ಬಾಬಾ ಬಾಗೇಶ್ವರ್ ಹಿಂದೂ ರಾಷ್ಟ್ರ ಹೇಳಿಕೆಗೆ ಬಿಹಾರ ಸಿಎಂ ಗರಂ!

By Suvarna NewsFirst Published May 17, 2023, 12:10 PM IST
Highlights

'ಬಾಬಾ ಬಾಗೇಶ್ವರ್' ಎಂದೇ ಖ್ಯಾತರಾಗಿರುವ ಸ್ವಯಂಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ ಅವರು ಐದು ದಿನಗಳ ಬಿಹಾರ ಪ್ರವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರಾಡಿದ ಮಾತುಗಳಿಗೆ ಬಿಹಾರ ಮುಖ್ಯಮಂತ್ರಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

'ಬಿಹಾರವು ಹಿಂದೂ ರಾಷ್ಟ್ರದ ಬೆಂಕಿಯನ್ನು ಹೊತ್ತಿಸಬೇಕು' ಎಂಬ ಸ್ವಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ವಾಗ್ದಾಳಿ ನಡೆಸಿದ್ದು, ಅವರ ಹೇಳಿಕೆಗೆ ಯಾವುದೇ ಮೌಲ್ಯವಿಲ್ಲ ಎಂದು ಹೇಳಿದ್ದಾರೆ. 'ಬಾಬಾ ಬಾಗೇಶ್ವರ್' ಎಂದೇ ಖ್ಯಾತರಾಗಿರುವ ಶಾಸ್ತ್ರಿ ಬಿಹಾರದಲ್ಲಿ ತಮ್ಮ ಆಧ್ಯಾತ್ಮಿಕ ಪ್ರವಚನದ ಮೊದಲ ದಿನ ಭಾರತವನ್ನು ಹಿಂದೂ ರಾಷ್ಟ್ರವೆಂದು ಪ್ರತಿಪಾದಿಸಿದ್ದರು.

ಬಾಗೇಶ್ವರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ನಿತೀಶ್ ಕುಮಾರ್ 'ಬಿಹಾರದಲ್ಲಿ, ಪ್ರತಿಯೊಬ್ಬರೂ ತಮಗೆ ಬೇಕಾದ ರೀತಿಯಲ್ಲಿ ಪೂಜೆ ಮಾಡುವ ಹಕ್ಕನ್ನು ಪಡೆಯಬೇಕು, ಆದರೆ ಯಾರೂ ಪರಸ್ಪರರ ನಂಬಿಕೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಯಾರಾದರೂ ಸ್ವಂತವಾಗಿ ಏನನ್ನಾದರೂ ಹೇಳಿದರೆ ಅದಕ್ಕೆ ಯಾವುದೇ ಮೌಲ್ಯವಿಲ್ಲ' ಎಂದು ಹೇಳಿದ್ದಾರೆ.

Latest Videos

ಅವರು ಬಾಬಾ ಅಲ್ಲ!
ಸ್ವಯಂಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ ದಾರ್ಶನಿಕರಲ್ಲ ಎಂದು ಆರ್‌ಜೆಡಿ ರಾಷ್ಟ್ರೀಯ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಕೂಡಾ ಹೇಳಿದ್ದಾರೆ. ಶಾಸ್ತ್ರಿಯವರು ತಮ್ಮ ಕುಟುಂಬವನ್ನು ನೌಬತ್‌ಪುರದಲ್ಲಿ 'ಹನುಮಂತ್ ಕಥಾ'ಕ್ಕೆ ಆಹ್ವಾನಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ, 'ಅವರು ಬಾಬಾ ಎಂದು ಒಪ್ಪಿಕೊಳ್ಳಲು ನಾನು ನಿರಾಕರಿಸುತ್ತೇನೆ' ಎಂದು ಹಿರಿಯ ನಾಯಕ ಲಾಲೂ ಹೇಳಿದರು.

ಎಲ್ಲ ಕೆಲಸಕ್ಕೂ ಈ ಅಜ್ಜಯ್ಯನ ಅಪ್ಪಣೆಗೆ ಕಾಯ್ತಾರೆ ಡಿಕೆಶಿ, ಅವರ ಮಹಾತ್ಮೆ ಏನು?

