
ಕಾಂಗ್ರೆಸ್ ಪಕ್ಷ ದೇಶವನ್ನು ಒಡೆಯಲು ಯತ್ನಿಸುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸೊರೊಸ್ ಫೌಂಡೇಶನ್ ನಡುವಿನ ಸಂಬಂಧ ಕೇಳಿಬರುತ್ತಿರುವ ಗಂಭೀರ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಒತ್ತಾಯಿಸಿದರು.
ಸಿಜೆಪಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮವನ್ನು ವಿರೋಧಿಸಿ ಲೋಕ ಕಲ್ಯಾಣ್ ಮಾರ್ಗ್ (LKM) ಹೊರಗೆ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ದುಬೆ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನೀಟ್ ಲೀಕ್ ಪ್ರಕರಣ ಇಟ್ಟುಕೊಂಡು ಹಿಂಸಾತ್ಮಕ ಪ್ರತಿಭಟನೆಗಿಳಿದಿರುವ ಕಾಂಗ್ರೆಸ್ ದೇಶ ವಿರೋಧಿ ಶಕ್ತಿಗಳ ಜೊತೆ ಕೈಜೋಡಿಸಿದೆ ಎಂದು ಆರೋಪಿಸಿದರು. ರಾಹುಲ್ ಗಾಂಧಿ ತಮ್ಮ ವಿದೇಶಿ ಪ್ರವಾಸಗಳಲ್ಲಿ ಯಾರನ್ನು ಭೇಟಿಯಾಗುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. 'ಗಾಂಧಿ ಕುಟುಂಬ ದೇಶದ್ರೋಹಿಗಳ ಜೊತೆ ಸೇರಿಕೊಂಡಿದೆ ಎಂದು ನನಗನಿಸುತ್ತಿದೆ. ನಿನ್ನೆ ಜಂತರ್ ಮಂತರ್‌ನಲ್ಲಿ ಏನಾಯಿತು ನೋಡಿ. ಅಲ್ಲಿ ತಲ್ವಾರ್‌ಗಳನ್ನ ತೋರಿಸಲಾಗಿದೆ. ಅತ್ತ ಈ ಪ್ರತಿಭಟನೆಯನ್ನ ಇಸ್ಲಾಮಿಕ್ ದೇಶಗಳು ಅದರಲ್ಲೂ ಪಾಕಿಸ್ತಾನ ಇದನ್ನ ಬೆಂಬಲಿಸಿದೆ ಅಷ್ಟೇ ಅಲ್ಲ, ಈ ಗಲಭೆಗೆ ಪಾಕಿಸ್ತಾನದಿಂದಲೂ ಸಂಚಿದೆ ಎಂದು ಅನಿಸುತ್ತಿದೆ. ಇಂತಹವರ ಜೊತೆ ಸೇರಿಕೊಂಡು ಕಾಂಗ್ರೆಸ್ ಎಂಥಾ ಹೇಸಿಗೆ ಕೆಲಸ ಮಾಡುತ್ತಿದೆ. ಇದು ದೇಶವನ್ನು ಒಡೆಯುವ ಸ್ಪಷ್ಟ ಪ್ರಯತ್ನ ಎಂದು ದುಬೆ ಹೇಳಿದ್ದಾರೆ.
