ರಾಷ್ಟ್ರಪತಿ ಭವನದ ಮೊಘಲ್‌ ಗಾರ್ಡನ್‌ ಇನ್ನು ಮುಂದೆ 'ಅಮೃತ್‌ ಗಾರ್ಡನ್‌'!

By Santosh NaikFirst Published Jan 28, 2023, 6:16 PM IST
Highlights

ಬಿಜೆಪಿ ವಕ್ತಾರ ಸಂಬಿತ್ ಪಾತ್ರ ನರೇಂದ್ರ ಮೋದಿ ಸರ್ಕಾರದ "ಐತಿಹಾಸಿಕ ನಿರ್ಧಾರ" ವನ್ನು ಶ್ಲಾಘನೆ ಮಾಡಿದ್ದಾರೆ. 'ಅಮೃತ್ ಕಾಲ್‌' (ಸುವರ್ಣ ಯುಗ)ದಲ್ಲಿ 'ಗುಲಾಮಗಿರಿ ಮನಸ್ಥಿತಿ'ಯಿಂದ ಹೊರಬರುವ ಅಗತ್ಯವಿದೆ ಎಂದು ಹೇಳಿದ್ದಾರೆ.
 

ನವದೆಹಲಿ (ಜ.28): ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಆಕರ್ಷಕ ಉದ್ಯಾನವನವನ್ನು ಇಲ್ಲಿಯವರೆಗೂ ಮೊಘಲ್ ಗಾರ್ಡನ್ಸ್ ಎನ್ನುವ ಹೆಸರನಿಂದ ಕರೆಯಲಾಗುತ್ತಿತ್ತು. ಈ ಉದ್ಯಾನವನವನ್ನು ಈಗ "ಅಮೃತ್ ಉದ್ಯಾನ" ಎಂದು ಕರೆಯಲಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿರುವ ಅಂಗವಾಗಿ "ಆಜಾದಿ ಕಾ ಅಮೃತ್ ಮಹೋತ್ಸವ" ಅಭಿಯಾನದ ಅಡಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸ ಹೆಸರನ್ನು ನೀಡಿದ್ದಾರೆ ಎಂದು ರಾಷ್ಟ್ರಪತಿಗಳ ಉಪ ಪತ್ರಿಕಾ ಕಾರ್ಯದರ್ಶಿ ನವಿಕಾ ಗುಪ್ತಾ ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ಉದ್ಯಾನವನ್ನು ಭಾನುವಾರ ಸಾರ್ವಜನಿಕರಿಗಾಗಿ ತೆರೆಯಲಾಗುವುದು ಮತ್ತು ಈ ಬಾರಿ ಸುಮಾರು ಎರಡು ತಿಂಗಳ ಕಾಲ ತೆರೆದಿರುತ್ತದೆ ಎಂದು ಅವರು ಘೋಷಣೆ ಮಾಡಿದರು. ಜನವರಿ 31 ರಿಂದ ಮಾರ್ಚ್ 26 ರವರೆಗೆ ಈ ಉದ್ಯಾನವನ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಇದರ ಹೊರತಾಗಿ, ಕೆಲವು ದಿನಗಳನ್ನು ವಿಶೇಷವಾಗಿ ವಿಕಲಚೇತನರಿಗೆ, ರೈತರು ಮತ್ತು ಮಹಿಳೆಯರುಗೆ ಮೀಸಲಿಡಲಾಗಿದೆ ಎಂದಿದ್ದಾರೆ.

| Delhi: 'Amrit Udyan' (earlier known as Mughal Gardens) to open for the public from January 31, 2023. pic.twitter.com/6HB9GhmGu6

— ANI (@ANI)


ರಾಷ್ಟ್ರಪತಿ ಭವನದ ಅಧಿಕೃತ ವೆಬ್‌ಸೈಟ್ ಅಮೃತ್ ಉದ್ಯಾನ ಕುರಿತು ಮಾಹಿತಿಯನ್ನು ನೀಡಿದೆ. "15 ಎಕರೆಗಳಷ್ಟು ವಿಶಾಲವಾದ ವಿಸ್ತಾರದಲ್ಲಿ ಹರಡಿರುವ ಅಮೃತ್ ಉದ್ಯಾನವನ್ನು ರಾಷ್ಟ್ರಪತಿ ಭವನದ ಆತ್ಮ ಎಂದು ಆಗಾಗ ಹೇಳಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಮೊಘಲ್ ಉದ್ಯಾನವನಗಳು, ತಾಜ್ ಮಹಲ್ ಸುತ್ತಲಿನ ಉದ್ಯಾನವನಗಳಿಂದ ಸ್ಫೂರ್ತಿ ಪಡೆದು ಭಾರತ ಮತ್ತು ಪರ್ಷಿಯಾದ ಚಿಕಣಿ ವರ್ಣಚಿತ್ರಗಳನ್ನು ಹೊಂದಿದ್ದ ಅಮೃತ್ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿತ್ತು' ಎಂದು ಬರೆಯಲಾಗಿದೆ.

