲ್ಲಿ ಬದಲಾವಣೆ ತರುವ ಪ್ರಯತ್ನಕ್ಕೆ ಜನರಿಂದ ಆಕ್ರೋಶ
* ವಿಗ್ರಹ ತೆರವಿನಿಂದ ಇಸ್ಲಾಮಿಕ್ ದಾಳಿಕೋರರ ದುಷ್ಕೃತ್ಯ ಮುಚ್ಚಿಹೋಗಲಿದೆ
* ಕುತುಬ್ ಕಾಂಪ್ಲೆಕ್ಸ್‌ನ ಗಣೇಶ ವಿಗ್ರಹ ಸ್ಥಳಾಂತರ ವಿವಾದ
ನವದೆಹಲಿ(ಏ.08): ಕುತುಬ್ ಮಿನಾರ್ ಕಾಂಪ್ಲೆಕ್ಸ್‌ನಲ್ಲಿರುವ 2 ಗಣೇಶನ ವಿಗ್ರಹಗಳನ್ನು ರಾಷ್ಟ್ರೀಯ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಗೊಳಿಸಬೇಕು ಎಂದು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರವು (ಎನ್‌ಎಂಎ), ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆದಿದೆ. ಆದರೆ ವಿಶ್ವ ಪರಂಪರೆ ತಾಣವೆನಿಸಿದ ಸ್ಥಳದಲ್ಲಿ ಬದಲಾವಣೆ ಮಾಡುವ ಎನ್‌ಎಂಎ ಪ್ರಯತ್ನಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕುತುಬ್ ಮಿನಾರ್ ಸಂಕೀರ್ಣದಲ್ಲಿ 12ನೇ ಶತಮಾನದ ಉಲ್ಟಾಗಣೇಶ ಹಾಗೂ ಪಂಜರದಲ್ಲಿರುವ ಗಣೇಶನ ಎರಡು ವಿಗ್ರಹಗಳಿವೆ. 1993ರಲ್ಲಿ ಇಡೀ ಸಮುಚ್ಛಯವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ದಾಖಲಿಸಿದೆ. ಮಿನಾರ್‌ನಲ್ಲಿರುವ ಕುವತ್-ಉಲ್-ಇಸ್ಲಾಂ ಮಸೀದಿಯ ಉತ್ತರಾಭಿಮುಖವಾದ ಗೋಡೆಯಲ್ಲಿ ಉಲ್ಟಾಗಣೇಶನ ವಿಗ್ರಹವಿದ್ದರೆ, ಕಬ್ಬಿಣದ ಪಂಜರದಲ್ಲಿರುವ ವಿಗ್ರಹವನ್ನು ಮಸೀದಿಯಲ್ಲಿ ಜನರು ಓಡಾಡುವಷ್ಟುತಳಭಾಗದಲ್ಲಿರಿಸಲಾಗಿದೆ.
ಹೊಸವರ್ಷದ ಕ್ಯಾಲೆಂಡರ್’ನಲ್ಲಿ ಕುತುಬ್ ಮಿನಾರ್ ಹೆಸರು ವಿಷ್ಣುಸ್ತಂಭ!
ಈ ಹಿನ್ನೆಲೆಯಲ್ಲಿ ಎನ್‌ಎಂಎದ ಅಧ್ಯಕ್ಷ ತರುಣ್ ವಿಜಯ್ ‘ಕುತುಬ್ ಮಿನಾರ್ ಸಂಕೀರ್ಣದಲ್ಲಿ ಗಣೇಶನ ವಿಗ್ರಹವನ್ನು ಅತ್ಯಂತ ಅಗೌರವಪೂರ್ಣ ಸ್ಥಳದಲ್ಲಿ ಇರಿಸಲಾಗಿದೆ. ಹಿಂದೂಗಳನ್ನು ಅವಮಾನಿಸಲು ಗಣೇಶನ ವಿಗ್ರಹವನ್ನು ತಲೆಕೆಳಗಾದ ಸ್ಥಿತಿಯಲ್ಲಿ ಪ್ರವಾಸಿಗರ ಪಾದಗಳು ತಗುಲುವಷ್ಟು ತಳ ಮಟ್ಟದಲ್ಲಿಡಲಾಗಿದೆ. ಹೀಗಾಗಿ ಗಣೇಶನ ವಿಗ್ರಹವನ್ನು ಈ ಸ್ಥಾನದಿಂದ ತೆಗೆದು ಗೌರವಪೂರ್ಣ ಸ್ಥಾನದಲ್ಲಿ ಸ್ಥಾಪಿಸಬೇಕು. ಈ ಕುರಿತು ತಾವು ಭಾರತದ ಪುರಾತತ್ವ ಸಮೀಕ್ಷೆಯವರಿಗೆ ವರ್ಷದ ಹಿಂದೆಯೇ ಪತ್ರ ಬರೆದಿದ್ದರೂ, ಇಲಾಖೆ ಅದಕ್ಕೆ ಸ್ಪಂದಿಸಿಲ್ಲ’ ಎಂದು ಆರೋಪಿಸಿದ್ದರು.
