ಉತ್ತರ ಪ್ರದೇಶದ ಮೀರತ್‌ನಲ್ಲಿ ನಿದ್ದೆಯಲ್ಲಿದ್ದ ಯುವಕನಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ. ದೇಹದ ಮೇಲೆ 10 ಕಡೆ ಹಾವು ಕಚ್ಚಿದ ಗುರುತುಗಳಿದ್ದು, ಕುಟುಂಬಸ್ಥರು ಆಘಾತಗೊಂಡಿದ್ದಾರೆ.
ಮೀರತ್: ನಿದ್ದೆಯಲ್ಲಿದ್ದ ವೇಳೆ ಯುವಕನಿಗೆ ಹಾವು ಕಚ್ಚಿ ಯುವಕ ಸಾವನ್ನಪ್ಪಿದ ಭಯಾನಕ ಹಾಗೂ ಅನುಮಾನಾಸ್ಪದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೃತ ಯುವಕನನ್ನು ಅಮೀತ್ ಅಲಿಯಾಸ್ ವಿಕ್ಕಿ ಕಶ್ಯಪ್ ಎಂದು ಗುರುತಿಸಲಾಗಿದೆ. ಮೀರತ್ ಜಿಲ್ಲೆಯ ಬಹಸೂಮಾ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಬರ್‌ಪುರ್ ಸಾದತ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೂಲಿ ಕೆಲಸ ಮಾಡುತ್ತಿದ್ದ ಅಮಿತ್ ರಾತ್ರಿ ಸುಮಾರು 10 ಗಂಟೆಗೆ ಮನೆಗೆ ಬಂದಿದ್ದ. ನಿರಂತರ ಕೆಲಸದಿಂದಾಗಿ ಅಮಿತ್ ಊಟ ಮಾಡಿ ಬಳಿಕ ಅಲ್ಲೇ ನಿದ್ದೆಗೆ ಜಾರಿದ್ದಾನೆ. ಆದರೆ ಮುಂಜಾನೆ ವೇಳೆಗೆ ಅವನ ಜೀವವೇ ಹೋಗಿದೆ. ಊಟದ ನಂತರ ನಿದ್ದೆಗೆ ಜಾರಿದವನಿಗೆ ಹಾವಿನ ರೂಪದಲ್ಲಿ ಸಾವೊಂದು ಬರುತ್ತೆ ಅಂತ ಯಾರೂ ಊಹೆಯೂ ಮಾಡಿರಲಿಲ್ಲ.
ಬೆಳಗ್ಗೆ ಎಬ್ಬಿಸಲು ಹೋದ ಕುಟುಂಬಕ್ಕೆ ಆಘಾತ
ಭಾನುವಾರ ಬೆಳಗ್ಗೆ ಸುಮಾರು 5:30ಕ್ಕೆ ಮನೆಯವರು ಅವನನ್ನು ಎಬ್ಬಿಸಲು ರೂಮಿಗೆ ಹೋದಾಗ, ಅಮಿತ್ ಮಲಗಿದ್ದ ಹಾಸಿಗೆ ಮೇಲೆ ಹಾವೊಂದು ಬುಸುಗುಡುತ್ತಾ ಹಿಸ್ ಅಂತ ಸದ್ದು ಮಾಡ್ತಾ ಇತ್ತು ಈ ದೃಶ್ಯ ನೋಡಿ ಮನೆಯವರೆಲ್ಲಾ ಜೋರಾಗಿ ಕಿರುಚಾಡಿದರು. ಕೂಡಲೇ ಅಕ್ಕಪಕ್ಕದ ಮನೆಯಲ್ಲಿ ಈ ಸುದ್ದಿ ಹರಡಿ ಸುತ್ತಮುತ್ತಲಿನ ಜನರೆಲ್ಲಾ ಬಂದು ಸೇರಿದ್ದಾರೆ. ನಂತರ ಅಮಿತ್‌ನನ್ನು ಪರೀಕ್ಷಿಸಿದಾಗ ಅವರು ಸಾವನ್ನಪ್ಪಿರುವುದು ತಿಳಿದು ಬಂದಿದೆ.
ದೇಹದ 10 ಕಡೆ ಹಾವು ಕಚ್ಚಿದ ಗುರುತುಗಳು
ಊರಿನವರು ಮತ್ತು ಮನೆಯವರು ಹೇಳುವ ಪ್ರಕಾರ, ಅಮಿತ್‌ನ ಕೈ ಕಾಲು ಮತ್ತು ಮೈಮೇಲೆ 10 ಕಡೆ ಹಾವು ಕಚ್ಚಿದ ಗುರುತುಗಳಿದ್ದು, ಹಾವು ಕಚ್ಚಿದ ತಕ್ಷಣ ವಿಷ ಇಡೀ ದೇಹಕ್ಕೆ ಹರಡಿ ಅವನು ಮತ್ತೆ ಮೇಲೇಳಲಾಗಲಿಲ್ಲ. ಅಲ್ಲದೇ ಅಮಿತ್‌ಗೆ ಕಚ್ಚಿದ ಹಾವು ಇಡೀ ರಾತ್ರಿ ಶವದ ಕೆಳಗೆ ಹಾಗೆಯೇ ಇತ್ತು. ವಿಷಯ ತಿಳಿದ ತಕ್ಷಣ ಒಬ್ಬ ಹಾವು ಹಿಡಿಯುವನನ್ನು ಮನೆಯವರು ಕರೆಸಿದರು. ಅವನು ಹಾವನ್ನು ಜೀವಂತವಾಗಿ ಹಿಡಿದ. ಆದರೆ ಇತ್ತ ಹಾವು ಕಚ್ಚಿದ ಅಮಿತ್ ಡಾಕ್ಟರ್ ಬರುವುದರೊಳಗೆ ಸಾವನ್ನಪ್ಪಿದ್ದಾನೆ ಎಂದು ಮನೆಯವರು ಹೇಳಿದ್ದಾರೆ. ಮೃತ ಅಮಿತ್‌ಗೆ ಮದುವೆಯಾಗಿ ಮೂರು ಚಿಕ್ಕ ಮಕ್ಕಳಿದ್ದಾರೆ. ನಾಲ್ಕು ಜನ ಅಣ್ಣತಮ್ಮಂದಿರಲ್ಲಿ ಎರಡನೆಯವರಾಗಿದ್ದ ಅಮಿತ್ ಅವರ ಅಕಾಲಿಕ ಮರಣದಿಂದ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೀರತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ಅಮಿತ್ ಶವವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ಸತ್ಯಾಂಶ ಬಯಲಾಗಲಿದೆ. ಇತ್ತ ಅಮಿತ್‌ಗೆ ಕಚ್ಚಿದ ಹಾವು ಮುಂಜಾನೆ ಆಗುವವರೆಗೂ ಅಮಿತ್‌ನ ಹಾಸಿಗೆ ಕೆಳಗೆಯೇ ಇತ್ತು ಎಂಬುದು ಮನೆಯವರು ಹಾಗೂ ಗ್ರಾಮಸ್ಥರನ್ನು ಅಚ್ಚರಿಗೊಳಿಸಿದೆ.