'ಅಪ್ಪಾ ಇದೇ ಪ್ರಶ್ನೆ ಬರುತ್ತೆ..'! NEET ಹಗರಣದಲ್ಲಿ ಬೆಚ್ಚಿಬೀಳಿಸೋ ಟ್ವಿಸ್ಟ್; ಹಗರಣ ಬಯಲಾಗಿದ್ದು ಹೇಗೆ?

Kannadaprabha News   | Kannada Prabha
Published : May 13, 2026, 05:14 AM IST
NEET exam scam shocking twist 23 lakh students shocked cbi probe after exam cancelled rav

ಸಾರಾಂಶ

ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ನೀಟ್‌-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಈ ಹಗರಣವು ಮಹಾರಾಷ್ಟ್ರದಿಂದ ಆರಂಭವಾಗಿ, ಪ್ರಶ್ನೆಪತ್ರಿಕೆಯು 28 ಲಕ್ಷ ರೂಪಾಯಿವರೆಗೆ ಮಾರಾಟವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕೇಂದ್ರ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ.

ನವದೆಹಲಿ (ಮೇ.13): ಪ್ರಶ್ನೆಪತ್ರಿಕೆ ಸೋರಿಕೆ ಕಾರಣ ನೀಟ್‌-ಯುಜಿ ಪರೀಕ್ಷೆ ರದ್ದು ಮಾಡಿದ ಬೆನ್ನಲ್ಲೇ ಸರ್ಕಾರದ ಮೇಲೆ ಮುಗಿಬಿದ್ದಿರುವ ವಿಪಕ್ಷಗಳು, ಇದು ಆಡಳಿತ ವೈಫಲ್ಯ ಎಂದು ಆರೋಪಿಸಿವೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಪ್ರಧಾನಿ ಮೋದಿ ಅವರ ಅಮೃತಕಾಲವು ಈಗ ವಿಷ ಕಾಲವಾಗಿ ಪರಿವರ್ತಿತವಾಗಿದೆ’ ಎಂದು ಎಕ್ಸ್‌ನಲ್ಲಿ ಬೆಂಕಿ ಕಾರಿದ್ದಾರೆ. ಕಳೆದ 9 ವರ್ಷದಲ್ಲಿ 4 ಬಾರಿ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ ಎಂದಿರುವ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌, ಪ್ರತಿಭಟನೆ ನಡೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಉಳಿದಂತೆ ಟಿಎಂಸಿ, ಆರ್‌ಜೆಡಿ, ಸಿಪಿಐ(ಎಂ) ಕೂಡ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿವೆ.

 ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗಾಗಿ ದೇಶಾದ್ಯಂತ ಮೇ 3ರಂದು ನಡೆದಿದ್ದ ನೀಟ್‌ (ಯುಜಿ) 2026 ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಳಿಸಿ ನ್ಯಾಷನಲ್‌ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಮಂಗಳವಾರ ಆದೇಶ ಹೊರಡಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದತಿಗೆ ಸಂಬಂಧಿಸಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಲವೆಡೆ ಪ್ರತಿಭಟನೆಗಳು ನಡೆದಿವೆ. ಈ ನಡುವೆ ಅಕ್ರಮ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಸಿಬಿಐಗೆ ನಿರ್ದೇಶನ ನೀಡಿದೆ. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನದ ವಿಶೇಷ ಕಾರ್ಯಪಡೆ ಪೊಲೀಸರು 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ನೀಟ್‌ ಪ್ರಶ್ನೆಪತ್ರಿಕೆ ಮಹಾರಾಷ್ಟ್ರದ ನಾಸಿಕ್‌ ಅಥವಾ ಪುಣೆಯಿಂದ ಸೋರಿಕೆಯಾಗಿದೆ ಎಂದು ಹೇಳಲಾಗಿದ್ದು, 30 ಸಾವಿರದಿಂದ 28 ಲಕ್ಷ ರು.ವರೆಗೆ ಮಾರಾಟವಾಗಿದೆ. 410 ಪ್ರಶ್ನೆಗಳ ಅಭ್ಯಾಸ ಪ್ರಶ್ನೆಪತ್ರಿಕೆಗಳ ರೂಪದಲ್ಲಿ ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿದ್ದು, ಇವುಗಳಲ್ಲಿದ್ದ 120 ಪ್ರಶ್ನೆಗಳು ನೀಟ್‌ ಪ್ರಶ್ನೆಪತ್ರಿಕೆಯಲ್ಲಿ ಪುನರಾವರ್ತನೆಯಾಗಿವೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎನ್‌ಟಿಎಯು ಅನಿವಾರ್ಯವಾಗಿ ಪರೀಕ್ಷೆಯನ್ನೇ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ.

