
ನವದೆಹಲಿ [ಡಿ.01]: ಐತಿಹಾಸಿಕ ಬಹುಮತದೊಂದಿಗೆ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರು ತಿಂಗಳನ್ನು ಯಶಸ್ವಿಯಾಗಿ ಪೂರೈಸಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ 370ನೇ ವಿಧಿ ನಿಷ್ಕ್ರೀಯ, ಪ್ಲಾಸ್ಟಿಕ್ ಹಾಗೂ ತ್ರಿವಳಿ ತಲಾಖ್ ನಿಷೇಧ, ಭಯೋತ್ಪಾದನೆ ನಿಗ್ರಹಕ್ಕೆ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ ಈ ಸರ್ಕಾರದ ಪ್ರಮುಖ ಹೆಗ್ಗುರುತುಗಳಾಗಿವೆ.
2014ರಿಂದ ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದ ಮೋದಿ ಸರ್ಕಾರ, 2019ರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಮೇ 23ರಂದು ಪುನರಾಯ್ಕೆಯಾಗಿತ್ತು. ಮೇ 30ರಂದು 2ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ ಸ್ವೀಕರಿಸಿದ್ದರು.
ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಸರ್ಕಾರದ 6 ತಿಂಗಳ ಸಾಧನೆಗಳನ್ನು ವಿವರಿಸಿರುವ ಮೋದಿ, ಈ ಅವಧಿಯಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ದೇಶವನ್ನು ಅಭಿವೃದ್ಧಿಯತ್ತ, ಸಾಮಾಜಿಕ ಸಬಲೀಕರಣದತ್ತ ಕೊಂಡೊಯ್ದಿವೆ ಮತ್ತು ಏಕತೆಯನ್ನು ಸಾಧಿಸಲಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವಿಕೆಯಿಂದ ಆರ್ಥಿಕ ಸುಧಾರಣೆಯವರೆಗೆ, ಪರಿಣಾಮಕಾರಿ ಸಂಸತ್ ಕಲಾಪದಿಂದ ನಿರ್ಣಾಯಕ ವಿದೇಶಾಂಗ ನೀತಿಯವರೆಗೆ ಸರ್ಕಾರ ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡುವ ಭರವಸೆ ಇದೆ. ಸಮೃದ್ಧ ಮತ್ತು ನವ ಭಾರತವನ್ನು ನಾವು ನಿರ್ಮಾಣ ಮಾಡಲಿದ್ದೇವೆ. ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಧ್ಯೇಯದಿಂದ ಪ್ರೇರಣೆಗೊಂಡು ಹಾಗೂ 130 ಕೋಟಿ ಭಾರತೀಯರ ಆಶೀರ್ವಾದದಿಂದ ಎನ್‌ಡಿಎ ಸರ್ಕಾರ ದೇಶದ ಅಭಿವೃದ್ಧಿಯತ್ತ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
ಕಾರ್ಪೊರೆಟ್ ತೆರಿಗೆ ಇಳಿಕೆ: ತಮ್ಮ ಸರ್ಕಾರ ಕೈಗಾರಿಕೆ ಸಂಹಿತೆಗೆ ಅನುಮೋದನೆ ನೀಡಿದೆ. ಕಾರ್ಪೊರೆಟ್ ತೆರಿಗೆ ದರವನ್ನು ಶೇ.22ರಿಂದ ಶೇ.15ಕ್ಕೆ ಇಳಿಸಿದೆ. ಅಲ್ಲದೇ ಐದು ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಂಡವಾಳ ಹಿಂಪಡೆತಕ್ಕೆ ಅನುಮೋದನೆ ನೀಡಿದೆ. ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯ ನಿಟ್ಟಿನಿಂದ ಬ್ಯಾಂಕ್‌ಗಳ ವಿಲೀನವನ್ನು ಘೋಷಿಸಲಾಗಿದೆ. 2019-2020ರ ಅವಧಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ 70 ಸಾವಿರ ಕೋಟಿ ರು. ಬಂಡವಾಳ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
'ಬ್ಯಾಂಕ್‌ಗಳಿಗೆ ಹೊರೆಯಾಗ್ತಿದ್ದಾರೆ ಪ್ರಧಾನಿ ಮೋದಿ'..!...
ಎಲ್ಲ ರೈತರಿಗೂ ಪಿಎಂ ಕಿಸಾನ್ ಯೋಜನೆ: ಇದೇ ವೇಳೆ ರೈತರ ಬಗ್ಗೆ ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ, ಚುನಾವಣೆಯ ವೇಳೆ ನೀಡಿದ ಭರವಸೆಯಂತೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಎಲ್ಲಾ ರೈತರಿಗೆ ವಿಸ್ತರಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪ್ರತಿ ವರ್ಷ 6 ಸಾವಿರ ರು. ವರ್ಗಾಯಿಸಲಾಗುವುದು. 14.5 ಕೋಟಿ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