
ನವದೆಹಲಿ(ಮಾ.28): ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಇವೆಲ್ಲವನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ಜನರಿಗೆ ಇದೀಗ ಅಗತ್ಯ ಔಷಧಿಗಳ ಬೆಲೆ ಏರಿಕೆ ಬಿಸಿ ತಟ್ಟಿದೆ. ಏಪ್ರಿಲ್ 1 ರಿಂದ ಅಗತ್ಯ ಔಷಧಿಗಳ ಬೆಲೆ ಶೇಕಡಾ 12.12 ರಷ್ಟು ಏರಿಕೆಯಾಗುತ್ತಿದೆ. ಕಾರ್ಡಿಕ್ ಡ್ರಗ್ಸ್, ಪೈನ್ ಕಿಲ್ಲರ್ಸ್, ಆ್ಯಂಟಿ ಇನ್‌ಫೆಕ್ಟೀವ್ಸ್ ಸೇರಿದಂತೆ 800 ಔಷಧಿಗಳ ಬೆಲೆ ಏರಿಕೆಯಾಗುತ್ತಿದೆ. ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಬೆಲೆ ಏರಿಕೆಗೆ ಅನುಮತಿ ನೀಡಿದೆ.
ಪ್ರತಿ ವರ್ಷ ಸಗಟು ಬೆಲೆ ಸೂಚ್ಯಂಕ ಬದಲಾಯಿಸುತ್ತದೆ. ಮಾರುಕಟ್ಟೆ ಬೆಲೆಗೆ ತಕ್ಕಂತೆ ಬೆಲೆ ಏರಿಕೆ ಮಾಡಲಾಗುತ್ತದೆ. 2013ರಿಂದ ಪ್ರತಿ ವರ್ಷ ಔಷಧಿಗಳ ಸಗಟು ಬೆಲೆ ಸೂಚ್ಯಂಕ ಬದಲಿಸಲಾಗುತ್ತದೆ. 2022ರ ಸಾಲಿನಲ್ಲಿ ಈ ವರ್ಷದ ಸಗಟು ಬೆಲೆ ಸೂಚ್ಯಂಕ ಶೇಕಡಾ 12.12ರಷ್ಟು ಏರಿಕೆ ಸೂಚಿಸಲಾಗಿತ್ತು. ಇದೀಗ ಏಪ್ರಿಲ್ 1 ರಿಂದ ಅಗತ್ಯ ಔಷಧಿಗಳ ಬೆಲೆ ಏರಿಕೆಯಾಗುತ್ತಿದೆ.
ತುರ್ತು ಚಿಕಿತ್ಸೆ ಇನ್ನು ಹಕ್ಕು: ಆರೋಗ್ಯ ಮಸೂದೆ ಅಂಗೀಕರಿಸಿದ ರಾಜಸ್ಥಾನ: ವಿಧಾನಸಭೆ
ಆ್ಯಂಟಿ ಬಯೋಟಿಕ್ ಔಷಧಿಗಳು, ಉರಿಯೂತ ನಿವಾರಕ ಔಷಧಿಗಳು, ಕಿವಿ- ಮೂಗು ಹಾಗೂ ಗಂಟಲಿಗೆ ಸಂಬಂಧಿತ ಔಷಧಿಗಳು, ಆ್ಯಂಟಿಸೆಪ್ಟಿಕ್, ಆ್ಯಂಟಿ ಫಂಗಲ್ ಹಾಗೂ ನೋವು ನಿವಾರಕ ಔಷಧಿಗಳ ಬೆಲೆಯಲ್ಲಿ ಏರಿಕೆ ಕಂಡುಬರಲಿದೆ. ಕಳೆದ ವರ್ಷ 10.76 ರಷ್ಟು ಬೆಲೆ ಏರಿಕೆಯಾಗಿತ್ತು.
ಆರ್ಥಿಕ ಸಲಹೆಗಾರರ ಕಚೇರಿ, ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ ಹಾಗೂ ವಾಣಿಜ್ಯ ಹಾಗೂ ಉದ್ಯಮ ಸಚಿವಾಲಯ ನೀಡಿದ ದತ್ತಾಂಶದ ಆಧಾರವಾಗಿ ಸಗಟು ಬೆಲೆ ಸೂಚ್ಯಂಕವನ್ನು ನಿಗದಿ ಪಡಿಸಲಾಗುತ್ತದೆ. ಔಷಧದ ಬೆಲೆ ನಿಯಂತ್ರಣ ಕಾಯ್ದೆ 2013 ರ ಪ್ರಕಾರ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ವಾರ್ಷಿಕ ಸಗಟು ಬೆಲೆ ಸೂಚ್ಯಾಂಕದ ಅನ್ವಯ ಪ್ರತಿ ವರ್ಷ ಏ.1 ರಂದು ಔಷಧಿಗಳ ಬೆಲೆಯನ್ನು ಪರಿಷ್ಕರಿಸುತ್ತದೆ. 2022 ರ ಆರ್ಥಿಕ ವರ್ಷದಲ್ಲಿ ಸಗಟು ಬೆಲೆ ಸೂಚ್ಯಾಂಕದ ಆಧಾರದ ಮೇಲೆ ಔಷಧಿಗಳ ಬೆಲೆಯಲ್ಲಿ ಶೇ.12.12ರಷ್ಟುಏರಿಕೆ ಮಾಡಲಾಗಿದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
Malaria New Antifungal Drug: ಮಲೇರಿಯಾಕ್ಕೆ ಬಂತು ಹೊಸ ಔಷಧ, ಇನ್ನಾದ್ರೂ ಮಲೇರಿಯಾ ಕಾಟ ಕಡಿಮೆ ಆಗ್ಬೋದಾ?
800 ಔಷಧಿಗಳ ಹೊರತು ಪಡಿಸಿ ಇನ್ನುಳಿದ ಔಷಧಿಗಳ ಬೆಲೆ ಏರಿಕೆಗೂ ರಾಷ್ಟ್ರೀಯ ಔಷಧ ಪ್ರಾಧಿಕಾರಿ ಅನುಮತಿ ನೀಡಿದೆ. ಇತರ ಔಷಧಿಗಳ ಬೆಲೆ ಶೇಕಡಾ 10 ರಷ್ಟು ಏರಿಕೆ ಮಾಡಲು ಅನುಮತಿ ನೀಡಿದೆ. ಔಷಧಿ ಪ್ರಾಧಿಕಾರದ ನಿರ್ಧಾರವನ್ನು ಡ್ರಗ್ಸ್ ತಯಾರಕ ಕಂಪನಿಗಳು ಸ್ವಾಗತಿಸಿದೆ. ಔಷಧ ಉತ್ಪಾದನೆಯಲ್ಲಿ ಭಾರತ ಅತೀ ದೊಡ್ಡ ದೇಶವಾಗಿದೆ. ಭಾರತದಿಂದ ಹಲವು ದೇಶಕ್ಕೆ ಔಷಧಿಗಳು ರಫ್ತಾಗುತ್ತಿದೆ. ಬೆಲೆ ಏರಿಕೆ ಹಾಗೂ ಇತರ ಕಾರಣಗಳಿಂದ ಉತ್ಪಾದನಾ ವೆಚದಲ್ಲೂ ಏರಿಕೆಯಾಗುತ್ತಿದೆ. ಹೀಗಾಗಿ ಈ ನಿರ್ಧಾರ ಡ್ರಗ್ಸ್ ಕಂಪನಿಗಳಿಗೆ ಪೂರಕವಾಗಿದೆ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