ಇದಲ್ಲದೇ ತರುಣ್ ಟ್ವೀಟ್‌ನಲ್ಲಿ ‘ಕುತುಬ್ ಮಿನಾರ್ ಸಂಕೀರ್ಣದಲ್ಲಿದ್ದವು ಎಂದು ನಂಬಲಾಗುವ 27 ದೇವಾಲಯಗಳು ಏನಾದವು? ತೀರ್ಥಂಕರ, ಯಮುನಾ, ದಶಾವತಾರ, ಕೃಷ್ಣನ ಜನನ, ನವಗ್ರಹ ಮೂರ್ತಿಗಳನ್ನು ಎಂದಿಗೂ ಪ್ರವಾಸಿಗರಿಗೆ ವೀಕ್ಷಿಸಲು ಅವಕಾಶಕೊಟ್ಟಿಲ್ಲ. ಇಲ್ಲಿ ಸಾಂಸ್ಕೃತಿಕ ನರಮೇಧ ನಡೆದಿದ್ದು, ವಸಾಹತುಶಾಹಿ ವಿರುದ್ಧ ಹೋರಾಡಲು ಇಂತಹ ತಪ್ಪುಗಳನ್ನು ಸರಿಪಡಿಸಬೇಕು’ ಎಂದಿದ್ದರು. ಸ್ಮಾರಕದ ಸಂರಕ್ಷಣೆ ಜವಾಬ್ದಾರಿ ವಹಿಸಿದ ಪುರಾತತ್ವ ಇಲಾಖೆ ಈ ಕುರಿತು ಇನ್ನು ಯಾವುದೇ ಹೇಳಿಕೆ ನೀಡಿಲ್ಲ.
ಆದರೆ ಗಣೇಶನ ವಿಗ್ರಹ ಸ್ಥಳಾಂತರದಿಂದ ಇಸ್ಲಾಮಿಕ್ ದಾಳಿಕೋರರು ನಡೆಸಿದ ದುಷ್ಕೃತ್ಯಗಳು ಮುಚ್ಚಿಹೋಗಲಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಗಣೇಶನ ವಿಗ್ರಹಗಳನ್ನು ಅಲ್ಲಿಂದ ತೆಗೆಯಲು ಬಿಡಬಾರದು. ಅದರ ಬದಲಾಗಿ ಇಡೀ ಸಮುಚ್ಛಯವನ್ನು ಮರಳಿ ಹಿಂದೂಗಳಿಗೆ ನೀಡಬೇಕು ಮತ್ತು ಅಲ್ಲಿಗೆ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಹಲವು ನೆಟ್ಟಿಗರು ಆಗ್ರಹಿಸಿದ್ದಾರೆ.
ತಾಜ್'ಮಹಲ್ ಒಂದೇ ಯಾಕೆ, ರಾಷ್ಟ್ರಪತಿ ಭವನ, ಕೆಂಪುಕೋಟೆಯನ್ನೂ ಕೆಡವಲಿ: ಅಜಂ ಖಾನ್
ಗಣೇಶ ವಿಗ್ರಹಗಳ ವಿವಾದವೇನು?
