ಒಂದೇ ವಾರದಲ್ಲಿ 16500 ಜನರ ರಕ್ಷಿಸಿದ ‘ಆಪರೇಷನ್‌ ಗಂಗಾ’- ಕೊನೆಯ ಹಂತಕ್ಕೆ ಏರ್‌ಲಿಫ್ಟ್‌

By Kannadaprabha News  |  First Published Mar 7, 2022, 4:15 AM IST

- ಹಂಗೇರಿಗೆ ಬರಲು ಉಕ್ರೇನಲ್ಲಿರುವ ಭಾರತೀಯರಿಗೆ ಸೂಚನೆ

- ಇಂದು 8 ವಿಮಾನದಲ್ಲಿ 1500 ಮಂದಿ ತವರಿಗೆ

- ಇನ್ನೂ ಉಳಿದವರ ಶೋಧಕ್ಕೆ ‘ಗೂಗಲ್‌ ಫಾರ್ಮ್’ನಲ್ಲಿ ಸರ್ವೇ


ನವದೆಹಲಿ (ಮಾ.7): ಯುದ್ಧಪೀಡಿತ ಉಕ್ರೇನ್‌ನಲ್ಲಿ (War Torn Ukraine) ಸಿಲುಕಿದ್ದ 16000ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸುವ ‘ಆಪರೇಷನ್‌ ಗಂಗಾ’ (operation ganga) ಬೃಹತ್‌ ಏರ್‌ಲಿಫ್ಟ್‌ (Air lift) ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಉಕ್ರೇನ್‌ನ ಅಕ್ಕಪಕ್ಕದ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಹಾಗೂ ಪೋಲೆಂಡ್‌ನಿಂದ 2135 ಭಾರತೀಯರು ಭಾನುವಾರ 11 ವಿಮಾನಗಳಲ್ಲಿ ತವರಿಗೆ ಆಗಮಿಸಿದ್ದು, ಸೋಮವಾರ 8 ವಿಮಾನಗಳಲ್ಲಿ ಇನ್ನೂ 1500 ಜನರು ತಾಯ್ನಾಡಿಗೆ ವಾಪಸಾಗಲಿದ್ದಾರೆ. ಅಲ್ಲಿಗೆ ಕಳೆದೊಂದು ವಾರದಲ್ಲಿ 82 ವಿಮಾನಗಳಲ್ಲಿ 16500ಕ್ಕೂ ಹೆಚ್ಚು ಜನರನ್ನು ತವರಿಗೆ ಕರೆತಂದಂತೆ ಆಗಲಿದೆ.

ಈ ಮಧ್ಯೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕೊನೆಯ ಹಂತದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಭಾನುವಾರ ಬೆಳಿಗ್ಗೆ 10ರಿಂದ 12 ಗಂಟೆಯೊಳಗೆ ಉಕ್ರೇನ್‌ನಲ್ಲಿನ ಖಾಸಗಿ ನಿವಾಸಗಳಲ್ಲಿ ಅಡಗಿರುವ ಭಾರತೀಯರು ಹೇಗಾದರೂ ಗಡಿ ದಾಟಿ ಹಂಗೇರಿಯ (hungary) ಬುಡಾಪೆಸ್ಟ್‌ (Budapest) ನಗರದಲ್ಲಿರುವ ರಕೋಕ್ಜಿ ಯುಟಿ 90 ಎಂಬ ಕಟ್ಟಡಕ್ಕೆ ಬರಲು ಸೂಚಿಸಿತ್ತು. ಅಲ್ಲಿಗೆ ಬಂದವರೂ ಸೇರಿದಂತೆ ಇನ್ನೂ 1500 ಭಾರತೀಯರನ್ನು ಸೋಮವಾರ 8 ವಿಶೇಷ ವಿಮಾನಗಳಲ್ಲಿ ಭಾರತಕ್ಕೆ ಕರೆತರಲಾಗುತ್ತದೆ ಎಂದು ತಿಳಿದುಬಂದಿದೆ. ಸೋಮವಾರ ಬುಡಾಪೆಸ್ಟ್‌ನಿಂದ ಐದು, ಸುಸೇವಾದಿಂದ ಎರಡು, ಬುಕಾರೆಸ್ಟ್‌ನಿಂದ ಒಂದು ವಿಮಾನ ಭಾರತಕ್ಕೆ ಬರಲಿವೆ.

