'ಪಿಎಂ ಪಟ್ಟ: ಪರಿಶ್ರಮದಿಂದ ಪಡೆದ ಮೋದಿ, ಸಿಂಗ್‌ಗೆ ಸೋನಿಯಾ ಕೊಟ್ಟ ಉಡುಗೊರೆ'!

By Suvarna NewsFirst Published Jan 7, 2021, 7:22 AM IST
Highlights

ಪರಿಶ್ರಮದಿಂದ ಮೋದಿಗೆ ಪಿಎಂ ಪಟ್ಟ: ಪ್ರಣಬ್‌ ಪುಸ್ತಕ| ತಮ್ಮ ಆತ್ಮಚರಿತ್ರೆಯಲ್ಲಿ ಮಾಜಿ ರಾಷ್ಟ್ರಪತಿ ಬಣ್ಣನೆ| ಮನಮೋಹನ್‌ ಸಿಂಗ್‌ಗೆ ಸೋನಿಯಾ ಕೊಟ್ಟಉಡುಗೊರೆ

ನವದೆಹಲಿ(ಜ.07): ‘2014 ಮತ್ತು 2019ರ ಎರಡು ಸತತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಬಹುಮತವು, ರಾಜಕೀಯ ಸ್ಥಿರತೆಯತ್ತ ಜನರ ಒಲವಿನ ಸೂಚಕವಾಗಿತ್ತು. ಜೊತೆಗೆ ಈ ಚುನಾವಣೆ ಬಳಿಕ ಪ್ರಧಾನಿ ಹುದ್ದೆ ಏರಿದ ನರೇಂದ್ರ ಮೋದಿ ಅವರು ಸತತ ಪರಿಶ್ರಮದಿಂದ ಆ ಹುದ್ದೆಯನ್ನು ಪಡೆದುಕೊಂಡಿದ್ದರು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೂ ಆಗಿದ್ದ ಮಾಜಿ ರಾಷ್ಟ್ರಪತಿ ದಿ.ಪ್ರಣಬ್‌ ಮುಖರ್ಜಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ, ‘ಯುಪಿಎ ಸರ್ಕಾರದಲ್ಲಿ 2 ಬಾರಿ ಪ್ರಧಾನಿಯಾಗಿದ್ದ ಮನಮೋಹನ್‌ಸಿಂಗ್‌ ಅವರಿಗೆ ಆ ಹುದ್ದೆಯು ಸೋನಿಯಾರಿಂದ ‘ಉಡುಗೊರೆ’ ರೀತಿಯಲ್ಲಿ ಪ್ರಾಪ್ತಿಯಾಗಿತ್ತು’ ಎಂದು ದಾಖಲಿಸಿದ್ದಾರೆ.

ತಮ್ಮ ರಾಷ್ಟ್ರಪತಿ ಹುದ್ದೆ ಅವಧಿಯ ಕುರಿತು ಪ್ರಣಬ್‌ ಮುಖರ್ಜಿ ಅವರು ‘ಪ್ರೆಸಿಡೆನ್ಷಿಯಲ್‌ ಇಯ​ರ್‍ಸ್’ ಎಂಬ ಆತ್ಮಚರಿತ್ರೆ ಬರೆದಿದ್ದಾರೆ. ಅದರ ಕೊನೆಯ ಭಾಗ ಪ್ರಕಟಕ್ಕೂ ಮುನ್ನ ಅವರು ನಿಧನರಾಗಿದ್ದರು. ಆ ಭಾಗ ಮಂಗಳವಾರ ಬಿಡುಗಡೆಯಾಗಿದ್ದು, ಅದರಲ್ಲಿ ಮೋದಿ ಜೊತೆಗಿನ ಸಂಬಂಧ, ಮೋದಿ ಅವರ ರಾಜಕೀಯ ಸೂಕ್ಷ್ಮತೆ, ಪರಿಶ್ರಮ ಮೊದಲಾದ ವಿಷಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋದಿ, ಸಿಂಗ್‌ ಹೋಲಿಕೆ:

‘ನನ್ನ ಅವಧಿಯಲ್ಲಿ ನಾನು ಇಬ್ಬರು ಪ್ರಧಾನಿಗಳನ್ನು ಕಂಡಿದ್ದೆ. ಅವರಿಬ್ಬರೂ ಈ ಹಾದಿಗೆ ಸಾಗಿಬಂದ ಹಾದಿ ಸಂಪೂರ್ಣ ಭಿನ್ನವಾದುದು. 2004ರ ಚುನಾವಣೆಯಲ್ಲಿ ಗೆದ್ದಿದ್ದ ಯುಪಿಎ ಮೈತ್ರಿಕೂಟ, ಸೋನಿಯಾರನ್ನು ಪ್ರಧಾನಿ ಹುದ್ದೆಗೆ ಆರಿಸಿತ್ತು. ಆದರೆ ಅವರು ಹುದ್ದೆ ನಿರಾಕರಿಸಿ, ಮನಮೋಹನ್‌ ಸಿಂಗ್‌ ಅವರಿಗೆ ಉಡುಗೊರೆಯಾಗಿ ನೀಡಿದರು.’

