ವಾರಾಣಸಿ(ಡಿ.14): ತನ್ನ ಮೇಲೆ ದಾಳಿ ನಡೆದಷ್ಟೂಪುಟಿದೇಳುವ ಭಾರತದ ನಾಗರಿಕತೆ ಪರಂಪರೆಯ ಪ್ರತಿಬಿಂಬವಾಗಿರುವ ವಾರಾಣಸಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಪ್ರಧಾನಿ ನರೇಂದ್ರ ಮೋದಿ, ಔರಂಗಾಜೇಬ್‌ನಂಥ ದಾಳಿಕೋರರು ಕಾಶಿಯನ್ನು ನಾಶಪಡಿಸಲು ನೋಡಿದರಾದರೂ, ಕೊನೆಗೆ ಅವರೇ ಇತಿಹಾಸದ ಕರಾಳ ಪುಟಗಳಲ್ಲಿ ಸೇರಿ ಹೋದರು. ಆದರೆ ಇದೇ ವೇಳೆ ಪುರಾತನ ಕಾಶಿ ನಗರಿ ಇದೀಗ ತನ್ನ ವೈಭವದ ಹೊಸ ಪುಟಗಳನ್ನು ಬರೆಯುತ್ತಿದೆ ಎಂದು ಬಣ್ಣಿಸಿದ್ದಾರೆ.
ಸೋಮವಾರ ಇಲ್ಲಿ ತಮ್ಮ ಕನಸಿನ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ‘ಶತಮಾನಗಳ ದಾಸ್ಯತನದ ಪರಿಣಾಮವಾಗಿ ಭಾರತ ಯಾವ ಕೀಳರಿಮೆಯ ಸಂಕೋಲೆಯಲ್ಲಿ ಸಿಕ್ಕಿಹಾಕಿಕೊಂಡಿತ್ತೋ ಅದರಿಂದ ಇದೀಗ ಹೊರಬಂದಿದೆ. ಹೊಸ ಕಾಶಿ ಕಾರಿಡಾರ್ ದೇಶಕ್ಕೆ ಹೊಸ ನಿರ್ಣಾಯಕ ದಾರಿಯನ್ನು ತೋರಲಿದೆ ಮತ್ತು ಉತ್ತಮ ಭವಿಷ್ಯದತ್ತ ಕೊಂಡೊಯ್ಯಲಿದೆ ಎಂದು ಭವಿಷ್ಯ ನುಡಿದರು.
undefined
Kashi Vishwanath Dham ಬೊಮ್ಮಾಯಿ ಸೇರಿ ಬಿಜೆಪಿ ಸಿಎಂಗಳ ಜೊತೆ PM ಮೋದಿ ಇಂದು ಮ್ಯಾರಥಾನ್ ಸಭೆ!
‘ದಾಳಿಕೋರರು ಕಾಶಿ ಮೇಲೆ ದಾಳಿ ಮಾಡಿದರು ಹಾಗೂ ನಾಶಕ್ಕೆ ಯತ್ನಿಸಿದರು. ವಿಶ್ವವು ಔರಂಗಜೇಬನ ಭಯೋತ್ಪಾದನೆ ಹಾಗೂ ದೌರ್ಜನ್ಯಗಳನ್ನು ನೋಡಿದೆ. ಆತ ಖಡ್ಗದ ಮೂಲಕ ನಾಗರಿಕತೆ ಬದಲಿಸಲು ಯತ್ನಿಸಿದ. ಮತಾಂಧತೆ ಮೂಲ ಸಂಸ್ಕೃತಿಯ ನಾಶಕ್ಕೂ ಯತ್ನಿಸಿದ. ಆದರೆ ಈ ದೇಶದ ನೆಲ ವಿಶ್ವದ ಇತರ ದೇಶಗಳ ನೆಲಕ್ಕಿಂತ ಭಿನ್ನವಾಗಿದೆ. ಒಬ್ಬ ಔರಂಗಜೇಬ್ ದಾಳಿಯಿಟ್ಟರೆ ಶಿವಾಜಿ ಕೂಡ ಉದಯಿಸುತ್ತಾನೆ. ಮುಸ್ಲಿಂ ದಾಳಿಕೋರ ಸಾಲಾರ್ ಮಸೂದ್ ನುಗ್ಗಿ ಬರುತ್ತಿದ್ದರೆ ರಾಜಾ ಸುಖದೇವ್‌ರಂಥವರು ಆತನನ್ನು ತಡೆದರು’ ಎಂದು ದೇಶದ ಪರಂಪರೆಯನ್ನು ಬಣ್ಣಿಸಿದರು.