ಮುಖ್ಯ ದ್ವಾರದಿಂದ ಕುತುಬ್ ಮಿನಾರ್‌ಗೆ ಪ್ರವೇಶಿಸಿದ ತಕ್ಷಣ ಕುವ್ವತುಲ್ ಇಸ್ಲಾಂ ಮಸೀದಿಯ ಗೇಟ್ ಬೀಳುತ್ತದೆ. ಕುವ್ವಾತುಲ್ ಇಸ್ಲಾಂ ಎಂದರೆ ಇಸ್ಲಾಮಿನ ಶಕ್ತಿ. ಫನಾ ಸೇರಿದಂತೆ ಅನೇಕ ಚಲನಚಿತ್ರಗಳನ್ನು ಅದರ ಸುತ್ತಲೂ ನಿರ್ಮಿಸಲಾದ ಸಭಾಂಗಣಗಳಲ್ಲಿ ಚಿತ್ರೀಕರಿಸಲಾಗಿದೆ. ಹಜಾರದ ಕಂಬಗಳ ನಿರ್ಮಾಣ ಸಾಮಗ್ರಿಯನ್ನು 27 ಹಿಂದೂ ಮತ್ತು ಜೈನ ಜನರ ದೇವಾಲಯಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಮಸೀದಿಯ ಹೊರಗಿನ ಶಾಸನದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಈ ಕುರಿತು ಪುರಾತತ್ವ ಇಲಾಖೆಯವರು ಇಲ್ಲಿ ಮತ್ತೊಮ್ಮೆ ಗಣೇಶನ ಮೂರ್ತಿ ತಯಾರಿಸಿ ಸಾಂಪ್ರದಾಯಿಕ ರೀತಿಯಲ್ಲಿ ಪೂಜೆ, ಆರತಿ ಮಾಡಬೇಕು ಎಂಬುದು ಪಾಲಿಕೆ ಕೌನ್ಸಿಲರ್ ಆರತಿ ಸಿಂಗ್ ಅವರ ಆಗ್ರಹವಾಗಿದೆ.
ಕುತುಬ್ ಮಿನಾರ್‌ನ ಪಕ್ಕದಲ್ಲಿರುವ ಯೋಗಮಾಯಾ ದೇವಾಲಯದ ಅರ್ಚಕರು, ಕುತುಬ್ ಮಿನಾರ್‌ನೊಳಗೆ ಗಣೇಶನನ್ನು ಹಲವು ವರ್ಷಗಳಿಂದ ಪೂಜಿಸಲಾಗುತ್ತಿತ್ತು ಎಂದು ಹೇಳುತ್ತಾರೆ. ಈ ದೇವಾಲಯವನ್ನು ರಾಜ ಪೃಥ್ವಿರಾಜ್ ಚೌಹಾಣ್ ನಿರ್ಮಿಸಿದನೆಂದು ಅವರು ಹೇಳುತ್ತಾರೆ. ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಪೂಜೆಯನ್ನು ಮಾಡಲಾಯಿತು, ಆದರೆ ಮೊಘಲರು ಭಾರತಕ್ಕೆ ಬಂದಾಗ, ಈ ದೇವಾಲಯಗಳನ್ನು ಕೆಡವಲಾಯಿತು ಮತ್ತು ಮಸೀದಿಗಳಾಗಿ ಪರಿವರ್ತಿಸಲಾಯಿತು. 2000ನೇ ಇಸವಿಯವರೆಗೂ ಕುತುಬ್ ಮಿನಾರ್ ನ ಒಳಗಿನ ದೇವರ ಆರತಿಯಲ್ಲಿ ಪಾಲ್ಗೊಂಡಿದ್ದರು ಎಂಬ ಹೇಳಿಕೆಯೂ ಇದೆ. ಮೊಘಲರು ಕೆಡವಿದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಅಲ್ಲಿ ಸಾಂಪ್ರದಾಯಿಕ ಪೂಜೆ, ಆರತಿ ಆರಂಭಿಸಬೇಕು ಎಂದು ಸಾಂಪ್ರದಾಯಿಕ ಅರ್ಚಕರ ಕುಟುಂಬ ಆಗ್ರಹಿಸಿದೆ.
ತಲೆಕೆಳಗಾದ ಗಣೇಶನ ಪ್ರತಿಮೆ ವಿವಾದ
ಪೂಜಾ ಸಿಂಗ್‌ಗೂ ಮುನ್ನ ಬಿಜೆಪಿ ನಾಯಕ ತರುಣ್ ವಿಜಯ್ ಕೂಡ ಕುತುಬ್ ಮಿನಾರ್‌ನಲ್ಲಿ ತಲೆಕೆಳಗಾದ ಗಣೇಶ ಮೂರ್ತಿ ಮತ್ತು ಬೋನಿನಲ್ಲಿರುವ ಇನ್ನೊಂದು ವಿಗ್ರಹದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ವಿಷಯವನ್ನು ನಾನೇ ಹಲವು ಬಾರಿ ಕುತುಬ್ ಮಿನಾರ್ ಗೆ ಭೇಟಿ ನೀಡಿ ನೋಡಿದ್ದೇನೆ ಎಂದು ತರುಣ್ ವಿಜಯ್ ಹೇಳಿದ್ದರು. ವಿಗ್ರಹಗಳನ್ನು ಅತ್ಯಂತ ಅವಮಾನಕರ ರೀತಿಯಲ್ಲಿ ಇರಿಸಲಾಗಿದೆ.