ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಂತೆ ಅದ್ಧೂರಿ ಸ್ವಾಗತ ಸಿಕ್ಕಿದೆ. ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗ ಮೂಲಕ ರೈಲ್ವೇ ಮೈದಾನಕ್ಕೆ ಆಗಮಿಸಿದ ಮೋದಿಗೆ ರಸ್ತೆ ಎರಡೂ ಬದಿಗಳಲ್ಲಿ ಅಭಿಮಾನಿಗಳು ಹೂಮಳೆಯ ಸ್ವಾಗತ ಕೋರಿದ್ದಾರೆ. ಮೋದಿ ಕಾರು ಹಾಗೂ ರಸ್ತೆ ಸಂಪೂರ್ಣವಾಗಿ ಹೂಗಳಿಂದ ತುಂಬಿಹೋಗಿತ್ತು. ಜನರ ಪ್ರೀತಿ ನೋಡಿದ ಮೋದಿ ಭಾವಕರಾಗಿದ್ದಾರೆ.
ಹುಬ್ಬಳ್ಳಿ(ಜ.12): 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ವಿಮಾನ ನಿಲ್ದಾಣದಿಂದ ಕಾರಿನ ಮೂಲಕ ತೆರಳಿದ ಮೋದಿಗೆ ರಸ್ತೆಯ ಎರಡೂ ಬದಿಗಳಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ಸರಿಸುಮಾರು 8 ಕಿಲೋಮೀಟರ್ ರಸ್ತೆ ಎರಡೂ ಬದಿಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಮೋದಿ ಕಾರಿನ ಮೂಲಕ ಆಗಮಿಸುತ್ತಿದ್ದಂತೆ ಹೂಮಳೆಯ ಸ್ವಾಗತ ನೀಡಿದ್ದಾರೆ. ಇದರಿಂದ ಮೋದಿ ಕಾರು ಸಂಪೂರ್ಣವಾಗಿ ಹೂಗಳಿಂದ ಮುಚ್ಚಿ ಹೋಗಿತ್ತು. ಇತ್ತ ರಸ್ತೆ ಕೂಡ ಹೂ ದಳಗಳಿಂದ ತುಂಬಿಹೋಗಿತ್ತು. ಇನ್ನು ಮೋದಿ ಆಗಮಿಸುವ ರಸ್ತೆ ತುಂಬಾ ರಂಗೋಲಿ ಹಾಕಲಾಗಿತ್ತು.
ರಸ್ತೆಯುದ್ದಕ್ಕೂ ಮೋದಿ ಮೋದಿ ಘೋಷಣೆ ಮೊಳಗಿತ್ತು. ಜನರ ಪ್ರೀತಿಗೆ ಮೋದಿ ಪುಳಕಿತರಾದರು. ಹೀಗಾಗಿ ರಸ್ತೆ ಮಾರ್ಗದ ಮೂಲಕ ಸಾಗುತ್ತಿದ್ದ ಮೋದಿ, ಎರಡು ಕಡೆ ವಾಹನ ನಿಲ್ಲಿಸಿ ಕಾರಿನಿಂದ ಇಳಿದು ಜನರತ್ತ ಕೈಬೀಸಿದರು. ಜನರ ಪ್ರೀತಿಗೆ ಕೈಮುಗಿದು ಧನ್ಯವಾದ ಹೇಳಿದರು. ಮೋದಿಯನ್ನು ಕಣ್ತುಂಬಿಕೊಳ್ಳಲು ಹುಬ್ಬಳ್ಳಿಯಲ್ಲಿ ಜನಸಾಗರವೇ ಹರಿದು ಬಂದಿತ್ತು.
ರೋಡ್‌ಶೋನಲ್ಲಿ ಮೋದಿ, ಕಾರಿನ ಬಾಗಿಲು ಬಳಿ ನಿಂತು ಜನರತ್ತ ಕೈಬೀಸಿದರು. 8 ಕಿಲೋಮೀಟರ್ ಇದೇ ರೀತಿ ಸಾಗಿದ ಮೋದಿ ರಸ್ತೆ ಬದಿಯಲ್ಲಿ ನಿಂತಿದ್ದ ಜನರತ್ತ ಕೈಬೀಸುತ್ತ, ಧನ್ಯವಾದ ಅರ್ಪಿಸಿದರ.
ಕೋರ್ಟ್ ವೃತ್ತದ ಮೂಲಕ ರೇಲ್ವೆ ಮೋದಿ ಸಾಗಿದರು. ರಸ್ತೆ ಇಕ್ಕೆಲಗಳಲ್ಲಿ ಬರೀ ಮೋದಿ ಜಪ ಕೇಳಿಸುತ್ತಿತ್ತು.. ಮೋದಿ ಚಿತ್ರ ಹಿಡಿದು ಘೋಷಣೆ ಹೂಗಿದ್ದರು. ಮೋದಿ ಫೋಟೋಗಳು, ಭಾವಚಿತ್ರಗಳು ರಾರಾಜಿಸಿತ್ತು. ಧಾರವಾಡ, ಬಾಗಲಕೋಟ, ಬೆಳಗಾಂ, ಗದಗ, ಹಾವೇರಿ,ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಜನರು ಮೋದಿಗಾಗಿ ರಸ್ತೆ ಬದಿಯಲ್ಲಿ ಬಕಕ್ಷಿಗಳಂತೆ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.