
ಬೆಂಗಳೂರು (ಮಾ.3): ಉಕ್ರೇನ್‌ನಿಂದ (Ukraine) ಹೇಗಾದರೂ ಜೀವ ಉಳಿಸಿಕೊಂಡು ವಾಪಸಾಗಬೇಕು ಎಂದು ಗಡಿ ಪ್ರದೇಶಕ್ಕೆ ಕಷ್ಟಪಟ್ಟು ತೆರಳಿದರೆ ಅಲ್ಲಿ ನೈಜೀರಿಯನ್ ವಿದ್ಯಾರ್ಥಿಗಳು (Nigerian students ) ಕಿರುಕುಳ ನೀಡುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ಬುಡಾಪೆಸ್ಟ್ನಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ಆಗಮಿಸಿದ ವಿದ್ಯಾರ್ಥಿಗಳು ಬದುಕಿ ಬಂದದ್ದೇ ಪವಾಡ ಎನ್ನುವ ಭಾವನೆಯಲ್ಲಿದ್ದಾರೆ. ಹಲವು ದಿನಗಳಿಂದ ಸರಿಯಾದ ಊಟ, ನಿದ್ದೆ ಇಲ್ಲದೆ ಸಾವಿರಾರು ನೂರಾರು ಕಿ.ಮೀ. ಪ್ರಯಾಣ ಮಾಡಿದ್ದೇವೆ. 750ರಿಂದ 800 ಕಿ.ಮೀ. ಪ್ರಯಾಣ ಮಾಡಿ ಗಡಿ ತಲುಪಿದರೂ ನೈಜೀರಿಯನ್ ಪ್ರಜೆಗಳಿಂದ ಕಿರುಕುಳ ಎದುರಿಸಬೇಕಾಯಿತು. ನಮ್ಮಂಥ ವಿದ್ಯಾರ್ಥಿಗಳಿಗೆ ಅವರು ತೀವ್ರ ಕಿರುಕುಳ ನೀಡುತ್ತಿದ್ದಾರೆ. ಅಲ್ಲಿ ಯಾರೂ ನಮ್ಮ ನೆರವಿಗೆ ಬರುತ್ತಿಲ್ಲ ಎಂದು ಆಕ್ರೋಶ, ನೋವು ಹೊರಹಾಕಿದರು.
ದೇವರೇ ನಮ್ಮನ್ನು ಕಾಪಾಡಿದ: ಉಕ್ರೇನ್‌ನಿಂದ ಸುರಕ್ಷಿತವಾಗಿ ವಾಪಸಾದ ಝಪೋರಿಝಿಯಾ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯ ನಾಲ್ಕನೇ ವರ್ಷದ ವೈದ್ಯ ವಿದ್ಯಾರ್ಥಿ, ದಕ್ಷಿಣ ಕನ್ನಡ ಜಿಲ್ಲೆಯ ಬಿಕರ್ನಕಟ್ಟೆಯ ಪೃಥ್ವಿರಾಜ್ ‘ದೇವರೇ ನಮ್ಮನ್ನು ಕಾಪಾಡಿದ’ ಎಂದು ಹೇಳಿಕೊಂಡಿದ್ದಾರೆ. ‘ನಾವು ಉಕ್ರೇನ್‌ನಿಂದ ಹೊರಟಾಗ ಪರಿಸ್ಥಿತಿ ಗಂಭೀರವಾಗಿತ್ತು. ಝಪೋರಿಝಿಯಾ ಮೇಲೆ ರಷ್ಯಾ ಹಿಡಿತ ಸಾಧಿಸುವ ಮೊದಲೇ ನಾವು ಅಲ್ಲಿಂದ ಹೊರಟೆವು. ಝಪೋರಿಝಿಯಾದ ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ಸೇನೆ ಭಾರೀ ಕಾದಾಟದ ನಂತರ ವಶಕ್ಕೆ ಪಡಿಸಿಕೊಂಡಿದೆ. ನಾವು ಅದಕ್ಕೂ ಮೊದಲೇ ಅಲ್ಲಿಂದ ರೈಲು ಹತ್ತಿದ್ದರಿಂದ ಸ್ವಲ್ಪದರಲ್ಲೇ ಪಾರಾದೆವು’ ಎಂದು ಪೃಥ್ವಿರಾಜ್ ಹೇಳಿದ್ದಾರೆ.