ಈ ಹಿಂದೆಯೂ ನೀಟ್‌ ಪರೀಕ್ಷೆ ವೇಳೆ ಅಕ್ರಮದ ಆರೋಪ ಕೇಳಿಬಂದಿತ್ತಾದರೂ ಈ ರೀತಿ ಪರೀಕ್ಷೆ ರದ್ದು ಮಾಡುತ್ತಿರುವುದು ಇದೇ ಮೊದಲು. ಮರುಪರೀಕ್ಷೆ ದಿನಾಂಕವನ್ನು ಮುಂದಿನ 8-10 ದಿನಗಳಲ್ಲಿ ಪ್ರಕಟಿಸುವುದಾಗಿ ಎನ್‌ಟಿಎ ತಿಳಿಸಿದೆ.

‘ಪರೀಕ್ಷೆ ರದ್ದು ಮಾಡುವ ನಿರ್ಧಾರವನ್ನು ಪಾರದರ್ಶಕತೆ ಕಾಯ್ದುಕೊಳ್ಳುವ ಮತ್ತು ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕೈಗೊಳ್ಳಲಾಗಿದೆ’ ಎಂದು ಎನ್‌ಟಿಎ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೊಂಡಿದೆ.

ಮೇ 3ರಂದು ಬೆಂಗಳೂರು ಸೇರಿ ದೇಶದ 551 ನಗರಗಳಲ್ಲಿ ಮತ್ತು ವಿದೇಶದ 14 ನಗರಗಳಲ್ಲಿ ನಡೆದಿದ್ದ ನೀಟ್‌ ಪರೀಕ್ಷೆಗೆ ಸುಮಾರು 23 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು.

ನಾಸಿಕ್‌ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಲೀಕ್‌ ಆಯ್ತಾ ಪ್ರಶ್ನೆ ಪತ್ರಿಕೆ?

ಪ್ರಶ್ನೆಪತ್ರಿಕೆಯು ನಾಸಿಕ್‌ನಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸುವ ಪ್ರೆಸ್‌ನಿಂದಲೇ ಲೀಕ್‌ ಆಗಿರುವ ಶಂಕೆ ಇದೆ. ಪ್ರೆಸ್‌ಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಒಂದು ಪ್ರತಿಯನ್ನು ಆರೋಪಿಗಳಿಗೆ ವರ್ಗಾಯಿಸಿದ್ದಾರೆ. ಆ ಬಳಿಕ ಅದು ಹರ್ಯಾಣದ ಗುರುಗ್ರಾಮದ ವೈದ್ಯರೊಬ್ಬರನ್ನು ತಲುಪಿದೆ. ವೈದ್ಯನಿಂದ ಜೈಪುರದ ಜಾಮ್ವಾ ರಾಮಗಢ ಮೂಲದ ಖಟಿಕ್‌ ಎಂಬ ವ್ಯಕ್ತಿಗೆ, ಅವನಿಂದ ರಾಜಸ್ಥಾನದ ಸಿಕಾರ್‌ನ ರಾಕೇಶ್ ಕುಮಾರ್‌ ಎಂಬ ವ್ಯಕ್ತಿಯನ್ನು ತಲುಪಿತು. ಆತ ಪ್ರಮುಖ ಕೋಚಿಂಗ್‌ ಸಂಸ್ಥೆಗಳಿಗೆ ತಲುಪಿಸಿದ್ದಾನೆ. ಪರೀಕ್ಷೆಗೆ 4 ದಿನ ಮೊದಲು ನಾಗ್ಪುರದಿಂದ ಸಿಕಾರ್‌ಗೆ ಆಗಮಿಸಿದ್ದ ವಿದ್ಯಾರ್ಥಿಯೊಬ್ಬ 28 ಲಕ್ಷ ರು. ಕೊಟ್ಟು ಪ್ರಶ್ನೆಪತ್ರಿಕೆ ಖರೀದಿಸಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಅಪ್ಪಾ ಇದೇ ಪ್ರಶ್ನೆ ಬರುತ್ತೆ!

