ಆಂಧ್ರದಲ್ಲಿ ಕೋವಿಡ್-19ಗೆ 4 ಜನ ಮೃತಪಟ್ಟ ಬೆನ್ನಲ್ಲೇ ಹೊಸ ರೂಪಾಂತರಿ ತಳಿ ಪತ್ತೆ! ಏನಿದು ಒಮಿಕ್ರಾನ್ RF.5?

Published : Jul 21, 2026, 04:10 PM IST
covid omicron

ಸಾರಾಂಶ

ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಕೋವಿಡ್-19ರ ಹೊಸ ರೂಪಾಂತರಿ 'ಆರ್‌ಎಫ್.5' ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ತಜ್ಞರ ಪ್ರಕಾರ, ಇದು ಒಮಿಕ್ರಾನ್‌ನ ಉಪ-ವಂಶಾವಳಿಯಾಗಿದ್ದು, ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲವಾದರೂ, ವಯಸ್ಸಾದವರು ಮತ್ತು ಇತರ ಕಾಯಿಲೆಗಳಿರುವವರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಲಾಗಿದೆ.

ಅಮರಾವತಿ: 2019 ರಿಂದ 2022ರ ಅವಧಿಯಲ್ಲಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿ, ಆ ಬಳಿಕ ನಿಯಂತ್ರಣಕ್ಕೆ ಬಂದಿದ್ದ ಕೋವಿಡ್-19 ವೈರಾಣು ಇದೀಗ ರೂಪಾಂತರಗೊಂಡು ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ರಾಜ್ಯದ ಕಡಪ ಜಿಲ್ಲೆಯಲ್ಲಿ ಪತ್ತೆಯಾದ ಕೋವಿಡ್ ಪಾಸಿಟಿವ್ ಮಾದರಿಗಳ ಜೀನೋಮ್ ಅನುಕ್ರಮ (Genome Sequencing) ಪರೀಕ್ಷೆಯ ನಂತರ, ಒಮಿಕ್ರಾನ್‌ನ ಹೊಸ ಉಪ-ವಂಶಾವಳಿಯಾದ ‘ಆರ್‌ಎಫ್.5’ (Omicron RF.5) ರೂಪಾಂತರಿ ತಳಿ ಪತ್ತೆಯಾಗಿದೆ ಎಂದು ಆಂಧ್ರಪ್ರದೇಶದ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಅವರು ಅಧಿಕೃತವಾಗಿ ತಿಳಿಸಿದ್ದಾರೆ. 

ಈ ಸುದ್ದಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದರೂ, ಆರೋಗ್ಯ ಅಧಿಕಾರಿಗಳು ಹಾಗೂ ವೈದ್ಯಕೀಯ ತಜ್ಞರು ಸದ್ಯಕ್ಕೆ ಭಯ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ವಾರ ಆಂಧ್ರದಲ್ಲಿ ಕೊರೊನಾಗೆ 4 ಜನ ಮೃತಪಟ್ಟು ಹಲವು ಪ್ರಕರಣಗಳು ಸಕ್ರೀಯವಾಗಿತ್ತು. ಇದೀಗ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ.

ಪುಣೆ ವೈರಾಲಜಿ ಲ್ಯಾಬ್‌ನಿಂದ ದೃಢೀಕರಣ

ಕಡಪ ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದ ನಾಲ್ಕು ವ್ಯಕ್ತಿಗಳ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪುಣೆಯಲ್ಲಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ (NIV) ತಪಾಸಣಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈ ಜೀನೋಮ್ ಸೀಕ್ವೆನ್ಸಿಂಗ್ ವರದಿಯಲ್ಲಿ ನಾಲ್ವರಲ್ಲೂ ಒಮಿಕ್ರಾನ್‌ನ ಹೊಸ ಉಪ-ತಳಿಯಾದ ಆರ್‌ಎಫ್.5 ಇರುವುದು ಪತ್ತೆಯಾಗಿದೆ. ವಿಶ್ವದಾದ್ಯಂತ ಗುರುತಿಸಲಾಗಿರುವ ಹಲವು ಓಮಿಕ್ರಾನ್ ಉಪ-ವಂಶಾವಳಿಗಳಲ್ಲಿ ಈ ಆರ್‌ಎಫ್.5 ಕೂಡ ಒಂದಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಏನಿದು ಒಮಿಕ್ರಾನ್ ಆರ್‌ಎಫ್.5 (RF.5) ರೂಪಾಂತರಿ?

