
ಮುಂಬೈನ ವಡಾಲಾ ಡಿಪೋದಲ್ಲಿ ಬುಧವಾರ ಬೆಳಿಗ್ಗೆ ಪರೀಕ್ಷಾರ್ಥ ಸಂಚಾರದ ವೇಳೆ ಹೊಸದಾಗಿ ಖರೀದಿಸಿದ ಮೊನೊರೈಲ್ ರೈಲಿನ ಖಾಲಿ ಕೋಚ್ ಹಳಿತಪ್ಪಿ ಬೀಮ್‌ಗೆ ಡಿಕ್ಕಿ ಹೊಡೆದ ಪರಿಣಾಮ ರೈಲು ಕ್ಯಾಪ್ಟನ್ ಸೇರಿದಂತೆ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಹೊಸದಾದ ಈ ಬೋಗಿಗೂ ತೀವ್ರ ಹಾನಿಯಾಗಿದೆ. ಘಟನೆ ನಡೆದಾಗ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾನಿಗೊಳಗಾದ ರೈಲು ಮಾನೋರೈಲ್ ಕಾರಿಡಾರ್‌ನ ದೈನಂದಿನ ತಪಾಸಣೆಗಾಗಿ ಹೊರಟಿತ್ತು.
ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಟ ತಕ್ಷಣ ಎಸ್‌ಜಿಎಂಸಿ ಮಾರ್ಗಕ್ಕಾಗಿ ಹೊಂದಿಸಲಾದ ಗೈಡ್ ಬೀಮ್ ಸ್ವಿಚ್ ಇದ್ದಕ್ಕಿದ್ದಂತೆ ಡಿಪೋ ಲೈನ್ ಕಡೆಗೆ ಚಲಿಸಿತು. ಪರಿಣಾಮವಾಗಿ, ರೈಲಿನ ಮೊದಲ ಕೋಚ್ ಹಳಿ ತಪ್ಪಿ ಬೀಮ್‌ಗೆ ಡಿಕ್ಕಿ ಹೊಡೆದು, ಅದು ನಿಲ್ಲುವ ಮೊದಲು ಅದರ ಮುಂಭಾಗ ಗಾಳಿಯಲ್ಲಿ ಹಾರಿತು ಎಂದು ಮೋನೋರೈಲ್ ಉದ್ಯೋಗಿಯೊಬ್ಬರು ಹೇಳಿದ್ದಾರೆ. ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಟ ಕೆಲವೇ 10 ಸೆಕೆಂಡುಗಳಲ್ಲಿ ಇದು ಸಂಭವಿಸಿದೆ
ಮೋನೋರೈಲನ್ನು ನಿರ್ವಹಿಸುವ ಮಹಾ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ ಇದೊಂದು ಸಣ್ಣ ಘಟನೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಆದರೆ ಈ ಘಟನೆಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನಾಗರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪದೇ ಪದೇ ತಾಂತ್ರಿಕ ದೋಷಗಳು ಕಂಡುಬರುತ್ತಿರುವುದರಿಂದ, ಮಹಾನಗರದಲ್ಲಿ ನಿಯಮಿತ ಮಾನೋರೈಲ್ ಕಾರ್ಯಾಚರಣೆಗಳನ್ನು ಸೆಪ್ಟೆಂಬರ್ 20 ರಿಂದಲೇ ಸ್ಥಗಿತಗೊಳಿಸಲಾಗಿದೆ. ಸಿಸ್ಟಮ್ ಅಪ್‌ಗ್ರೇಡ್ ಕಾರ್ಯಕ್ಕಾಗಿ ಮುಂದಿನ ಸೂಚನೆ ಬರುವವರೆಗೂ ಹೀಗೆ ಇರಲಿದೆ.
ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಂಚಿಕೊಂಡ ಫೋಟೋ ವೀಡಿಯೋಗಳಲ್ಲಿ ರೈಲು ಮೇಲ್ಸೇತುವೆಯ ಹಳಿಯ ಮೇಲೆ ಪಕ್ಕಕ್ಕೆ ವಾಲಿ ನಿಂತಿರುವುದನ್ನು ಕಾಣಬಹುದು. ರೈಲಿನ ಮೊದಲ ಕೋಚ್ ಹಳಿಗಳ ಬೀಮ್‌ಗೆ ಡಿಕ್ಕಿ ಹೊಡೆದು, ಅದರ ಮುಂಭಾಗ ಗಾಳಿಯಲ್ಲಿ ನೇತಾಡಿದರೆ ಮತ್ತು ಕೋಚ್‌ನ ಹಿಂಭಾಗವು ಓರೆಯಾಗಿದೆ. ಬಳಿಕ ಕ್ರೇನ್ ಸಹಾಯದಿಂದ ಅದನ್ನು ಹಳಿಯಿಂದ ತೆಗೆದು ಹಾಕಲಾಯ್ತು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಇಬ್ಬರು ಸಿಬ್ಬಂದಿಯನ್ನು ಮೋನೋರೈಲಿನಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಳಿ ಬಣ್ಣದ ಮೊನೊರೈಲ್ ರೇಕ್ ಅನ್ನು ಸಿಗ್ನಲಿಂಗ್ ಪ್ರಯೋಗಗಳಿಗಾಗಿ ಹೊರತೆಗೆಯುತ್ತಿದ್ದಾಗ ವಡಾಲಾ ಡಿಪೋದ ಹೊರಗಿನ ಟ್ರ್ಯಾಕ್ ಕ್ರಾಸ್ಒವರ್ ಪಾಯಿಂಟ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟ್ರಯಲ್ ರನ್‌ನಲ್ಲಿ ಭಾಗಿಯಾದ ಇಂಜಿನಿಯರ್ ಒಬ್ಬರು ಹಾಗೂ ರೈಲಿನ ಕ್ಯಾಪ್ಟನ್ ಹಾಗೂ ಕೆಲವು ಇತರ ಸಿಬ್ಬಂದಿ ಘಟನೆ ವೇಳೆ ರೈಲಿನಲ್ಲಿದ್ದರು. ಘಟನೆಯಿಂದಾಗಿ ಮೋನೋ ರೈಲಿನ ಮೊದಲ ಕೋಚ್‌ನ ಅಂಡರ್‌ಗೇರ್‌ಗಳು, ಕಪ್ಲಿಂಗ್ ಮತ್ತು ಬೋಗಿಗಳು ಮತ್ತು ಚಕ್ರಗಳ ಮೇಲಿನ ಕವರ್‌ಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದಾಗಿ ರೈಲು ಎರಡು ಭೀಮ್‌ಗಳ ನಡುವೆ ಸಿಲುಕಿಕೊಂಡಂತೆ ಒಂದು ಬದಿ ಗಾಳಿಯಲ್ಲಿ ನೇತಾಡುತ್ತಿದ್ದಂತೆ ಕಂಡುಬಂತು.
