ಯುವಕನೋರ್ವ ರೈಲು ಬರುತ್ತಿರುವುದನ್ನು ಕೂಡ ಲೆಕ್ಕಿಸದೇ ತನ್ನ ಪ್ರಾಣ ಪಣಕ್ಕಿಟ್ಟು ರೈಲು ಹಳಿಯಲ್ಲಿದ್ದ ಬೀದಿ ನಾಯಿಯೊಂದನ್ನು ರಕ್ಷಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಮುಂಬೈ: ಯುವಕನೋರ್ವ ರೈಲು ಬರುತ್ತಿರುವುದನ್ನು ಕೂಡ ಲೆಕ್ಕಿಸದೇ ತನ್ನ ಪ್ರಾಣ ಪಣಕ್ಕಿಟ್ಟು ರೈಲು ಹಳಿಯಲ್ಲಿದ್ದ ಬೀದಿ ನಾಯಿಯೊಂದನ್ನು ರಕ್ಷಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಮುಂಬೈ ಮಹಾನಗರಿಯಲ್ಲಿ ಬರುವ ನಲ್ಲಸಪೊರಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಿಖಿಲ್ ಲೋಖಂಡೆ ಎಂಬವರಿಗೆ ವಿಡಿಯೋ ಕೃಪೆ ನೀಡಿ ಮುಂಬೈ ಮೇರಿ ಜಾನ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. 31 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, 4 ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಸಾಮಾನ್ಯವಾಗಿ ಜನ ಜಾತಿ ನಾಯಿಗಳೊಂದಿಗೆ ಮುದ್ದಾಡುವುದನ್ನು ಅವುಗಳನ್ನು ಮನೆಯ ಸದಸ್ಯನಂತೆ ಸಲಹುವುದನ್ನು ಹಾಸಿಗೆಯಲ್ಲೂ ಅವುಗಳಿಗೆ ಜಾಗ ನೀಡಿ ಪ್ರೀತಿಯಿಂದ ಸಲಹುವುದನ್ನು ನೋಡಿದ್ದೇವೆ. ಆದರೆ ಅದೇ ರೀತಿಯ ಪ್ರೀತಿ ಬೇಡ, ಕನಿಷ್ಠ ಕಾಳಜಿಯನ್ನು ಕೂಡ ಜನ ಬೀದಿ ನಾಯಿಗಳ ಮೇಲೆ ತೋರುವುದಿಲ್ಲ. ಬೀದಿ ನಾಯಿಗಳನ್ನು ದೂರದಲ್ಲಿ ಕಂಡ ಕೂಡಲೇ ಕಲ್ಲು ಎಸೆಯಲು ಶುರು ಮಾಡುತ್ತಾರೆ. ಪುಟ್ಟ ಮರಿ ಎಂಬುದನ್ನು ಕೂಡ ಗಮನಿಸದೇ ಅವುಗಳ ಮೇಲೆ ಕಲ್ಲೆಸೆದು ಅವುಗಳು ಕುಂಟುವಂತೆ ಮಾಡಿ ನರಳುತ್ತಾ ಸಾಗುವುದನ್ನು ನೋಡಿ ವಿಕೃತ ಆನಂದ ಪಡುತ್ತಾರೆ. ನಗರದ ಮನುಷ್ಯರ ವರ್ತನೆಯನ್ನು ಗಮನಿಸಿದ ಶ್ವಾನಗಳಿಗೆ ಅಭದ್ರತೆ, ಜೀವ ಭಯದಿಂದ ಸೇಡು ತೀರಿಸಲು ಮುಂದಾಗಿ ಅ ಪುಟ್ಟ ಮಕ್ಕಳು, ವಾಹನ ಸವಾರರ ಮೇಲೆಲ್ಲಾ ದಾಳಿ ನಡೆಸಿ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿವೆ.
