
ಧರ್ಮ ಕೇಳಿ ಹತ್ಯೆ ಮಾಡುವ ಮೂಲಕ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಬಲಿ ಪಡೆದ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಕೃತ್ಯಕ್ಕೆ ಭಾರತ ಆಪರೇಷನ್ ಸಿಂಧೂರ್ ಮೂಲಕ ತಕ್ಕ ಉತ್ತರ ನೀಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ ಜನರಿಗೆ ಮಾಹಿತಿ ನೀಡುವುದಕ್ಕಾಗಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಸೇನೆಯ ಮಹಿಳಾ ಅಧಿಕಾರಿಗಳೇ ಈ ಕಾರ್ಯಾಚರಣೆಯ ಬಗ್ಗೆ ದೇಶಕ್ಕೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಮಹಿಳೆಯ ಸಿಂಧೂರ ಕಸಿದ ಭಯೋತ್ಪಾದಕರಿಗೆ ಮಹಿಳೆಯರೇ ತಿರುಗೇಟು ನೀಡಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸುದ್ದಿಗೋಷ್ಠೀಯಲ್ಲಿ ಮೊದಲಿಗೆ ಇದುವರೆಗೆ ಭಯೋತ್ಪಾದಕ ದಾಳಿಯಿಂದ ದೇಶಕ್ಕಾಗ ಸಾವು ನೋವಿಗೆ ಸಂಬಂಧಿಸಿದಂತೆ ವೀಡಿಯೋ ಬಿಡುಗಡೆ ಮಾಡಲಾಯ್ತು. ಕಳೆದೊಂದು ದಶಕದಲ್ಲಿ ಪಾಕಿಸ್ತಾನದ ಈ ಭಯೋತ್ಪಾದಕ ದಾಳಿಗೆ 350ಕ್ಕೂ ಹೆಚ್ಚು ಭಾರತೀಯ ನಾಗರಿಕರು ಬಲಿಯಾಗಿದ್ದಾರೆ. 800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 600ಕ್ಕೂಹೆಚ್ಚು ಭದ್ರತಾ ಪಡೆಯ ಯೋಧರು ಈ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ದೇಶವನ್ನು ರಕ್ಷಿಸುವ ಕಾಯಕದಲ್ಲಿ1,400ಕ್ಕೂ ಹೆಚ್ಚು ಜನ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಆದರೆ ಇನ್ನೂ ಸಹಿಸಲಾಗದು ಎಂದು ಈ ವೀಡಿಯೋದಲ್ಲಿ ಸೇನೆ ಮಾಹಿತಿ ನೀಡಿದೆ.
ನಂತರ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ವೀಡಿಯೋ ಮೂಲಕ ಭಾರತದ ವಾಯುಸೇನೆ ನಡೆಸಿದ ಕಾರ್ಯಾಚರಣೆಯನ್ನು ವಿವರಿಸಿದ್ದಾರೆ. ವೀಡಿಯೋದಲ್ಲಿ ಪಾಕಿಸ್ತಾನದ ಒಳಗೆ 12 ರಿಂದ 18 ಕಿಲೋ ಮೀಟರ್ ದೂರದಲ್ಲಿರುವ ಮೆಹಮೂನ್ ಜೊಯಾ ಕ್ಯಾಂಪ್, ಸೀಯಾಲ್ ಕೋಟ್ ಉಗ್ರರ ಕ್ಯಾಂಪ್‌ಗಳ ಮೇಲೆ ಸೇನೆ ದಾಳಿ ನಡೆಸಿ ಧ್ವಂಸಗೊಳಿಸಿದ್ದನು ವೀಡಿಯೋದಲ್ಲಿ ತೋರಿಸಲಾಗಿದೆ. ರಾತ್ರಿ 1.44ರ ಸಮಯದಲ್ಲಿ ದಾಳಿ ನಡೆದಿದೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆದಿದೆ. ಈ ಜಾಗಗಳಿಂದಲೇ ಭಾರತದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಪ್ಲಾನ್ ಮಾಡಿ ಕೆಲಸ ಮಾಡಲಾಗುತ್ತಿತ್ತು. ಬಹಳ ಜಾಗರೂಕವಾಗಿ ಕೇವಲ ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ಈ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ನಾಗರಿಕರನ್ನು ಗುರಿ ಮಾಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
9 ನೆಲೆಗಳನ್ನು ಟಾರ್ಗೆಟ್ ಮಾಡಿ ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ. ನಾಗರಿಕರಿಗೆ ಹಾಗೂ ಮೂಲ ಸೌಲಭ್ಯಗಳಿಗೆ ಹಾನಿಯಾಗದಂತೆ ಈ ಸ್ಥಳಗಳನ್ನು ಆಯ್ಕೆ ಮಾಡಿ ಈ ದಾಳಿ ಮಾಡಲಾಗಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿ ನೀಡಿದರು. ರಾತ್ರಿ 1.5ರಿಂದ 1.30ರ ನಡುವೆ ಈ ಕಾರ್ಯಾಚರಣೆ ನಡೆದಿದೆ.
