
ನವದೆಹಲಿ(ಫೆ.22): ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೊದಲ ಹಂತದ ಅಭಿಯಾನದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎಂಬುದನ್ನು ಮನಗಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಿಸಿ ಎಂದು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಈ ಕುರಿತು ಫೆ.19ರಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ‘ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರ ಪೈಕಿ ಇನ್ನೂ ಬಹಳಷ್ಟುಜನ ಲಸಿಕೆ ಪಡೆದುಕೊಂಡಿಲ್ಲ. ಹೀಗಾಗಿ ಈ ಹಿಂದೆ ನಡೆಸಿದ ಹಲವು ಪರಿಶೀಲನಾ ಸಭೆಯಲ್ಲಿ ಸೂಚಿಸಿದಂತೆ ಲಸಿಕೆ ವಿತರಣೆ ಹೆಚ್ಚಿಸಿ, ಗುರಿ ಮುಟ್ಟುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ವಾರಕ್ಕೆ ಕನಿಷ್ಠ 4 ದಿನವಾದರೂ ಲಸಿಕೆ ನೀಡುವಂತೆ ನೋಡಿಕೊಳ್ಳಬೇಕು. ಅದನ್ನೂ ಇನ್ನೂ ಹೆಚ್ಚಿಸಲು ಕೂಡಾ ಅವಕಾಶ ಇದೆ. ಇದಕ್ಕೆ ಕೋ-ವಿನ್ ಆ್ಯಪ್‌ನಲ್ಲಿ ಎಲ್ಲ ಅವಕಾಶ ಕಲ್ಪಿಸಲಾಗಿದೆ’ ಎಂದು ಸೂಚಿಸಿದ್ದಾರೆ.
‘ಅಲ್ಲದೆ ಮೊದಲ ಹಂತದ ಅಭಿಯಾನ ಮುಗಿದ ಬಳಿಕ ಮಾಚ್‌ರ್ 1ರಿಂದ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಭಾರೀ ಸಂಖ್ಯೆಯಲ್ಲಿ ಲಸಿಕೆ ನೀಡಬೇಕಾದ ಅಗತ್ಯವಿರುವ ಹಿನ್ನೆಲೆಯಲ್ಲಿ, ಸ್ಥಳೀಯವಾಗಿ ಲಭ್ಯವಿರುವ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ಜಿಲ್ಲಾಸ್ಪತ್ರೆಗೆ ಸಂಬಂಧಿಸಿದ ಸಂಸ್ಥೆಗಳು, ಉಪ ವಿಭಾಗೀಯ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಯೋಗಕ್ಷೇಮ ಕೇಂದ್ರಗಳು ಮತ್ತು ಉಪ ಆರೋಗ್ಯ ಕೇಂದ್ರಗಳನ್ನು ಲಸಿಕೆ ನೀಡಲು ಅನುವಾಗುವಂತೆ ಸಜ್ಜುಗೊಳಿಸಬೇಕು’ ಎಂದು ಸೂಚಿಸಿದ್ದಾರೆ.
ಪ್ರಗತಿ ಇಲ್ಲ:
ಫೆ.21ರವರೆಗೂ ದೇಶಾದ್ಯಂತ 1.10 ಕೋಟಿ ಜನರಿಗೆ ಲಸಿಕೆ ವಿತರಿಸಲಾಗಿದೆ. ಈ ಪೈಕಿ 63.91 ಲಕ್ಷ ಆರೋಗ್ಯ ಕಾರ್ಯಕರ್ತರು ಮತ್ತು 37.32 ಲಕ್ಷ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. ಇನ್ನು 9.60 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ 2ನೇ ಡೋಸ್ ಕೂಡಾ ನೀಡಲಾಗಿದೆ.
ಕೇಂದ್ರಕ್ಕೆ ಚಿಂತೆ:
ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿ ಹಾಕಿಕೊಂಡಿದೆ. ಆದರೆ ಇದುವರೆಗೆ ಕೇವಲ 1.10 ಕೋಟಿ ಜನ ಮಾತ್ರವೇ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ 1.90 ಕೋಟಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದು ಸರ್ಕಾರವನ್ನು ಚಿಂತೆಗೀಡು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