ಇಂತಹ ಘಟನೆಗಳು ಹೆಚ್ಚುತ್ತಿರುವುದರ ನಡುವೆಯೇ ಇಲ್ಲೊಬ್ಬರು ತಮ್ಮ ಜೀವದ ಹಂಗನ್ನು ತೊರೆದು ಬೀದಿ ನಾಯಿಯೊಂದನ್ನು ರೈಲಿನಿಂದ ರಕ್ಷಣೆ ಮಾಡಿದ್ದಾರೆ. ಯುವಕನ ಕಾರ್ಯಕ್ಕೆ ನೆಟ್ಟಿಗರು ಸೆಲ್ಯೂಟ್ ಹೊಡೆದಿದ್ದಾರೆ. ವಿಡಿಯೋದಲ್ಲಿ ಶ್ವಾನವೊಂದು ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತದೆ. ಇದೇ ವೇಳೆ ಹಳಿಯಲ್ಲಿ ಸ್ಟೇಷನ್‌ನಲ್ಲಿ ನಿಲ್ಲುವ ಸಲುವಾಗಿ ರೈಲು ನಿಧಾನವಾಗಿ ಬರುತ್ತಿರುತ್ತದೆ. ಈ ವೇಳೆ ಕೂಡಲೇ ಹಳಿಗೆ ಇಳಿದ ಯುವಕ ಶ್ವಾನವನ್ನು ಎತ್ತಿ ಫ್ಲಾಟ್ಫಾರ್ಮ್ ಮೇಲೆ ಬಿಡುತ್ತಾನೆ. ನಾಯಿ ಜನ ಸಮೂಹದ ಮಧ್ಯೆ ನುಗ್ಗಿ ಎದ್ನೋ ಬಿದ್ನೋ ಎಂದು ಓಡುತ್ತದೆ.
ನಾಯಿಗೂ ಸಂಗೀತ ಹೇಳಿಕೊಟ್ಟಿರುವ ಜಗ್ಗೇಶ್; ಹೇಗೆ ಹಾಡುತ್ತೆ ನೋಡಿ ನವರಸನಾಯಕನ ಮನೆ ಶ್ವಾನ
ಮಹಾನಗರಿ ಮುಂಬೈನ ಮೆಟ್ರೋಪಾಲಿಟನ್ ಪ್ರದೇಶಕ್ಕೆ ಸೇರಿದ ನಲ್ಲಸಪೊರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಮಾಹಿತಿ ನೀಡಿದ್ದಾರೆ. ಈ ದೃಶ್ಯ ನೋಡಿ ನನ್ನ ಹೃದಯ ತುಂಬಿ ಬಂತು. ಈ ವೇಳೆ ರೈಲನ್ನು ನಿಧಾನವಾಗಿ ಚಾಲಾಯಿಸಿದ ಲೋಕೋ ಪೈಲಟ್ ಹಾಗೂ ಈ ಶ್ವಾನವನ್ನು ಕಾಪಾಡಿದ ಯುವಕನಿಗೆ ದೇವರು ಒಳ್ಳೆಯದು ಮಾಡಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಶ್ವಾನವನ್ನು ರಕ್ಷಿಸಿದ ಯುವಕ ಹಾಗೂ ರೈಲಿನ ಚಾಲಕನಿಗೆ ನನ್ನ ಗೌರವಗಳು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಹಲವು ಪ್ರಕರಣ ಭೇದಿಸಿದ ಅರಣ್ಯ ಇಲಾಖೆ ಮುದ್ದಿನ ರಾಣಾ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!
ಕೆಲ ದಿನಗಳ ಹಿಂದೆ ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಯೊಬ್ಬರು ರೈಲು ಹಳಿಯಲ್ಲಿ ಸಾಗುತ್ತಿದ್ದ ವೃದ್ಧೆ ಹಾಗೂ ಆತನ ಪುತ್ರನ ರಕ್ಷಣೆ ಮಾಡಿದ್ದರು. ಪಶ್ಚಿಮ ಬಂಗಾಳದ ಬಂಕುರಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಈ ವಿಡಿಯೋವನ್ನು ಭಾರತೀಯ ರೈಲ್ವೆ ಇಲಾಖೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.