'ನಾವು ದೇಶವನ್ನು ದೇವರಂತೆ ಪರಿಗಣಿಸಲು ಸಾಧ್ಯವಿಲ್ಲ..' : ವಂದೇ ಮಾತರಂ ಮಸೂದೆಗೆ ಇಸ್ಲಾಮಿಕ್ ಸಂಘಟನೆ ಆಕ್ಷೇಪ

Published : Aug 01, 2026, 08:40 AM IST
Muslim cant regard country as deity islamic body objects vande mataram bill rav

ಸಾರಾಂಶ

ವಂದೇ ಮಾತರಂಗೆ ಅವಮಾನಿಸುವುದು ಶಿಕ್ಷಾರ್ಹ ಅಪರಾಧ ಈ ಬಗ್ಗೆ ಗುರುವಾರ ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರವಾಗಿ ಟೀಕಿಸಿದೆ. ಈ ಮಸೂದೆ ಧಾರ್ಮಿಕ ಮತ್ತು ಸಾಂವಿಧಾನಿಕ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕರೆದಿದೆ.

ವಂದೇ ಮಾತರಂಗೆ ಅವಮಾನಿಸುವುದು ಶಿಕ್ಷಾರ್ಹ ಅಪರಾಧ ಈ ಬಗ್ಗೆ ಗುರುವಾರ ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರವಾಗಿ ಟೀಕಿಸಿದೆ. ಈ ಮಸೂದೆ ಧಾರ್ಮಿಕ ಮತ್ತು ಸಾಂವಿಧಾನಿಕ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕರೆದಿದೆ. ಕಾನೂನು ಒತ್ತಡದ ಮೂಲಕ ದೇಶಭಕ್ತಿಯ ಭಾವನೆಗಳನ್ನು ಹೇರಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದೆ.

ಇಸ್ಲಾಂ ಮೌಲ್ಯಗಳಿಗೆ ವಿರುದ್ಧ:

ಜುಲೈ 31 ರಂದು ಮುಸ್ಲಿಂ ಸಂಘಟನೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಈ ಕಾನೂನು ದೇಶದ ಸಾಂವಿಧಾನಿಕ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಅಲ್ಲದೆ ನಾಗರಿಕರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದೊಡ್ಡ ದಾಳಿ ಎಂದು ಕರೆದಿದೆ. ಮುಂದುವರಿದು, ಧಾರ್ಮಿಕ ಅರ್ಥಗಳನ್ನು ಹೊಂದಿರುವ ಹಾಡು ಅಥವಾ ಘೋಷಣೆಯನ್ನ ಇನ್ನೊಬ್ಬರು ಹೇಳುವಂತೆ ಒತ್ತಾಯಿಸುವುದು ಎಂದರೆ ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ ಎಂದು ಸಂಘಟನೆ ತಿಳಿಸಿದೆ.

ವಂದೇ ಮಾತರಂ ಕಡ್ಡಾಯ ಸಲ್ಲದು: ಇಲ್ಯಾಸ್

ಎಲ್ಲಾ ಸಮುದಾಯಗಳಿಗೆ ವಂದೇ ಮಾತರಂ ಹೇಳುವಂತೆ ಕಾನೂನುಬದ್ಧವಾಗಿ ಕಡ್ಡಾಯಗೊಳಿಸುವುದು ಸಾಂವಿಧಾನಿಕ ತತ್ವಗಳು ಮತ್ತು ಇಸ್ಲಾಮಿಕ್ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಮಂಡಳಿಯ ವಕ್ತಾರ ಡಾ ಎಸ್‌ಕ್ಯೂಆರ್ ಇಲ್ಯಾಸ್ ಹೇಳಿದ್ದಾರೆ. ಕಾನೂನಿನ ಒತ್ತಡದ ಮೂಲಕ ಎಲ್ಲಾ ವರ್ಗಗಳು ಮತ್ತು ಧಾರ್ಮಿಕ ಸಮುದಾಯಗಳಿಗೆ ವಂದೇ ಮಾತರಂ ಅನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಯತ್ನವು ಆಕ್ಷೇಪಾರ್ಹ ಮಾತ್ರವಲ್ಲದೆ ಸಂವಿಧಾನದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನವನ್ನು ರಚಿಸುವಾಗ ಸಂವಿಧಾನ ಸಭೆಯು 'ವಂದೇ ಮಾತರಂ' ನ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಗೆ ಸ್ವೀಕಾರಾರ್ಹವೆಂದು ಒಪ್ಪಿಕೊಂಡಿತು. ಉಳಿದ ಸಾಲುಗಳಲ್ಲಿನ ಧಾರ್ಮಿಕ ಅರ್ಥಗಳು ಭಾರತದ ಜಾತ್ಯತೀತ ಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಹಾಡಿನ ಕೆಲವು ಭಾಗಗಳು ಮಾತೃಭೂಮಿಯನ್ನು ದೇವತೆಯಾಗಿ ಚಿತ್ರಿಸುತ್ತವೆ. ಜನರು ದೇವತೆಯನ್ನ ಪೂಜಿಸುವಂತೆ ಪ್ರೇರೆಪಿಸುತ್ತದೆ. ಇದು ತೌಹೀದ್‌ನ ಇಸ್ಲಾಮಿಕ್ ತತ್ವಕ್ಕೆ ವಿರುದ್ಧವಾಗಿದೆ. ಯಾವುದೇ ಮುಸ್ಲಿಮರನ್ನು ಅವರ ನಂಬಿಕೆಗೆ ವಿರುದ್ಧವಾದ ಧಾರ್ಮಿಕ ಅರ್ಥಗಳನ್ನು ಹೊಂದಿರುವ ಹಾಡುಗಳನ್ನಾಗಲಿ, ಘೋಷಣೆಗಳನ್ನಾಗಲಿ ಅಥವಾ ಆಚರಣೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಇಲ್ಯಾಸ್ ಹೇಳಿದ್ದಾರೆ.

