2ನೇ ದಿನವೂ ಇಂಡಿಗೋ ಟ್ರಬಲ್ : 550 ವಿಮಾನಗಳ ಸಂಚಾರ ರದ್ದು

Kannadaprabha News   | Kannada Prabha
Published : Dec 05, 2025, 04:24 AM IST
Indigo Flight

ಸಾರಾಂಶ

ಸಿಬ್ಬಂದಿ ಕೊರತೆಯಿಂದಾಗಿ ಇಂಡಿಗೋ ಗುರುವಾರವೂ ತನ್ನ 550ಕ್ಕೂ ಅಧಿಕ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ. ಜತೆಗೆ ಹಲವು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು 2ನೇ ದಿನವೂ ಪರದಾಡುವಂತಾಗಿದೆ.

ಮುಂಬೈ: ಸಿಬ್ಬಂದಿ ಕೊರತೆಯಿಂದಾಗಿ ಇಂಡಿಗೋ ಗುರುವಾರವೂ ತನ್ನ 550ಕ್ಕೂ ಅಧಿಕ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ. ಜತೆಗೆ ಹಲವು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು 2ನೇ ದಿನವೂ ಪರದಾಡುವಂತಾಗಿದೆ. ಅತ್ತ ಪರಿಸ್ಥಿತಿಯ ಲಾಭ ಪಡೆದು ಅನ್ಯ ವಿಮಾನಯಾನ ಸಂಸ್ಥೆಗಳ ಟಿಕೆಟ್‌ ದರ ಗಗನಕ್ಕೇರಿ ಕುಳಿತು ಪ್ರಯಾಣಿಕರನ್ನು ಹೈರಾಣಾಗಿಸಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 50, ದೆಹಲಿಯಲ್ಲಿ 95, ಮುಂಬೈನಲ್ಲಿ 85, ಹೈದರಾಬಾದ್‌ನಲ್ಲಿ 70 ಇಂಡಿಗೋ ವಿಮಾನಗಳು ಹಾರಾಟ ನಡೆಸಿಲ್ಲ. ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ದ ಸಿಬ್ಬಂದಿ ವಿಮಾನಯಾನ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಕಾರಣವೇನು?:

ಅಪಘಾತಗಳನ್ನು ತಗ್ಗಿಸುವ ಉದ್ದೇಶದಿಂದ ‘ವಿಮಾನ ಕೆಲಸದ ಸಮಯದ ಮಿತಿಗಳು’ ಎಂಬ (ಎಫ್‌ಡಿಟಿಎಲ್‌) ಹೊಸ ನಿಯಮವನ್ನು ನ.1ರಿಂದ ಜಾರಿಗೊಳಿಸಲಾಗಿದೆ. ಇದರ ಪ್ರಕಾರ, ಓರ್ವ ಸಿಬ್ಬಂದಿ ದಿನಕ್ಕೆ 8 ಗಂಟೆ, ವಾರಕ್ಕೆ 35 ಗಂಟೆ, ತಿಂಗಳಿಗೆ 125 ಗಂಟೆ ಮತ್ತು ವರ್ಷಕ್ಕೆ 1,000 ಗಂಟೆಗಳ ಹಾರಾಟ ಮಾತ್ರ ನಡೆಸಬೇಕು. ವಾರದಲ್ಲಿ 2 ಬಾರಿಯಷ್ಟೇ ರಾತ್ರಿ ವೇಳೆ ಪೈಲಟ್‌ ವಿಮಾನವನ್ನು ಲ್ಯಾಂಡ್‌ ಮಾಡಬಹುದು. ಎಫ್‌ಡಿಟಿಎಲ್‌ ಅಳವಡಿಕೆಯಿಂದಾಗಿ ಪೈಲಟ್‌ಗಳ ಕೆಲಸದ ಅವಧಿಗೆ ಹೊಸ ಮಿತಿ ಹೇರಲಾಗಿದ್ದು, ಇಂಡಿಗೋ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಜತೆಗೆ, 2 ವರ್ಷಗಳಿಂದ ಹೊಸ ನೇಮಕಾತಿಗಳನ್ನು ಮಾಡಿಕೊಂಡಿಲ್ಲವಾದ ಕಾರಣ, 2,300 ವಿಮಾನಗಳನ್ನು ಹೊಂದಿರುವ ಸಂಸ್ಥೆಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಪೈಲಟ್‌ಗಳ ಆಗ್ರಹ:

‘ಸುರಕ್ಷತಾ ನಿಯಮಗಳ ಅನುಸಾರ ಸಾಕಷ್ಟು ಪೈಲಟ್‌ ಹಾಗೂ ಸಿಬ್ಬಂದಿ ಇದ್ದಾರೆಂದು ಸಾಬೀತಾಗುವ ವರೆಗೆ, ಇಂಡಿಗೋ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬಾರದು. ಸಿಬ್ಬಂದಿಯ ವ್ಯವಸ್ಥೆ ಸಾಧ್ಯವಾಗದಿದ್ದಲ್ಲಿ, ಕೆಲವೇ ವಿಮಾನಗಳ ಹಾರಾಟಕ್ಕೆ ಅನುಮತಿಸಬೇಕು. ಈ ಮೂಲಕ ವಿಮಾನ ವಿಳಂಬ, ರದ್ದತಿಯಂತಹ ಸಮಸ್ಯೆಗಳನ್ನು ತಪ್ಪಿಸಬೇಕು’ ಎಂದು ಪೈಲಟ್‌ಗಳ ಒಕ್ಕೂಟ ಡಿಜಿಸಿಎಗೆ ಒತ್ತಾಯಿಸಿದೆ.