ಕೀವ್, ಖಾರ್ಕೀವ್ ದಾಟಿದರೆ ಸೇಫ್: ಖಾರ್ಕೀವ್ನಲ್ಲಿರುವ ತುಮಕೂರು ಜಿಲ್ಲೆಯ ವಿದ್ಯಾರ್ಥಿ ಪ್ರತಿಭಾ, ‘ಕರ್ಫ್ಯೂ ಇರುವುದರಿಂದ ಎಲ್ಲರೂ ನಡೆದುಕೊಂಡೇ ಬರುತ್ತಿದ್ದಾರೆ. ಇಲ್ಲೇ ಇದ್ದರೆ ಏನಾಗ್ತೀವೋ ಅನ್ನೋ ಪರಿಸ್ಥಿತಿ ಇದೆ. ನಾನಂತು ಹೊರಡುತ್ತಿದ್ದೇನೆ’ ಎಂದು ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾಳೆ. ‘ರೈಲ್ವೆ ಸ್ಟೇಶನ್‌ನಲ್ಲಿ ಏನಾದರೂ ವ್ಯವಸ್ಥೆ ಮಾಡಿರಬಹುದು. ಇಲ್ಲದಿದ್ದರೆ ನಾವು ದುಡ್ಡು ಕೊಟ್ಟು ಹೋಗಬೇಕು. ಖಾರ್ಕೀವ್, ಕೀವ್ ಇವೆರಡೂ ದಾಟಿಬಿಟ್ಟರೆ ನಾವು ಸೇಫ್. ಈ ಎರಡು ನಗರಗಳನ್ನು ದಾಟುವುದೇ ದೊಡ್ಡ ಕಷ್ಟ’ ಎಂದು ಹೇಳಿಕೊಂಡಿದ್ದಾಳೆ. "ದೂರ ದೂರ ನಡೆದುಕೊಂಡು ಹೋಗ್ತಿದ್ದೇವೆ. ದಾರಿ ಕಾಣದಾಗಿದೆ. ಎಲ್ಲೆಡೆ ಗುಂಡಿನ ಸದ್ದು. ಏನಾಗ್ತಿದೆಯೋ ಗೊತ್ತಾಗ್ತಿಲ್ಲ. ಏನು ಮಾಡಬೇಕೋ ಗೊತ್ತಾಗ್ತಿಲ್ಲ. ಮೊಬೈಲ್ ಬ್ಯಾಟರಿ ಲೋ ಇದೆ. ಮಾತನಾಡಲೂ ಆಗುತ್ತಿಲ್ಲ." ಎಂದು ಉಕ್ರೇನ್ನಲ್ಲಿರುವ ವಿಜಯನಗರದ ವಿದ್ಯಾರ್ಥಿ ಸಂಜಯ್ ಹೇಳಿದ್ದಾರೆ.
ಸ್ಲೊವಾಕಿಯಾ, ರೊಮೇನಿಯಾದಲ್ಲಿ ಸಚಿವರಿಂದ ರಕ್ಷಣಾ ಕಾರ್ಯ
ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ನೇಮಕ ಮಾಡಿರುವ ನಾಲ್ವರು ಕೇಂದ್ರ ಸಚಿವರಲ್ಲಿ ಕಿರಣ್ ರಿಜಿಜು (kiren rijiju) ಬುಧವಾರ ಸ್ಲೋವಾಕಿಯಾದ ನಗರ ಕೋಶಿಟ್ಸಗೆ ತಲುಪಿದ್ದಾರೆ. ರೋಮೆನಿಯಾ ತಲುಪಿರುವ ಜ್ಯೋತಿರಾಧಿತ್ಯ ಸಿಂಧಿಯಾ (jyotiraditya scindia) ರೊಮೆನಿಯಾ (romania) ಮತ್ತು ಮಾಲ್ಡೋವಾದ (Maldova) ಭಾರತದ ರಾಯಭಾರಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
Russia Ukraine Crisis: ರಷ್ಯಾದಿಂದ ಮತ್ತೆ ಅಣ್ವಸ್ತ್ರ ಬೆದರಿಕೆ
ಕಿರಣ್‌ರಿಜಿಜು, ಹರ್ದೀಪ್‌ಪುರಿ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವಿ.ಕೆ.ಸಿಂಗ್ ಅವರನ್ನು ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಉಕ್ರೇನ್‌ನ ನೆರೆಯ ದೇಶಗಳಿಗೆ ನೇಮಕ ಮಾಡಲಾಗಿತ್ತು. ಸ್ಪೈಸ್ ಜೆಟ್ ವಿಮಾನದಲ್ಲಿ ಸ್ಲವೋಕಿಯಾ ತಲುಪಿರುವ ರಿಜಿಜು, ಉಕ್ರೇನ್‌ನಿಂದ ಬಸ್ ಮುಖಾಂತರ ಬರುವ 189 ಭಾರತೀಯರನ್ನು ಗುರುವಾರ ಸ್ವದೇಶಕ್ಕೆ ಮರಳಿ ಕರೆತರಲಿದ್ದಾರೆ.
Russia Ukraine Crisis: 498 ಯೋಧರ ಸಾವು, ರಷ್ಯಾದ ಅಧಿಕೃತ ಹೇಳಿಕೆ
ಈ ನಡುವೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, ‘ಮಾಲ್ಡೋವಾ ಮತ್ತು ರೊಮೇನಿಯಾದ ಭಾರತೀಯ ರಾಯಭಾರಿ ರಾಹುಲ್ ಶ್ರೀವಾಸ್ತವ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಆಪರೇಶನ್ ಗಂಗಾ ಈಗ ಮತ್ತಷ್ಟುವೇಗ ಪಡೆದುಕೊಂಡಿದೆ. ಮಾಲ್ಡೋವಾದ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬುಕಾರೆಸ್ಟ್‌ಗೆ ಅವರನ್ನು ಕರೆದೊಯ್ಯುವ ಸಾರಿಗೆಯ ಕುರಿತು ಮಾತುಕತೆ ನಡೆಸಲಾಗಿದೆ. ಅಲ್ಲಿಂದ ಭಾರತಕ್ಕೆ ವಿಮಾನದ ಮೂಲಕ ಪ್ರಯಾಣ ಆರಂಭವಾಗಲಿದೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