‘ಮತ್ತೊಂದೆಡೆ 2014ರಲ್ಲಿ ಬಿಜೆಪಿಯನ್ನು ಐತಿಹಾಸಿಕ ಜಯದತ್ತ ಕೊಂಡೊಯ್ದ ಮೋದಿ ಪ್ರಧಾನಿ ಹುದ್ದೆಗೆ ಅತ್ಯಂತ ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮಿದ್ದರು. ಮೋದಿ ತನ್ನ ಸಿದ್ಧಾಂತಕ್ಕೆ ಅತ್ಯಂತ ಕಟಿಬದ್ಧರಾಗಿದ್ದವರು ಮತ್ತು ಚುನಾವಣಾ ಪ್ರಚಾರದ ಹಂತದಲ್ಲೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದರು. ಅವರಾಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು ಮತ್ತು ಅವರು ಬೆಳೆಸಿಕೊಂಡಿದ್ದ ವ್ಯಕ್ತಿತ್ವ ಜನಸಮೂಹದಲ್ಲಿ ಬೇರೂರಿತ್ತು. ಅವರು ಪ್ರಧಾನಿ ಹುದ್ದೆಯನ್ನು ಸಂಪಾದಿಸಿದರು ಮತ್ತು ಸಾಧಿಸಿಕೊಂಡರು’ ಎಂದು ಪ್ರಣಬ್‌ ಬಣ್ಣಿಸಿದ್ದಾರೆ.

ಮೋದಿ ಜೊತೆ ಸಂಬಂಧ:

ಇದೇ ವೇಳೆ ಪ್ರಧಾನಿ ಮೋದಿ ಜೊತೆಗೆ ತಾವು ಸೌಹಾರ್ದ ಸಂಬಂಧ ಹೊಂದಿದ್ದನ್ನೂ ಪ್ರಣಬ್‌ ಸ್ಮರಿಸಿಕೊಂಡಿದ್ದಾರೆ. ‘ಆದರೆ ನಮ್ಮ ನಡುವಿನ ಸಭೆಯ ವೇಳೆ ನೀತಿಗಳ ಕುರಿತು ನನ್ನ ಸಲಹೆಯನ್ನು ನೀಡಲು ನಾನೆಂದೂ ಹಿಂದೇಟು ಹಾಕುತ್ತಿರಲಿಲ್ಲ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಾನು ವ್ಯಕ್ತಪಡಿಸಿದ ಕಳವಳಗಳಿಗೆ ಅವರು ಕೂಡಾ ಧ್ವನಿಗೂಡಿಸಿದ ಹಲವು ಸಂದರ್ಭಗಳಿವೆ’ ಎಂದು ಪ್ರಸ್ತಾಪಿಸಿದ್ದಾರೆ.

ಬಿಜೆಪಿ ಗೆಲುವಿಗೆ ತಾವು ಕಾರಣ!:

2014ರ ಗಣರಾಜ್ಯೋತ್ಸವ ಭಾಷಣದಲ್ಲಿ, ಮುಂಬರುವ ಚುನಾವಣೆ ವೇಳೆ ಸ್ಪಷ್ಟಬಹುಮತ ನೀಡುವಂತೆ ದೇಶದ ಜನತೆಗೆ ಕರೆ ನೀಡಿದ್ದು ಮತ್ತು ಆ ವರ್ಷ ಬಿಜೆಪಿ ಸ್ಪಷ್ಟಬಹುಮತದಿಂದ ಅಧಿಕಾರಕ್ಕೆ ಬಂದಿದ್ದರ ಬಗ್ಗೆ ಪ್ರಸ್ತಾಪಿಸಿರುವ ಪ್ರಣಬ್‌, ‘ನನ್ನ ಸಲಹೆಗೆ ಓಗೊಟ್ಟು ಜನರು ಮೋದಿ ಅವರಿಗೆ ಸರ್ಕಾರ ರಚಿಸಲು ಸ್ಪಷ್ಟಬಹುಮತ ಕೊಟ್ಟರು ಎಂದು ಖಂಡಿತಾ ಜನರು ಹೇಳಬಹುದು. ಆದರೆ ಬಿಜೆಪಿಗೆ ಅಷ್ಟುದೊಡ್ಡ ಬಹುಮತ ಬರುವ ನಿರೀಕ್ಷೆ ನನಗೂ ಕೂಡಾ ಇರಲಿಲ್ಲ. ಆದರೆ ಚುನಾವಣೆ ಗೆಲುವಿಗೆ ಮೋದಿ ಅವರ ಯೋಜನೆ ಮತ್ತು ಪರಿಶ್ರಮ ನನ್ನ ಮೇಲೆ ಬಹುವಾಗಿ ಛಾಪು ಮೂಡಿಸಿತು. ಆಗ ಬಿಜೆಪಿ ಖಜಾಂಚಿಯಾಗಿದ್ದ ಪಿಯೂಷ್‌ ಗೋಯಲ್‌ ಮಾತ್ರವೇ ಬಿಜೆಪಿ 265ಕ್ಕಿಂತ ಕಡಿಮೆ ಸ್ಥಾನ ಗೆಲ್ಲಲ್ಲ, ಗೆಲುವಿನ ಸಂಖ್ಯೆ 280ರವರೆಗೂ ತಲುಪಬಹುದು ಎಂದು ಹೇಳಿದ್ದರು. ನಾನು ಅದನ್ನೇನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಆದರೆ ಮೋದಿ ಅವರ ಚುನಾವಣಾ ಪ್ರಚಾರದ ವಿಸ್ತೃತ ನೀಲನಕ್ಷೆ ನೋಡಿದ ಬಳಿಕ ಅದೆಷ್ಟುಕಠೋರ ಮತ್ತು ಶ್ರಮದಾಯಕ ಎಂಬುದನ್ನು ಅರಿತುಕೊಂಡಿದ್ದೆ’ ಎಂದು ಹೇಳಿದ್ದಾರೆ.