ಸಂವಿಧಾನದ 25-19 ನೇ ವಿಧಿಗಳು ಏನು ಹೇಳುತ್ತೆ?

ಸಂವಿಧಾನದ 25 ಮತ್ತು 19 ನೇ ವಿಧಿಗಳನ್ನು ಉಲ್ಲೇಖಿಸಿದ ಡಾ.ಇಲ್ಯಾಸ್, ಸಂವಿಧಾನದ ಈ ವಿಧಿಗಳು ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ. ಇದರಲ್ಲಿ ಒಬ್ಬರ ಆತ್ಮಸಾಕ್ಷಿಗೆ ವಿರುದ್ಧವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದಿರುವ ಹಕ್ಕಿದೆ. ಈ ಸಾಂವಿಧಾನಿಕ ರಕ್ಷಣೆಗಳು ಯಾವುದೇ ನಾಗರಿಕನು ತನ್ನ ಧಾರ್ಮಿಕ ನಂಬಿಕೆಗಳು ಮತ್ತು ಆತ್ಮಸಾಕ್ಷಿಗೆ ವಿರುದ್ಧವಾದ ಯಾವುದೇ ಹಾಡು, ಘೋಷಣೆ, ಸಿದ್ಧಾಂತ ಅಥವಾ ಚಿಹ್ನೆಯನ್ನು ಅಳವಡಿಸಿಕೊಳ್ಳಲು ಅಥವಾ ಭಾಗವಹಿಸಲು ಒತ್ತಾಯಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇದಲ್ಲದೆ ಮಂಡಳಿಯು ಹಲವಾರು ವಾದಗಳನ್ನು ಒದಗಿಸಿತು. ಪ್ರತಿಯೊಬ್ಬ ನಾಗರಿಕನು ಸಮಾನ ಗೌರವ, ನ್ಯಾಯ ಮತ್ತು ಸ್ವಾತಂತ್ರ್ಯವನ್ನು ಅನುಭವಿಸಿದಾಗ ಮಾತ್ರ ಬಲವಾದ, ಏಕತೆ ಹೊಂದಿದ ಭಾರತವನ್ನು ನಿರ್ಮಿಸಬಹುದು ಹೊರತು ಒಬ್ಬರ ದೇಶಭಕ್ತಿಯನ್ನು ಅವರ ಧಾರ್ಮಿಕ ನಂಬಿಕೆಗಳಿಂದ ನಿರ್ಣಯಿಸಬಾರದು ಎಂದು ಸಂಘಟನೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೆನ್ ಝೀ ಆಯ್ತು, ಈಗ ಜೆನ್‌ ಆಲ್ಫಾಗಳಿಂದಲೂ ಪ್ರತಿಭಟನೆ!
National News Live: 'ನಾವು ದೇಶವನ್ನು ದೇವರಂತೆ ಪರಿಗಣಿಸಲು ಸಾಧ್ಯವಿಲ್ಲ..' - ವಂದೇ ಮಾತರಂ ಮಸೂದೆಗೆ ಇಸ್ಲಾಮಿಕ್ ಸಂಘಟನೆ ಆಕ್ಷೇಪ