
ಬೆಂಗಳೂರು (ಮೇ.12): ಸೋಶಿಯಲ್ ಮೀಡಿಯಾದಲ್ಲಿ ಹಿಂದೊಮ್ಮೆ ತನಿಷ್ಕ್ ಜ್ಯುವೆಲ್ಲರಿ, ಓರಾ ಜ್ಯುವೆಲ್ಲರಿ ಹಾಗೂ ಫ್ಯಾಬ್ ಇಂಡಿಯಾ ಸಂಸ್ಥೆಯ ಜಾಹೀರಾತುಗಳು ಟೀಕೆಗೆ ಗುರಿಯಾಗಿದ್ದವು. ಅದಕ್ಕೆ ಕಾರಣ ಈ ಕಂಪನಿಗಳು ತಮಗೆ ಸಂಬಂಧವೇ ಇಲ್ಲದ ವಿಚಾರಗಳಿಗೆ ಮೂಗು ತೂರಿಸಿ ಜಾಹೀರಾತು ಮಾಡಿ, ವಿಚಾರಗಳ ಹೇರಿಕೆ ಮಾಡಿದ್ದಕ್ಕೆ ಟೀಕೆ ಎದುರಿಸಿದ್ದರು. ಈಗ ಟಾಟಾ ಮಾಲೀಕತ್ವದ ಮತ್ತೊಂದು ಸಂಸ್ಥೆ ಸ್ಟಾರ್‌ಬಕ್ಸ್ ಭಾರತದಲ್ಲಿ ಬಿಡುಗಡೆ ಮಾಡಿರುವ ಹೊಸ ಜಾಹೀರಾತು ಕೂಡ ಇದೇ ರೀತಿಯ ವಿವಾದಕ್ಕೆ ಕಾರಣವಾಗಿದೆ. ವಿವಿಧ ರೀತಿಯ ಕಾಫಿಗಳ ಸೇವೆಯನ್ನು ನೀಡುವ ಸ್ಟಾರ್‌ಬಕ್ಸ್ ತನ್ನ ಹೊಸ ಜಾಹೀರಾತಿನಲ್ಲಿ ಟ್ರಾನ್ಸ್‌ಜೆಂಡರ್ ಹಕ್ಕುಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದೆ. ಆದರೆ, ಸಂಪ್ರದಾಯವಾದಿ ಭಾರತದಲ್ಲಿ ಈ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. 'ಕಾಫಿಗೂ..ಸೆಕ್ಸ್ ಚೇಂಜ್‌ಗೂ ಏನು ಸಂಬಂಧ..' ಎಂದು ಪ್ರಶ್ನೆ ಮಾಡಿರುವ ಜನರು, ಇಂಥ ಜಾಹೀರಾತು ಪ್ರಕಟಿಸುವ ಮೂಲಕ ದೇಶದಲ್ಲಿ ಲಿಂಗಪರಿವರ್ತನೆ ಮಾಡಿಕೊಳ್ಳುವ ವಿಚಾರವನ್ನು ಸಾಮಾನ್ಯ ಎಂದು ಬಿಂಬಿಸಬೇಡಿ ಎಂದು ಬರೆದಿದ್ದಾರೆ. ದೇಶದಲ್ಲಿ ಸಲಿಂಗಿ ವಿವಾಹಕ್ಕೆ ಮಾನ್ಯತೆ ನೀಡುವ ಬಗ್ಗೆ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಎಲ್‌ಜಿಬಿಟಿ ಸಮುದಾಯ ಏನಾಗಬಹುದು ಎನ್ನುವ ಆತಂಕದಲ್ಲಿದ್ದರೆ, ಸ್ಟಾರ್ ಬಕ್ಸ್ ಮಾಡಿರುವ ಈ ಜಾಹೀರಾತು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಏನಿದೆ ಜಾಹೀರಾತಿನಲ್ಲಿ: ನಗರಪ್ರದೇಶವೊಂದರಲ್ಲಿ ಇರುವ ಕಾಫಿ ಶಾಪ್‌ನ ಒಳಗೆ ಕುಳಿತುಕೊಂಡಿರುವ ವಯಸ್ಸಾದ ದಂಪತಿಗಳು ತಮ್ಮ ಮಗು 'ಅರ್ಪಿತ್' ನನ್ನು ಕಾಣಲು ಬಂದಿರುತ್ತಾರೆ. ಇತ್ತೀಚೆಗಷ್ಟೇ ಲಿಂಗ ಪರಿವರ್ತನೆ ಮಾಡಿಕೊಂಡು ಆತನೀಗ 'ಅರ್ಪಿತಾ' ಎನ್ನು ಹೆಸರಿನಿಂದ ಗುರುತಿಸಿಕೊಂಡಿದ್ದಾಳೆ. ಮಗ ಮಾಡಿದ್ದ ನಿರ್ಧಾರ ಅಪ್ಪನ ಸಿಟ್ಟಿಗೆ ಕಾರಣವಾಗಿದ್ದರೆ, ಸಮಾಧಾನ ಪಡಿಸುವ ಆತನ ಪತ್ನಿ, 'ನೀವು ಕೇಳಿ ಈ ಬಾರಿ ಮತ್ತೆ ಕೋಪಗೊಳ್ಳಬೇಡಿ' ಎನ್ನುತ್ತಾಳೆ.
ಈ ಹಂತದಲ್ಲಿ ಕಾಫಿ ಶಾಪ್‌ಗೆ ಬರುವ ಅರ್ಪಿತಾ, ತಾಯಿ ಹಾಗೂ ತಂದೆಯ ಬಳಿ ಬಂದು ಅವರನ್ನು ಅಪ್ಪಿಕೊಳ್ಳುವ ರೀತಿ ಮಾಡುತ್ತಾಳೆ. ಈ ವೇಳೆ ಇಬ್ಬರೂ ಕೂಡ ಸಣ್ಣ ನಗು ಬೀರಿ ಸುಮ್ಮನಾಗುತ್ಥಾರೆ. 'ನನಗೆ ಗೊತ್ತು ಸಾಕಷ್ಟು ವರ್ಷವಾಯಿತು. ಆದರೂ ಈಗಲೂ ಕೂಡ ನೀವೇ ನನ್ನ ಜಗತ್ತು' ಎಂದು ಅರ್ಪಿತಾ ತಂದೆಯನ್ನು ನೋಡುತ್ತಾ ಹೇಳುತ್ತಾಳೆ. ನಂದು ಕ್ಷಣ ಯೋಚನೆ ಮಾಡುವ ತಂದೆ, ಇಬ್ಬರ ಬಳಿಗೂ ನೋಡಿ ಕಾಫಿ ಬೇಕಾ ಎನ್ನುವ ರೀತಿಯಲ್ಲಿ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಇಬ್ಬರಿಂದಲೂ ಹೌದು ಎನ್ನುವ ಉತ್ತರ ಬರುತ್ತದೆ. ಆರ್ಡರ್ ನೀಡಿ ವಾಪಾಸ್ ಬರುವ ತಂದೆ ಅರ್ಪಿತಾ ಜೊತೆ ಮಾತನಾಡಲು ಮುಂದುವರಿಯುತ್ತಾರೆ. ಈ ಹಂತದಲ್ಲಿ ಕಾಫಿ ಅಟೆಂಡೆಂಟ್, '3 ಕೋಲ್ಡ್ ಕಾಫೀಸ್ ಫಾರ್ ಅರ್ಪಿತಾ' ಎಂದು ಎರಡು ಬಾರಿ ಕರೆಯುತ್ತಾಳೆ.
