ನಾಗ್ಪುರ ಹಿಂಸಾಚಾರ ಪೂರ್ವಯೋಜಿತ: ಸಿಎಂ ಫಡ್ನವೀಸ್‌

Published : Mar 19, 2025, 09:38 AM ISTUpdated : Apr 16, 2025, 12:05 PM IST
ನಾಗ್ಪುರ ಹಿಂಸಾಚಾರ ಪೂರ್ವಯೋಜಿತ: ಸಿಎಂ ಫಡ್ನವೀಸ್‌

ಸಾರಾಂಶ

ನಾಗಪುರದಲ್ಲಿ ನಡೆದ ಹಿಂಸಾಚಾರ ಪೂರ್ವಯೋಜಿತ ಕೃತ್ಯವೆಂದು ಸಿಎಂ ಫಡ್ನವೀಸ್ ಹೇಳಿದ್ದಾರೆ. ನಿರ್ದಿಷ್ಟ ಮನೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಘಟನಾ ಸ್ಥಳದಲ್ಲಿ ಕಲ್ಲುಗಳು ಪತ್ತೆಯಾಗಿವೆ.

ಮುಂಬೈ (ಮಾ.19): ಮೊಘಲ್‌ ದೊರೆ ಔರಂಗಾಜೇಬ್‌ ಸಮಾಧಿ ತೆರುವ ವಿಷಯ ಸಂಬಂಧ ನಾಗಪುರದಲ್ಲಿ ಸೋಮವಾರ ಸಂಜೆ ನಡೆದ ಮನೆ, ಕಟ್ಟಡಗಳ ಮೇಲಿನ ದಾಳಿ, ವಾಹನಗಳ ಬೆಂಕಿ ಹಚ್ಚಿದ ಹಿಂಸಾಚಾರದ ಪ್ರಕರಣದ ಪೂರ್ವ ನಿಯೋಜಿತ ಕೃತ್ಯ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ. ಜೊತೆಗೆ ನಿರ್ದಿಷ್ಟ ಮನೆ, ಕಟ್ಟಡಗಳನ್ನೇ ಗುರಿಯಾಗಿಸಿ ಗುಂಪು ದಾಳಿ ನಡೆಸಿದೆ. ಘಟನಾ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲೆಂದು ಸಿದ್ಧಪಡಿಸಿಡಲಾಗಿದ್ದ ಕಲ್ಲು ಪತ್ತೆಯಾಗಿರುವುದು ಇಡೀ ಘಟನೆಯ ಪೂರ್ವಯೋಜಿತ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಕುರಿತು ಚಲನಚಿತ್ರ ಕೂಡಾ ಜನರ ಭಾವನೆಗಳನ್ನು ಬಡಿದೆಬ್ಬಿಸುವುದಕ್ಕೆ ಕಾರಣವಾಗಿದೆ ಎಂದು ಫಡ್ನವೀಸ್‌ ಹೇಳಿದ್ದಾರೆ.

ಪೂರ್ವಯೋಜಿತ: ಸೋಮವಾರದ ಘಟನೆ ಕುರಿತು ಮಂಗಳವಾರ ವಿಧಾನಸಭೆಯ ಒಳಗೆ ಮತ್ತು ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಫಡ್ನವೀಸ್‌, ‘ಗಾಳಿ ಸುದ್ದಿ ನಂಬಿ ರಾತ್ರಿ ವೇಳೆ ಗಣೇಶ ಪೇಠ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಏಕಾಏಕಿ 200ರಿಂದ 300 ಮಂದಿ ಬೀದಿಗಿಳಿದು ಘೋಷಣೆ ಕೂಗುತ್ತಾ ಸಾಗಿದರು. ನಂತರ ವಿಎಚ್‌ಪಿ, ಬಜರಂಗದಳದವರ ವಿರುದ್ಧ ದೂರು ದಾಖಲಿಸಲು ಗಣೇಶ್‌ ಪೇಠ್ ಠಾಣೆ ಮುಂದೆ ಸೇರುವಂತೆ ಸಂದೇಶ ರವಾನೆಯಾಯಿತು. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದಾಗ 200-300 ಮಂದಿ ಹನ್ಸಾಪುರಿ ಪ್ರದೇಶದಲ್ಲಿ ಕಲ್ಲು ತೂರಾಟ ಆರಂಭಿಸಿದರು.