ರಾಹುಲ್ ಗಾಂಧಿ ತಮ್ಮ ವಿದೇಶಿ ಪ್ರವಾಸಗಳಲ್ಲಿ ಯಾರೊಂದಿಗೆ ಮಾತುಕತೆ ನಡೆಸುತ್ತಾರೆ ಎಂಬುದನ್ನು ಬಿಜೆಪಿ ಸಂಸದ ಪ್ರಶ್ನಿಸಿದ್ದಾರೆ. ಅಲ್ಲದೆ ಅವರಿಗೆ ಬರುತ್ತಿರುವ ಹಣದ ಬಗ್ಗೆ ಅಧಿಕೃತ ತನಿಖೆಗೆ ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ವಿದೇಶಿ ಭೇಟಿಗಳಲ್ಲಿ ಯಾರನ್ನು ಭೇಟಿಯಾದರು? ಯಾವ ಇಸ್ಲಾಮಿಕ್ ದೇಶಗಳ ಅಧಿಕಾರಿಗಳನ್ನು ಭೇಟಿಯಾದರು? ಯಾವ ಚೀನೀ ಅಧಿಕಾರಿಗಳನ್ನು ಭೇಟಿಯಾದರು? ಸೊರೊಸ್ ಫೌಂಡೇಶನ್‌ನಿಂದ ಅವರಿಗೆ ಬರುತ್ತಿರುವ ಹಣದ ಬಗ್ಗೆ ಸರ್ಕಾರ ಸಂಪೂರ್ಣವಾಗಿ ತನಿಖೆ ನಡೆಸಬೇಕು ಎಂದು ಅವರು ಆರೋಪಿಸಿದ್ದಾರೆ.
ಮಾಧ್ಯಮಗಳ ಮೇಲೆ ಕಾಂಗ್ರೆಸ್ ದಾಳಿ ಮಾಡುತ್ತಿದೆ ಎಂದೂ ಆರೋಪಿಸಿದ ದುಬೆ, ಇದು ಆ ಪಕ್ಷದ ನಿಜವಾದ ಮನಸ್ಥಿತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಈಗ ಅವರ ಮನಸ್ಥಿತಿ ಹೇಗಿದೆ ಎಂದರೆ ಭಾರತವನ್ನು ಒಡೆದಾದರೂ ಸರಿ ಅಧಿಕಾರಕ್ಕೆ ಬರಬೇಕು ಎಂಬ ಯತ್ನದಲ್ಲಿದ್ದಾರೆ. ಇದಕ್ಕಾಗಿ ಸೊರೊಸ್ ಫೌಂಡೇಶನ್ ಮತ್ತು ಇಸ್ಲಾಮಿಕ್ ದೇಶಗಳು ಅವರಿಗೆ ಹಣ ನೀಡುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸಿಜೆಪಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮವನ್ನು ವಿರೋಧಿಸಿ ಪ್ರಧಾನಿ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹಿರಿಯ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ ಸಿ ವೇಣುಗೋಪಾಲ್ ಮತ್ತು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದು ಛತ್ರಸಾಲ್ ಕ್ರೀಡಾಂಗಣಕ್ಕೆ ಕರೆದೊಯ್ದಿದ್ದರು. ಈ ಘಟನೆಯ ಬೆನ್ನಲ್ಲೇ ದುಬೆ ವಾಗ್ದಾಳಿ ನಡೆಸಿದರು.
ಬುಧವಾರ ವಿರೋಧ ಪಕ್ಷದ ಸಂಸದರು ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಕಪ್ಪು ಬಟ್ಟೆ ಧರಿಸಿ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ವಿದ್ಯಾರ್ಥಿಗಳು ನಿಜವಾದ ಆತಂಕ ಆಕ್ರೋಶಗಳನ್ನು ಹೊರಹಾಕಿದ್ದಾರೆ. ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಶಿಕ್ಷಣ ಬಜೆಟ್ ₹1.4 ಲಕ್ಷ ಕೋಟಿ, ಆದರೆ ನೀವು ಅದಾನಿ ಮತ್ತು ಅಂಬಾನಿಯ ₹16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡುತ್ತಿದ್ದೀರಿ. ಪದೇ ಪದೇ ಪೇಪರ್ ಲೀಕ್ ಆಗುತ್ತಿರುವುದರಿಂದ ವಿದ್ಯಾರ್ಥಿಗಳು ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ನಿಜವಾದ ಹೋರಾಟ ನಡೆಸುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ಏನೂ ಇಲ್ಲ, ಆದರೆ ವಿದ್ಯಾರ್ಥಿಗಳ ಮೇಲೆ ಮತ್ತು ಸಂಸತ್ತಿನೊಳಗೆ ಏನು ಮಾಡಲಾಗುತ್ತಿದೆಯೋ ಅದು ನಿಜವಾಗಿಯೂ ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸಿದರು. (ANI)
(ಈ ಸುದ್ದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