ಇದರ ಜೊತೆಗೆ ಉಕ್ರೇನ್‌ನಲ್ಲೇ ಇನ್ನೂ ಉಳಿದುಕೊಂಡವರನ್ನು ರಕ್ಷಿಸುವ ಸಲುವಾಗಿ, ಎಲ್ಲಾ ಭಾರತೀಯರು ತುರ್ತಾಗಿ ಆನ್‌ಲೈನ್‌ ಗೂಗಲ್‌ ಫಾರ್ಮ್ ತುಂಬಬೇಕು ಎಂದು ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ. ಅದರಲ್ಲಿ ಹೆಸರು, ಇ-ಮೇಲ್‌, ಮೊಬೈಲ್‌ ಸಂಖ್ಯೆ, ಪ್ರಸ್ತುತ ವಿಳಾಸ, ಲಿಂಗ, ವಯಸ್ಸು ಹಾಗೂ ಪಾಸ್‌ಪೋರ್ಟ್‌ ಮಾಹಿತಿಯನ್ನು ತುರ್ತಾಗಿ ಭರ್ತಿ ಮಾಡಬೇಕು ಎಂದು ಕಚೇರಿ ತಿಳಿಸಿದೆ.

ಭಾರತೀಯ ವಾಯುಪಡೆ ಕೂಡ ಈವರೆಗೆ 10 ವಿಮಾನಗಳಲ್ಲಿ 2056 ಭಾರತೀಯರನ್ನು ಉಕ್ರೇನ್‌ನ ಅಕ್ಕಪಕ್ಕದ ದೇಶಗಳಿಂದ ಕರೆತಂದಿದೆ. ಜೊತೆಗೆ 26 ಟನ್‌ ನೆರವಿನ ಸಾಮಗ್ರಿಗಳನ್ನು ಉಕ್ರೇನ್‌ಗೆ ತಲುಪಿಸಿದೆ. ಇನ್ನುಳಿದಂತೆ ಇಂಡಿಗೋ, ಏರ್‌ ಇಂಡಿಯಾ, ವಿಸ್ತಾರ ಹಾಗೂ ಸ್ಪೈಸ್‌ಜೆಟ್‌ ವಿಮಾನಯಾನ ಕಂಪನಿಗಳು ಆಪರೇಷನ್‌ ಗಂಗಾ ಅಡಿ ಭಾರತ ಸರ್ಕಾರದ ಜೊತೆ ಕೈಜೋಡಿಸಿ ನಾಗರಿಕರನ್ನು ಕರೆತರುತ್ತಿವೆ.

"ಕೋವಿಡ್‌ ಸಾಂಕ್ರಾಮಿಕವನ್ನು ಭಾರತ ಯಶಸ್ವಿಯಾಗಿ ನಿಭಾಯಿಸಿತ್ತು. ಈಗ ಉಕ್ರೇನ್‌ ಬಿಕ್ಕಟ್ಟನ್ನು ನಿರ್ವಹಿಸಿದ್ದೇವೆ. ಇದು ಭಾರತ ಬದಲಾಗಿರುವುದನ್ನು ಸೂಚಿಸುತ್ತದೆ. ಉಕ್ರೇನ್‌ನಲ್ಲಿ ಸಿಲುಕಿದವರ ರಕ್ಷಣೆಗೆ ದೊಡ್ಡ ದೊಡ್ಡ ದೇಶಗಳು ಸವಾಲು ಎದುರಿಸಿದವು. ಸಾವಿರಾರು ಭಾರತೀಯರನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆ ತಂದಿದೆ. ಅಂತಾರಾಷ್ಟ್ರೀಯವಾಗಿ ಭಾರತ ಹೊಂದಿರುವ ವರ್ಚಸ್ಸೇ ಇದಕ್ಕೆ ಕಾರಣ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನೀರು, ಆಹಾರ, ಶೌಚಕ್ಕೆ ಹಾಹಾಕಾರ
ಸುಮಿ:
ಯುದ್ಧಪೀಡಿತ ಉಕ್ರೇನ್‌ ಬಂಕರ್‌ಗಳಲ್ಲಿ ನೀರು, ಆಹಾರಕ್ಕೆ ಹಾಹಾಕಾರ ಎದುರಾಗಿದೆ. ಬಂಕರ್‌ಗಳಲ್ಲಿ ನೀರು ಸರಬರಾಜು ನಿಂತಿದ್ದು, ಶೌಚಾಲಯ ನಾರುತ್ತಿವೆ. ಇದರ ನಡುವೆ ಋುತುಸ್ರಾವದಲ್ಲಿರುವ ಯುವತಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಸಿಗುತ್ತಿಲ್ಲ. ನೀರು, ಪ್ಯಾಡ್‌ ತರಲು ಹೊರಗೆ ಹೋಗುವುದಕ್ಕೆ ಬಾಂಬ್‌ ಭಯ ಕಾಡುತ್ತಿದೆ.