ದಾಂಧಲೆಗಿಳಿದವರು ಮುಖಮರೆಮಾಚಿದ್ದರು. ಕೆಲವರು ಹರಿತ ಆಯುಧಗಳಿಂದಲೂ ದಾಳಿ ನಡೆಸಿದರು. ಆ ಬಳಿಕ 7.30ರ ಸುಮಾರಿಗೆ ಭಲ್ದಾರ್‌ಪುರದಲ್ಲಿ 80-100 ಮಂದಿ ಗುಂಪು ಪೊಲೀಸರ ಮೇಲೆಯೇ ದಾಳಿ ನಡೆಸಿತು. ಆಗ ಪೊಲೀಸರು ಅನಿವಾರ್ಯವಾಗಿ ಸಣ್ಣ ಪ್ರಮಾಣದಲ್ಲಿ ಆಶ್ರುವಾಯು ಸಿಡಿಸಬೇಕಾಯಿತು. ಘಟನಾ ಸ್ಥಳದಲ್ಲಿ ಕಲ್ಲುಗಳಿಂದ ತುಂಬಿದ್ದ ಟ್ರಾಲಿಯೊಂದನ್ನು ವಶಕ್ಕೆ ಪಡೆಯಲಾಗಿದೆ. ನಿರ್ದಿಷ್ಟ ಮನೆಗಳನ್ನೇ ಗುರಿಯಾಗಿರಿಸಿ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಈ ದಾಳಿ ಪೂರ್ವಯೋಜಿತ ಎಂಬಂತಿದೆ’ ಎಂದು ಫಡ್ನವೀಸ್‌ ಹೇಳಿದ್ದಾರೆ.

ನಿರ್ದಿಷ್ಟ ಸಮುದಾಯವೇ ಗುರಿ: 2 ಸಾವಿರದಿಂದ 5 ಸಾವಿರ ಮಂದಿ ರಾತ್ರಿ 8 ಗಂಟೆ ವೇಳೆ ಹೇಗೆ ದಿಢೀರ್‌ ಸೇರಲು ಸಾಧ್ಯ? ಪೆಟ್ರೋಲ್‌ ಬಾಂಬುಗಳು ಎಲ್ಲಿಂದ ಬಂತು? ದೊಡ್ಡ ದೊಡ್ಡ ಕಲ್ಲುಗಳನ್ನು ಮನೆಗಳಿಗೆ ತೂರಲಾಗಿದೆ. ಆಸ್ಪತ್ರೆಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಆಸ್ಪತ್ರೆಯಲ್ಲಿದ್ದ ದೇವರ ಫೋಟೋಗಳನ್ನು ಸುಟ್ಟುಹಾಕಲಾಗಿದೆ. ಇದೊಂದು ಪೂರ್ವಯೋಜಿತ ದಾಂಧಲೆ. ಇದು ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಿ ನಡೆದ ಷಡ್ಯಂತ್ರ ಎಂದು ಡಿಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ.

45 ಮಂದಿ ಬಂಧನ, 34 ಪೊಲೀಸರಿಗೆ ಗಾಯ
ನಾಗ್ಪುರ:
ಸೋಮವಾರ ಸಂಜೆ ಇಲ್ಲಿ ನಡೆದ ಹಿಂಸಾಚಾರದ ವೇಳೆ 35 ಪೊಲೀಸರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಗೆ ಕಾರಣರಾದ 45 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಶೇಖರ್ ಬಾವನ್‌ಕುಲೆ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಹಿಂಸಾಚಾರದಲ್ಲಿ 45 ವಾಹನಗಳು ಹಾನಿಗೀಡಾಗಿವೆ. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, 35 ಪೊಲೀಸರು ಗಾಯಗೊಂಡಿದ್ದಾರೆ. ಐವರು ನಾಗರಿಕರಿಗೂ ಗಾಯಗಳಾಗಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಭಾಗಿಯಾಗಿ 40 ರಿಂದ 45 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಹೇಳಿದರು.

ಔರಂಗಜೇಬನ ಸಮಾಧಿ ಕಿತ್ತೆಸೆವವರೆಗೆ ಹೋರಾಟ ನಿಲ್ಲದು: ವಿಎಚ್‌ಪಿ

ನಾಗ್ಪುರ: ‘ಔರಂಗಜೇಬನ ವೈಭವೀಕರಣದ ಯಾವುದೇ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ಆತನ ಸಮಾಧಿಯನ್ನು ಕಿತ್ತೆಸೆಯುವ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ವಿಎಚ್‌ಪಿ ವಿದರ್ಭ ಪ್ರಾಂತ ಸಹ ಮಂತ್ರಿ ದೇವೇಶ್ ಮಿಶ್ರಾ, ‘ಘರ್ಷಣೆಗೆ ಕಾರಣರಾದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ, ಸಂಭಾಜಿ ಮಹಾರಾಜರಿಗೆ ಸೇರಿದ್ದು. ಅವರು ಔರಂಗಜೇಬನಿಂದ ಚಿತ್ರಹಿಂಸೆ ಅನುಭವಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಔರಂಗಜೇಬನ ಯಾವುದೇ ಚಿಹ್ನೆ ಇರಕೂಡದು. ವಿಎಚ್‌ಪಿ ಆತನ ಸಮಾಧಿಯನ್ನು ತೆಗೆದುಹಾಕಲು ನಿರ್ಧರಿಸಿದೆ’ ಎಂದರು.

