ಮಗನ ಕಣ್ಣೆದುರೇ ಘೋರ ಕೃತ್ಯ: ಜಗಳವಾಡಿ ಪತ್ನಿಯನ್ನು ಚಲಿಸುವ ರೈಲಿಗೆ ತಳ್ಳಿ ಕೊಂದ ಪತಿ!

Published : Mar 18, 2026, 12:49 PM IST
Railway

ಸಾರಾಂಶ

13 ವರ್ಷದ ಮಗನೋಡುತ್ತಿದ್ದಂತೆಯೇ ಪತಿ ಈ ಘೋರ ಕೃತ್ಯ ಎಸಗಿದ್ದಾನೆ. ಘಟನೆ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದ. ದಂಪತಿ ನಡುವೆ ಸದಾ ಜಗಳ ನಡೆಯುತ್ತಿತ್ತು ಎಂದು ಮೃತ ಪುಷ್ಪಾ ಗುಪ್ತಾ ಅವರ ಸಹೋದರ ಕಮಲೇಶ್ ಕುಮಾರ್ ಗುಪ್ತಾ ಪೊಲೀಸರಿಗೆ ತಿಳಿಸಿದ್ದಾರೆ.

ಮುಂಬೈ: ಕೌಟುಂಬಿಕ ಕಲಹವೊಂದು ಘೋರ ಅಂತ್ಯ ಕಂಡಿದೆ. 13 ವರ್ಷದ ಮಗನ ಕಣ್ಣೆದುರೇ ಪತಿಯೊಬ್ಬ ತನ್ನ ಪತ್ನಿಯನ್ನು ಚಲಿಸುತ್ತಿದ್ದ ರೈಲಿಗೆ ತಳ್ಳಿ ಕೊಲೆ ಮಾಡಿದ್ದಾನೆ. ಮುಂಬೈನ ಮುಲುಂಡ್ ರೈಲ್ವೆ ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಪುಷ್ಪಾ ಗುಪ್ತಾ (36) ಮೃತಪಟ್ಟ ಮಹಿಳೆ. ಈ ಸಂಬಂಧ, ಆಕೆಯ ಪತಿ, ಎಲೆಕ್ಟ್ರಿಷಿಯನ್ ರಾಜ್‌ಕುಮಾರ್ ಗುಪ್ತಾ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 14ರಂದು ಮುಂಜಾನೆ ಮುಲುಂಡ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1ರಲ್ಲಿ ರಾಜ್‌ಕುಮಾರ್ ಈ ಕೃತ್ಯ ಎಸಗಿದ್ದ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ರೈಲ್ವೆ ಪೊಲೀಸರು ಗುಜರಾತ್‌ನ ಸೂರತ್‌ನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಕೌಟುಂಬಿಕ ಕಲಹವೇ ಈ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 14ರಂದು ದೂರು ದಾಖಲಿಸಿದ್ದ ಪತ್ನಿ ಪುಷ್ಪಾ

ದಂಪತಿ ನಡುವೆ ನಿರಂತರವಾಗಿ ಜಗಳಗಳು ನಡೆಯುತ್ತಿದ್ದವು ಎಂದು ಪುಷ್ಪಾ ಗುಪ್ತಾ ಅವರ ಸಹೋದರ ಕಮಲೇಶ್ ಕುಮಾರ್ ಗುಪ್ತಾ (30) ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾರ್ಚ್ 14ರಂದು ಕೂಡ ಇಬ್ಬರ ನಡುವೆ ಜಗಳವಾಗಿದೆ. ಬಳಿಕ ಪುಷ್ಪಾ, ಪತಿಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರು.