‘ಸುಲ್ತಾನರು ಬಂದರು.. ಹೋದರು.. ಆದರೆ ಬನಾರಸ (ಕಾಶಿ) ಅಚಲವಾಗಿ ನಿಂತಿದೆ. ಭಯೋತ್ಪಾದನೆಯಂಥ ಕೃತ್ಯಗಳು ಇತಿಹಾಸದ ಕರಾಳ ಪುಟ ಸೇರಿವೆ. ಆದರೆ ಕಾಶಿ ಮಾತ್ರ ಮುನ್ನುಗ್ಗುತ್ತಿದೆ. ತನ್ನ ಭವ್ಯತೆಗೆ ಮತ್ತೆ ಗೌರವ ತಂದುಕೊಂಡಿದೆ. ಅರ್ಥಾತ್ ಯಾವಾಗ ಕಾಶಿಯು ದಾಳಿಯನ್ನು ಮೆಟ್ಟಿನಿಂತು ಗತವೈಭವಕ್ಕೆ ಮರಳಿತೋ ದೇಶದ ವೈಭವ ಕೂಡ ಮರಳಿದೆ’ ಎನ್ನುವ ಮೂಲಕ ಭಯೋತ್ಪಾದನೆಯಂಥ ಕೃತ್ಯಗಳಿಗೆ ಭಾರತ ಬಗ್ಗದೇ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂಬ ಸಂದೇಶ ರವಾನಿಸಿದರು.
ಸತತ ದಾಳಿ ಮೆಟ್ಟಿನಿಂತ ದೇವನಗರಿ, ಪ್ರಧಾನಿ ಮೋದಿ ಉದ್ಘಾಟಿಸಿದ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?
ಅಹಿಲ್ಯಾ ಸ್ಮರಣೆ: ಔರಂಗಜೇಬನು ಕಾಶಿ ವಿಶ್ವನಾಥನ ಪುರಾತನ ಮಂದಿರ ಕೆಡವಿ ಮಸೀದಿ ನಿರ್ಮಿಸಿದ ಎಂದು ಕೆಲವರು ಹೇಳುತ್ತಾರೆ. ಈ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, ‘ರಾಣಿ ಅಹಿಲ್ಯಾಬಾಯಿ ಹೋಳ್ಕರ್ ಹಾಗೂ ಸಿಖ್ ದೊರೆ ರಂಜೀತ್ ಸಿಂಗ್ ಈ ಮಂದಿರ ಮರು ನಿರ್ಮಾಣ ಮಾಡಿ, ಚಿನ್ನದ ಗೋಪುರ ನಿರ್ಮಿಸಿದರು’ ಎಂದು ಕೊಂಡಾಡಿದರು. ‘ಈಗ ನಿರ್ಮಿಸಲಾಗಿರುವ ಕಾಶಿ ವಿಶ್ವನಾಥ ಧಾಮವು ಕೇವಲ ಭವ್ಯ ಕಟ್ಟಡವಲ್ಲ. ಸನಾತನ ಸಂಸ್ಕೃತಿ, ಭಾರತದ ಧಾರ್ಮಿಕ ಅಸ್ಮಿತೆ, ಭಾರತದ ಪರಂಪರೆ ಹಾಗೂ ಪ್ರಾಚೀನತೆಯ ಪ್ರತೀಕ. ಹೊಸ ಇತಿಹಾಸ ರಚನೆಯಾಗುತ್ತಿದೆ. ನಾವು ಇದನ್ನು ನೋಡುತ್ತಿರುವುದೇ ನಮ್ಮ ಅದೃಷ್ಟ’ ಎಂದರು.
ಧಾಮ ಕಟ್ಟಿದ ಕಾರ್ಮಿಕರ ಜತೆ ಮೋದಿ ಊಟ, ಪುಷ್ಪವೃಷ್ಟಿ, ಫೋಟೋ ಸೆಷನ್
ಪ್ರಧಾನಿ ಮೋದಿ, ಕಾಶಿ ವಿಶ್ವನಾಥ ಧಾಮ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ ಕಾರ್ಮಿಕರೊಂದಿಗೆ ಗಂಟೆಗಟ್ಟಲೇ ಕಾಲ ಕಳೆದು ಅವರ ಸೇವೆ ಸ್ಮರಿಸಿ ಮೆಚ್ಚುಗೆಗೆ ಪಾತ್ರರಾದರು. ಧಾಮ ಉದ್ಘಾಟನೆಗೆ ಬಂದಾಗ ಕಾರ್ಮಿಕರೊಂದಿಗೆ ಬೆರೆತ ಮೋದಿ, ಅವರ ಮೇಲೆ ಪುಷ್ಪವೃಷ್ಟಿಮಾಡಿದರು. ತಮಗೆ ಇರಿಸಲಾಗಿದ್ದ ಕುರ್ಚಿಯಿಂದ ಎದ್ದು ಬಂದು ಕಾರ್ಮಿಕರ ಜತೆಗೇ ಕುಳಿತುಕೊಂಡು ಅವರ ಜತೆಗೆ ಗ್ರೂಪ್ ಫೋಟೋ ತೆಗೆಸಿಕೊಂಡರು. ಬಳಿಕ ಎಲ್ಲ ಕಾರ್ಮಿಕರ ಜತೆ ಕುಳಿತು ಭೋಜನ ಸ್ವೀಕರಿಸಿ ಸರಳತೆ ಮೆರೆದರು.