ಬಿಹಾರದಲ್ಲಿ ಹಿಂದೂ ರಾಷ್ಟ್ರ ಕಿಡಿ ಹೊತ್ತಿಸುತ್ತಿರುವ ಬಾಗೇಶ್ವರ್
ಧೀರೇಂದ್ರ ಶಾಸ್ತ್ರಿ ತಮ್ಮ 'ಹನುಮಾನ್ ಕಥಾ'ದ 4ನೇ ದಿನದಂದು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದರು. ರಾಜ್ಯದ ಜನತೆಯನ್ನು ಜಾಗೃತಗೊಳಿಸಲು ಪ್ರಾಣವನ್ನೇ ಪಣಕ್ಕಿಟ್ಟು ಬಿಹಾರಕ್ಕೆ ಬಂದಿರುವುದಾಗಿಯೂ ಹೇಳಿಕೊಂಡಿದ್ದಾರೆ.

'ಬಿಹಾರದ ಜನಸಂಖ್ಯೆಯು ಸುಮಾರು 13 ಕೋಟಿಯಷ್ಟಿದೆ ಮತ್ತು ನಾನು ಈ 'ಹನುಮಾನ್ ಕಥಾ' ಮೂಲಕ ನಿಮಗೆ ಹೇಳಬಯಸುತ್ತೇನೆ, ಒಮ್ಮೆ ನೀವು ಮನೆಗಳಿಗೆ ಹಿಂತಿರುಗಿ, ಭಗವಾನ್ ಹನುಮಂತನ ಧಾರ್ಮಿಕ ಧ್ವಜಗಳನ್ನು ಸ್ಥಾಪಿಸಬೇಕು. ಬಿಹಾರದ ಐದು ಕೋಟಿ ಜನರು ಅದನ್ನು ಮಾಡಿದರೆ ಮತ್ತು ಮನೆಯಿಂದ ಹೊರಬರುವ ಮುನ್ನ ಅವರ ಹಣೆಯ ಮೇಲೆ ತಿಲಕವಿಟ್ಟರೆ, ಭಾರತ ಹಿಂದೂ ರಾಷ್ಟ್ರವಾಗುವತ್ತ ಸಾಗಲಿದೆ' ಎಂದು ಬಿಹಾರಕ್ಕೆ ಐದು ದಿನಗಳ ಭೇಟಿಯಲ್ಲಿರುವ ಶಾಸ್ತ್ರಿ ಹೇಳಿದ್ದರು.

ಯಾರು ಈ ಬಾಬಾ ಬಾಗೇಶ್ವರ್?
ಕೇವಲ 20ರ ಹರೆಯದಲ್ಲಿ, ಶಾಸ್ತ್ರಿ ಅವರು ಮಧ್ಯಪ್ರದೇಶದ ಬಾಗೇಶ್ವರ್ ಧಾಮ್ ಯಾತ್ರಾಸ್ಥಳದ ಮುಖ್ಯಸ್ಥರಾಗಿದ್ದಾರೆ. ಭಗವಾನ್ ಹನುಮಂತನಿಗೆ ಸಮರ್ಪಿತವಾದ ಈ ಧಾಮದ ಅಧಿಪತಿಯಾಗಿ ಜನರ ಮನಸ್ಸನ್ನು ಓದುವ ಘೋಷಿತ ಸಾಮರ್ಥ್ಯದ ಕಾರಣದಿಂದಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಧೀರೇಂದ್ರ ಶಾಸ್ತ್ರಿ ವಿರುದ್ಧ ಅರ್ಜಿ
ಈ ತಿಂಗಳ ಆರಂಭದಲ್ಲಿ, ಧೀರೇಂದ್ರ ಶಾಸ್ತ್ರಿ ಅವರು ತಮ್ಮನ್ನು ಭಗವಾನ್ ಹನುಮಂತನ ಅವತಾರ ಎಂದು ಘೋಷಿಸುವ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿಹಾರದ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಕೆಯಾಗಿದೆ. ಮೇ 1 ರಂದು ಸ್ಥಳೀಯ ವಕೀಲ ಸೂರಜ್ ಕುಮಾರ್ ಅವರು ಮುಜಾಫರ್‌ಪುರದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (ಪಶ್ಚಿಮ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಏಪ್ರಿಲ್ 24 ರಂದು ರಾಜಸ್ಥಾನದ ಸಭೆಯೊಂದರಲ್ಲಿ ಬಾಗೇಶ್ವರ್ ಬಾಬಾ, ತಾನು ಭಗವಾನ್ ಹನುಮಂತನ 'ಅವತಾರ' ಎಂದು ಹೇಳಿಕೊಂಡಿದ್ದಾರೆ. ಇದು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಅಪಚಾರವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಅರ್ಜಿದಾರರು ಐಪಿಸಿ ಸೆಕ್ಷನ್ 295 ಎ, 298 ಮತ್ತು 505 ರ ಅಡಿಯಲ್ಲಿ ಶಾಸ್ತ್ರಿ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಕೋರಿದರು, ಇವೆಲ್ಲವೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತವೆ.

click me!