ಮೊದಲು ವಿದ್ಯಾರ್ಥಿಗಳ ಸ್ಥಳಾಂತರ ಬಳಿಕವೇ ಶಿಕ್ಷಣಕ್ಕೆ ನೆರವು: ಸಚಿವ ಅಶ್ವತ್ಥ್ ನಾರಾಯಣ್
ಉಕ್ರೇನಿಂದ ಡರ್ಟಿ ಬಾಂಬ್‌ ಉತ್ಪಾದನೆ?
ಮಾಸ್ಕೋ:
ರಷ್ಯಾ ದಾಳಿಯನ್ನು ಎದುರಿಸಲು ಅಣುಸ್ಥಾವರಗಳಲ್ಲಿ ರಹಸ್ಯವಾಗಿ ಉಕ್ರೇನ್‌ ಪ್ಲುಟೋನಿಯಂ ಆಧರಿತ ‘ಡರ್ಟಿ ಬಾಂಬ್‌’ ಉತ್ಪಾದಿಸುತ್ತಿದೆ ಎನ್ನಲಾಗಿದೆ. ಇದೊಂದು ಅಣುಬಾಂಬ್‌ ಹಾಗೂ ಸಾಂಪ್ರದಾಯಿಕ ಬಾಂಬ್‌ನ ಮಿಶ್ರಣವಾಗಿದೆ. ಈ ವಿಷಯ ತಿಳಿದೇ ಉಕ್ರೇನ್‌ನ ಅಣುಸ್ಥಾವರಗಳ ಮೇಲೆ ರಷ್ಯಾ ದಾಳಿಗೆ ಇಳಿದಿದೆ ಎನ್ನಲಾಗಿದೆ.

Tap to resize

Latest Videos

Ukraine Crisis ಆಪರೇಶನ್ ಗಂಗಾ ಯಶಸ್ವಿ ಕಾರ್ಯಾಚರಣೆ, 76 ವಿಮಾನದಲ್ಲಿ 15,920 ವಿದ್ಯಾರ್ಥಿಗಳ ರಕ್ಷಣೆ!
ಉಕ್ರೇನ್‌ ಉಳಿಯೋದೇ ಡೌಟ್‌
ಯುದ್ಧಕ್ಕೆ ಉಕ್ರೇನ್‌ ನಾಯಕತ್ವವೇ ಕಾರಣ. ಈಗ ಅವರು ಏನು ಮಾಡುತ್ತಿದ್ದಾರೋ ಅದನ್ನೇ ಮುಂದುವರಿಸಿದರೆ ಉಕ್ರೇನ್‌ ಉಳಿಯುವುದೇ ಅನುಮಾನ. ಪಾಶ್ಚಾತ್ಯ ದೇಶಗಳು ನಿರ್ಬಂಧ ಹೇರಿರುವುದು ನಮ್ಮ ಮೇಲೆ ಯುದ್ಧ ಸಾರಿದಂತೆ.
ವ್ಲಾದಿಮಿರ್‌ ಪುಟಿನ್‌ ರಷ್ಯಾ ಅಧ್ಯಕ್ಷ

ಯುದ್ಧ ಗೆಲ್ತಿದ್ದೇವೆ, ನೆರವಾಗಿ
ರಷ್ಯಾದ ವಿರುದ್ಧ ನಾವು ಗೆಲ್ಲುತ್ತಿದ್ದೇವೆ. ಭಾರಿ ಪ್ರಮಾಣದಲ್ಲಿ ಹಾನಿ ಮಾಡುವ ಮೂಲಕ ಅವರಿಗೆ ದುಃಸ್ವಪ್ನವಾಗಿದ್ದೇವೆ. ಅಮೆರಿಕದವರು ನಮಗೆ ಹೆಚ್ಚಿನ ನೆರವು ನೀಡಬೇಕು. ವಿಶೇಷವಾಗಿ ಯುದ್ಧ ವಿಮಾನ ಕೊಡಬೇಕು.
- ವೋಲೋದಿಮಿರ್‌ ಜೆಲೆನ್‌ಸ್ಕಿ ಉಕ್ರೇನ್‌ ಅಧ್ಯಕ್ಷ

click me!