ಆಪರೇಷನ್ ಸಿಂಧೂರ್ ಹೆಸರು ಸೂಚಿಸಿದ್ಯಾರು ಹಾಗೂ ಏಕೆ?
ನವದೆಹಲಿ: ಪಾಕಿಸ್ತಾನದಲ್ಲಿ ಭಯೋತ್ಪಾದಕರ ನೆಲೆಗೆಳ ಮೇಲೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಹೆಸರನ್ನು ಆಯ್ಕೆ ಮಾಡಿದ್ದು, ಯಾರು ಎಂಬುದು ಅನೇಕರ ಕುತೂಹಲ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಈ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿಸಂಸ್ಥೆ ಪಿಟಿಐ ಈ ಬಗ್ಗೆ ವರದಿ ಮಾಡಿದೆ. ಸಿಂಧೂರ್ ಎಂಬ ಹೆಸರೇ ಹಲವು ಅರ್ಥಗಳಿಂದ ತುಂಬಿದೆ. ಹಿಂದೂ ಮಹಿಳೆಯರು ಮದುವೆಯ ಸಂಕೇತವಾಗಿ ತಮ್ಮ ತಲೆಯ ಬೈತಲೆ ಮೇಲೆ ಕುಂಕುಮ ಅಥವಾ ಸಿಂಧೂರನ್ನು ಹಾಕಿಕೊಳ್ಳುತ್ತಾರೆ. ಆದರೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹೆಣ್ಣು ಮಕ್ಕಳ ಸಿಂಧೂರವನ್ನು ಗಮನಿಸಿ ಅವರ ಧರ್ಮವನ್ನು ಕೇಳಿ ಅವರ ಗಂಡನನ್ನು ಕೊಲ್ಲಲಾಯಿತು. ಹೆಂಡತಿ ಮಕ್ಕಳ ಮುಂದೆಯೇ ಗುಂಡು ಹಾರಿಸಿ ಕೊಲ್ಲಲಾಯಿತು. ಇದರಿಂದ ಅನೇಕ ಹೆಣ್ಣು ಮಕ್ಕಳು ತಮ್ಮ ಸೌಭಾಗ್ಯದ ಹಾಗೂ ಮುತೈದೆಯರ ಸಂಕೇತವಾದ ಸಿಂಧೂರವನ್ನು ಹಾಕುವ ಹಕ್ಕನ್ನು ಕಳೆದುಕೊಂಡರು. ಹೀಗಾಗಿ ಅವರ ಸೇಡು ತೀರಿಸಿಕೊಳ್ಳುವ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡುವುದೇ ಸೂಕ್ತವಾಗಿತ್ತು. ಹೀಗಾಗಿಯೇ ಈ ಭಯೋತ್ಪಾದಕ ವಿರುದ್ಧದ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