ಕಾಫಿ ಮಾರುಕಟ್ಟೆಗೆ ರಿಲಯನ್ಸ್ ಎಂಟ್ರಿ; ಟಾಟಾ ಸ್ಟಾರ್ ಬಕ್ಸ್ ಗೆ ಹೊಸ ಪ್ರತಿಸ್ಪರ್ಧಿ
ಕಾಫಿ ಶಾಪ್‌ನಲ್ಲಿನ ಸ್ಪೀಕರ್‌ನಲ್ಲಿ ಹೊಸ ಹೆಸರನ್ನು ಘೋಷಿಸಿದಾಗ ಅರ್ಪಿತಾ ದಿಗ್ಭ್ರಮೆಗೊಳ್ಳುತ್ತಾಳೆ. ನಂತರ ತನ್ನ ತಂದೆಯ ಕಡೆಗೆ ತಿರುಗುತ್ತಾಳೆ, ಅವಳ ಕಣ್ಣುಗಳು ಆಶ್ಚರ್ಯದಿಂದ ತುಂಬಿ ಹೋಗಿರುತ್ತದೆ. ಕೊನೆಗೂ ತನ್ನ ಕುಟುಂಬ ತನ್ನ ನಿರ್ಧಾರವನ್ನು ಒಪ್ಪಿಕೊಂಡಿತು ಎನ್ನುವ ಖುಷಿ ಆಕೆಯ ಮುಖದಲ್ಲಿ ಕಾಣುತ್ತದೆ.
ಸ್ಟಾರ್‌ಬಕ್ಸ್ ಮುಂದೆ ಕೆನಡಾ ಪ್ರಜೆಯನ್ನು ಚಾಕುವಿನಿಂದ ಇರಿದು ಕೊಂದ ಭಾರತೀಯ
'ಇವರು ಕೇವಲ ಕಾಫಿ ಹಾಗೂ ಅದರ ಸೇವೆಯನ್ನು ಯಾಕೆ ಮಾತ್ರವೇ ಪ್ರಮೋಟ್ ಮಾಡಬಾರದು? ಹೌದು ಸ್ಟಾರ್‌ಬಕ್ಸ್ ಸೇವೆ ವಿಶ್ವದಲ್ಲಿಯೇ ಅತ್ಯುತ್ತಮವಾಗಿದೆ. ಆದರೆ, ಭಾರತದಲ್ಲಿ ಶೇ. 0.1ರಷ್ಟೂ ಜನರಿಗೆ ಅನ್ವಯವಾಗದ ವಿಚಾರಗಳನ್ನು ಜಾಹೀರಾತಿನಲ್ಲಿ ಅವರಿಗೆ ವಿನ್ಯಾಸ ಮಾಡಿಕೊಡೋದು ಯಾರು ಅನ್ನೋದೇ ಪ್ರಶ್ನೆ. ಬಹುಶಃ ಸ್ಟಾರ್ ಬಕ್ಸ್‌ನಿಂದ ದೂರ ಸರಿಯುವ ಸಮಯ ಬಂದಿದೆ ಎಂದು ಕಾಣುತ್ತಿದೆ' ಎಂದು ಅವರು ಬರೆದಿದ್ದಾರೆ. ಸ್ಟಾರ್ ಬಕ್ಸ್ ಅಸ್ವಾಭಾವಿಕವಾದ ಸೆಕ್ಸ್ ಚೇಂಜ್‌ಗೆ ಪ್ರಮೋಟ್ ಮಾಡುತ್ತಿದೆ. ಹದಿಹರೆಯದವರಲ್ಲಿ ಸ್ಟಾರ್‌ಬಕ್ಸ್ ಪಾಪ್ಯುಲರ್ ಆಗಿದೆ. ಇದು ಅವರುಗೆ ನೇರವಾಗಿ ಟಾರ್ಗೆಟ್ ಮಾಡಿರುವಂಥ ವಿಚಾರ. ತಮ್ಮ ಪಾಲಕರಿಗೂ ಹೇಳದೇ ಇದನ್ನು ಪಾಲಿಸಲು ಹೋಗುತ್ತಾರೆ. ಇದು ಪಾಲಕರು ಹಾಗೂ ಮಕ್ಕಳ ನಡುವಿನ ಗಲಾಟೆಗೆ ಕಾರಣವಾಗುತ್ತದೆ' ಎಂದು ಇನ್ನೊಬ್ಬರು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