ಏರಿಂಡಿಯಾ ದರ ಗಗನಮುಖಿ:

ಹಲವು ಇಂಡಿಗೋ ವಿಮಾನಗಳು ರದ್ದಾದ ಕಾರಣ, ಏರಿಂಡಿಯಾ ಸೇರಿದಂತೆ ಅನ್ಯ ವಿಮಾನಯಾನ ಸಂಸ್ಥೆಗಳ ಟಿಕೆಟ್ ದರಗಳು ಕೊನೆ ಕ್ಷಣದಲ್ಲಿ ಭಾರೀ ದುಬಾರಿಯಾಗಿವೆ. ಹೈದರಾಬಾದ್‌ನಿಂದ ಭೋಪಾಲ್‌ಗೆ ಹೋಗುವ ಏರಿಂಡಿಯಾ ಟಿಕೆಟ್‌ ದರ ಬುಧವಾರ 1.3 ಲಕ್ಷ ರು. ಆಗಿತ್ತು. ದೆಹಲಿ ಹಾಗೂ ಮುಂಬೈ ಮಾರ್ಗವಾಗಿ ಸಾಗುವ ವಿಮಾನಗಳಲ್ಲಿ ಎಕಾನಮಿ ಸೀಟ್‌ಗೆ 1.03 ಲಕ್ಷ ರು. ಮತ್ತು ಬಿಸ್ನೆಸ್‌ ಕ್ಲಾಸ್‌ಗೆ 1.3 ಲಕ್ಷ ರು. ಆಗಿದೆ. ಅತ್ತ ವಿಶಾಖಪಟ್ಟಣಂ ವಿಮಾನದ ಎಕಾನಮಿ ದರ 69,787 ರು. ಆಗಿದ್ದರೆ, ಭುವನೇಶ್ವರಕ್ಕೆ 27,417 ರು. ಆಗಿತ್ತು.

ಇಂಡಿಗೋ ಸಿಇಒ ಕ್ಷಮೆ:

ಇಂಡಿಗೋ ವಿಮಾನಸೇವೆಯನ್ನು ಭಾರೀ ವ್ಯತ್ಯಯ ಉಂಟಾಗಿರುವ ನಡುವೆಯೇ, ಸಂಸ್ಥೆಯ ಸಿಇಒ ಪೀಟರ್‌ ಎಲ್‌ಬರ್ಸ್‌ ಇ-ಮೇಲ್‌ ಮೂಲಕ ಉದ್ಯೋಗಿಗಳ ಕ್ಷಮೆ ಯಾಚಿಸಿದ್ದಾರೆ. ‘ಕಳೆದ ಕೆಲ ದಿನಗಳಿಂದ ಇಂಡಿಗೋ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಹಲವು ತೊಂದರೆಗಳಾಗಿವೆ. ಎಲ್ಲರಿಗೂ ಒಳ್ಳೆ ಸೇವೆ ಹಾಗೂ ಅನುಭವ ಒದಗಿಸುವುದಾಗಿ ನಾವು ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಆದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ಅದರಲ್ಲಿ ಬರೆದಿದ್ದಾರೆ.

ಮಹಾಪತನ:ವಿಳಂಬ ಮತ್ತು ರದ್ದತಿಯ ಪರಿಣಾಮವಾಗಿ, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಇಂಡಿಗೋದ ಸಮಯಪಾಲನೆ ಶೇ.19.7ಕ್ಕೆ ಇಳಿದಿದೆ. ಡಿ.2ರಂದು ಇದು ಶೇ.35ರಷ್ಟಿತ್ತು. ಅತ್ತ ಸಂಸ್ಥೆಯ ಷೇರುಗಳು ಸಹ ಶೇ.3ರಷ್ಟು ಕುಸಿತ ಕಂಡವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಗಾಳದಲ್ಲಿ ಬಾಬ್ರಿ ಮಸೀದಿ ಕಟ್ಟುವೆ ಎಂದಿದ್ದ ಶಾಸಕ ಟಿಎಂಸಿಯಿಂದ ವಜಾ
ಪುಟಿನ್‌ ಭಾರತಕ್ಕೆ ಬಂದ ಹೊತ್ತಲ್ಲಿಯೇ ಭಾರತಕ್ಕೆ ಮತ್ತೆ ವಿಲನ್‌ ಆದ ಡೊನಾಲ್ಡ್‌ ಟ್ರಂಪ್‌!