ಪ್ರಧಾನಿ ಮೋದಿ 3.O ಸರ್ಕಾರ, ರಾಜ್ಯ ಸಂಸದರ ಪೈಕಿ ಮೊದಲಿಗರಾಗಿ ಕುಮಾರಸ್ವಾಮಿ ಪ್ರಮಾಣವಚನ!

By Chethan Kumar  |  First Published Jun 9, 2024, 7:49 PM IST

ನರೇಂದ್ರ ಮೋದಿ ಸರ್ಕಾರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಅಂದರೆ ಕರ್ನಾಟಕದಿಂದ ಪ್ರಮಾಣವಚನ ಸ್ವೀಕರಿಸಿದ ಮೊದಲಿಗರಾಗಿದ್ದಾರೆ.


ನವದೆಹಲಿ(ಜೂ.09) ನರೇಂದ್ರ ಮೋದಿ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.   ದೇವರ ಹೆಸರಿನಲ್ಲಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಅಂದರೆ ಕರ್ನಾಟಕದಿಂದ ಆಯ್ಕೆಯಾದ ಎನ್‌ಡಿಎ ಸಂಸದರ ಪೈಕಿ ಹೆಚ್‌ಡಿ ಕುಮಾರಸ್ವಾಮಿ ಮೊದಲಿಗರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಹೆಚ್‌ಡಿ ಕುಮಾರಸ್ವಾಮಿಗೆ ಯಾವ ಖಾತೆ ನೀಡಲಾಗುತ್ತದೆ ಅನ್ನೋ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಈ ಪೈಕಿ ಕೃಷಿ ಖಾತೆ ನೀಡಲಾಗುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಎನ್‌ಡಿಎ ಮೈತ್ರಿ ಸರ್ಕಾರದಲ್ಲಿ ಹೆಚ್‌ಡಿ ಕುಮಾರಸ್ವಾಮಿಗೆ ಪ್ರಮುಖ ಖಾತೆ ನೀಡುವ ಸಾಧ್ಯತೆ ಹೆಚ್ಚಿದೆ. 

Tap to resize

Latest Videos

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿತ್ತು. 3 ಸ್ಥಾನಗಳಲ್ಲಿ ಜೆಡಿಎಸ್ ಸ್ಪರ್ಧಿಸಿತ್ತು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮುಗ್ಗರಿಸಿದ ಜೆಡಿಎಸ್, ಮಂಡ್ಯ ಹಾಗೂ ಕೋಲಾರ ಕ್ಷೇತ್ರದಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು. ಮಂಡ್ಯದಿಂದ ಸಂಸದರಾಗಿ ಆಯ್ಕೆಯಾದ ಕುಮಾರಸ್ವಾಮಿಗೆ ಮೋದಿ ಮೂರನೇ ಅವಧಿಯ ಸರ್ಕಾರದಲ್ಲಿ ಮಂತ್ರಿಗಿರಿ ನೀಡಲಾಗಿದೆ. ಶೀಘ್ರದಲ್ಲೇ ಖಾತೆ ಹಂಚಿಕೆ ನಡೆಯಲಿದೆ. 

ಪ್ರಮಾಣವಚನ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಗೈರಾಗಿದ್ದಾರೆ. ಆರೋಗ್ಯದ ಕಾರಣ ದೇವೇಗೌಡರು ದೆಹಲಿಗೆ ತೆರಳಿಲ್ಲ. ಈ ಕುರಿತು ಮೋದಿಗೆ ಪತ್ರ ಬರೆದಿರುವ ದೇವೇಗೌಡರು, ಅಭಿನಂದನೆ ತಿಳಿಸಿದ್ದಾರೆ. 

ಕರ್ನಾಟಕದಿಂದ ಆಯ್ಕೆಯಾದವರ ಪೈಕಿ ಐವರಿಗೆ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಿರಿ ನೀಡಲಾಗಿದೆ. ಈ ಪೈಕಿ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಶಿ ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕೇಂದ್ರ ಸಚಿವರ ಪ್ರಮಾಣವಚನಕ್ಕೂ ಮೊದಲು ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಶ್ವರನ ಹೆಸರಿನಲ್ಲಿ ಮೋದಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಎನ್‌ಡಿಎ ಮೈತ್ರಿ ಸರ್ಕಾರ ರಚನೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಏಕಾಂಗಿಯಾಗಿ ಬಹುಮತ ಪಡೆದಿಲ್ಲ. ಆದರೆ 240 ಸ್ಥಾನಗಳನ್ನು ಗೆಲ್ಲುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎನ್‌ಡಿಎ ಮಿತ್ರ ಪಕ್ಷಗಳ ನೆರವಿನೊಂದಿಗೆ ಬಿಜೆಪಿ ಸರ್ಕಾರ ರಚಿಸಿದೆ. ಹೀಗಾಗಿ ಮಿತ್ರ ಪಕ್ಷಗಳಿಗೆ ಬಹುಪಾಲು ಮಂತ್ರಿಗಿರಿ ನೀಡಲಾಗಿದೆ.

click me!