
ದೆಹಲಿ: ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ದೇಶದ ಮೂಲೆ ಮೂಲೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಸ್ವಿಗ್ಗಿ, ಜೊಮ್ಯಾಟೊ ಮೂಲಕ ಆಹಾರ ಕಳುಹಿಸಿ ಹಲವರು ಬೆಂಬಲ ಸೂಚಿಸುತ್ತಿದ್ದಾರೆ. ಆದರೆ, ನಾಗಾಲ್ಯಾಂಡ್‌ನ ವ್ಯಕ್ತಿಯೊಬ್ಬರು ಮಾಡಿದ ಒಂದು ಆರ್ಡರ್ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಹೌದು, ಈ ವ್ಯಕ್ತಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗಾಗಿ ಬರೋಬ್ಬರಿ 68,000 ರೂಪಾಯಿ ಮೌಲ್ಯದ 150 ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾರೆ! ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ನಿರ್ಧಾರದ ಹಿಂದೆ, ಪ್ರತಿಭಟನೆಯಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗದ ನೋವಿದೆ ಎಂದು ಶಾ ಲೂವ್ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ದೂರದಲ್ಲಿದ್ದರೂ ಹೋರಾಟಕ್ಕೆ ಬೆಂಬಲ ನೀಡಲು ಮತ್ತು ಪ್ರತಿಭಟನಾಕಾರರಿಗೆ ಸಣ್ಣ ಸಹಾಯ ಮಾಡಲು ಈ ರೀತಿ ಆಹಾರ ಕಳುಹಿಸಿರುವುದಾಗಿ ಅವರು ತಿಳಿಸಿದ್ದಾರೆ.
"ಇಂದು ರಾತ್ರಿ, ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗದ ದುಃಖದಲ್ಲಿ ನನಗೆ ಊಟ ಮಾಡಲು ಮನಸ್ಸಾಗಲಿಲ್ಲ. ನನ್ನ ಸಹೋದರ ಸಹೋದರಿಯರು ಅಲ್ಲಿ ಹಸಿವಿನಿಂದ ಹೋರಾಡುತ್ತಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಮತ್ತು ನ್ಯಾಯಯುತ ಶಿಕ್ಷಣ ವ್ಯವಸ್ಥೆಗಾಗಿ ಸಾವಿರಾರು ವಿದ್ಯಾರ್ಥಿಗಳು ಮನೆಯಿಂದ ದೂರದ ಜಂತರ್ ಮಂತರ್‌ನಲ್ಲಿ ಹೋರಾಡುತ್ತಿದ್ದರೆ, ನಾನು ಇಲ್ಲಿ ನಾಗಾಲ್ಯಾಂಡ್‌ನಲ್ಲಿ ಕುಳಿತಿದ್ದೇನೆ. ನನಗೆ ಅವರೊಂದಿಗೆ ಇರಲು ಸಾಧ್ಯವಾಗಲಿಲ್ಲ, ಹಾಗಾಗಿ ನನಗೇನು ಮಾಡಲು ಸಾಧ್ಯವೋ, ಅದರಲ್ಲಿ ಇದೊಂದು ಸಣ್ಣ ಪ್ರಯತ್ನ. ನಾನು 150 ಡೊಮಿನೋಸ್ ಫಾರ್ಮ್‌ಹೌಸ್ ಚೀಸ್ ಬರ್ಸ್ಟ್ ಪಿಜ್ಜಾಗಳನ್ನು ಆರ್ಡರ್ ಮಾಡಿ, ಅಲ್ಲಿರುವ ಜನಸಂದಣಿಗೆ ಹೋಗಿ ಯಾರಿಗಾದರೂ ಹಂಚುವಂತೆ ಡೆಲಿವರಿ ಪಾರ್ಟ್‌ನರ್‌ಗೆ ತಿಳಿಸಿದೆ," ಎಂದು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಆರ್ಡರ್‌ನ ಸ್ಕ್ರೀನ್‌ಶಾಟ್ ಜೊತೆ ಶಾ ಲೂವ್ ಬರೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮಾಹಿತಿ ಪ್ರಕಾರ, ಶಾ ಲೂವ್ ಒಬ್ಬ ಕವಿ.
ತಮ್ಮ ಈ ಕಾರ್ಯಕ್ಕೆ ಸಿಕ್ಕ ಮೆಚ್ಚುಗೆಯ ಮಾತುಗಳು ತನ್ನನ್ನು ಭಾವುಕರನ್ನಾಗಿಸಿದೆ ಎಂದು ಶಾ ಹೇಳಿದ್ದಾರೆ. ಈ ಪ್ರತಿಭಟನೆ ಕೇವಲ ಅಲ್ಲಿರುವವರ ಮೇಲೆ ಮಾತ್ರವಲ್ಲ, ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರ ಮೇಲೂ ಮಾನಸಿಕವಾಗಿ ಪರಿಣಾಮ ಬೀರಿದೆ ಎಂಬುದು ಇದರಿಂದ ತಿಳಿಯಿತು ಎಂದಿದ್ದಾರೆ. ಪೋಸ್ಟ್‌ನಲ್ಲಿ ಹಂಚಿಕೊಂಡ ಆರ್ಡರ್ ವಿವರಗಳ ಪ್ರಕಾರ, ತೆರಿಗೆ ಮತ್ತು ಇತರ ಶುಲ್ಕಗಳನ್ನು ಸೇರಿ 150 ಪಿಜ್ಜಾಗಳ ಒಟ್ಟು ವೆಚ್ಚ ಸುಮಾರು 67,700 ರೂಪಾಯಿ ಆಗಿತ್ತು. ಆದರೆ, ಈ ಸಹಾಯವನ್ನು ಪ್ರಚಾರಕ್ಕಾಗಿ ಮಾಡಿಲ್ಲ, ಎಲ್ಲೇ ಇದ್ದರೂ ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡಬಹುದು ಎಂಬ ಸಂದೇಶ ನೀಡಲು ಬಯಸಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ನೇರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಈ ರೀತಿ ವಿಭಿನ್ನವಾಗಿ ಬೆಂಬಲ ಸೂಚಿಸಿದ್ದನ್ನು ಹಲವರು ಮಾದರಿ ನಡೆ ಎಂದು ಬಣ್ಣಿಸಿದ್ದಾರೆ. 'ಭವಿಷ್ಯದ ಪೀಳಿಗೆಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಇಡೀ ಭಾರತ ಒಂದಾಗಿದೆ' ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