ಮಹಾರಾಷ್ಟ್ರದಲ್ಲಿ ಫಡ್ನವೀಸ್ ರಾಜೀನಾಮೆ, ಸಿಎಂ ಆಗಲು ಉದ್ಧವ್ ಠಾಕ್ರೆ ಸಿದ್ಧ| ದೆಹಲಿ ಚಾಣಕ್ಯನ ಮಣಿಸಿದ ಮಹಾ ಚಾಣಾಕ್ಷ ಪವಾರ್
ಮುಂಬೈ[ನ.27]: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಎದುರಾದಾಗ, ಅಲ್ಲಿ ಬಿಜೆಪಿ ಸರ್ಕಾರ ಖಚಿತ. ಕಾರಣ ದೆಹಲಿಯಲ್ಲಿರುವ ಬಿಜೆಪಿ ಚುನಾವಣಾ ಚತುರ ಅಮಿತ್ ಶಾ ಪಕ್ಷವನ್ನು ಹೇಗಾದರೂ ಅಧಿಕಾರಕ್ಕೆ ತಂದೇ ತರುತ್ತಾರೆ ಎಂಬ ವಾದಗಳು ಕೇಳಿಬಂದಿದ್ದವು.
ಆದರೆ ಅದೇ ವೇಳೆ ಎನ್‌ಸಿಪಿ ನಾಯಕ ಶರದ್ ಪವಾರ್ ಮಾತ್ರ ‘ಬಹುಮತ ಇಲ್ಲದ ರಾಜ್ಯಗಳಲ್ಲೂ ಸರ್ಕಾರ ರಚಿಸಿದ ಖ್ಯಾತಿ ಅಮಿತ್ ಶಾಗೆ ಇದೆ. ಆದರೆ ಮಹಾರಾಷ್ಟ್ರ ರಾಜ್ಯ ರಾಜಕೀಯವು ಮತ್ತೊಂದು ಕರ್ನಾಟಕ ಅಥವಾ ಗೋವಾ ಬೆಳವಣಿಗೆ ಕಾಣಲು ಬಿಡೋಲ್ಲ. ನೋಡೋಣ ಅವರು ಮಹಾರಾಷ್ಟ್ರದಲ್ಲಿ ಏನು ಮ್ಯಾಜಿಕ್ ಮಾಡುತ್ತಾರೆ ಎಂದು ಸವಾಲ್ ಹಾಕಿದ್ದರು. ಇದೀಗ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್ ಸರ್ಕಾರ ಬರುವುದರೊಂದಿಗೆ ಮಹಾ ಚಾಣಾಕ್ಷ ಪವಾರ್ ಮೇಲುಗೈ ಸಾಧಿಸಿದಂತಾಗಿದೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು
ಹಾಗೆ ನೋಡಿದರೆ ಚುನಾವಣೆ ವೇಳೆ ಎನ್‌ಸಿಪಿ ಕಥೆ ಮುಗಿದೇ ಹೋಯಿತು ಎಂದು ಬಗೆದವರೇ ಹೆಚ್ಚು. ಆದರೆ ಏಕಾಂಗಿಯಾಗಿ ರಾಜ್ಯ ಸುತ್ತಿದ್ದ ಪವಾರ್, ಮಳೆಯಲ್ಲೇ ನೆನೆದುಕೊಂಡೇ ಪ್ರಚಾರ ನಡೆಸಿ ಎಲ್ಲರ ಗಮನ ಸೆಳೆದಿದ್ದರು. ಅದಕ್ಕೆ ಪ್ರತಿಫಲವೆಂಬಂತೆ ಚುನಾವಣೆಯಲ್ಲಿ ಪಕ್ಷಕ್ಕೆ 54 ಸೀಟು ಒಲಿದಿತ್ತು. ಬಳಿಕ ರಾಜ್ಯದಲ್ಲಿ ಬಿಜೆಪಿ- ಶಿವಸೇನೆ ಮೈತ್ರಿ ಸರ್ಕಾರ ಸಾಧ್ಯವಾಗದೇ ಹೋದಾಗ, ತಾವೇ ಶಿವಸೇನೆ- ಕಾಂಗ್ರೆಸ್ ನಡುವಿನ ಸೇತುವೆಯಾಗಿ ನಿಂತು ಸರ್ಕಾರ ರಚನೆ ಪ್ರಕ್ರಿಯೆಗೆ ಪವಾರ್ ವೇದಿಕೆ ಸಿದ್ಧಪಡಿಸಿದ್ದರು.
ಬಂಡೆದ್ದ ಅಜಿತ್ ಮನವೊಲಿಸಿದ್ದು ಪತಿ-ಪತ್ನಿ!
ತಮ್ಮದೇ ಶಿಷ್ಯ ಅಜಿತ್ ಪವಾರ್ ಬಂಡೆದ್ದು ಹೋದಾಗಲೂ, ಅಧೀರಾಗದೇ, ರಾಜಕೀಯ ಚಾಣಾಕ್ಷತನ ಮೆರೆದರು. ಅಜಿತ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೆ ಭಾವನಾತ್ಮಕ ಕ್ರಮಗಳ ಮೂಲಕವೇ ಬಂಡಾಯ ನಾಯಕನನ್ನು ಮರಳಿ ಪಕ್ಷಕ್ಕೆ ಸೆಳೆವ ಯತ್ನ ನಡೆಸಿದರು. ಪಕ್ಷದ ಯಾವುದೇ ಶಾಸಕರು, ದೂರಸರಿಯದಂತೆ ಕಾಪಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರ ಅಧಿಕಾರಕ್ಕೆ ಬರುವಂತೆ ನೋಡಿಕೊಂಡರು.