ಈ ವಿಷಯ ತಿಳಿದು, ಸೇನೆಯಲ್ಲಿ ಕೆಲಸ ಮಾಡುವ ಕಮಲೇಶ್, ತನ್ನ ಸಹೋದರಿ ಮತ್ತು ಮಕ್ಕಳನ್ನು ಊರಿಗೆ ವಾಪಸ್ ಕರೆದುಕೊಂಡು ಹೋಗಲು ಮುಂಬೈಗೆ ಬಂದಿದ್ದರು. ಊರಿಗೆ ಮರಳಲು ಮುಲುಂಡ್ ರೈಲ್ವೆ ನಿಲ್ದಾಣಕ್ಕೆ ಬಂದಾಗ, ಕಮಲೇಶ್ ತಮ್ಮ ಆರ್ಮಿ ಐಡಿ ಕಾರ್ಡ್ ಅನ್ನು ರಾಜ್‌ಕುಮಾರ್ ಮನೆಯಲ್ಲೇ ಮರೆತು ಬಂದಿದ್ದು ನೆನಪಾಗಿದೆ. ಅದನ್ನು ತರಲು ಅವರು ವಾಪಸ್ ಹೋದಾಗ, ಆರೋಪಿ ರಾಜ್‌ಕುಮಾರ್ ಅವರನ್ನು ಮನೆಯೊಳಗೆ ಕೂಡಿಹಾಕಿದ್ದ ಎಂದು ಕಮಲೇಶ್ ಹೇಳಿದ್ದಾರೆ.

ದೂರು ನೀಡಿದ್ದಕ್ಕೆ ಕೋಪಗೊಂಡಿದ್ದ ಗಂಡ

ಆರೋಪಿ ರಾಜ್‌ಕುಮಾರ್ ನೇರವಾಗಿ ಮುಲುಂಡ್ ನಿಲ್ದಾಣಕ್ಕೆ ಬಂದಿದ್ದಾನೆ. ಅಲ್ಲಿ, ಪೊಲೀಸ್ ದೂರು ನೀಡಿದ್ದಕ್ಕೆ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ನಂತರ ಪ್ಲಾಟ್‌ಫಾರ್ಮ್ ಒಂದರಿಂದ ಚಲಿಸುತ್ತಿದ್ದ ಲೋಕಲ್ ರೈಲಿಗೆ ಆಕೆಯನ್ನು ತಳ್ಳಿಬಿಟ್ಟಿದ್ದಾನೆ. ಈ ಸಂಪೂರ್ಣ ಘಟನೆ 13 ವರ್ಷದ ಮಗನ ಕಣ್ಣೆದುರೇ ನಡೆದಿದೆ. ಕೃತ್ಯ ಎಸಗಿದ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಪ್ರಯಾಣಿಕರು ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ಮಾಡಿದಾಗ ಮಿಸ್‌ಫೈರ್, ಗೆಳೆಯನ ಮುಂದೆ ದುರಂತ ಅಂತ್ಯ

ರೈಲ್ವೆ ಅಧಿಕಾರಿಗಳು ಪುಷ್ಪಾ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ, ಪುಷ್ಪಾ ಅವರು ಮೃತಪಟ್ಟಿದ್ದರು. ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಘಟನೆಯ ಸಂಪೂರ್ಣ ದೃಶ್ಯ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ರೈಲ್ವೆ ಪೊಲೀಸರು, ಕೊನೆಗೂ ಆರೋಪಿಯನ್ನು ಗುಜರಾತ್‌ನ ಸೂರತ್‌ನಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ: ರಾಜಕಾರಣಿಗಳಿಗೆ 6 ಕೋಟಿ ಕೊಟ್ಟಿದ್ದೇನೆ, ರಿಕವರಿ ಮಾಡೋದು ಹೇಗೆ ಹೇಳು? ವಕೀಲ ಹರಿಪ್ರಸಾದ್‌ಗೆ BDA Officer ಕೊಲೆ ಬೆದರಿಕೆ!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Delhi Fire: ದೆಹಲಿಯ ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ, 6 ಮಂದಿ ಸಜೀವ ದಹನ
ಆಕ್ಸಿಡೆಂಟ್‌ನಲ್ಲಿ ಮೂವರು ಹಿಂದೂ ವೈದ್ಯ ವಿದ್ಯಾರ್ಥಿಗಳ ಸಾವು, ಇದು ಕೊಲೆ ಎಂದ ಸ್ಥಳೀಯರು