ವಿದೇಶಾಂಗ ನೀತಿ:

‘ವಿದೇಶಾಂಗ ನೀತಿಯ ಸೂಕ್ಷ್ಮತೆಗಳನ್ನು ಬಹುಬೇಗ ಅರ್ಥ ಮಾಡಿಕೊಂಡ ಮೋದಿ ಅವರನ್ನು ಪ್ರಣಬ್‌ ಬಹುವಾಗಿ ಹೊಗಳಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರಿಗೆ ವಿದೇಶಾಂಗ ವ್ಯವಹಾರದಲ್ಲಿ ಸ್ವಲ್ಪವೂ ಅನುಭವ ಇರಲಿಲ್ಲ. ಗುಜರಾತ್‌ ಮುಖ್ಯಮಂತ್ರಿಯಾಗಿ ಕೆಲ ದೇಶಗಳಿಗೆ ಭೇಟಿ ಕೊಟ್ಟಿದ್ದರಾದರೂ, ಅದು ಅವರ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳದ್ದಾಗಿತ್ತು. ಆದರೆ ಪ್ರಧಾನಿಯಾದ ಬಳಿಕ, ಹಿಂದಿನ ಯಾವುದೇ ಪ್ರಧಾನಿ ಪ್ರಯತ್ನಿಸದ ಸಂಗತಿಗಳನ್ನು ಮಾಡಿ ತೋರಿಸಿದರು. 2014ರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಸೇರಿದಂತೆ ಸಾರ್ಕ್ ದೇಶಗಳ ಗಣ್ಯರ ಆಹ್ವಾನಿಸಿದಂ¥ ಪ್ರಸಂಗಗಳು ವಿದೇಶಾಂಗ ನೀತಿಯಲ್ಲಿನ ಹಿರಿಯರನ್ನೇ ಅಚ್ಚರಿಗೆ ಗುರಿ ಮಾಡಿದ್ದವು’ ಎಂದು ಪ್ರಣಬ್‌ ಬಣ್ಣಿಸಿದ್ದಾರೆ.

ರಾಷ್ಟ್ರಪತಿಯಾಗಿ ನಾನು ಇಬ್ಬರು ಪ್ರಧಾನಿಗಳನ್ನು ಕಂಡಿದ್ದೆ. ಇಬ್ಬರೂ ಸಾಗಿಬಂದ ಹಾದಿ ಭಿನ್ನವಾದುದು. 2004ರಲ್ಲಿ ಗೆದ್ದ ಯುಪಿಎ, ಸೋನಿಯಾರನ್ನು ಪ್ರಧಾನಿ ಹುದ್ದೆಗೆ ಆರಿಸಿತ್ತು. ಅವರು ಹುದ್ದೆ ನಿರಾಕರಿಸಿ, ಮನಮೋಹನ್‌ ಸಿಂಗ್‌ರಿಗೆ ಉಡುಗೊರೆಯಾಗಿ ನೀಡಿದರು. 2014ರಲ್ಲಿ ಬಿಜೆಪಿಯನ್ನು ಐತಿಹಾಸಿಕ ಜಯದತ್ತ ಕೊಂಡೊಯ್ದ ಮೋದಿ, ಜನಪ್ರಿಯ ಆಯ್ಕೆ ಆದರು. ಅವರು ಪರಿಶ್ರಮದಿಂದ ಪ್ರಧಾನಿ ಹುದ್ದೆ ಸಂಪಾದಿಸಿದರು ಮತ್ತು ಸಾಧಿಸಿಕೊಂಡರು.

- ದಿ.ಪ್ರಣಬ್‌ ಮುಖರ್ಜಿ, ಮಾಜಿ ರಾಷ್ಟ್ರಪತಿ

click me!