ಸರ್ ಎಡ್ವಿನ್ ಲುಟ್ಯೆನ್ಸ್ ಅವರು 1917ರಲ್ಲಿಯೇ ಅಮೃತ್ ಉದ್ಯಾನದ ವಿನ್ಯಾಸಗಳನ್ನು ಅಂತಿಮಗೊಳಿಸಿದ್ದರು, ಹಾಗಿದ್ದರೂ, 1928-1929 ರ ಅವಧಿಯಲ್ಲಿ ಮಾತ್ರ ಈ ಉದ್ಯಾನವನದಲ್ಲಿ ಗಿಡಗಳನ್ನು ನೆಡಲಾಗಿತ್ತು. ತೋಟಗಳಿಗೆ ಅವರ ಸಹಯೋಗಿ ತೋಟಗಾರಿಕೆ ನಿರ್ದೇಶಕ ವಿಲಿಯಂ ಮುಸ್ಟೋ ಕೂಡ ಸಹಾಯ ಮಾಡಿದ್ದರು' ಎಂದು ಬರೆಯಲಾಗಿದೆ. "ರಾಷ್ಟ್ರಪತಿ ಭವನದ ಕಟ್ಟಡವು ಭಾರತೀಯ ಮತ್ತು ಪಾಶ್ಚಿಮಾತ್ಯ ವಾಸ್ತುಶಿಲ್ಪದ ಎರಡು ವಿಭಿನ್ನ ಶೈಲಿಗಳನ್ನು ಹೊಂದಿರುವಂತೆ, ಸರ್ ಲುಟ್ಯೆನ್ಸ್ ಉದ್ಯಾನವನಗಳನ್ನು ಮೊಘಲ್ ಶೈಲಿ ಮತ್ತು ಇಂಗ್ಲಿಷ್ ಫ್ಲವರ್‌ ಗಾರ್ಡನ್‌ಗಾಗಿ ಎರಡು ವಿಭಿನ್ನ ತೋಟಗಾರಿಕೆ ಸಂಪ್ರದಾಯಗಳನ್ನು ಒಟ್ಟಿಗೆ ತಂದರು. ಮೊಘಲ್ ಕಾಲುವೆಗಳು, ತಾರಸಿಗಳು ಮತ್ತು ಹೂಬಿಡುವ ಪೊದೆಗಳು ಯುರೋಪಿಯನ್ ಹೂವಿನ ಹಾಸಿಗೆಗಳು, ಹುಲ್ಲುಹಾಸುಗಳು ಮತ್ತು ಖಾಸಗಿ ಹೆಡ್ಜ್‌ಗಳೊಂದಿಗೆ ಸುಂದರವಾಗಿ ಸಂಯೋಜಿಸಲಾಗಿದೆ' ಎಂದು ವಿವರಿಸಲಾಗಿದೆ.

45 ಲಕ್ಷ ಇಟ್ಟಿಗೆಯಿಂದ ನಿರ್ಮಾಣವಾಗಿದೆ ರಾಷ್ಟ್ರಪತಿ ಭವನ, ದೇಶದ ಪ್ರಥಮ ಪ್ರಜೆಯ ನಿವಾಸದ ಒಂದು ನೋಟ!

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ, ಇದನ್ನು ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದಾರೆ. ಅಮೃತ್‌ ಕಾಲದ ಸಮಯದಲ್ಲಿ ನಾವು ಗುಲಾಮಗಿರಿ ಮನಸ್ಥಿತಿಯಿಂದ ಹೊರಬರುವುದು ಬಹಳ ಅಗತ್ಯವಾಗಿದೆ. ಗುಲಾಮಗಿರಿ ಮನಸ್ಥಿತಿಯಿಂದ ಹೊರಬಬರುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮತ್ತೊಂದು ಐತಿಹಾಸಿಕ ನಿರ್ಧಾರ ಮಾಡಿದೆ. ರಾಷ್ಟ್ರಪತಿ ಭವನದ ಮೊಘಲ್‌ ಗಾರ್ಡನ್‌ ಇನ್ನು ಮುಂದೆ ಅಮೃತ್‌ ಉದ್ಯಾನ ಎನ್ನುವ ಹೆಸರಿನಿಂದ ಗುರುತಿಸಿಕೊಳ್ಳಲಿದೆ' ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ರಾಷ್ಟ್ರಪತಿಗೆ ಮೊದಲ BS6 ಅಲ್ಟುರಾಸ್ G4 ಕಾರು ವಿತರಿಸಿದ ಮಹೀಂದ್ರ!

ಇನ್ನು ಹಲವು ಬಿಜೆಪಿ ನಾಯಕರು ಕೂಡ ಹೆಸರು ಬದಲಾವಣೆಗೆ ಸರ್ಕಾರವನ್ನು ಶ್ಲಾಘಿಸಿದ್ದಾರೆ. "ಗುಲಾಮಗಿರಿಯ ಸಂಕೇತ ನಿರ್ಮೂಲನೆ! 'ಅಮೃತಕಲ್'ನಲ್ಲಿ 'ಗುಲಾಮಗಿರಿ ಮನಸ್ಥಿತಿ'ಯಿಂದ ಹೊರಬರಲು, ಮೋದಿ ಸರ್ಕಾರದ ಮತ್ತೊಂದು ಐತಿಹಾಸಿಕ ನಿರ್ಧಾರ..." ಎಂದು ಬಿಜೆಪಿ ಸಂಸದ ದೇವೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

click me!