ಆರೋಪಿ ರಾಕೇಶ್‌ ಮೂಲಕ ಪ್ರಶ್ನೆಪತ್ರಿಕೆ ಕೇರಳದ ಎಂಬಿಬಿಎಸ್‌ ವಿದ್ಯಾರ್ಥಿನಿಯೊಬ್ಬಳಿಗೆ ಪರೀಕ್ಷೆಯ ಮುನ್ನಾ ದಿನ ತಲುಪಿದೆ. ಪಿಡಿಎಫ್‌ ರೂಪದಲ್ಲಿದ್ದ ಇದನ್ನು ಆ ವಿದ್ಯಾರ್ಥಿನಿ ಸಿಕಾರ್‌ನಲ್ಲಿ ಪಿಜಿ ನಡೆಸುತ್ತಿದ್ದ ತಂದೆಗೆ ಕಳುಹಿಸಿಕೊಟ್ಟಿದ್ದಾಳೆ. ‘ಅಪ್ಪಾ, ನಾಳೆಯ ಪರೀಕ್ಷೆಯಲ್ಲಿ ಇದರಲ್ಲಿರುವ ಪ್ರಶ್ನೆಗಳೇ ಬರಲಿವೆ. ಪಿಜಿಯಲ್ಲಿರುವ ಹುಡುಗಿಯರಿಗೆ ಇದನ್ನು ಹಂಚಿ’ ಎಂದೂ ತಿಳಿಸಿದ್ದಳು. ಅದರಂತೆ ಯುವಕನ ತಂದೆ ತಕ್ಷಣ ಅದನ್ನು ಪಿಜಿ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಯ ತಂದೆ ಶಿಕ್ಷಕರೊಬ್ಬರ ಮೂಲಕ ಪ್ರಶ್ನೆ ಪತ್ರಿಕೆಯನ್ನು ತಾಳೆ ಹಾಕಿಸಿದ್ದಾನೆ. ಆಗ ಅಭ್ಯಾಸ ಪತ್ರಿಕೆಯಲ್ಲಿದ್ದ 45 ರಸಾಯನಶಾಸ್ತ್ರ ಪ್ರಶ್ನೆಗಳು ನೀಟ್‌ ಪ್ರಶ್ನೆಪತ್ರಿಕೆಯಲ್ಲಿದ್ದಂತೆ ಒಂದೇ ಅನುಕ್ರಮದಲ್ಲಿದ್ದವು. ಅಲ್ಪವಿರಾಮ, ಪೂರ್ಣವಿರಾಮದಲ್ಲೂ ಯಾವುದೇ ವ್ಯತ್ಯಾಸ ಇಲ್ಲ ಎಂಬುದು ಬೆಳಕಿಗೆ ಬಂದಿದೆ.

ಬಯಲಾಗಿದ್ದು ಹೇಗೆ?

ಪ್ರಶ್ನೆಪತ್ರಿಕೆ ಸೋರಿಕೆ ಖಚಿತವಾಗುತ್ತಿದ್ದಂತೆ ಪಿಜಿ ಆಪರೇಟರ್‌ ತಕ್ಷಣ ಸಿಕಾರ್‌ನ ಉದ್ಯೋಗ್ ನಗರ ಪೊಲೀಸ್‌ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದಾಗ ಪರೀಕ್ಷೆ ನಡೆಸಿದ ಎನ್‌ಟಿಎಗೆ ಮಾಹಿತಿ ನೀಡಿದ್ದಾರೆ. ಎನ್‌ಟಿಎ ಈ ಮಾಹಿತಿಯನ್ನು ಇಂಟೆಲಿಜೆನ್ಸ್‌ ಬ್ಯುರೋಗೆ (ಐಬಿ) ಕಳುಹಿಸಿಕೊಟ್ಟಿದ್ದು, ಬಳಿಕ ಅವರು ರಾಜಸ್ಥಾನ ಪೊಲೀಸರನ್ನು ಎಚ್ಚರಿಸಿದ್ದಾರೆ. ಆ ಬಳಿಕ ರಾಜಸ್ಥಾನ ಪೊಲೀಸರು ತನಿಖೆ ನಡೆಸಿ, ಆರಂಭದಲ್ಲಿ ಸುಮಾರು 15 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸೋರಿಕೆ ಎಲ್ಲಿಂದ?

