ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದು ಪೊಲೀಸ್‌!

By Kannadaprabha News  |  First Published Mar 15, 2021, 8:05 AM IST

ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದು ಪೊಲೀಸ್‌!| ಬಾಂಬ್‌ ಇಟ್ಟಗುಂಪಿನಲ್ಲಿ ನಾನೂ ಇದ್ದೆ: ಸಚಿನ್‌ ವಾಝೆ ‘ತಪ್ಪೊಪ್ಪಿಗೆ’| ಎನ್‌ಐಎ ಮೂಲಗಳಿಂದ ಮಾಹಿತಿ| ವಾಝೆ ಬಂಧನ, ಮಾ.25ರವರೆಗೆ ಎನ್‌ಐಎ ವಶಕ್ಕೆ


ಮುಂಬೈ(ಮಾ.15): ಉದ್ಯಮಿ ಮುಕೇಶ್‌ ಅಂಬಾನಿ ಮನೆ ಸನಿಹ ಕಾರ್‌ನಲ್ಲಿ ಜಿಲೆಟಿನ್‌ ಕಡ್ಡಿಗಳನ್ನು ಇರಿಸಿದ ಪ್ರಕರಣಕ್ಕೆ ಸ್ಫೋಟಕ ತಿರುವು ಲಭಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್‌) ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ವಾಝೆ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ. ಈ ನಡುವೆ, ವಿಚಾರಣೆ ವೇಳೆ ವಾಝೆ, ‘ಅಂಬಾನಿ ಮನೆ ಸನಿಹ ಇದ್ದ ಕಾರ್‌ನಲ್ಲಿ ಬಾಂಬ್‌ ಇಟ್ಟಗುಂಪಲ್ಲಿ ನಾನೂ ಇದ್ದೆ’ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದ್ದು, ಪ್ರಕರಣವು ಕ್ಷಣ ಕ್ಷಣಕ್ಕೂ ಕುತೂಹಲ ಕೆರಳುವಂತೆ ಮಾಡಿದೆ.

ಈ ನಡುವೆ, ವಾಝೆ ಅವರನ್ನು ಮುಂಬೈ ನ್ಯಾಯಾಲಯವು ಭಾನುವಾರ ಮಾಚ್‌ರ್‍ 25ರವರೆಗೆ ಎನ್‌ಐಎ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

Latest Videos

undefined

ವಾಝೆ ಬಂಧನದ ಬಗ್ಗೆ ಹೇಳಿಕೆ ನೀಡಿರುವ ಎನ್‌ಐಎ ವಕ್ತಾರರು, ‘ಸತತ 12 ತಾಸು ವಿಚಾರಣೆ ಬಳಿಕ ವಾಝೆಯನ್ನು ಶನಿವಾರ ಮಧ್ಯರಾತ್ರಿ 11.50ಕ್ಕೆ ಬಂಧಿಸಲಾಗಿದೆ. ಅಂಬಾನಿ ಮನೆ ಸನಿಹ ಕಾರಿನಲ್ಲಿ ಫೆ.25ರಂದು ಜಿಲೆಟಿನ್‌ ಕಡ್ಡಿಗಳನ್ನು ಇಡಲಾದ ಪ್ರಕರಣದಲ್ಲಿ ಅವರ ಪಾತ್ರ ಕಂಡುಬಂದ ಕಾರಣ ಈ ಕ್ರಮ ಜರುಗಿಸಲಾಗಿದೆ’ ಎಂದಿದ್ದಾರೆ.

ಆದರೆ, ಎನ್‌ಐಎ ಉನ್ನತ ಅಧಿಕಾರಿಯೊಬ್ಬರು ಆಂಗ್ಲ ಪತ್ರಿಕೆಯೊಂದಕ್ಕೆ ವಿಚಾರಣೆಯ ಕೆಲವು ಮಹತ್ವದ ಅಂಶಗಳ ಮಾಹಿತಿ ನೀಡಿದ್ದಾರೆ. ‘ಅಂಬಾನಿ ಮನೆ ಸನಿಹ ನಿಲ್ಲಿಸಲಾಗಿದ್ದ ಕಾರಿನಲ್ಲಿ ಸ್ಫೋಟಕ ಇಡುವ ಗುಂಪಿನಲ್ಲಿ ವಾಝೆ ಕೂಡ ಇದ್ದರು. ಇದನ್ನು ಅವರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ. ಜಾಲದಲ್ಲಿನ ಇತರರನ್ನು ಬಂಧಿಸಲು ವಾಝೆ ವಿಚಾರಣೆ ಅಗತ್ಯವಿದ್ದು, ತನಿಖೆ ಮತ್ತಷ್ಟುತೀವ್ರಗೊಳಿಸಲಾಗುತ್ತದೆ ಎಮದು ಮೂಲಗಳು ಹೇಳಿವೆ.

ಸ್ಫೋಟಕ ತುಂಬಿದ ಕಾರು ಹೀರೇನ್‌ ಮನಸುಖ್‌ ಎಂಬುವರಿಗೆ ಸೇರಿತ್ತು. ಮನಸುಖ್‌ ಅವರ ಕಾರನ್ನು ಕಳವು ಮಾಡಿದ್ದ ಕಿಡಿಗೇಡಿಗಳು ಅದರಲ್ಲಿ ಸ್ಫೋಟಕ ಪದಾರ್ಥ ಇರಿಸಿದ್ದರು ಎಂದು ನಂತರ ತಿಳಿದುಬಂದಿತ್ತು. ಬಳಿಕ ಮನಸುಖ್‌ ಶವ ನಿಗೂಢವಾಗಿ ಇತ್ತೀಚೆಗೆ ಪತ್ತೆಯಾಗಿತ್ತು. ‘ಮನಸುಖ್‌ ಸಾವಿನ ಹಿಂದೆ ವಾಝೆ ಇದ್ದಾರೆ’ ಎಂದು ಮನಸುಖ್‌ ಪತ್ನಿ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ವಾಝೆ ಸಲ್ಲಿಸಿದ್ದ ಜಾಮೀನು ಅರ್ಜಿ ಶನಿವಾರ ತಿರಸ್ಕಾರಗೊಂಡಿತ್ತು. ಇದರ ಬೆನ್ನಲ್ಲೇ ಅವರ ಬಂಧನ ನಡೆದಿದೆ.

ವಾಝೆಗೆ ಶಿವಸೇನೆ ಬೆಂಬಲ:

ಈ ನಡುವೆ, ವಾಝೆ ಬೆಂಬಲಕ್ಕೆ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ನಿಂತಿದೆ. ‘ವಾಝೆ ಪ್ರಾಮಾಣಿಕ ಅಧಿಕಾರಿ ಎಂಬುದು ನನ್ನ ನಂಬಿಕೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ತಂಡದ ತನಿಖೆ ಬೇಡವಾಗಿತ್ತು. ಮುಂಬೈ ಪೊಲೀಸರೇ ಸಮರ್ಥರಿದ್ದರು’ ಎಂದು ಶಿವಸೇನೆ ವಕ್ತಾರ ಸಂಜಯ ರಾವುತ್‌ ಹೇಳಿದ್ದಾರೆ.

click me!