ಮತ್ತಷ್ಟು ಪ್ರದೇಶಗಳಿಂದ ಚೀನಾ ಸೇನೆ ಹಿಂತೆಗೆತ!

By Suvarna News  |  First Published Feb 22, 2021, 9:30 AM IST

ಮತ್ತಷ್ಟು ಪ್ರದೇಶಗಳಿಂದ ಸೇನಾಪಡೆ| ಹಿಂತೆಗೆತಕ್ಕೆ ಭಾರತ- ಚೀನಾ ಸಮ್ಮತಿ| ಗೋಗ್ರಾ, ಹಾಟ್‌ಸ್ಟ್ರಿಂಗ್‌ ಪ್ರದೇಶದ ಕುರಿತು ಒಮ್ಮತ| ದೆಪ್ಸಾಂಗ್‌, ಡೆಮ್‌ಚೋಕ್‌ ಕುರಿತು ಇನ್ನೂ ಭಿನ್ನಾಭಿಪ್ರಾಯ


ನವದೆಹಲಿ(ಫೆ.22): ಲಡಾಖ್‌ನಿಂದ ಸೇನಾ ಹಿಂಪಡೆತ ಕುರಿತು ಚರ್ಚಿಸಲು ಶನಿವಾರ ನಡೆದ ಭಾರತ- ಚೀನಾ ಸೇನಾ ಕಮಾಂಡರ್‌ಗಳ ನಡುವೆ ನಡೆದ 10ನೇ ಸುತ್ತಿನ ಮಾತುಕತೆ ಭಾಗಶಃ ಯಶಸ್ವಿಯಾಗಿದೆ. ಸುಮಾರು 16 ಗಂಟೆಗಳ ಕಾಲ ನಡೆದ ಮಾತುಕತೆ ಬಳಿಕ ಗೋಗ್ರಾ ಮತ್ತು ಹಾಟ್‌ಸ್ಟ್ರಿಂಗ್‌ ಪ್ರದೇಶದಿಂದ ಸೇನಾ ಹಿಂಪಡೆತಕ್ಕೆ ಉಭಯ ದೇಶಗಳು ಒಪ್ಪಿಕೊಂಡಿದೆ. ಆದರೆ ದೆಪ್ಸಾಂಗ್‌ ಮತ್ತು ಡೆಮ್‌ಚೋಕ್‌ ಪ್ರದೇಶಗಳ ಕುರಿತು ಇನ್ನೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಆ ವಿಷಯವನ್ನು ಮುಂದೂಡಲಾಗಿದೆ.

ಮೋಲ್ಡಾದಲ್ಲಿ ಶನಿವಾರ ಭಾರತೀಯ ಸೇನೆಯ 14 ಕೋರ್‌ ಕಮಾಂಡರ್‌ ಲೆ| ಜ| ಪಿ.ಜಿ.ಕೆ.ಮೆನನ್‌ ಮತ್ತು ಚೀನಾದ ಪರವಾಗಿ ಮೇ| ಜ| ಲಿಯು ಲಿನ್‌ ನೇತೃತ್ವದಲ್ಲಿ ಸುದೀರ್ಘ ಮಾತುಕತೆ ನಡೆಯಿತು. ಪ್ಯಾಂಗಾಂಗ್‌ ಸರೋವರದ ಉತ್ತರ ಮತ್ತು ದಕ್ಷಿಣದ ಪ್ರದೇಶದಿಂದ ಉಭಯ ದೇಶಗಳು ಸೇನಾ ಹಿಂತೆಗೆತ ಪೂರ್ಣಗೊಳಿಸಿದ ಬೆನ್ನಲ್ಲೇ ಆಯೋಜನೆಗೊಂಡಿದ್ದ ಈ ಸಭೆಯಲ್ಲಿ, ಮುಂದಿನ ಹಂತದ ಸೇನಾ ಹಿಂತೆಗೆತದ ಕುರಿತು ಚರ್ಚೆ ನಿಗದಿಯಾಗಿತ್ತು.

Latest Videos

undefined

ಚರ್ಚೆ ವೇಳೆ ಉಭಯ ದೇಶಗಳು ಸೇನಾ ಹಿಂತೆಗೆತ ಕುರಿತು ತಮ್ಮ ತಮ್ಮ ಪ್ರಸ್ತಾಪಗಳನ್ನು ಮುಂದಿಟ್ಟವು. ಈ ಪೈಕಿ ಗೋಗ್ರಾ ಮತ್ತು ಹಾಟ್‌ಸ್ಟ್ರಿಂಗ್‌ ಕುರಿತ ಪ್ರಸ್ತಾಪಕ್ಕೆ ಉಭಯ ದೇಶಗಳು ಸಮ್ಮತಿಸಿದ್ದು, ಇದನ್ನು ಅಂತಿಮ ಅನುಮೋದನೆಗಾಗಿ ಉಭಯ ದೇಶಗಳ ಸರ್ಕಾರಕ್ಕೆ ರವಾನಿಸಲು ನಿರ್ಧರಿಸಲಾಯ್ತು.

ವಿಶೇಷವೆಂದರೆ 2013ರ ಬಳಿಕ ಇದೇ ಮೊದಲ ಬಾರಿಗೆ ದೆಪ್ಸಾಂಗ್‌ ಕುರಿತಂತೆ ಚೀನಾ ಮಾತುಕತೆಯ ವೇದಿಕೆಗೆ ಬಂದಿತ್ತು. ದೆಪ್ಸಾಂಗ್‌ ಪ್ರದೇಶದ ಗಸ್ತು ಪ್ರದೇಶವಾದ 10,11,11ಎ, 12 ಮತ್ತು 13ರಲ್ಲಿ ಭಾರತೀಯ ಗಸ್ತಿಗೆ ಚೀನಾ ತಡೆಯೊಡ್ಡಿದೆ. ಇಲ್ಲಿನ ಆಯಕಟ್ಟಿನ ಪ್ರದೇಶದ ಮೇಲೆ ಭಾರತದ ಮೇಲುಗೈಗೆ ಚೀನಾ ತಡೆಯೊಡ್ಡುತ್ತಿದೆ. ಆದರೂ ಈ ವಿಷಯದಲ್ಲೂ ಚೀನಾವನ್ನು ಮಾತುಕತೆ ವೇದಿಕೆಗೆ ಬರುವಂತೆ ಮಾಡಿದ್ದು ಈ ವಿಷಯದಲ್ಲಿ ಭಾರತ ಕಠಿಣ ನಿಲುವಿನ ಸಾಧನೆ ಎಂದೇ ವಿಶ್ಲೇಷಿಸಲಾಗಿದೆ.

click me!