ಮೋದಿ, ಸಂಪುಟ ನಾಳೆ ಸಂಜೆ 7.15ಕ್ಕೆ ಪ್ರಮಾಣ: ಸರ್ಕಾರ ರಚನೆಗೆ ಹಕ್ಕು ಮಂಡನೆ

By Kannadaprabha News  |  First Published Jun 8, 2024, 5:23 AM IST

ನರೇಂದ್ರ ಮೋದಿ ಅವರು ಜೂನ್ 9ರ ಭಾನುವಾರ ಸಂಜೆ 7.15ಕ್ಕೆ ಸತತ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


ನವದೆಹಲಿ (ಜೂ.08): ನರೇಂದ್ರ ಮೋದಿ ಅವರು ಜೂನ್ 9ರ ಭಾನುವಾರ ಸಂಜೆ 7.15ಕ್ಕೆ ಸತತ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ, ಕೆಲವು ಸಚಿವರೂ ಶಪಥಗ್ರಹಣ ಮಾಡಲಿದ್ದಾರೆ. ಇದರೊಂದಿಗೆ ಪಂ. ಜವಾಹರಲಾಲ್‌ ನೆಹರು ಅವರ ನಂತರ ಸತತ 3ನೇ ಬಾರಿಗೆ ಪ್ರಧಾನಿ ಆದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾಗಲಿದ್ದಾರೆ. ಜತೆಗೆ ಸತತ 3 ಬಾರಿ ಪ್ರಧಾನಿಯಾದ ಏಕೈಕ ಕಾಂಗ್ರೆಸ್ಸೇತರ ನಾಯಕ ಎಂಬ ಕೀರ್ತಿಯನ್ನೂ ಸಂಪಾದಿಸಲಿದ್ದಾರೆ. ಶುಕ್ರವಾರ ಬೆಳಗ್ಗೆ ಅವರು ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಕೂಟದ ನಾಯಕನಾಗಿ ಆಯ್ಕೆ ಆದರು. 

ನಂತರ ಸಂಜೆ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಇದನ್ನು ಮನ್ನಿಸಿದ ಮುರ್ಮು ಅವರು, ಮೋದಿ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ‘ಎನ್‌ಡಿಎ ಭಾಗೀದಾರರು ಸಲ್ಲಿಸಿದ ಬೆಂಬಲ ಪತ್ರಗಳಿಂದ ರಾಷ್ಟ್ರಪತಿಗಳು ಸಂತುಷ್ಟರಾಗಿದ್ದು, ಸ್ಥಿರ ಸರ್ಕಾರದ ವಿಶ್ವಾಸ ಹೊಂದಿದ್ದಾರೆ ಹಾಗೂ ನರೇಂದ್ರ ಮೋದಿ ಅವರನ್ನು ಪ್ರಧಾನಿ ಎಂದು ನೇಮಿಸಿದ್ದಾರೆ. ಭಾನುವಾರ ಸಂಜೆ 7.15ಕ್ಕೆ ಮೋದಿ ಹಾಗೂ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

Tap to resize

Latest Videos

ಮಂತ್ರಿಗಿರಿಗಾಗಿ ಬಿಜೆಪಿ ಮೇಲೆ ಒತ್ತಡ ಹೇರಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಇನ್ನು ರಾಷ್ಟ್ರಪತಿ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮೋದಿ, ‘ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಆಗ ರಾಷ್ಟ್ರಪತಿಗಳು ನನ್ನನ್ನು ನಿಯೋಜಿತ ಪ್ರಧಾನಿಯಾಗಿ ಕೆಲಸ ಮಾಡಿ ಎಂದರು. ಭಾನುವಾರ ಸಂಜೆಯೊಳಗೆ ಸಚಿವರ ಪಟ್ಟಿ ನಾನು ಸಲ್ಲಿಸಲಿದ್ದೇನೆ’ ಎಂದರು.