ಎಲೈಟ್ ಕೇರ್ ಕ್ಲಿನಿಕ್‌ನ ಕನ್ಸಲ್ಟೆಂಟ್ ವೈದ್ಯರಾದ ಡಾ. ಪಲ್ಲೇಟಿ ಶಿವ ಕಾರ್ತಿಕ್ ರೆಡ್ಡಿ ಅವರ ಪ್ರಕಾರ, "ಆರ್‌ಎಫ್.5 ಎಂಬುದು ಒಮಿಕ್ರಾನ್‌ನ ಒಂದು ಮರುಸಂಯೋಜಿತ (Recombinant) ಉಪ-ವಂಶಾವಳಿಯಾಗಿದೆ. ಪರಸ್ಪರ ನಿಕಟ ಸಂಬಂಧ ಹೊಂದಿರುವ ಎರಡು ಕೊರೊನಾವೈರಸ್ ವಂಶಾವಳಿಗಳು ತಮ್ಮ ಆನುವಂಶಿಕ ವಸ್ತುಗಳನ್ನು (Genetic Material) ಪರಸ್ಪರ ವಿನಿಮಯ ಮಾಡಿಕೊಂಡಾಗ ಇಂತಹ ಮರುಸಂಯೋಜಿತ ರೂಪಾಂತರಗಳು ಸೃಷ್ಟಿಯಾಗುತ್ತವೆ. ಇದು ವೈರಸ್‌ಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸುವ ನೈಸರ್ಗಿಕ ವಿಕಸನದ ಭಾಗವೇ ಹೊರತು, ಹೊಸ ರೂಪಾಂತರ ಬಂದ ತಕ್ಷಣ ಅದು ಹೆಚ್ಚು ಅಪಾಯಕಾರಿ ಎಂದು ಅರ್ಥವಲ್ಲ" ಎಂದು ವಿವರಿಸಿದ್ದಾರೆ.

ಕಣ್ಗಾವಲು ಹೆಚ್ಚಿಸಿದ ಆರೋಗ್ಯ ಇಲಾಖೆ

ಹೊಸ ತಳಿ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಅವರು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಪರಿಶೀಲಿಸಿದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ಜುಲೈ 16 ರವರೆಗೆ ದಾಖಲಾದ 12 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಸದ್ಯ ಒಟ್ಟು 16 ಕೋವಿಡ್-19 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್‌ಗಳು, ಹಾಸಿಗೆಗಳು, ಪರೀಕ್ಷಾ ಕಿಟ್‌ಗಳು ಹಾಗೂ ಅಗತ್ಯ ಔಷಧಿಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ ಎಂದು ಆಂಧ್ರಪ್ರದೇಶದ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ವಿಷ್ಣುವರ್ಧನ್ ತಿಳಿಸಿದ್ದಾರೆ.

ವಿಜ್ಞಾನಿಗಳು ಈ ತಳಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದೇಕೆ?

ಆರ್‌ಎಫ್.5 ತಳಿಯು ಈ ಹಿಂದೆ ಬಂದಿದ್ದ ಕೋವಿಡ್ ಸೋಂಕು ಅಥವಾ ವ್ಯಾಕ್ಸಿನೇಷನ್ (ಲಸಿಕೆ) ಮೂಲಕ ಮಾನವನ ದೇಹದಲ್ಲಿ ಉತ್ಪತ್ತಿಯಾಗಿರುವ ರೋಗನಿರೋಧಕ ಪ್ರತಿಕಾಯಗಳನ್ನು (Antibodies) ಕೊಂದು ದೇಹವನ್ನು ಪ್ರವೇಶಿಸುವ ಆನುವಂಶಿಕ ರೂಪಾಂತರಗಳನ್ನು ಹೊಂದಿದೆ. ಹೀಗಾಗಿಯೇ ವಿಜ್ಞಾನಿಗಳು ಇದರ ಮೇಲೆ ನಿಗಾ ಇರಿಸಿದ್ದಾರೆ. ಆದರೆ, ಮಾನವ ದೇಹದಲ್ಲಿನ 'ಟಿ-ಕೋಶ' (T-Cell) ರಕ್ಷಣೆಯು ತೀವ್ರವಾದ ಕಾಯಿಲೆಯ ವಿರುದ್ಧ ಹೋರಾಡುವುದನ್ನು ಮುಂದುವರಿಸುವುದರಿಂದ, ವೈರಸ್ ನಮ್ಮ ರೋಗನಿರೋಧಕ ಶಕ್ತಿಯಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಸಿಂಗಾಪುರ ಹಾಗೂ ಆಗ್ನೇಯ ಏಷ್ಯಾದ ಕೆಲವು ದೇಶಗಳಲ್ಲಿಯೂ ಈ ತಳಿ ಕಾಣಿಸಿಕೊಂಡಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಗಮನಿಸಿದೆ.

ಲಕ್ಷಣಗಳೇನು? ಯಾರಿಗೆ ಅಪಾಯ ಹೆಚ್ಚು?

ಈ ಹೊಸ ತಳಿಯ ಲಕ್ಷಣಗಳು ಸಾಮಾನ್ಯ ಕಾಲೋಚಿತ ಉಸಿರಾಟದ ಸೋಂಕಿನಂತೆಯೇ ಇರಲಿವೆ. ಸೋಂಕಿತರಲ್ಲಿ ಜ್ವರ, ಗಂಟಲು ನೋವು, ನಿರಂತರ ಕೆಮ್ಮು, ಅತಿಯಾದ ಆಯಾಸ, ತಲೆನೋವು ಮತ್ತು ಮೈಕೈ ನೋವು ಕಾಣಿಸಿಕೊಳ್ಳಬಹುದು. ಸಾಮಾನ್ಯ ಆರೋಗ್ಯವಂತರು ಇದರಿಂದ ಬೇಗನೆ ಚೇತರಿಸಿಕೊಳ್ಳುತ್ತಾರೆ. ಆದರೆ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಜಗದೀಶ್ ಹಿರೇಮಠ್ ಅವರ ಪ್ರಕಾರ, ವಯಸ್ಸಾದವರು ಹಾಗೂ ಮಧುಮೇಹ (Diabetes), ಹೃದ್ರೋಗ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು.

ಪ್ರಸ್ತುತ ಇರುವ ಲಸಿಕೆಗಳು ಕೆಲಸ ಮಾಡುತ್ತವೆಯೇ?

ಖಂಡಿತವಾಗಿಯೂ ಕೆಲಸ ಮಾಡುತ್ತವೆ. ಹೊಸ ರೂಪಾಂತರಗಳ ವಿರುದ್ಧ ಅಸ್ತಿತ್ವದಲ್ಲಿರುವ ಲಸಿಕೆಗಳು ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗದೇ ಇದ್ದರೂ, ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವುದನ್ನು ಹಾಗೂ ಸಾವಿನ ಅಪಾಯವನ್ನು ತಪ್ಪಿಸಲು ಲಸಿಕೆಗಳು ಬಲವಾದ ರಕ್ಷಣೆ ನೀಡುವುದರಿಂದ, ಲಸಿಕೆ ಪಡೆದುಕೊಳ್ಳುವುದು ಅತ್ಯಂತ ಸುರಕ್ಷಿತ ಮಾರ್ಗವಾಗಿದೆ.

ತಜ್ಞರ ಅಂತಿಮ ಸಲಹೆ: ಆರ್‌ಎಫ್.5 ಪತ್ತೆಯಾಗಿರುವುದು ಕೇವಲ ಜೀನೋಮಿಕ್ ಕಣ್ಗಾವಲಿನ ಯಶಸ್ಸನ್ನು ತೋರಿಸುತ್ತದೆಯೇ ಹೊರತು ಯಾವುದೇ ತುರ್ತು ಪರಿಸ್ಥಿತಿಯನ್ನಲ್ಲ. ಸಾರ್ವಜನಿಕರು ಭಯಭೀತರಾಗದೆ ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆ ಕಾಪಾಡುವುದು ಹಾಗೂ ಅನಾರೋಗ್ಯ ಕಂಡುಬಂದಲ್ಲಿ ಐಸೋಲೇಟ್ ಆಗುವ ಮೂಲಕ ಜಾಗರೂಕರಾಗಿರಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖಾಸಗಿ ಆಸ್ಪತ್ರೆಗೆ ಸೋನಮ್‌ ವಾಂಗ್ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್‌ ಅಸ್ತು, ಷರತ್ತು ವಿಧಿಸಿದ ಕೇಂದ್ರ ಸರ್ಕಾರ
Jantar mantar: ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸೋದು ಕೇಂದ್ರದ ಹಳೇ ಚಾಳಿ: ಮೋದಿ ಸರ್ಕಾರದ ವಿರುದ್ಧ ಒವೈಸಿ ವಾಗ್ದಾಳಿ!