ಮನೆಗೆ ಕಲ್ಲು ತೂರಿ, ವಾಹನಗಳಿಗೆ ಬೆಂಕಿ ಹಚ್ಚಿದರು..
ನಾಗ್ಪುರ:
ಧರ್ಮಗ್ರಂಥ ಸುಟ್ಟ ವದಂತಿ ಹಿನ್ನೆಲೆ ಸೋಮವಾರ ನಾಗ್ಪುರದಲ್ಲಿ ನಡೆದಹ ಹಿಂಸಾಚಾರದ ಕುರಿತು ಪ್ರತ್ಯಕ್ಷದರ್ಶಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ‘ರಾತ್ರಿ 7.30ರ ಸುಮಾರಿಗೆ ಗುಂಪೊಂದು ನಮ್ಮ ಪ್ರದೇಶಕ್ಕೆ ನುಗ್ಗಿ ಮನೆಗಳ ಮೇಲೆ ಕಲ್ಲುತೂರಾಟ ಪ್ರಾರಂಭಿಸಿತು. ಗಲಭೆಕೋರರು 4 ಕಾರುಗಳನ್ನು ಧ್ವಂಸಗೊಳಿಸಿದ್ದು, 1 ಕಾರು ಸುಟ್ಟುಹೋಗಿದೆ’ ಎಂದು ಮಹಲ್‌ನ ಚಿಟ್ನಿಸ್ ಪಾರ್ಕ್ ಬಳಿಯ ಓಲ್ಡ್ ಹಿಸ್ಲೋಪ್ ಕಾಲೇಜು ಪ್ರದೇಶದ ನಿವಾಸಿಗಳು ತಿಳಿಸಿದ್ದಾರೆ.

Aurangzeb tomb row: ಧರ್ಮಗ್ರಂಥ ಸುಟ್ಟ ವದಂತಿ, ಮಹಾರಾಷ್ಟ್ರ ಮತ್ತೆ ಉದ್ವಿಗ್ನ, ಆಗಿದ್ದೇನು?

‘ರಾತ್ರಿ 10.30-11.30ರ ನಡುವೆ ಬಂದ ಗಲಭೆಕೋರರು ಮನೆಯ ಮೇಲೆ ಕಲ್ಲುತೂರಾಟ ನಡೆಸಿದರು. ನಮ್ಮ ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್ ಅನ್ನು ಸುಟ್ಟರು. ನನಗೂ ಗಾಯಗಳಾಗಿವೆ. ನಮ್ಮ ಪಕ್ಕದ ಮನೆಯವರ ಅಂಗಡಿಗೂ ಹಾನಿಯಾಗಿದೆ. ಆದರೆ ಪೊಲೀಸರು ಘಟನೆಯಾದ 1 ಗಂಟೆ ಬಳಿಕ ಬಂದರು’ ಎಂದು ಹಂಸಪುರಿ ಪ್ರದೇಶದ ಶರದ್ ಗುಪ್ತಾ ತಿಳಿಸಿದರು.ವಂಶ್ ಕಾವ್ಲೆ ಎಂಬ ಇನ್ನೊಬ್ಬ ಪ್ರತ್ಯಕ್ಷದರ್ಶಿ, ‘ಮುಖ ಮುಚ್ಚಿಕೊಂಡು ಬಂದಿದ್ದ ಗಲಭೆಕೋರರು ನಮ್ಮ ಪ್ರದೇಶದಲ್ಲಿದ್ದ ಎಲ್ಲ ಸಿಸಿಟಿವಿಗಳನ್ನು ಧ್ವಂಸಗೊಳಿಸಿದರು. ಮನೆಗಳನ್ನೂ ಧ್ವಂಸಗೊಳಿಸಲು ಪ್ರಯತ್ನಿಸಿದರು’ ಎಂದರು.

ಉರಿ ಬಿಸಿಲಿಗೆ ಸವಾಲು: ಕೋಣೆಯನ್ನೇ ಕಾಶ್ಮೀರಿ ವಾತಾವರಣಕ್ಕೆ ಬದಲಿಸಿ ಕೇಸರಿ ಬೆಳೆದ ದಂಪತಿ ಈಗ ಕೋಟಿಯೊಡೆಯರು

‘ರಾತ್ರಿ 10.30ರ ಸುಮಾರಿಗೆ ನಮ್ಮ ಮನೆಯ ಬಳಿ ಬಂದ ಗುಂಪು ಮುಂದೆ ನಿಲ್ಲಿಸಿದ ವಾಹನಗಳಿಗೆಲ್ಲ ಬೆಂಕಿ ಹಚ್ಚಿತು. ಮನೆಯ ಮೊದಲ ಮಹಡಿಯಿಂದ ನೀರು ಸುರಿದು ಬೆಂಕಿ ಆರಿಸಲು ಪ್ರಯತ್ನಿಸಿದೆವು’ ಎಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