ಎನ್‌ಡಿಎ ನಾಯಕನಾಗಿ ಆಯ್ಕೆ: ಶುಕ್ರವಾರ ಬೆಳಗ್ಗೆ ನಡೆದ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಎನ್‌ಡಿಎ ಸಂಸದೀಯ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸಿದರು ಮತ್ತು ಅವರ ಪಕ್ಷದ ಸಹೋದ್ಯೋಗಿಗಳಾದ ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಮತ್ತು ಎನ್‌ಡಿಎ ಉನ್ನತ ನಾಯಕರು ಈ ಪ್ರಸ್ತಾಪವನ್ನು ಅನುಮೋದಿಸಿದರು.

ಶಾ ನಂತರ, ಗಡ್ಕರಿ ಅವರು ಮೋದಿ ಅವರನ್ನು ಲೋಕಸಭೆಯ ಬಿಜೆಪಿ ನಾಯಕ, ಎನ್‌ಡಿಎ ಸಂಸದೀಯ ಪಕ್ಷ ನಾಯಕ ಮತ್ತು ಬಿಜೆಪಿ ಸಂಸದೀಯ ಪಕ್ಷದ ನಾಯಕರನ್ನಾಗಿ ಮಾಡಲು ಸಿಂಗ್ ಮಾಡಿದ 3 ಪ್ರಸ್ತಾಪಗಳನ್ನು ಬೆಂಬಲಿಸಿದರು. ಎಚ್.ಡಿ.ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಸೇರಿದಂತೆ ಹಿರಿಯ ಎನ್‌ಡಿಎ ನಾಯಕರು ಕೂಡ ನಿರ್ಣಯಗಳನ್ನು ಬೆಂಬಲಿಸಿ ಮೋದಿ 3ನೇ ಬಾರಿಗೆ ಪ್ರಧಾನಿಯಾಗುವ ಹಾದಿ ಸುಗಮಗೊಳಿಸಿದರು. ಬಳಿಕ ಎಲ್ಲ ನಾಯಕರು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಬೆಂಬಲ ಪತ್ರ ಸಲ್ಲಿಸಿದರು.

ಈ ನಡುವೆ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ಮುಖಂಡ ಪ್ರಹ್ಲಾದ ಜೋಶಿ, ಜೂನ್ 9 ರಂದು ಸಂಜೆ 6 ಗಂಟೆಗೆ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು. 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ 293 ಸ್ಥಾನಗಳನ್ನು ಗೆದ್ದಿದೆ. ಹಿಂದಿನ ಎರಡು ಅವಧಿಗಳಲ್ಲಿ ಉತ್ತಮ ಬಹುಮತವನ್ನು ಹೊಂದಿದ್ದ ಬಿಜೆಪಿ, ಬಹುಮತ ಕಳೆದುಕೊಂಡು 240 ಸ್ಥಾನ ಪಡೆದುಕೊಂಡಿದೆ. ಬಹುಮತಕ್ಕೆ ಬೇಕಾದ ಬೇಕಾದ 272 ಸ್ಥಾನಕ್ಕಿಂತ ತುಂಬಾ ಹಿಂದಿದೆ.

ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ: ನಿಖಿಲ್ ಕುಮಾರಸ್ವಾಮಿ

16 ಸ್ಥಾನಗಳನ್ನು ಗೆದ್ದಿರುವ ಎನ್, ಚಂದ್ರಬಾಬು ನಾಯ್ಡು ಅವರ ಟಿಡಿಪಿ, ನಿತೀಶ್ ಕುಮಾರ್ ಅವರ ಜೆಡಿಯು (12), ಏಕನಾಥ್ ಶಿಂಧೆ ಅವರ ಶಿವಸೇನೆ (7) ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್ (7) ಬಿಜೆಪಿ ಬಹುಮತವನ್ನು ತಲುಪಲು ಅನಿವಾರ್ಯ ಆಗಿರುವ 4 ಮಿತ್ರಪಕ್ಷಗಳಾಗಿವೆ.

click me!