ಪ್ರಶ್ನೆಪತ್ರಿಕೆ ಮುದ್ರಣವಾಗುವುದು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಹೈಸೆಕ್ಯುರಿಟಿ ಪ್ರೆಸ್‌ನಲ್ಲಿ. ಅಲ್ಲಿಂದಲೇ ವ್ಯಕ್ತಿಯೊಬ್ಬರು ಕೈಬರಹದಲ್ಲಿ ಪ್ರಶ್ನೆಗಳಣ್ನು ಬರೆದು ಹಂಚಿದ್ದಾರೆ. ಮೊದಲು ಹರ್ಯಾಣದ ವೈದ್ಯರೊಬ್ಬರಿಗೆ ತಲಪಿದೆ. ಅಲ್ಲಿಂದ ದೇಶಾದ್ಯಂತ ಹಬ್ಬಿದೆ. 28 ಲಕ್ಷ ರು.ವರೆಗೂ ಪ್ರಶ್ನೆಪತ್ರಿಕೆ ಮಾರಾಟವಾಗಿದೆ ಎನ್ನಲಾಗಿದೆ.

ಗೊತ್ತಾಗಿದ್ದೇಗೆ?

- ಪ್ರಶ್ನೆಪತ್ರಿಕೆ ಸಿಗುತ್ತಿದ್ದಂತೆ ರಾಜಸ್ಥಾನದ ಸಿಕಾರ್‌ನ ರಾಕೇಶ್‌ಕುಮಾರ್‌ ಎಂಬಾತ ಕೋಚಿಂಗ್‌ ಸಂಸ್ಥೆಗಳಿಗೆ ತಲುಪಿಸಿದ್ದಾನೆ

- ಕೇರಳದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜಸ್ಥಾನ ಮೂಲದ ಎಂಬಿಬಿಎಸ್‌ ವಿದ್ಯಾರ್ಥಿನಿಗೆ ಪರೀಕ್ಷೆ ಮುನ್ನ ದಿನ ಪತ್ರಿಕೆ ದೊರಕಿದೆ

- ಅದನ್ನು ಆಕೆ ಸಿಕಾರ್‌ನಲ್ಲಿ ಪಿಜಿ ನಡೆಸುತ್ತಿದ್ದ ತಂದೆಗೆ ಕಳಹಿಸಿದ್ದಾಳೆ. ಈ ಪ್ರಶ್ನೆಗಳೇ ನಾಳೆ ಪರೀಕ್ಷೆಯಲ್ಲಿ ಬರಲಿವೆ ಎಂದಿದ್ದಾಳೆ

- ಪಿಜಿಯಲ್ಲಿರುವ ಹುಡುಗಿಯರಿಗೆ ಹಂಚಲು ಆಕೆ ಹೇಳಿದ್ದಾಳೆ. ಅದರಂತೆ ತಂದೆ ಹಂಚಿದ್ದಾನೆ. ಅದೇ ಪ್ರಶ್ನೆಗಳು ಪರೀಕ್ಷೆಗೆ ಬಂದಿವೆ

- ಆ ತಂದೆ ಕುತೂಹಲಕ್ಕೆ ಪ್ರಶ್ನೆಪತ್ರಿಕೆಯನ್ನು ತಾಳೆ ಹಾಕಿಸಿದ್ದಾನೆ. ಬಹುತೇಕ ಪ್ರಶ್ನೆ ಹೋಲಿಕೆಯಾದ್ದರಿಂದ ದೂರು ಕೊಟ್ಟಿದ್ದಾನೆ

9 ವರ್ಷದಲ್ಲಿ 4 ಬಾರಿ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ: ಪ್ರತಿಪಕ್ಷ ಇದು ಆಡಳಿತ ವೈಫಲ್ಯ: ಕಿಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Dattatreya Hosabale: ಸನಾತನದ ಬಗ್ಗೆ ದಿಟ್ಟ ನಿಲುವು… ಪಾಕ್ ಕುರಿತು ಮೃದು ಸಂದೇಶ? ಹೊಸಬಾಳೆ ಹೇಳಿಕೆ ವೈರಲ್
ಯಡಿಯೂರಪ್ಪ ಮಾದರಿ ಅನುಸರಿಸುತ್ತಾರಾ ತಮಿಳುನಾಡು ಸಿಎಂ ವಿಜಯ್; ಬಹುಮತ ಸಾಬೀತಿನಲ್ಲಿ ದಿಗ್ವಿಜಯ ಫಿಕ್ಸ್!