ಮಹಾ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL)ಮೇಧಾ ಎಸ್‌ಎಂಹೆಚ್ ರೈಲ್ ಪ್ರೈವೇಟ್ ಲಿಮಿಟೆಡ್‌ನಿಂದ ತಲಾ 55 ಕೋಟಿ ರೂ. ನೀಡಿ ನಾಲ್ಕು ಬೋಗಿಗಳ 10 ಮಾನೋರೈಲ್ ರೈಲುಗಳನ್ನು ಖರೀದಿಸಿದೆ. ಮೋನೋರೈಲ್ ಸಿಬ್ಬಂದಿ ಸಂಘದ ಸದಸ್ಯರ ಪ್ರಕಾರ, ಬುಧವಾರ ಅಪಘಾತದ ಸಮಯದಲ್ಲಿ ಕೆಲವು ಆಫ್ ಡ್ಯೂಟಿ ಸಿಬ್ಬಂದಿ ಸೇರಿದಂತೆ ಆರು ಜನರು ಮೋನೋರೈಲಿನಲ್ಲಿದ್ದರು. ಅವರಲ್ಲಿ, ರೈಲು ಕ್ಯಾಪ್ಟನ್, ಒಬ್ಬ ಎಂಜಿನಿಯರ್ ಮತ್ತು ಇನ್ನೊಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ.
ರೈಲು ಕ್ಯಾಪ್ಟನ್‌ಗೆ ದೇಹದೊಳಗೆ ಗಾಯವಾಗಿದ್ದರೆ, ಮೇಧಾ ಎಸ್‌ಎಂಹೆಚ್‌ನ ಮತ್ತೊಬ್ಬ ಸಿಬ್ಬಂದಿ ಮತ್ತು ಎಂಜಿನಿಯರ್‌ಗೆ ಕ್ರಮವಾಗಿ ಕೈಗೆ ಒಳ ಗಾಯ ಮತ್ತು ತಲೆಗೆ ಗಾಯವಾಗಿದೆ. ಮೂವರನ್ನು ಖಾಸಗಿ ಕಾರಿನಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ನಾಗರಿಕ ಅಧಿಕಾರಿ ತಿಳಿಸಿದ್ದಾರೆ. ಬಿಎಂಸಿ ನಡೆಸುವ ಸಿಯಾನ್ ಆಸ್ಪತ್ರೆಯ ಪ್ರಕಾರ, ಗಾಯಾಳುಗಳನ್ನು ಸೊಹೈಲ್ ಪಟೇಲ್ (27), ಬುಧಾಜಿ ಪರಬ್ (26) ಮತ್ತು ವಿ ಜಗದೀಶ್ (28) ಎಂದು ಗುರುತಿಸಲಾಗಿದೆ.
ಘಟನೆಯ ನಂತರ, ಶಿವಸೇನೆ (ಯುಬಿಟಿ) ಕಾರ್ಯಕರ್ತರು ಮೋನೋರೈಲ್ ಡಿಪೋದ ಹೊರಗೆ ಪ್ರತಿಭಟನೆ ನಡೆಸಿ ಮುಂಬೈನಲ್ಲಿ ಮೋನೋರೈಲ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ಇದನ್ನೂ ಓದಿ: ಅಪ್ಪ ಅಮ್ಮ ಇಬ್ರಿಗೂ ಬೇಡ: ಪುಟ್ಟ ಮಗುವನ್ನು ಭಾರತ- ಬಾಂಗ್ಲಾ ಗಡಿಯಲ್ಲಿ ಬಿಟ್ಟು ಬಂದ ತಂದೆ
ಇದನ್ನೂ ಓದಿ: ಪ್ರಧಾನಿಯವರಲ್ಲಿ ಫಳ ಫಳ ಹೊಳೆಯುವ ಚರ್ಮದ ರಹಸ್ಯ ಏನು ಎಂದು ಕೇಳಿದ ಕ್ರಿಕೆಟರ್ ಹರ್ಲಿನ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